ಗುರುವಾರ , ಮೇ 19, 2022
24 °C
ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕೈಬಿಡುವಂತೆ ಕೇಂದ್ರಕ್ಕೆ ನಿಯೋಗ

ಜಕ್ಕೂರು ವೈಮಾನಿಕ ತರಬೇತಿ ಶಾಲೆ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ನಿಲ್ಲಿಸುವಂತೆ ಕೋರಲು ಕೇಂದ್ರ ಸರ್ಕಾರದ ಬಳಿ ಶೀಘ್ರವೇ ನಿಯೋಗ ಕರೆದೊಯ್ಯಲಾಗುವುದು ಎಂದು ಯುವಜನ ಸೇವಾ ಮತ್ತು ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದರು.ವಿಧಾನ ಪರಿಷತ್ತಿನಲ್ಲಿ ಗುರುವಾರ ಸದಸ್ಯ ಗೋ ಮಧುಸೂಧನ್ ನಿಯಮ 330ರ ಅಡಿಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆ ಬಳಿಕ ಸಚಿವರು ಈ ಮಾಹಿತಿ ಪ್ರಕಟಿಸಿದರು.`ಮೇಲ್ಸೇತುವೆಯಿಂದಾಗಿ ಜಕ್ಕೂರು ವೈಮಾನಿಕ ತರಬೇತಿ ಶಾಲೆಯ ರನ್‌ವೇಯಲ್ಲಿ ವಿಮಾನ ಹಾರಿಸುವುದು ಮತ್ತು ಇಳಿಸುವುದು ಕಷ್ಟವಾಗಲಿದೆ. ಹೀಗಾಗಿ ಕಟ್ಟಿರುವ ಮೇಲ್ಸೇತುವೆಯನ್ನು ನೆಲಸಮಗೊಳಿಸಿ, ನೆಲಮಟ್ಟದಲ್ಲೇ ರಸ್ತೆ ನಿರ್ಮಾಣ ಮಾಡಬೇಕಿದೆ. ಈ ವಿಷಯವನ್ನು ಕೇಂದ್ರದ ಭೂಸಾರಿಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು' ಎಂದು ಹೇಳಿದರು.`20 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಉದ್ದೇಶಿಸಿದರೂ ವೈಮಾನಿಕ ಶಾಲೆ ಮುಂಭಾಗದಲ್ಲಿ 4 ಕಿ.ಮೀ. ಉದ್ದ ಮಾತ್ರ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಉಳಿದ 16 ಕಿ.ಮೀ. ಉದ್ದ ಕಾಮಗಾರಿ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಹೀಗಾಗಿ ಈ ತರಾತುರಿ ಹಿಂದಿನ ಉದ್ದೇಶ ಸಂಶಯಾಸ್ಪದವಾಗಿದೆ' ಎಂದು ಸಚಿವರು ತಿಳಿಸಿದರು.`ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೇಲ್ಸೇತುವೆ ನಿರ್ಮಾಣದ ರೂಪು-ರೇಷೆ ಸಿದ್ಧಪಡಿಸುವ ಮುನ್ನ ವೈಮಾನಿಕ ಶಾಲೆಯ ಅಸ್ತಿತ್ವವನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಈ ಹೊಣೆಯನ್ನು ನಿಭಾಯಿಸುವಲ್ಲಿ ಅದರ ಯೋಜನಾ ನಿರ್ದೇಶಕರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಶಾಲೆಯನ್ನೂ ಮುಚ್ಚುವ ಸ್ಥಿತಿ ಉದ್ಭವವಾಗಿದೆ' ಎಂದು ಹೇಳಿದರು.`ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು 60 ವರ್ಷಗಳ ಹಿಂದೆ ಉದ್ಘಾಟಿಸಿದ್ದ ವೈಮಾನಿಕ ಶಾಲೆ 200 ಎಕರೆ ಭೂಮಿಯನ್ನು ಹೊಂದಿದ್ದು, ಯಾವುದೇ ಕಾರಣಕ್ಕೂ ರಿಯಲ್ ಎಸ್ಟೇಟ್ ಮಾಫಿಯಾ ಪಾಲಾಗಲು ಬಿಡುವುದಿಲ್ಲ' ಎಂದು ಸಚಿವರು ಭರವಸೆ ನೀಡಿದರು.ವಿಷಯ ಪ್ರಸ್ತಾಪಿಸಿದ ಮಧುಸೂಧನ್, `ಮೇಲ್ಸೇತುವೆ ನಿರ್ಮಾಣದ ಮೂಲಕ ವೈಮಾನಿಕ ಶಾಲೆಯನ್ನು ಮುಚ್ಚಿಸಲು ರಿಯಲ್ ಎಸ್ಟೇಟ್ ದಂಧೆಗಾರರು ಪ್ರಯತ್ನ ನಡೆಸಿದ್ದಾರೆ. ಇದರಿಂದ ಬೆಲೆಬಾಳುವ 200 ಎಕರೆ ಭೂಮಿ ಖಾಸಗಿಯವರ ಪಾಲಾಗುವ       ಅಪಾಯವಿದೆ' ಎಂದು ದೂರಿದರು.`ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಪ್ರಕಾರ ರನ್‌ವೇ ಹತ್ತಿರದಲ್ಲಿ ಯಾವುದೇ ಎತ್ತರದ ಕಟ್ಟಡಗಳು ಇರುವಂತಿಲ್ಲ. ಮರಗಳಿದ್ದರೂ ಕತ್ತರಿಸಿ ಹಾಕಲಾಗುತ್ತದೆ. ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದ್ದು ಹೇಗೆ' ಎಂದು ಪ್ರಶ್ನಿಸಿದರು.`ವಿಮಾನ ಹಾರಾಟಕ್ಕೆ ಆಸ್ಪದವೇ ಇಲ್ಲದಂತಾದರೆ ವೈಮಾನಿಕ ಶಾಲೆಯ ರನ್‌ವೇ ಯಾವ ರೀತಿಯಲ್ಲೂ ಉಪಯೋಗಕ್ಕೆ ಬರದು. ಮೇಲ್ಸೇತುವೆ ನಿರ್ಮಾಣ ಆಗದಂತೆ ನೋಡಿಕೊಳ್ಳಬೇಕು' ಎಂದು ಬಸವರಾಜ ಹೊರಟ್ಟಿ ಒತ್ತಾಯಿಸಿದರು.`ದೇಶದ ಬೇರೆ ಯಾವ ನಗರದಲ್ಲೂ ಇರದಷ್ಟು ನಾಲ್ಕು ವಿಮಾನ ನಿಲ್ದಾಣಗಳು ಬೆಂಗಳೂರಿನಲ್ಲಿವೆ. ಈ ವ್ಯವಸ್ಥೆಯನ್ನು ಹಾಗೇ ಕಾಪಾಡಿಕೊಂಡು ಬರಬೇಕು' ಎಂದು ಗಣೇಶ್ ಕಾರ್ಣಿಕ್ ಹೇಳಿದರು. `ಮುಖ್ಯಮಂತ್ರಿಗಳೂ ಸೇರಿದಂತೆ ಗಣ್ಯರು ಇಲ್ಲಿನ ರನ್‌ವೇ ಬಳಸುತ್ತಾರೆ. ಅದನ್ನು ಉಳಿಸಿಕೊಳ್ಳಬೇಕು' ಎಂದು ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ ತಿಳಿಸಿದರು.ಗೃಹ ಸಚಿವ ಕೆ.ಜೆ. ಜಾರ್ಜ್, `ನಮ್ಮ ತುರ್ತು ಅಗತ್ಯಕ್ಕೆ ಒದಗುವುದು ಇಲ್ಲಿನ ರನ್‌ವೇ. ತರಬೇತಿ ನೀಡಲು ಸಹ ಅದು ಬಳಕೆಯಾಗುತ್ತದೆ. ಅದನ್ನು ಸರ್ಕಾರ ಸಂರಕ್ಷಣೆ ಮಾಡಲಿದೆ' ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.