ಶನಿವಾರ, ಜನವರಿ 18, 2020
23 °C
ರಣಜಿ ಕ್ರಿಕೆಟ್‌: ಸೋಲಿನಲ್ಲೂ ಮಿಂಚಿದ ಹರಿಯಾಣದ ಹರ್ಷಲ್‌, ಗೆಲುವು ತಂದಿತ್ತ ಬಿನ್ನಿ

ಜಯದ ತೋರಣ ಕಟ್ಟಿದ ಕರ್ನಾಟಕ

ಪ್ರಮೋದ್‌ ಜಿ.ಕೆ./ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹ್ಲಿ, ರೋಹ್ಟಕ್‌: ನಿರೀಕ್ಷೆ ಸುಳ್ಳಾಗಲಿಲ್ಲ ಜೊತೆಗೆ ಯಾವ ಪವಾಡವೂ ನಡೆಯಲಿಲ್ಲ. ಗೆಲುವಿಗೆ ಅಗತ್ಯವಿದ್ದ 35 ರನ್‌ಗಳನ್ನು ದಿನದಾಟ ಆರಂಭವಾಗಿ ಒಂದು ಗಂಟೆಯೊಳಗೆ ಕಲೆ ಹಾಕಿದ ಕರ್ನಾಟಕ ತಂಡ ಬನ್ಸಿ ಲಾಲ್‌ ಕ್ರೀಡಾಂಗಣದಲ್ಲಿ ಗೆಲುವಿನ ತೋರಣ ಕಟ್ಟಿತು.ಸಚಿನ್‌ ತೆಂಡೂಲ್ಕರ್‌ ಅವರ ಕೊನೆಯ ರಣಜಿ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು. ಅದಕ್ಕಾಗಿ ಹರಿಯಾಣ ಕ್ರಿಕೆಟ್‌ ಸಂಸ್ಥೆ ಬಣ್ಣ ಬಣ್ಣಗಳಿಂದ ಕ್ರೀಡಾಂಗಣವನ್ನು ಸುಂದರವಾಗಿ ಸಿಂಗಾರಗೊಳಿಸಿತ್ತು. ಈ ಅಂದದಲ್ಲಿ ಸಿ.ಎಂ. ಗೌತಮ್‌ ಸಾರಥ್ಯದ ಕರ್ನಾಟಕ ತಂಡ ಸುಂದರ ನೆನಪುಗಳ ರಂಗವಲ್ಲಿ ಬರೆಯಿತು. ಜೊತೆಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಾಯಿಂಟ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.ಹರಿಯಾಣ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 105 ರನ್‌ಗೆ ಆಲ್‌ಔಟ್‌ ಆಗಿತ್ತು. ಗೆಲುವಿಗೆ 97 ರನ್‌ ಗುರಿ ಪಡೆದಿದ್ದ ಕರ್ನಾಟಕ ಭಾನುವಾರದ ಅಂತ್ಯಕ್ಕೆ 23 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು 62 ರನ್‌ ಕಲೆ ಹಾಕಿತ್ತು.ನಾಲ್ಕನೇ ಮತ್ತು ಕೊನೆಯ ದಿನವಾದ ಸೋಮವಾರ ಗೌತಮ್‌ ಬಳಗ ಗುರಿ ಮುಟ್ಟಲು 35 ರನ್‌ಗಳನ್ನಷ್ಟೇ ಗಳಿಸಬೇಕಿತ್ತು. ಹರ್ಷಲ್‌ ಪಟೇಲ್‌ ಅಪಾಯಕಾರಿ ಬೌಲಿಂಗ್‌ ನಡುವೆಯೂ ಸ್ಟುವರ್ಟ್‌್ ಬಿನ್ನಿ 33.5 ಓವರ್‌ಗಳಲ್ಲಿ ಗೆಲುವು ತಂದುಕೊಟ್ಟರು. ಇದಕ್ಕಾಗಿ ಕಳೆದುಕೊಂಡಿದ್ದು ಏಳು ವಿಕೆಟ್.

ಆತಂಕದ ಅಲೆ ಎಬ್ಬಿಸಿದ್ದ ಹರ್ಷಲ್‌: ರಣಜಿ ಕ್ರಿಕೆಟ್‌ನಲ್ಲಿ ಕರ್ನಾಟಕದ ವಿರುದ್ಧ ಸದಾ ಅತ್ಯುತ್ತಮ ಪ್ರದರ್ಶನ ತೋರುವ ಬಲಗೈ ವೇಗಿ ಹರ್ಷಲ್‌ ಪಟೇಲ್‌ ಐದು ರನ್‌ಗಳ ಅಂತರದಲ್ಲಿ ಗೌತಮ್‌, ಗಣೇಶ್‌ ಸತೀಶ್‌ ಮತ್ತು ಅಬ್ರಾರ್‌ ಖಾಜಿ ವಿಕೆಟ್‌ ಉರುಳಿಸಿ ‘ಪವಾಡ’ ಮಾಡಿ ತೋರಿಸುವ ಅಪಾಯಕಾರಿ ಸೂಚನೆ ನೀಡಿದರು.ಪೆವಿಲಿಯನ್‌ ಎದುರಿನ ತುದಿಯಿಂದ ಬೌಲ್‌ ಮಾಡಲು ಆರಂಭಿಸಿದ ಹರ್ಷಲ್‌ ಮೊದಲು ಗೌತಮ್‌ (5) ಅವರನ್ನು ಔಟ್ ಮಾಡಿದರು. ನಂತರ ರನ್‌ ಖಾತೆ ತೆರೆಯಲು ಬಿಡದೇ ಗಣೇಶ್‌ ಮತ್ತು ಖಾಜಿ ಅವರನ್ನೂ ಪೆವಿಲಿಯನ್‌ಗೆ ಅಟ್ಟಿದರು.ಕರ್ನಾಟಕದ ವಿರುದ್ಧ ಮೂರು ರಣಜಿ ಪಂದ್ಯಗಳನ್ನು ಆಡಿರುವ ಮೂಲತಃ ಗುಜರಾತ್‌ನವರಾದ ಹರ್ಷಲ್‌ ಕರ್ನಾಟಕದ ವಿರುದ್ಧವೇ ಒಟ್ಟು 26 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ಬೌಲರ್‌ ಪಡೆದಿರುವುದು ಒಟ್ಟು 72 ವಿಕೆಟ್.ಹೀರೋ ಆದ ಬಿನ್ನಿ: ಹರ್ಷಲ್‌ ದಾಳಿಯನ್ನು ಎದುರಿಸಲು ಒಂದೆಡೆ ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದರೆ, ಅನುಭವಿ ಸ್ಟುವರ್ಟ್‌್ ಬಿನ್ನಿ ದಿಟ್ಟತನದಿಂದ ಬ್ಯಾಟ್‌್ ಬೀಸಿ ಜಯ ತಂದುಕೊಟ್ಟರು.ಗೆಲುವಿಗೆ ಅಗತ್ಯವಿದ್ದ 35 ರನ್‌ಗಳಲ್ಲಿ ಬಿನ್ನಿ 31 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದರು. ದಿನದಾಟದ ನಾಲ್ಕನೇ ಓವರ್‌ (ಒಟ್ಟಾರೆ 27ನೇ ಓವರ್‌) ಬೌಲಿಂಗ್‌ ಮಾಡಿದ ಆಶಿಶ್‌ ಹೂಡಾ ಎಸೆತದಲ್ಲಿ ಮಿಡ್‌ ಆಫ್‌ ಮತ್ತು ಕವರ್‌ ಡ್ರೈವ್‌ ಬಳಿ ಎರಡು ಬೌಂಡರಿ ಬಾರಿಸಿದರು. ಆರನೇ ಓವರ್‌ನಲ್ಲಿ ಮತ್ತೊಂದು ಬೌಂಡರಿ ಸಿಡಿಸಿ ಕರ್ನಾಟಕ ತಂಡದ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡವನ್ನು ಬಿನ್ನಿ ದೂರ ಮಾಡಿದರು.ಕರ್ನಾಟಕ ಗೆಲುವು ಪಡೆದಾಗ ನಾನ್‌ ಸ್ಟ್ರೇಕರ್‌ ಆಗಿದ್ದ ಅಭಿಮನ್ಯು ಮಿಥುನ್‌ ರನ್‌ ಖಾತೆ ತೆರೆಯಲಿಲ್ಲವಾದರೂ, ಔಟಾಗದಂತೆ ಎಚ್ಚರಿಕೆ ವಹಿಸಿದರು. ಜೊತೆಗೆ ಬಿನ್ನಿ ತಾವೇ ಹೆಚ್ಚಾಗಿ ಸ್ಟ್ರೇಕ್‌ ಇರುವಂತೆ ನೋಡಿಕೊಂಡರು.ಗೆಲುವು ಒಲಿದ ಆ ಓವರ್: 34ನೇ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ರನ್‌ಗಳು ಬರಲಿಲ್ಲ. ನಾಲ್ಕನೇ ಎಸೆತದಲ್ಲಿ ಬಿನ್ನಿ ಎರಡು ರನ್‌ ಗಳಿಸಿದರು. ಆಗ ಗೆಲುವಿಗೆ ನಾಲ್ಕು ರನ್‌ಗಳಷ್ಟೇ ಬೇಕಿತ್ತು. ಬಲಗೈ ವೇಗಿ ಹರ್ಷಲ್‌ ಬೌಲಿಂಗ್‌ನ ಐದನೇ ಎಸೆತವನ್ನು ಬಿನ್ನಿ ಅಪ್ಪರ್‌ ಕಟ್‌ ಮೂಲಕ ಬೌಂಡರಿ ಬಾರಿಸಿ ಗೆಲುವಿನ ರೂವಾರಿ ಎನಿಸಿದರು. ಆತಂಕದ ಅಲೆಯಲ್ಲಿ ಬಂದಿಯಾಗಿದ್ದ ಕರ್ನಾಟಕದ ಆಟಗಾರರೂ ಈ ವೇಳೆ ಖುಷಿಯಿಂದ ಕುಣಿದಾಡಿದರು.ವೇಗದ ಬೌಲರ್‌ಗಳಿಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 39 ರನ್‌ ಕಲೆ ಹಾಕುವ ಅಂತರದಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಇದೇ ರೀತಿಯ ಪರಿಸ್ಥಿತಿ ಹರಿಯಾಣ ತಂಡದ್ದೂ ಆಗಿತ್ತು. ಆದ್ದರಿಂದ ಆತಂಕ ಹೆಚ್ಚಾಗಿತ್ತು. ಹೋದ ರಣಜಿ ಋತುವಿನಲ್ಲಿ ತಂಡವನ್ನು ಮುನ್ನಡೆಸಿದ್ದ ಬಿನ್ನಿ ಯಾವ ಅಪಾಯಕ್ಕೂ ಅವಕಾಶ ನೀಡದೆ ತಂಡವನ್ನು ಗೆಲುವಿನ ದಡ ಸೇರಿಸಿದರು.ಅವಧಿಗೆ ಮುನ್ನವೇ ಮುಗಿದ ಪಂದ್ಯಗಳು:

ಈ ಕ್ರೀಡಾಂಗಣದಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಪಂಜಾಬ್‌ ಮೂರೇ ದಿನದಲ್ಲಿ ಪಂದ್ಯ ಗೆದ್ದುಕೊಂಡಿತ್ತು. ಜಾರ್ಖಂಡ್‌ ಮತ್ತು ಮುಂಬೈ ಎದುರಿನ ಪಂದ್ಯವೂ ಮೂರೂವರೆ ದಿನದಲ್ಲಿಯೇ ಮುಗಿದು ಹೋಗಿತ್ತು. ಕರ್ನಾಟಕ ತಂಡವೂ ನಾಲ್ಕನೇ ದಿನದಾಟದ ಮೊದಲ ಅವಧಿಗೆ ಮುನ್ನವೇ ಜಯಭೇರಿ ಮೊಳಗಿಸಿತು.

ಎರಡನೇ ಗೆಲುವು: ಐದು ಪಂದ್ಯಗಳನ್ನು ಆಡಿರುವ ಕರ್ನಾಟಕ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದು, ಎರಡರಲ್ಲಿ ಗೆಲುವು ಸಾಧಿಸಿದೆ.ಕಟಕ್‌ನಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಒಡಿಶಾ ಎದುರು ಜಯ ಸಾಧಿಸಿತ್ತು. ಗೌತಮ್‌ ಬಳಗ ಪಡೆದ ಸತತ ಎರಡನೇ ವಿಜಯ ಇದು. ಹೋದ ವರ್ಷ ಹುಬ್ಬಳ್ಳಿಯಲ್ಲಿ ನಡೆದ ಹರಿಯಾಣ ಎದುರಿನ ಪಂದ್ಯ ಡ್ರಾ ಆಗಿತ್ತು. 2006/07 ಮೈಸೂರಿನಲ್ಲಿ ಜರುಗಿದ ಪಂದ್ಯದಲ್ಲಿ ಕರ್ನಾಟಕ ಜಯ ಪಡೆದಿತ್ತು. ಏಳು ವರ್ಷಗಳ ಬಳಿಕ ಮತ್ತೆ ಹರಿಯಾಣದ ಎದುರು ಗೆಲುವಿನ ಸವಿ ಕಂಡಿತು.ಸ್ಕೋರ್ ವಿವರ :

ಹರಿಯಾಣ ಮೊದಲ ಇನಿಂಗ್ಸ್‌ 247 ಮತ್ತು 105

ಕರ್ನಾಟಕ ಪ್ರಥಮ ಇನಿಂಗ್ಸ್‌ 256

ಕರ್ನಾಟಕ ದ್ವಿತೀಯ ಇನಿಂಗ್ಸ್‌ 33.5 ಓವರ್‌ಗಳಲ್ಲಿ   7 ವಿಕೆಟ್‌ಗೆ 97

(ಭಾನುವಾರದ ಅಂತ್ಯಕ್ಕೆ 23 ಓವರ್‌ಗಳಲ್ಲಿ 4 ವಿಕೆಟ್‌ಗೆ 62)

ಸಿ.ಎಂ. ಗೌತಮ್‌ ಸಿ ಜಯಂತ್‌ ಯಾದವ್‌ ಬಿ ಹರ್ಷಲ್‌ ಪಟೇಲ್‌  05

ಸ್ಟುವರ್ಟ್‌್ ಬಿನ್ನಿ ಔಟಾಗದೆ  31

ಗಣೇಶ್‌್ ಸತೀಶ್‌ ಎಲ್‌ಬಿಡಬ್ಲ್ಯು ಬಿ ಹರ್ಷಲ್‌ ಪಟೇಲ್‌  00

ಅಬ್ರಾರ್‌ ಖಾಜಿ ಸಿ ಸೈನಿ ಬಿ ಹರ್ಷಲ್‌ ಪಟೇಲ್‌  00

ಅಭಿಮನ್ಯು ಮಿಥುನ್‌ ಔಟಾಗದೆ  00ಇತರೆ: (ಲೆಗ್‌ ಬೈ-4)  04

ವಿಕೆಟ್‌ ಪತನ: 5-82 (ಗೌತಮ್‌; 27.2), 6-84 (ಗಣೇಶ್‌; 29.4), 7-86 (ಖಾಜಿ; 31.3)

ಬೌಲಿಂಗ್‌: ಹರ್ಷಲ್‌ ಪಟೇಲ್‌ 16.5-4-41-5, ಆಶಿಶ್‌ ಹೂಡಾ 11-2-36-1, ಬಿ ಸಂಜಯ್‌ 6-0-16-0.

ಫಲಿತಾಂಶ: ಕರ್ನಾಟಕಕ್ಕೆ ಮೂರು ವಿಕೆಟ್‌ ಜಯ ಮತ್ತು ಆರು ಪಾಯಿಂಟ್‌.

ಕರ್ನಾಟಕದ ಮುಂದಿನ ಪಂದ್ಯ: ಪಂಜಾಬ್‌ ಎದುರು (ಹುಬ್ಬಳ್ಳಿ, ಡಿ. 14ರಿಂದ 17)

ಪ್ರತಿಕ್ರಿಯಿಸಿ (+)