ಮಂಗಳವಾರ, ಜೂನ್ 15, 2021
21 °C

ಛಾವಣಿ ಮೇಲಿನ ಸಂಚಾರಕ್ಕೆ ಇಲ್ಲದ ಬ್ರೇಕ್

ಪ್ರಜಾವಾಣಿ ವಾರ್ತೆ/ ಉ.ಮ. ಮಹೇಶ್ Updated:

ಅಕ್ಷರ ಗಾತ್ರ : | |

ಮಂಡ್ಯ: ಇದು, ಸಾರಿಗೆ ಮತ್ತು ಗೃಹ ಖಾತೆಯನ್ನು ಹೊಂದಿರುವ ಬಿಜೆಪಿಯ ಪ್ರಭಾವಿ ಸಚಿವರ ಉಸ್ತುವಾರಿ ಇರುವ ಜಿಲ್ಲೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆದಾಗ ಬಹುತೇಕ ಚರ್ಚೆ ಆಗುವ ಅಂಶವೆಂದರೆ ಬಸ್ ಛಾವಣಿಗಳ ಮೇಲಿನ ಪ್ರಯಾಣ ಸಮಸ್ಯೆ.ಗೃಹ ಸಚಿವ ಆರ್.ಅಶೋಕ್ ಅವರು ಜಿಲ್ಲೆಯ ಉಸ್ತುವಾರಿ, ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂಬ ದೂರು, ಅಸಮಾಧಾನ ಇತ್ತೀಚಿನ ದಿನಗಳಲ್ಲಿ ಪ್ರಬಲವಾಗಿ ವ್ಯಕ್ತವಾಗುತ್ತಿದ್ದು, `ನಿರ್ಲಕ್ಷಿಸಿದ್ದಾರೆ~ ಎಂಬ ದೂರು ಸಮರ್ಥಿಸುವಂತೆ ಬಸ್ ಛಾವಣಿ ಮೇಲಿನ ಸಮಸ್ಯೆ ಉಳಿದುಕೊಂಡಿದೆ.ಬಸ್ ಛಾವಣಿಯ ಮೇಲೆ ಪ್ರಯಾಣಿಕರು ಕುಳಿತು ಸಂಚರಿಸುವ ಚಿತ್ರಣ ಬನ್ನೂರು ರಸ್ತೆ, ನಾಗಮಂಗಲ ರಸ್ತೆ, ಗುತ್ತಲು ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಸಾಮಾನ್ಯವಾಗಿ ಕಾಣುವ ಚಿತ್ರಣ ಇದು. ಗ್ರಾಮಗಳಿಗೆ ಸರ್ಕಾರಿ ಬಸ್‌ಗಳ ಸಂಪರ್ಕ ಕಡಿಮೆ ಇರುವುದರಿಂದ ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಪ್ರಯಾಣಿಕರದು.ಬಸ್ ಛಾವಣಿ ಮೇಲಿನ ಪ್ರಯಾಣದ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಸಾರಿಗೆ ಸಚಿವರೂ ಆಗಿರುವ ಉಸ್ತುವಾರಿ ಸಚಿವ ಆರ್.ಅಶೋಕ್ ಹಿಂದೆ ಪ್ರಗತಿ ಪರಿಶೀಲನೆ ಸಭೆಯಲ್ಲಿಯೂ ಸೂಚನೆ ನೀಡಿದ್ದರು. ಆ ನಂತರ ಪೊಲೀಸರು, ಆರ್‌ಟಿಒ ಅಧಿಕಾರಿಗಳು ಜಾಗೃತರಾಗಿದ್ದರೂ ಬಳಿಕ ಮೌನವಾಗಿರುವಂತೆ ಕಾಣುತ್ತದೆ.`ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಜನಸಂಚಾರದ ಒತ್ತಡ ಇರುವಾಗ ಹೆಚ್ಚಿನ ಬಸ್‌ಗಳಿದ್ದರೆ ಸೂಕ್ತ. ಹೀಗೆ ಬಸ್‌ಗಳ ಮೇಲೆ ಕುಳಿತು ಪ್ರಯಾಣಿಸಬಾರದು ನಿಜ. ಆದರೆ, ನಮಗೆ ಊರು ಸೇರಲು ಇದು ಅನಿವಾರ್ಯವೂ ಆಗಿದೆ~ ಎನ್ನುತ್ತಾರೆ ಬನ್ನೂರು ರಸ್ತೆಯಲ್ಲಿ ಕೊಡಿಯಾಲಕ್ಕೆ ತೆರಳಲು ಬಸ್ ಟಾಪ್ ಏರಿದ್ದ ಪ್ರಯಾಣಿಕ ತಿಮ್ಮೇಗೌಡ.ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಚಿವ ಆರ್. ಅಶೋಕ್ ಗ್ರಾಮೀಣ ಪ್ರದೇಶಗಳಿಗೆ ಹೊಸದಾಗಿ 50 ರೂಟ್ ಆರಂಭಿಸುವುದಾಗಿಯೂ ವರ್ಷದ ಹಿಂದೆಯೇ ಪ್ರಕಟಿಸಿದ್ದರು. ಅದು ಪೂರ್ಣ ಜಾರಿಗೆ ಬಂದಂತಿಲ್ಲ. ವಿಭಾಗೀಯ ಸಾರಿಗೆ ನಿಯಂತ್ರಣಾಧಿ ಕಾರಿಗಳು, ಎರಡು ದಿನದ ಹಿಂದಷ್ಟೇ ಅಧಿಕಾರ ವಹಿಸಿಕೊಂಡಿದ್ದು ಮಾಹಿತಿ ಲಭ್ಯವಿಲ್ಲ.ನೂತನ ಹಣಕಾಸು ವರ್ಷದಲ್ಲಿಯಾದರೂ ಹೆಚ್ಚುವರಿ ಬಸ್‌ಗಳು ಸಂಚರಿಸುವ ಮೂಲಕ ಸಮಸ್ಯೆಗೆ ಮುಕ್ತಿ ಸಿಗುವುದಾ ಕಾದು   ನೋಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.