ಭಾನುವಾರ, ಮೇ 9, 2021
19 °C

ಜಮೈಕಾ ರಿಲೇ ತಂಡದ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೇಗು, (ದಕ್ಷಿಣ ಕೊರಿಯಾ): 100ಮೀ. ಓಟದಲ್ಲಿ ತಪ್ಪು ಮಾಡಿ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಜಮೈಕಾದ ಉಸೇನ್ ಬೋಲ್ಟ್ ಇಲ್ಲಿ ಮುಕ್ತಾಯವಾದ 13ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 4್ಡ100ಮೀ. ರಿಲೇಯಲ್ಲಿ ತಮ್ಮ ದೇಶಕ್ಕೆ ಮತ್ತೊಂದು ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಇಲ್ಲಿನ ಡೇಗು ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ಉಸೇನ್ ಬೋಲ್ಟ್, ನೆಸ್ತಾ ಕಾರ್ಟರ್, ಮೈಕಲ್ ಫ್ರಟೆರ್ ಹಾಗೂ ಯೋಹಾನ್ ಬ್ಲೇಕ್ ಅವರನ್ನೊಳಗೊಂಡ ಜಮೈಕಾ ತಂಡ ರಿಲೇಯಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿತು.ನಿಗದಿತ ಅಂತರವನ್ನು ಈ ತಂಡ 37.04ಸೆಕೆಂಡ್‌ಗಳಲ್ಲಿ ತಲುಪಿತು. ಈ ಮೂಲಕ 2008ರ ಬೀಜಿಂಗ್ ಒಲಿಂಪಿಕ್ ಕೂಟದ ದಾಖಲೆಯನ್ನು (37.10ಸೆ.) ಮುರಿಯಿತು. ಫ್ರಾನ್ಸ್ ತಂಡ ಬೆಳ್ಳಿ ಪದಕ ಜಯಿಸಿತು.ಜಮೈಕಾ ತಂಡ ಈ ಸಾಧನೆ ಮಾಡುತ್ತಿದ್ದಂತೆ ಬೋಲ್ಟ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ನಡುವೆ ಕುಣಿದು ಸಂಭ್ರಮಿಸಿದರು. ಬೋಲ್ಟ್ 200 ಮೀ. ಓಟದಲ್ಲಿ ಶನಿವಾರ ಚಿನ್ನದ ಪದಕ ಜಯಿಸಿದ್ದರು. `ನನಗೆ ಸಾಕಷ್ಟು ಸಂತಸವಾಗಿದೆ. ನನ್ನ ತಂಡದ ಸಾಧನೆಯನ್ನು ಮನತುಂಬಿ ಶ್ಲಾಘಿಸುತ್ತೇನೆ. ಈ ಕ್ಷಣವನ್ನು ಖುಷಿಯಿಂದ ಅನುಭವಿಸುತ್ತಿದ್ದೇನೆ~ ಎಂದು ಬೋಲ್ಟ್ ಪ್ರತಿಕ್ರಿಯಿಸಿದರು.ಮ್ಯಾರಥಾನ್‌ನಲ್ಲಿ ಕೀನ್ಯಾ ಅಥ್ಲೀಟ್‌ಗಳ ಪ್ರಾಬಲ್ಯ: ಕೀನ್ಯಾದ ಅಥ್ಲೀಟ್‌ಗಳು ಪುರುಷರ ವಿಭಾಗದ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡು ತಮ್ಮ ಪ್ರಾಬಲ್ಯ ಮರೆದರು.ಭಾನುವಾರ ನಡೆದ 42.195 ಕಿ.ಮೀ. ದೂರದ ಓಟದಲ್ಲಿ ಕೀನ್ಯಾದ ಅಬೆಲ್ ಗುರಿಯನ್ನು 2 ಗಂಟೆ, 7 ನಿಮಿಷ ಹಾಗೂ 38ಸೆಕೆಂಡ್‌ಗಳಲ್ಲಿ ಮುಟ್ಟಿ ಚಿನ್ನದ ಪದಕ ಪಡೆದರು. ಇದೊಂದು ವಿಶೇಷವಾದ ಕ್ಷಣ. ನನಗೆ ದೊರೆಯುತ್ತಿರುವ ಎರಡನೇ ಪ್ರಶಸ್ತಿ ಇದು. ಸಾಕಷ್ಟು ಖುಷಿಯಾಗಿದೆ.ಒಲಿಂಪಿಕ್‌ಗೆ ಮುನ್ನ ನನ್ನಿಂದ ಈ ಸಾಧನೆ ಮೂಡಿ ಬಂದಿರುವುದು ಸಂತಸದ ಸಂಗತಿ~ ಎಂದು ಅಬೆಲ್ ಪ್ರತಿಕ್ರಿಯಿಸಿದರು.ಇದೇ ಮ್ಯಾರಥಾನ್‌ನಲ್ಲಿ ಕೀನ್ಯಾದ ಇನ್ನೊಬ್ಬ ಅಥ್ಲೀಟ್ ವಿನ್ಸಂಟ್ ಕಿಪ್ರುತೊ 2:28.00ಸೆಕೆಂಡ್‌ಗಳನ್ನು ಗುರಿ ಮುಟ್ಟಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಇಥಿಯೋಪಿಯಾದ ಅಥ್ಲೀಟ್ ಫಿಯಾಸ ಲಿಲೆಸಾ 2:10.32ಸೆಕೆಂಡ್‌ಗಳನ್ನು ನಿಗದಿತ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.ಆರಂಭದಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಕೀನ್ಯಾದ ಅಥ್ಲೀಟ್‌ಗಳು ಮುಂದಿದ್ದರು. ಆದ್ದರಿಂದ ನಡುವೆ ಉತ್ತಮ ಪ್ರದರ್ಶನ ನೀಡಿದ ಇಥಿಯೋಪಿಯಾದ ಫಿಯಾಸ ಮೂರನೇ ಸ್ಥಾನ ಪಡೆದುಕೊಂಡರು. ಇಲ್ಲವಾದರೆ ಮೊದಲ ಮೂರು ಸ್ಥಾನಗಳು ಪುರುಷರ ವಿಭಾಗದಲ್ಲಿಯೂ ಕೀನ್ಯಾದ ಪಾಲಾಗುತ್ತಿದ್ದವು.

 

ಕ್ರೀಡಾಕೂಟದ ಮೊದಲ ದಿನ ನಡೆದ ಮಹಿಳೆಯರ ಮ್ಯಾರಥಾನ್‌ನಲ್ಲಿ ಕೀನ್ಯಾದ ಅಥ್ಲೀಟ್‌ಗಳು ಪಾರಮ್ಯ ಮೆರೆದು ಎಲ್ಲಾ ಮೂರು ಪದಕ ಗೆದ್ದುಕೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.