ಭಾನುವಾರ, ಜನವರಿ 19, 2020
20 °C

ಜನಮನ ರಂಜಿಸಿದ ಜಾನಪದ ಕಲಾ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಕೇಶ್ವರ: ಟಿವಿ ಹಾಗೂ ಇಂಟರ್‌ನೆಟ್‌ಗಳ ಹಾವಳಿಯಿಂದ ದೇಸಿ ಸಂಸ್ಕ್ರತಿಯನ್ನೇ ಮರೆಯುತ್ತಿರುವ ಇಂದಿನ ಪೀಳಿಗೆಗೆ ಜಾನಪದ ಕಲೆ, ಜಾನಪದ ಸಾಹಿತ್ಯ, ಜಾನಪದ ಸಂಪ್ರದಾಯ, ಜಾನಪದ ಸಂಸ್ಕೃತಿ ಪರಿಚಯ ಮಾಡಿಕೊಡುವ ಅರ್ಥಪೂರ್ಣ ಕಾರ್ಯಕ್ರಮವೊಂದು ಸಂಕೇಶ್ವರದಲ್ಲಿ ಜರುಗಿತು.ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ಮತ್ತು ಸಂಕೇಶ್ವರದ ಅಕ್ಕಮಹಾದೇವಿ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ `ಮುಂದಿನ ಪೀಳಿಗೆಗೆ ಜಾನಪದ~ ಕುರಿತ ವಿಚಾರ ಸಂಕಿರಣ ಮತ್ತು ಪ್ರಾಯೋಗಿಕ ಜಾನಪದ ಕಲಾ ಪ್ರದರ್ಶನಗಳು ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಮಾರ್ಗದರ್ಶಿಯಾಗಿದ್ದವು.ವಿಚಾರ ಸಂಕಿರಣ ಉದ್ಘಾಟಿಸಿದ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ದೇಸಿಯತೆ ಸತ್ವ ಹೊಂದಿರುವ ಜಾನಪದವು ಸರಳವಾಗಿದ್ದು, ಎಲ್ಲರಿಗೂ ಸುಲಭವಾಗಿ ತಿಳಿಯುತ್ತದೆ. ಇದರಲ್ಲಿ ಯಾವುದೇ ತರಹದ ಸಂಕೀರ್ಣತೆ ಇಲ್ಲ. ಮಾನವ ಬದುಕಿನ ವಿವಿಧ ಮಗ್ಗಲುಗಳನ್ನು ಇದ್ದಕ್ಕಿದ್ದಂತೆ ನೇರವಾಗಿ ಹೇಳುತ್ತದೆ. ಆಧುನಿಕತೆಗೆ ಮಾರು ಹೋಗದೆ ಜಾನಪದದ ಅಂತರ್ಯವನ್ನು ಅರಿಯಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ಡಾ.ಸಿ.ಕೆ.ನಾವಲಗಿಯವರು ಮಾತನಾಡಿ, ಕರ್ನಾಟಕ ಜಾನಪದಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು ಜಾನಪದ ವಿ.ವಿ.ಯ ಅಧ್ಯಯನ ಕೇಂದ್ರವನ್ನು ಬೆಳಗಾವಿ ಜಿಲ್ಲೆಯಲ್ಲಿ ಸ್ಥಾಪಿಸಬೇಕು ಎಂದರು.ನಂತರ ನಡೆದ ವಿಚಾರ ಸಂಕಿರಣದಲ್ಲಿ ಪ್ರೊ.ಶ್ರೀ ಶೈಲ ಮಠಪತಿಯವರು ಜಾನಪದ ಸಾಹಿತ್ಯಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಕುರಿತು ಪ್ರಬಂಧ ಮಂಡಿಸಿ, ಗೀಗೀ ಪದ, ಒಗಟು, ಕಥನ ಗೀತೆಗಳು, ಚೌಡಕಿ ಪದಗಳು, ಲಾವಣಿ, ಜಾನಪದ ಆಟಗಳ ರೂಪದ ಸಾಹಿತ್ಯ ಬೆಳಗಾವಿ ಜಿಲ್ಲೆಯಿಂದ ರೂಪಿತಗೊಂಡಿದೆ ಎಂದು ವಿವರಿಸಿದರು.ಬೆಲ್ಲದಬಾಗೇವಾಡಿಯ ಬಾಲಗೋಪಾಲ, ಗೋಕಾಕದ ಸಾತು-ಶಾಮಣ್ಣ, ಬೈಲಹೊಂಗಲದ ಪತ್ತಾರ ಮಾಸ್ತರ, ಕುಲಗೋಡದ ತಮಣ್ಣಾ, ಬೆಟಗೇರಿ ಕೃಷ್ಣಶರ್ಮ, ಘೋಡಗೇರಿಯ ಚಂದ್ರಶೇಖರ ಕಂಬಾರ, ಬೈಲಹೊಂಗಲದ ಬಸವರಾಜ ಮಲಶೆಟ್ಟಿ, ಯಾದವಾಡದ ಶ್ರೀರಾಮ ಇಟ್ಟನ್ನವರ, ಜ್ಯೋತಿ  ಹೊಸುರು, ನಿಂಗಣ್ಣಾ ಸನ್ನಕ್ಕಿ, ಸಿ.ಕೆ.ನಾವಲಗಿ ಮುಂತಾದವರು ಜಾನಪದ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ ಎಂದರು.     ಬೆಳಗಾವಿ ಜಿಲ್ಲೆಯ ಜಾನಪದ ಕಲೆಗಳ ಕುರಿತು  ಪ್ರಬಂಧ ಮಂಡಿಸಿದ ಎ.ಎ.ಸನದಿ ಅವರು ಭಜನೆ, ಡೊಳ್ಳು, ಕರಡಿ ಮಜಲು, ಸಂಬಾಳ ವಾದನ, ಲಾವಣಿ ಪದಗಳು, ಗೀ ಗೀ ಪದಗಳು, ಅಲಾವಿ ಕುಣಿತ, ಸೋಬಾನ ಹಾಡುಗಳು, ಸೋಗು ಹಾಕುವಿಕೆ, ಚೌಡಕಿ ಪದಗಳು, ಸಣ್ಣಾಟ, ದಪ್ಪಿನಾಟ,  ಜಾನಪದ ಹಾಡುಗಳು, ರಾಶಿಯ ಹಂತಿ ಹಾಡುಗಳು ಮುಂತಾದವು ಬೆಳಗಾವಿ ಜಿಲ್ಲೆಯ ಪ್ರಮುಖ ಜಾನಪದ ಕಲಾ ಪ್ರಕಾರಗಳಾಗಿದ್ದು ಕರ್ನಾಟಕ ಜಾನಪದಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರ ಎಂದರು.ಬೆಳಗಾವಿ ಜಿಲ್ಲೆಯ ಜಾನಪದ ಸಂಪ್ರದಾಯಗಳ ಕುರಿತು ಪ್ರಬಂದ ಮಂಡಿಸಿದ ಸಂಶೋಧಕ ಡಾ.ಜಿ.ಕೆ.ಹೀರೆಮಠ ಅವರು, ಬದುಕಿನ ಪ್ರತಿ ಕಾಲ ಘಟ್ಟದಲ್ಲಿಯೂ ಜಾನಪದ ಸಂಪ್ರದಾಯಗಳಿದ್ದು ಅದರಲ್ಲಿ ಸತ್ವ ಇದೆ. ಮದುವೆ ಮಾಡಿಕೊಳ್ಳುವಾಗಲೇ 54 ಸಂಪ್ರದಾಯಗಳಿವೆ. ನಂತರ ಸೀಮಂತ, ಬಾಣಂತಣ, ಮಗುವಿಗೆ ಹೆಸರು ಇಡುವುದು, ಶಾಲೆಯಲ್ಲಿ ಅಕ್ಷರಾಭ್ಯಾಸ, ನೌಕರಿಗೆ ಸೇರಿಕೊಳ್ಳುವುದು, ಮದುವೆ ಇವುಗಳಲ್ಲದೆ ಮನೆಗಳಿಗೆ ತಳಿರು ತೋರಣ ಕಟ್ಟುವುದು ಮುಂತಾದ ಸಂಪ್ರದಾಯಗಳಿವೆ. ಇವೆಲ್ಲವುಗಳಿಗೂ ತನ್ನದೇ ಆದ ಅರ್ಥ ಇದೆ ಎಂದರು.ಆದರೆ ಇಂದಿನ ಸಂದರ್ಭದಲ್ಲಿ ಇವುಗಳನ್ನು ಮೂಢ ನಂಬಿಕೆಗಳೆಂದು ಪರಿಗಣಿಸುತ್ತಿರುವುದು ಸರಿಯಲ್ಲ ಎಂದರು.

ಜಾನಪದ ಸಂಸ್ಕ್ರತಿ ಕುರಿತು ಪ್ರಬಂಧ ಮಂಡಿಸಿದ ಪ್ರೊ.ವಿ.ಬಿ.ಚೌಗಲಾ, ಮನುಷ್ಯನ ಆಹಾರ, ಬಟ್ಟೆ, ಆಚಾರ-ವಿಚಾರ, ಕಾಯಕ ಹೀಗೆ ಪ್ರತಿಯೊಂದರಲ್ಲಿಯೂ  ಜಾನಪದ ಸಂಸ್ಕ್ರತಿಯ ದರ್ಶನವಿದ್ದು ಅದರ ಸ್ವಾದ ಅನುಭವಿಸಬೇಕೆಂದರು.ನಂತರ ನಡೆದ ಜಾನಪದ ಕಲಾ ಪ್ರದರ್ಶನದಲ್ಲಿ ಬೊರಗಲ್ಲದ ತಂಡದಿಂದ ಶಿವ ಭಜನೆ, ಕೇಸ್ತಿಯ ತಂಡದಿಂದ ಸೋಬಾನ ಪದಗಳು, ಸಂಕೇಶ್ವರ ತಂಡದಿಂದ ಡೊಳ್ಳಿನ ಪದಗಳು, ಅಮ್ಮಣಗಿ ತಂಡದಿಂದ ಗೀ ಗೀ ಪದಗಳು, ಬಾಡ ತಂಡದಿಂದ ಲಾವಣಿ ಹಾಡುಗಳು, ಬಡಕುಂದ್ರಿ ತಂಡದಿಂದ ಕರಡಿ ಮಜಲು, ಯರಗಟ್ಟಿ ತಂಡದಿಂದ ಸಂಬಾಳ ವಾದನ, ಪುರವಂತಿಕೆ, ಹುಲ್ಲೋಳಿ ಹಾಗೂ ಜೋಕ್ಯಾನಟ್ಟಿ ತಂಡಗಳಿಂದ  ಜಾನಪದ ಹಾಡುಗಳು, ಹೆಬ್ಬಾಳ ತಂಡದಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ನಡೆದವು.

ಪ್ರತಿಕ್ರಿಯಿಸಿ (+)