ಶನಿವಾರ, ಏಪ್ರಿಲ್ 10, 2021
30 °C

ಜಪಾನ್‌ನಲ್ಲಿ ಕೊಡಗಿನ ಉದ್ಯೋಗಿಗಳು ಸೇಫ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಜಪಾನ್‌ನಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪ ಹಾಗೂ ಸುನಾಮಿಯಿಂದ ಅಪಾರ ಸಂಖ್ಯೆಯ ಸಾವು-ನೋವು ಸಂಭವಿಸಿದ ಹಿನ್ನೆಲೆಯಲ್ಲಿ ಕೊಡಗಿನಿಂದ ಉದಯ ರವಿಯ ನಾಡಿನಲ್ಲಿ ನೆಲೆಸಿರುವ ಕೊಡಗಿನ ಉದ್ಯೋಗಸ್ಥರ ಕುಟುಂಬಗಳಲ್ಲೂ ಆತಂಕ ಮನೆ ಮಾಡಿತ್ತು. ಆದರೆ, ‘ನಮಗೇನೂ ತೊಂದರೆಯಾಗಿಲ್ಲ’ ಎಂಬ ಸುದ್ದಿ ತಲುಪುತ್ತಿದ್ದಂತೆಯೇ ಕೆಲವು ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟವು. ಜಪಾನ್‌ನ ‘ಕ್ಯುಟೋ’ದಲ್ಲಿ ‘ಕಂಪ್ಯುಟೆಕ್ಸ್’ ಕಂಪೆನಿಯಲ್ಲಿ ಎಂಜಿನಿಯರ್ ಆಗಿರುವ ಮಡಿಕೇರಿಯ ಮೊಣ್ಣಂಡ ಅಯ್ಯಪ್ಪ ಸೋಮಯ್ಯ ಹಾಗೂ ಅವರ ಪತ್ನಿ ಬಿದ್ದಾಟಂಡ ಮಾನಸ ಚಿಟ್ಟಿಯಪ್ಪ ಕ್ಷೇಮವಾಗಿರುವ ಕುರಿತು ಕುಟುಂಬಕ್ಕೆ ಮಾಹಿತಿ ತಲುಪಿದೆ.ನಿವೃತ್ತ ಎಂಜಿನಿಯರ್ ಸೋಮಯ್ಯ ಹಾಗೂ ನಿವೃತ್ತ ಅಧ್ಯಾಪಕಿ ಮೊಣ್ಣಮ್ಮನವರ ಪುತ್ರ ಅಯ್ಯಪ್ಪ ಸೋಮಯ್ಯ ಕಳೆದ ನಾಲ್ಕು ವರ್ಷಗಳಿಂದ ಜಪಾನ್‌ನ ‘ಕ್ಯುಟೋ’ದಲ್ಲಿ ‘ಕಂಪ್ಯುಟೆಕ್ಸ್’ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಶುಕ್ರವಾರ ಮಧ್ಯಾಹ್ನ ಸುನಾಮಿ ಸುದ್ದಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆಯೇ ನಾನು ನನ್ನ ಮಗನನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ, ತಕ್ಷಣ ಸಂಪರ್ಕ ಸಾಧ್ಯವಾಗಲಿಲ್ಲ. ಕೊನೆಗೆ, ಮೈಸೂರಿನಲ್ಲಿ ಸಹಾಯಕ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿರುವ ನನ್ನ ಮಗಳು ಅಮೆರಿಕದ ಮಾನ್ಸಾಂಟೋ ಕಂಪೆನಿಯಲ್ಲಿ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿರುವ ಮತ್ತೊಬ್ಬ ಮಗಳನ್ನು ಸಂಪರ್ಕಿಸಿ, ಕೊನೆಗೆ ಮಗನ ಸಂಪರ್ಕ ಮಾಡಲಾಯಿತು.ಮೊದಲು ಅಮೆರಿಕದಲ್ಲಿರುವ ಮಗಳಿಗೆ ‘ಐ ಆ್ಯಮ್ ಸೇಫ್’ ಎಂಬ ಮಾಹಿತಿ ಬಂದಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಯಿತು. ಆನಂತರ ಮಗನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ’ ಎಂದು ಮೊಣ್ಣಮ್ಮ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ನಾಲ್ಕು ವರ್ಷಗಳ ಹಿಂದೆ ನಾವು ಜಪಾನ್‌ಗೆ ಹೋಗಿದ್ದೆವು. ಬಹುಶಃ ‘ಕ್ಯುಟೋ’ ಹಾಗೂ ಈಗ ಸುನಾಮಿ ಸಂಭವಿಸಿರುವ ಸ್ಥಳಕ್ಕೂ ಬಹಳಷ್ಟು ದೂರವಿದೆ. ಹೀಗಾಗಿ, ನನ್ನ ಮಗ ಇರುವ ಪ್ರದೇಶದಲ್ಲಿ ಅಷ್ಟೊಂದು ಅನಾಹುತ ಸಂಭವಿಸಿರಲಿಕ್ಕಿಲ್ಲ’ ಎಂದು ಹೇಳಿದರು.‘ವಿ ಆರ್ ಸೇಫ್’

ನಾಪೋಕ್ಲು ವರದಿ: “ವಿ ಆರ್ ಸೇಫ್‌”. ಶುಕ್ರವಾರ ಮಧ್ಯಾಹ್ನ 1.30ಗಂಟೆಗೆ ಜಪಾನ್ ಕೊಟಾಯು ನಗರದಿಂದ ಅಪ್ಪಚೆಟ್ಟೋಳಂಡ ಸೋಮಣ್ಣ ದೂರವಾಣಿ ಕರೆ ಮೂಲಕ ಬಲ್ಲಮಾವಟಿ ಗ್ರಾಮದಲ್ಲಿರುವ ತನ್ನ ತಂದೆ ಅಪ್ಪಚೆಟ್ಟೋಳಂಡ ಈರಪ್ಪನವರಿಗೆ ಮಾಹಿತಿ ನೀಡಿದಾಗ ತಂದೆ- ತಾಯಿ ಇಬ್ಬರೂ ಸಮಧಾನದ ನಿಟ್ಟುಸಿರಿಟ್ಟರು. ಜಪಾನ್ ಶುಕ್ರವಾರ ಪ್ರಬಲ ಸುನಾಮಿಗೆ ತುತ್ತಾದ ಸುದ್ದಿ ಮಾಧ್ಯಮದ ಮೂಲಕ ಕೇಳಿದೊಡನೆ ಬಲ್ಲಮಾವಟಿ ಗ್ರಾಮದ ನಿವೃತ್ತ ಉಪನ್ಯಾಸಕ ಅಪ್ಪಚೆಟ್ಟೋಳಂಡ ಈರಪ್ಪ ದಂಪತಿ ಆತಂಕಕ್ಕೀಡಾಗಿದ್ದರು. ತಮ್ಮ ಮೂವರು ಮಕ್ಕಳಲ್ಲಿ ಒಬ್ಬರಾದ ಸೋಮಣ್ಣ ಜಪಾನ್‌ನ ಟೋಕಿಯೋ ನಗರದ ಬಳಿಯ ಕೊಟಾಯುನಲ್ಲಿ ಉದ್ಯೋಗಿಯಾಗಿದ್ದರು.ವಿಪ್ರೋ ಕಂಪೆನಿಯಿಂದ ಜಪಾನಿನ ಸಿಟಿ ಬ್ಯಾಂಕಿಗೆ ನಿಯೋಜನೆಗೊಂಡ ಸೋಮಣ್ಣ, ಕಳೆದ ಏಳು ವರ್ಷಗಳಿಂದ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮಣ್ಣ ಅವರ ಪತ್ನಿ  ವಾಸವಾಗಿರುವ ಅಪಾರ್ಟ್‌ಮೆಂಟ್ ಇರುವುದು ಕೊಟಾಯು ನಗರದಿಂದ ಸುಮಾರು 100 ಕಿ.ಮೀ. ಅಂತರದಲ್ಲಿ. ಪತ್ನಿಯಿಂದ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಇಬ್ಬರೂ ಸುರಕ್ಷಿತವಾಗಿದ್ದೇವೆ ಎಂಬಷ್ಟೇ ಸಂದೇಶ ಕಳುಹಿಸಿರುವ ಸೋಮಣ್ಣ, ಶುಕ್ರವಾರ ರಾತ್ರಿಯವರೆಗೂ ಮತ್ತೆ ತಂದೆಯ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಮತ್ತೋರ್ವ ಪುತ್ರ ಅಪ್ಪಚೆಟ್ಟೋಳಂಡ ಬೆಳ್ಯಪ್ಪನವರ ಮೂಲಕ ಸಂಪರ್ಕಕ್ಕೆ ಪ್ರಯತ್ನಿಸಿದರೂ ಯಾವುದೇ ಮಾಹಿತಿ ಸಿಗಲಿಲ್ಲ ಎಂದು ಅಪ್ಪಚೆಟ್ಟೋಳಂಡ ಈರಪ್ಪ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.