ಮಂಗಳವಾರ, ಮೇ 17, 2022
26 °C

ಜನಗಣತಿದಾರರಿಗೆ ಸಂಪೂರ್ಣ ಮಾಹಿತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರ ನಿವಾಸದಲ್ಲಿ ಅವರ ಹಾಗೂ ಅವರ ಕುಟುಂಬದ ಸದಸ್ಯರ ವಿವರ ಪಡೆಯುವ ಮೂಲಕ ಜನಗಣತಿ -2011ಕ್ಕೆ ಬುಧವಾರ ಚಾಲನೆ ನೀಡಲಾಯಿತು.ಜನಗಣತಿ ಬಗ್ಗೆ ವಿವರ ನೀಡಿದ ಪುರಸಭೆ ಮುಖ್ಯಾಧಿಕಾರಿ ಎ.ಎಂ. ಪಾಲನಕರ, ‘ಭಾರತದ ಜನಗಣತಿ 2011ರ ಅಂಗವಾಗಿ ಫೆ. 28ರವರೆಗೆ  ಪಟ್ಟಣದಲ್ಲಿ ಜನಗಣತಿ ಕಾರ್ಯ ನಡೆಯುವುದು. 65 ಬ್ಲಾಕ್‌ಗಳನ್ನಾಗಿ ಮಾಡಿದ್ದು, 53 ಜನಗಣತಿದಾರರು, 8 ಜನ ಮೇಲ್ವಿಚಾರಕರು ಕಾರ್ಯನಿರ್ವಹಿಸುವ ಮೂಲಕ ಈ ಕಾರ್ಯಕ್ರಮವನ್ನು ಯಶ್ವಸಿಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಚಿವ ಪಾಟೀಲರ ವಿವರವನ್ನು ಜನಗಣತಿದಾರರಾದ ಶಿಕ್ಷಕ ಎಫ್.ಎ.ಫಣಿಬಂದ, ಎಚ್.ಬಿ.ಅಸೂಟಿ ದಾಖಲಿಸಿಕೊಂಡರು. ಪುರಸಭೆ ಅಧ್ಯಕ್ಷೆ ಮಹಬೂಬಿ ಮಟಗೇರ, ವಸಂತ ಜೋಗಣ್ಣವರ, ಪ್ರಕಾಶ ಪಟ್ಟಣಶೆಟ್ಟಿ, ಕೃಷ್ಣ ಗೊಂಬಿ, ಉಮೇಶ ಯಮೋಜಿ, ವಿಠ್ಠಲ ಮುಧೋಳೆ, ಎಂ.ಬಿ.ಅರಕೇರಿ, ಎಂ.ಎಚ್. ಹೂಗಾರ, ಹಸನ್ ಮಟಗೇರ, ನೋಡಲ್ ಅಧಿಕಾರಿ ಟಿ.ಸಿ. ಪ್ರಕಾಶ, ಎಸ್.ಡಿ. ಡೋರೆಣ್ಣವರ  ಉಪಸ್ಥಿತರಿದ್ದರು.ಮುಂಡರಗಿ ವರದಿ

ತಾಲ್ಲೂಕಿನಾದ್ಯಂತ ಇಪ್ಪತ್ತು ದಿನಗಳ ಕಾಲ ಜರುಗಲಿರುವ 2010-2011ರ ಜನಗಣತಿ ಕಾರ್ಯಕ್ಕೆ ತಹಸೀಲ್ದಾರ ರಮೇಶ ಕೋನರಡ್ಡಿ ಹಾಗೂ ಮತ್ತಿತರ ಅಧಿಕಾರಿಗಳು ಬುಧವಾರ ಪುರಸಭೆ ವ್ಯಾಪ್ತಿಯ ಬ್ಯಾಲವಾಡಿಗೆ ಗ್ರಾಮದಲ್ಲಿ ಚಾಲನೆ ನೀಡಿದರು.ಬ್ಯಾಲವಾಡಿಗೆ ಗ್ರಾಮದಲ್ಲಿ ವಾಸವಾಗಿರುವ ಪುರಸಭೆ ಅಧ್ಯಕ್ಷೆ ರಿಹಾನಾಬೇಗಂ ಕೆಲೂರ ಇವರ ಮನೆಯಿಂದ ಗಣತಿ ಕಾರ್ಯ ಪ್ರಾರಂಭವಾಯಿತು. ತಹಸೀಲ್ದಾರರ ಸಮ್ಮುಖದಲ್ಲಿ ಸ್ಥಳೀಯ ಜನಗಣತಿ ಮೇಲ್ವಿಚಾರಕಿಯರಾದ ಭಾಗ್ಯಲಕ್ಷ್ಮಿ ಇನಾಮತಿ ತಮ್ಮ ಸಹಾಯಕರೊಂದಿಗೆ ಕೆಲೂರ ಅವರ ಕುಟುಂಬದ ಸಮಗ್ರ ಮಾಹಿತಿ ಪಡೆದುಕೊಂಡರು.‘ಗಣತಿದಾರರು ನಿಗದಿತ ಸಮಯದಲ್ಲಿ ಪ್ರತಿದಿನ ಮನೆಮನೆಗಳಿಗೆ ಭೇಟಿ ನೀಡಲಿದ್ದು, ಅವರು ಕೇಳುವ ಒಟ್ಟು 29 ಪ್ರಶ್ನೆಗಳಿಗೆ ಕುಟುಂಬದ ಹಿರಿಯ ಸದಸ್ಯರು ಸೂಕ್ತ ಮಾಹಿತಿ ನೀಡಿ ಅವರೊಡನೆ ಸಹಕರಿಸಬೇಕು’ ಎಂದು ತಹಸೀಲ್ದಾರರು ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.ಹೆಚ್ಚುವರಿ ಜಿಲ್ಲಾ ಜನಗಣತಿ ಹಿರಿಯ ಅಧಿಕಾರಿ ಡಿ.ಎಸ್. ಕಲಬುರ್ಗಿ, ಪುರಸಭೆ ಕಾರ್ಯನಿರ್ವಾಹಕ ಅಧಿಕಾರಿ ವಿಣೇಕರ, ಪುರಸಭೆ ಸದಸ್ಯರಾದ ರಾಮು ಕಲಾಲ, ಚನಬಸವರಾಜ ಇಟಗಿ, ಮುಖಂಡರಾದ ನಬಿಸಾಬ್ ಕೆಲೂರ, ಅಂದಾನಗೌಡ ಪಾಟೀಲ, ಎಂ.ಡಿ.ಮಕಾಂದಾರ ಮೊದಲಾದವರು ಉಪಸ್ಥಿತರಿದ್ದರು.ಗಜೇಂದ್ರಗಡ ವರದಿ

 ಗಣತಿದಾರರು ಭರ್ತಿ ಮಾಡಿದ ಮಾಹಿತಿಗೆ ಸಹಿ ಮಾಡುವ ಮೂಲಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಭಾರತದ 15ನೇ ಜನಗಣತಿಗೆ ಬುಧವಾರ ಪಟ್ಟಣದಲ್ಲಿ ಚಾಲನೆ ನೀಡಿದರು.ನಂತರ ಶಾಸಕರು ಇಲ್ಲಿನ 39ನೇ ಬ್ಲಾಕಿನ ಎ.ಎಲ್. ಶೆಟ್ಟರ ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಂದ ಮಾಹಿತಿ ಸಂಗ್ರಹಿಸಿ ಜನಗಣತಿ ಕಾರ್ಯದಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ಮಾತನಾಡಿದ ಗಜೇಂದ್ರಗಡ ವಿಭಾಗದ ನೊಡಲ್ಅಧಿಕಾರಿ, ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಕೊಡಗೆ, ‘ಗಣತಿದಾರರು ಮನೆಗೆ ಬಂದಾಗ ಸೂಕ್ತ ಮಾಹಿತಿ ಕೊಟ್ಟು ಸಹಕರಿಸಬೇಕು’ ಎಂದರು.ಪಟ್ಟಣದಲ್ಲಿ ಒಟ್ಟು 58 ಬ್ಲಾಕ್‌ಗಳನ್ನು ಮಾಡಿದ್ದು, 54 ಗಣತಿದಾರರು 9  ಜನ ಮೇಲ್ವಿಚಾರಕರು, 5ಜನ ಕಾಯ್ದಿರಿಸಿದ ಗಣತಿದಾರರು ಮತ್ತು ಒಬ್ಬರು ಕಾಯ್ದಿರಿಸಿದ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.ರೋಣ ತಾಲ್ಲೂಕು ನೊಡಲ್ ಅಧಿಕಾರಿ ಸೋಮಶೇಖರ ಪಾಟೀಲ, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.ಲಕ್ಷ್ಮೇಶ್ವರ ವರದಿ

‘ಜನಗಣತಿ ಮಾಡುವವರು ಮನೆಗೆ ಬಂದು ಮಾಹಿತಿ ಕೇಳಿದಾಗ ಕುಟುಂಬರ ಸಂಪೂರ್ಣ ನೈಜ ಮಾಹಿತಿ ನೀಡಬೇಕು’ ಎಂದು ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ ಜನತೆಯಲ್ಲಿ ಮನವಿ ಮಾಡಿದರು.ಜನಗಣತಿ ಕಾರ್ಯಕ್ಕೆ ಬುಧವಾರ ತಮ್ಮ ಕುಟುಂಬದ ಮಾಹಿತಿ ನೀಡುವುದರ ಮೂಲಕ ಅವರು ಚಾಲನೆ ನೀಡಿದರು.‘ದೇಶದ ಅಭಿವೃದ್ಧಿಗೆ ಜನಗಣತಿ ಅತ್ಯವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಂಡು ಗಣತಿದಾರರಿಗೆ ಮಾಹಿತಿ ನೀಡಿ ಸಹಕರಿಸಬೇಕು’ ಎಂದರು. ಜನಗಣತಿ ಉಸ್ತುವಾರಿ ಅಧಿಕಾರಿ ಎಚ್.ಎನ್. ಭಜಕ್ಕನವರ, ಪುರಸಭೆ ಸಿಬ್ಬಂದಿ ಬಿ.ಸಿ. ಮಣ್ಣೂರ, ಶಿವಣ್ಣ ಮ್ಯಾಗೇರಿ, ಜನಗಣತಿ ಮೇಲ್ವಿಚಾರಕ ಎಚ್.ಎಂ. ಮುಳಗುಂದ, ಗಣತಿದಾರ ಸಿ.ಎನ್. ಶೀರನಹಳ್ಳಿ ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.