ಭಾನುವಾರ, ಜೂನ್ 13, 2021
23 °C

ಜಯದೇವದಲ್ಲಿ ವಿನೂತನ ಹೃದಯ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ಷಯರೋಗದಿಂದ ದುರ್ಬಲ ಶ್ವಾಸಕೋಶ ಹೊಂದಿದ್ದ ರೋಗಿಗೆ ಸಾಮಾನ್ಯ ಅರಿವಳಿಕೆ ನೀಡದೆ ಬೆನ್ನುಹುರಿಗೆ ಅರಿವಳಿಕೆ ನೀಡಿ ಎಚ್ಚರದ ಸ್ಥಿತಿಯಲ್ಲಿಯೇ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಸರ್ಕಾರಿ ಸ್ವಾಮ್ಯದ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಮಾಡಲಾಗಿದೆ.ಸಾಮಾನ್ಯವಾಗಿ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಪ್ರಜ್ಞೆ ತಪ್ಪಿಸಿ ಮಾಡಲಾಗುತ್ತದೆ. ಆದರೆ 55 ವರ್ಷದ ಗುರುಸ್ವಾಮಿ ಅವರಿಗೆ ಸಾಮಾನ್ಯ ಅರಿವಳಿಕೆ ನೀಡದರೆ ಹೃದಯ ಬಡಿತ ನಿಲ್ಲಿಸದೆ ಡಾ.ಅಶೋಕ್ ಕುಮಾರ್ ನೇತೃತ್ವದ ತಂಡ ಯಶಸ್ವಿಯಾಗಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಮಾಡಿದೆ.ಗುರುಸ್ವಾಮಿ ಅವರು ಸುಮಾರು 20 ವರ್ಷದಿಂದ ಕ್ಷಯರೋಗದಿಂದ ಬಳಲುತ್ತಿದ್ದು, ಶ್ವಾಸಕೋಶ ದುರ್ಬಲವಾಗಿತ್ತು. ಇದರ ಜೊತೆಯಲ್ಲಿ ಹೃದಯದ ಮೂರು ರಕ್ತನಾಳಗಳಲ್ಲಿ ಸರಾಗ ರಕ್ತಸಂಚಾರಕ್ಕೆ ತಡೆ ಉಂಟಾಗಿತ್ತು. ಇಂತಹ ರೋಗಿಗಳಿಗೆ ಶಸ್ತ್ರಚಿಕಿತ್ಸೆ ವೇಳೆಯಲ್ಲಿ ಕೃತಕ ಉಸಿರಾಟ ಅಳವಡಿಸಿದರೆ, ನಂತರವೂ ಕೃತಕ ಉಸಿರಾಟವನ್ನೇ ನೀಡಬೇಕಾಗುತ್ತದೆ. ಹೀಗಾಗಿ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.ಬೆನ್ನುಹುರಿಯ ಮೂಲಕ ಅರಿವಳಿಕೆ ನೀಡಿದ್ದರಿಂದ ಶಸ್ತ್ರಚಿಕಿತ್ಸೆಯ ನೋವು ರೋಗಿಗೆ ಗೊತ್ತಾಗಲಿಲ್ಲ. ಆದರೆ ಶಸ್ತ್ರಚಿಕಿತ್ಸೆ ನಡೆಯುತ್ತಿರುವುದು ಗೊತ್ತಿತ್ತು.ವೈದ್ಯರು, ಅರಿವಳಿಕೆ ತಜ್ಞರು ಹಾಗೂ ಸಿಬ್ಬಂದಿ ಮಾತನ್ನಾಡುವುದು ಕೇಳುತ್ತಿತ್ತು. ರೋಗಿಯು ಗಾಬರಿಗೊಳ್ಳದಂತೆ ಮಾನಸಿಕವಾಗಿ ತಯಾರಿ ನಡೆಸಲಾಗಿತ್ತು.

ಶಸ್ತ್ರಚಿಕಿತ್ಸೆ ನಂತರ ರೋಗಿಯು ಗುಣಮುಖವಾಗುತ್ತಿದ್ದು, ಶೀಘ್ರವೇ ಮನೆಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.