ಬುಧವಾರ, ಮೇ 12, 2021
18 °C

ಜಯದೇವ ಹೃದ್ರೋಗ ಆಸ್ಪತ್ರೆ: ವಿಶ್ವದರ್ಜೆಯ ಚಿಕಿತ್ಸಾ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿನ ಚಿಕಿತ್ಸಾ ಸೌಲಭ್ಯಗಳು ಮತ್ತು ಗುಣಮಟ್ಟ ವಿಶ್ವದರ್ಜೆಯದ್ದಾಗಿದೆ~ ಎಂದು ಶಾಸಕ ಬಿ.ಎನ್.ವಿಜಯ್‌ಕುಮಾರ್ ಅಭಿಪ್ರಾಯಪಟ್ಟರು.ನಗರ ವ್ಯಾಪ್ತಿಯ ಬಡ ಹೃದ್ರೋಗಿಗಳ ಚಿಕಿತ್ಸೆಗಾಗಿ ಬಿಬಿಎಂಪಿ ನೀಡಿದ ರೂ. 3 ಕೋಟಿ ಅನುದಾನದ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕರೊಬ್ಬರು ಜಯದೇವದಲ್ಲಿ ಇತ್ತೀಚೆಗೆ ಆಂಜಿಯೊಗ್ರಾಮ್ ಚಿಕಿತ್ಸೆ ಮಾಡಿಸಿಕೊಂಡರು. ಅವರು ಆಸ್ಪತ್ರೆಯ ಆಡಳಿತ ವ್ಯವಹಾರ ಬೋಧಿಸುವ ತಜ್ಞರು. ಜಯದೇವ ಆಸ್ಪತ್ರೆಯು ಅಮೆರಿಕ, ಯೂರೋಪ್ ದೇಶಗಳ ಸುಸಜ್ಜಿತ ಆಸ್ಪತ್ರೆಗಳಿಗೆ ಸರಿಸಮನಾಗಿದೆ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು. ಅದನ್ನು ಕೇಳಿ ನನಗೆ ಬಹಳ ಸಂತೋಷವಾಯಿತು~ ಎಂದು ಅವರು ಹೇಳಿದರು.`ಇಂತಹ ಆಸ್ಪತ್ರೆ ನನ್ನ ವ್ಯಾಪ್ತಿಯಲ್ಲಿರುವುದು ನನಗೆ ಹೆಮ್ಮೆಯ ವಿಚಾರ. ಉಳಿದ ಸರ್ಕಾರಿ ಆಸ್ಪತ್ರೆಗಳು ಈ ಆಸ್ಪತ್ರೆಯ ಮಾದರಿಯಲ್ಲಿ ಅಭಿವೃದ್ಧಿ ಹೊಂದಬೇಕು~ ಎಂದು ಅವರು ಕರೆ ನೀಡಿದರು.ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್, `ನಮ್ಮ ಆಸ್ಪತ್ರೆಯು ಬಡವರಿಗೆ ರಿಯಾಯಿತಿ ದರದಲ್ಲಿ, ಕಡು ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. ಲಾಭಗಳಿಕೆಯ ಉದ್ದೇಶವಿಲ್ಲದ ಈ ಆಸ್ಪತ್ರೆಗೆ ಪಾಲಿಕೆಯು ಆಸ್ತಿ ತೆರಿಗೆ ವಿಧಿಸುತ್ತಿರುವುದು ಸರಿಯಲ್ಲ. ಇನ್ನಾದರೂ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡಬೇಕು~ ಎಂದು ಮನವಿ ಮಾಡಿದರು.ಮೇಯರ್ ಪಿ.ಶಾರದಮ್ಮ, ಉಪಮೇಯರ್ ಎಸ್.ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.