ಭಾನುವಾರ, ಏಪ್ರಿಲ್ 18, 2021
31 °C

ಜಮ್ಮಾ ಸಮಸ್ಯೆಗೆ ರಾಜ್ಯದಿಂದಲೇ ಪರಿಹಾರ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ಜಮ್ಮಾ ಸಮಸ್ಯೆಗೆ ರಾಷ್ಟ್ರಪತಿಯಿಂದ ಅಲ್ಲ, ರಾಜ್ಯ ಸರ್ಕಾರದಿಂದಲೇ ಪರಿಹಾರ ಸಾಧ್ಯ ಎಂದು ಕೊಡಗು   ಏಕೀಕರಣ ರಂಗದ ಪದಾಧಿಕಾರಿಗಳು ಹೇಳಿದರು.ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಮ್ಮು ಪೂವಯ್ಯ, ಬಿದ್ದಾಟಂಡ ತಮ್ಮಯ್ಯ, ಎಂ.ಕೆ. ಅಪ್ಪಚ್ಚು, ಜಮ್ಮಾ ಕುರಿತು ಜಿಲ್ಲೆಯ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಜನರಿಗೆ ತಪ್ಪು ಮಾಹಿತಿ ನೀಡಿ, ಆತಂಕಕ್ಕೀಡು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ವಿಧಾನಸಭೆಯಲ್ಲಿ ಅಂಗೀಕರಿಸಲಾದ ಜಮ್ಮಾ ಕುರಿತ ತಿದ್ದುಪಡಿಯನ್ನು ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿದ್ದು, ಅವರೇ ಪರಿಹಾರ ನೀಡಬೇಕೆಂದು ಶಾಸಕರು ಕೈಕಟ್ಟಿ ಕುಳಿತಿದ್ದಾರೆ. ಆದರೆ, ರಾಷ್ಟ್ರಪತಿಗಳು ಜಮ್ಮಾ ಬಾಣೆ ವಿಷಯದಲ್ಲಿ ಮಧ್ಯಪ್ರವೇಶಿಸುವ ಅವಕಾಶಗಳು ತೀರಾ ಕಡಿಮೆ ಎಂದರು.ಇದಕ್ಕೆ ಎರಡು ಕಾರಣ; ಜಮ್ಮಾ ಬಾಣೆ ವಿಷಯವು ಭೂಮಿಗೆ ಸಂಬಂಧಿಸಿದ ಭೂ ಕಂದಾಯ, ಭೂ ಸುಧಾರಣೆ, ಜಮೀನು ಮಂಜೂರಾತಿ ಮುಂತಾದ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು, ಇದು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುವಂತಹದ್ದು. ಹೀಗಾಗಿ ರಾಷ್ಟ್ರಪತಿಯಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಮಧ್ಯೆಪ್ರವೇಶಿಸಲು ಬರುವುದಿಲ್ಲ.ಮತ್ತೊಂದು ಕಾರಣವೆಂದರೆ, ಗೋಧಾವರ್ಮನ್ ತಿರುಮಲ್ಪಾಡ್ ಪ್ರಕರಣದ ರಿಟ್ ಪಿಟೆಷನ್‌ಗೆ ಸಂಬಂಧಿಸಿದಂತೆ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಅರಣ್ಯ ಪ್ರದೇಶದ ವಿವರವನ್ನು ಸುಪ್ರೀಂ ಕೋರ್ಟ್ ಕೇಳಿದೆ. (ಬಾಣೆ ಜಾಗವು ಡೀಮ್ಡ ಫಾರೆಸ್ಟ್ ಎಂದು ಅರಣ್ಯ ಇಲಾಖೆ ದಾಖಲೆಗಳಲ್ಲಿ ದಾಖಲಾಗಿದೆ) ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿರುವ ವಿಚಾರದಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶಿಸಲು ಅವಕಾಶವಿಲ್ಲ. ಇವೆರಡು ಕಾರಣಗಳಿಂದಾಗಿ ಜಮ್ಮಾ ಬಾಣೆಯ ವಿಚಾರವು ರಾಷ್ಟ್ರಪತಿ ಅವರಿಂದ ಪರಿಹಾರವಾಗಬೇಕು ಎನ್ನುವ ಮಾತು ಸುಳ್ಳು ಎಂದು ಹೇಳಿದರು.ಜಮ್ಮಾ ಸಮಸ್ಯೆಯನ್ನು `ಮತ ಬ್ಯಾಂಕ್~ ಆಗಿ ಬಳಸುವ ಬದಲು ನಿಜವಾಗಿಯೂ ಇತ್ಯರ್ಥ ಪಡಿಸುವ ಮನಸ್ಸಿದ್ದರೆ ಕೇವಲ ಆರು ತಿಂಗಳಲ್ಲಿ ಬಗೆಹರಿಸಬಹುದಾಗಿದೆ. ಇದು ಸ್ಥಳೀಯ ಶಾಸಕರು ಹಾಗೂ ರಾಜ್ಯ ಸರ್ಕಾರದಿಂದಲೇ ಸಾಧ್ಯವೆಂದು ಎಂದು ಹೇಳಿದ ಅವರು, ಕೆಲವು ಸಲಹೆ ನೀಡಿದರು.* ಕೊಡಗಿನ ಬಾಣೆ ಹಿಡುವಳಿದಾರರ ವಶದಲ್ಲಿರುವ ನಿಖರವಾದ ಜಮೀನನ್ನು ಸರ್ವೇ ಮಾಡಿಸಿ ಖಚಿತ ಅಂಕಿ-ಅಂಶ ಪಡೆದುಕೊಳ್ಳಬೇಕು. ಇದರಲ್ಲಿ ಕೃಷಿಗೆ (ಕಾಫಿ, ಏಲಕ್ಕಿ, ಇತ್ಯಾದಿ) ಒಳಪಟ್ಟರೂ ಕಂದಾಯ ನಿಗದಿಯಾಗದ ಹಾಗೂ ಈಗಾಗಲೇ ಕಂದಾಯ ನಿಗದಿಯಾದ ಜಮೀನನ್ನೂ ಗುರುತಿಸಬೇಕು. ಇದಕ್ಕಾಗಿ ಜಿಲ್ಲೆಯ ಮೂರು ತಾಲ್ಲೂಕುಗಳಿಗೆ ವಿಶೇಷ ಸರ್ವೇ ತಂಡ ರಚಿಸಬೇಕು.* ಕೃಷಿಗೆ ಒಳಪಟ್ಟಿದ್ದರೂ ಕಂದಾಯ ನಿಗದಿಯಾಗದ ಬಾಣೆ ಜಮೀನಿಗೆ ಕಂದಾಯ ನಿಗದಿ ಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದಕ್ಕಾಗಿ ಪ್ರತಿ ತಾಲ್ಲೂಕಿನಲ್ಲೂ ತಹಶೀಲ್ದಾರ್ ನೇತೃತ್ವದಲ್ಲಿ ವಿಶೇಷ ಅಧಿಕಾರಿಗಳ ತಂಡವನ್ನು ರಚಿಸಬೇಕು.* ಬಾಣೆ ಜಮೀನಿನ ಖಚಿತ ಅಂಕಿ ಅಂಶಗಳು ಲಭಿಸಿದ ನಂತರ ರಾಜ್ಯ ಸರ್ಕಾರವೇ ಈ ಕುರಿತು ವಿಸ್ತೃತ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ಮೂಲಕ ಡೀಮ್ಡ ಫಾರೆಸ್ಟ್ ಸ್ಥಾನಮಾನವನ್ನು ತೆರವುಗೊಳಿಸಬೇಕು.ಈ ರೀತಿ ಜಮ್ಮಾ ಬಾಣೆ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ ಎಂದು ಅವರು ಸಲಹೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ರಂಗದ ಸದಸ್ಯರಾದ ತಾತಪಂಡ ನಯನ, ತೇಲಪಂಡ ಪ್ರಮೋದ್, ನಂದೇಟ್ಟಿರ್ ರಾಜಾ ಮಾದಪ್ಪ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.