ಭಾನುವಾರ, ಮೇ 9, 2021
26 °C

ಜನರು ಕಲೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯ ಸರ್ಕಾರ ಕಲೆ ಮತ್ತು ಸಂಸ್ಕೃತಿಗೆ ದೇಶದ ಇನ್ಯಾವ ರಾಜ್ಯಗಳು ನೀಡದಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದೆ. ಆದರೆ, ರಾಜ್ಯದ ಜನಸಾಮಾನ್ಯರು ಕಲೆಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಿಲ್ಲ~ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ವೈಜಯಂತಿ ಕಾಶಿ ವಿಷಾದಿಸಿದರು.

ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಬುಧವಾರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಅಕಾಡೆಮಿ ಫಾರ್ ಮ್ಯೂಸಿಕ್‌ನ ಸಹಯೋಗದಲ್ಲಿ ನಡೆದ `ರಂಗ ತರಂಗ~ ರಾಷ್ಟ್ರೀಯ ನೃತ್ಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಕಲೆಗಳ ಬಗ್ಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವನ್ನು ಸದ್ಬಳಕೆ ಮಾಡಿಕೊಂಡು ಕಲೆಯ ಅಭಿವೃದ್ಧಿಗೆ ಎಲ್ಲಾ ಕಲಾವಿದರು ಮುಂದಾಗಬೇಕು. ಜನಸಾಮಾನ್ಯರು ಕಲೆಗಳ ಬೆಳವಣಿಗೆಯಲ್ಲಿ ಭಾಗಿಗಳಾಗಬೇಕು. ಆಗ ಮಾತ್ರ ಕಲೆಗಳ ಸಮಗ್ರ ಬೆಳವಣಿಗೆ ಸಾಧ್ಯ~ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಮಾತನಾಡಿ `ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಪ್ರತಿಭೆ ಬೆಳಗುವುದು ಸಾಧ್ಯ. ರಾಜ್ಯದ ಸಂಸ್ಕೃತಿ ವಿಶಿಷ್ಟವಾದದ್ದು. ನಮ್ಮ ರಾಜ್ಯದಲ್ಲಿ ಎಲ್ಲಾ ಕಲೆಗಳನ್ನು ಕಾಣಲು ಸಾಧ್ಯವಿದೆ. ಕನ್ನಡ ನಾಡು ಕಲೆಗಳ ತವರೂರು~ ಎಂದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಭಾಗ್ಯ ಮಾತನಾಡಿ `ಯುವಜನರನ್ನು ನೃತ್ಯ ಮತ್ತು ಸಂಗೀತ ಕಲೆಗಳ ಕಡೆಗೆ ಸೆಳೆಯುವ ಉದ್ದೇಶದಿಂದ ರಂಗ ತರಂಗ ರಾಷ್ಟ್ರೀಯ ನೃತ್ಯೋತ್ಸವವನ್ನು ಆಯೋಜಿಸಲಾಗಿದೆ~ ಎಂದರು.

ಉದ್ಘಾಟನಾ ಸಮಾರಂಭದ ನಂತರ `ನಾಟ್ಯ~ ನೃತ್ಯ ಸಂಸ್ಥೆಯ ಕಲಾವಿದರು `ಸಾರೆ ಜಹಾ ಸೇ ಅಚ್ಚಾ~ ನೃತ್ಯ ರೂಪಕ ಪ್ರದರ್ಶಿಸಿದರು. ಅರುಣಾ ಮೋಹನ್ ಮತ್ತು ತಂಡದಿಂದ ಒಡಿಸ್ಸಿ ನೃತ್ಯ ಮತ್ತು ರೇಖಾ ಹೆಗಡೆ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಮೂರು ದಿನಗಳ ನೃತ್ಯೋತ್ಸವ ಚೌಡಯ್ಯ ಸ್ಮಾರಕ ಭವನದಲ್ಲಿ ಶುಕ್ರವಾರದವರೆಗೆ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.