ಶನಿವಾರ, ಮೇ 21, 2022
26 °C

ಜಲಚಕ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎತ್ತರದ ಗಿರಿಶೃಂಗ ಸಾಲು. ಮುಗಿಲಿಗೆ ಹಸಿರ ಬಣ್ಣ ಕೊಡಲು ಹೊರಟಿರುವಂತೆ ಆಗಸಕ್ಕೆ ಚಾಚಿರುವ ವೃಕ್ಷರಾಶಿ. ಪ್ರಾಣಿ ಪಕ್ಷಿಗಳ ಕೂಗಿನ ಕಲರವ. ಹತ್ತಿರದಲ್ಲೆಲ್ಲೋ ಮಳೆ ಹೊಯ್ದಂತೆ ಸದ್ದು ಮಾಡುವ ನೀರು.

 

ಹೊಸನಗರ ತಾಲ್ಲೂಕಿನ ಕೊಡಚಾದ್ರಿಯ ಹಸಿರ ಸಿರಿಯ ಒಳಹೊಕ್ಕಾಗ ಕಾಣಸಿಗುವ ವಿಹಂಗಮ ಸೌಂದರ್ಯವಿದು. ಇಲ್ಲಿನ ದಟ್ಟ ಅರಣ್ಯದ ಮಧ್ಯೆ ಹಲವು ಜಲಧಾರೆಗಳು ರೂಪುತಳೆದು ನದಿಯ ಪಾಲಾಗುತ್ತವೆ.ಮಳೆಗಾಲದಲ್ಲಿ ಕೆಂಪನೆಯ ನೀರು ತುಂಬಿ ಭೋರ್ಗರೆಯುವ ಜಲಪಾತಗಳು ಬಿರು ಬೇಸಗೆಯ್ಲ್ಲಲಿ ತಮ್ಮ ಅವತಾರವನ್ನು ಬದಲಿಸಿಕೊಳ್ಳುತ್ತವೆ. ಚಿಕ್ಕ ಚಿಕ್ಕ ಜಲಧಾರೆಗಳಾಗಿ ಬೀಳುವ ನೀರು ಆಗಷ್ಟೇ ಹಿಂಡಿದ ಹಾಲಿನ ನೊರೆಯಂತೆ ಕಾಣಿಸುತ್ತದೆ. ಇಂತಹದೇ ಪುಳಕ ಹುಟ್ಟಿಸುವ ಜಲಧಾರೆಗಳಲ್ಲಿ ಇಲ್ಲಿನ ಚಕ್ರಾ ಜಲಪಾತವೂ ಒಂದು. ಕೊಡಚಾದ್ರಿಯ ತಪ್ಪಲಲ್ಲಿ ಜನ್ಮತಳೆದು ಪಶ್ಚಿಮಾಭಿಮುಖವಾಗಿ ಹರಿದು ಲಿಂಗನಮಕ್ಕಿ ಜಲಾಶಯವನ್ನು ಸೇರುವ ಚಕ್ರಾ ನದಿ ಎರಡು ಕಡೆ ತನ್ನ ಸ್ವರೂಪವನ್ನು ಬದಲಾಯಿಸಿ ಜಲಪಾತವಾಗಿ ಕಣ್ಮನ ಸೆಳೆಯುತ್ತದೆ.ಅರಣ್ಯ ಪ್ರದೇಶದಲ್ಲಿಯೇ ತನ್ನ ಹೆಚ್ಚಿನ ಹರಿವನ್ನು ಹೊಂದಿರುವ ಚಕ್ರಾ ನದಿ ಸಾವೆಹಕ್ಲು ಮತ್ತು ಚಕ್ರಾ ಎಂಬ ಊರುಗಳ ಮಧ್ಯದ ಕಾಡಿನಲ್ಲಿ ಎರಡು ಮನೋಹರ ಜಲಪಾತಗಳನ್ನು ಸೃಷ್ಟಿಸಿದೆ. ಚಕ್ರಾ ಜಲಪಾತದಲ್ಲಿ ಸುಮಾರು 150 ಅಡಿಯಷ್ಟು ಎತ್ತರದಿಂದ ನೀರು ಧುಮುಕುತ್ತದೆ.ಸುತ್ತಮುತ್ತಲೂ ಇರುವ ಬೃಹತ್ ಬಂಡೆಕಲ್ಲುಗಳು ಜಲಪಾತದ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಸಣ್ಣನೆ ತೊರೆಯಂತೆ ಹರಿದು ಬರುವ ನೀರು ವೇಗವಾಗಿ ಧುಮುಕುತ್ತದೆ. ಜಲಧಾರೆಯ ಹಿಂಭಾಗದಲ್ಲಿನ ಕಲ್ಲಿನ ಮೇಲೆ ಅಡ್ಡಾಡಬಹುದು. ಕೆಳಭಾಗದಲ್ಲಿ ಅಪಾಯಕಾರಿ ಗುಂಡಿ ಇಲ್ಲದಿರುವುದರಿಂದ ಜಲಧಾರೆಯ ಬಿರುಸಿಗೆ ಮೈಯೊಡ್ಡಿ ಆನಂದಿಸಬಹುದು.ಜಲಪಾತದ ಸ್ವಲ್ಪ ದೂರದಲ್ಲಿ ಸುಮಾರು 30 ಅಡಿ ಎತ್ತರದ ಕಲ್ಲಿನ ಗುಡ್ಡವಿದೆ. ಮಳೆಗಾಲದಲ್ಲಿ ಇದರ ಸುತ್ತಲೂ ನೀರು ಹರಿಯುವುದರಿಂದ ಇದು ದ್ವೀಪದಂತೆ ಗೋಚರವಾಗುತ್ತದೆ. ಇಲ್ಲಿಂದ ಕಾಣುವ ಜಲಪಾತದ ಸೊಬಗು ಕಣ್ಣಿಗೆ ಹಬ್ಬ. ಇಲ್ಲಿಂದ ಸ್ವಲ್ಪ ದೂರದಲ್ಲಿ ಬೀಳುವ ಇನ್ನೊಂದು ಜಲಪಾತಕ್ಕೆ ತೆರಳುವ ಹಾದಿ ಇನ್ನೂ ದುರ್ಗಮ.ಶಿವಮೊಗ್ಗದಿಂದ 90 ಕಿ.ಮೀ. ದೂರದಲ್ಲಿರುವ ಚಕ್ರಾ ಊರಿಗೆ ಬಸ್ ಸೌಕರ್ಯವಿದೆ. ಆದರೆ ಜಲಪಾತಕ್ಕೆ ತೆರಳಲು ಕಾಡಿನ ಮಧ್ಯೆ ಕಾಲುದಾರಿಯಲ್ಲಿ (5 ಕಿ.ಮೀ.) ಹತ್ತಾರು ಹಳ್ಳಕೊಳ್ಳಗಳನ್ನು ನಡೆದೇ ಸಾಗಬೇಕು. ಸ್ಥಳೀಯರ ನೆರವಿಲ್ಲದೆ ಇಲ್ಲಿನ ದುರ್ಗಮ ದಾರಿಯಲ್ಲಿ ತೆರಳುವುದು ಕಷ್ಟ.

 

ಚಕ್ರಾ ಜಲಾಶಯದ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳ ವಿಹಾರಕ್ಕಾಗಿ ಜಲಪಾತದವರೆಗೂ ವಿದ್ಯುಚ್ಛಕ್ತಿ ಮಂಡಳಿಯೇ ರಸ್ತೆ ನಿರ್ಮಿಸಿತ್ತು. ಆದರೆ ಆ ರಸ್ತೆ ಈಗ ಕಾಡಿನೊಳಗೆ ಹುದುಗಿ ಮರೆಯಾಗಿದೆ.ಬಿರು ಬೇಸಗೆಯಲ್ಲೂ ಎತ್ತರದಿಂದ ಸಣ್ಣನೆ ಚಿಲುಮೆಯಂತೆ ಚಿಮ್ಮುತ್ತ ಮುದ ನೀಡುವ ಈ ಜಲಪಾತದ ಸೌಂದರ್ಯವನ್ನು ಆಸ್ವಾದಿಸಲು ಅಕ್ಟೋಬರ್‌ನಿಂದ ಏಪ್ರಿಲ್ ತಿಂಗಳು ಪ್ರಶಸ್ತ ಕಾಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.