ಭಾನುವಾರ, ಫೆಬ್ರವರಿ 28, 2021
31 °C

ಜಲಾಶಯದ ಪಕ್ಕದಲ್ಲೂ ತಣಿಯದ ದಾಹ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಲಾಶಯದ ಪಕ್ಕದಲ್ಲೂ ತಣಿಯದ ದಾಹ!

ಆಲಮಟ್ಟಿ: ಆಲಮಟ್ಟಿ ಜಲಾಶಯ ನಾಡಿನ ಜನತೆಯ ಕಣ್ಮನ ಸೆಳೆದು, ಒಂದು ಸುಂದರ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಆದರೆ, ಈ ಕೃಷ್ಣೆಯ ಮಡಿಲಲ್ಲೇ ಇರುವ ಹತ್ತಾರು ಗ್ರಾಮಸ್ಥರು ಸಮರ್ಪಕ ನೀರು ಸಿಗದೇ ಕಂಗಾಲಾಗಿದ್ದಾರೆ. ನಿಜಕ್ಕೂ ಇದು ವಿಪರ್ಯಾಸವೇ ಸರಿ.ಕೃಷ್ಣಾ ತೀರದ ಗ್ರಾಮಗಳಾದ ನಿಡಗುಂದಿ, ಗೊಳಸಂಗಿ, ಬೇನಾಳ, ಮಣಗೂರ, ಕಮದಾಳ ಮೊದಲಾದ ಗ್ರಾಮಗಳಲ್ಲಿ ನೀರಿನ ಬವಣೆ ಹೆಚ್ಚು.`ಯಾರಿಗಿ ಓಟ್ ಹಾಕಿ ಯಾರನ್ನ ಆರಿಸಿ ತಂದ್ರ ಏನ್ ಆಗೂದೈತ್ರಿ... ಕುಡ್ಯಾಕ ನೀರ ಕೊಡಾಕ ಆಗಂಗಿಲ್ಲ ಅಂದ್ರ, ಇಂಥವ್ರ ನಮ್ಮ ಮೆಂಬರು ಅಂಥ ಹೇಳ್ಕೊಳ್ಳಾಕ ನಾಚ್ಕಿ ಆಕೈತಿ...~ ಎಂಬ ನಿಡಗುಂದಿ ಗ್ರಾಮದ ಪರಪ್ಪ ಕುಂಬಾರ ಅವರ ಮಾತಲ್ಲಿ ಆಕ್ರೋಶ ತುಂಬಿತ್ತು.`ನದಿ, ಹಳ್ಳ, ಕೊಳ್ಳ, ಬಾವಿ ಬತ್ತಿ ಹೋದ ಮ್ಯೋಲ ನಮ್ಮಿಂದ ಆರಿಸಿ ಹೋದೋರಾದ್ರೂ ಏನ್ ಮಾಡಾಕ ಅಕೈತಿ. ಮನಿ-ಮಠಾ ಕೇಳಿದ್ರ ಕಟ್ಟಿಸಿಕೊಡ್ಬಹುದು. ಬತ್ತಿ ಹೋದ ನೀರ ಹುಡ್ಕೊಂಡು ತಗೊಂಡ ಬಾ ಅಂದ್ರ ಎಲ್ಲಿಂದ ತರ‌್ಬೇಕು~ ಎಂದು ಹೇಳುವ ಕೆಲ ಉದಾರಿಗಳೂ ಇಲ್ಲಿದ್ದಾರೆ!ನೀರಿಲ್ಲದ ನಿಡಗುಂದಿ: ಸುಮಾರು 30 ಸಾವಿರ ಜನಸಂಖ್ಯೆ ಹೊಂದಿರುವ ನಿಡಗುಂದಿ ಪಟ್ಟಣದ ತುಂಬೆಲ್ಲಾ ಈಗ ನೀರಿನ ಬವಣೆ. `ನೀರಿಲ್ಲದ ನಿಡಗುಂದಿ~ ಎಂಬ ಅನ್ವರ್ಥಕನಾಮ ಹೊಂದಿರುವ ನಿಡಗುಂದಿ ಪಟ್ಟಣಕ್ಕೆ ಇತ್ತೀಚಿನ ಗ್ರಾ.ಪಂ. ಆಡಳಿತದ ಕ್ರಮದಿಂದ ಸಾಕಷ್ಟು ನೀರಿನ ಬವಣೆ ನೀಗಿತ್ತು. ಆದರೆ, ರಸ್ತೆ ನಿರ್ಮಾಣಕ್ಕೆ ಅಗೆದ ಪೈಪ್‌ಲೈನ್ ಸಮರ್ಪಕವಾಗಿ ಇನ್ನೂ ಜೋಡಿಸದ ಕಾರಣ ಎಲ್ಲೆಡೆಯೂ ನೀರಿಗಾಗಿ ಹಾಹಾಕಾರ ಎದ್ದು ಕಾಣುತ್ತಿದೆ. ಬಸವನ ಬಾಗೇವಾಡಿ ಪಟ್ಟಣಕ್ಕೆ ಪೂರೈಕೆಯಾಗುವ ಪೈಪ್‌ಲೈನ್‌ನ ಸೋರಿಕೆಯೇ ಈಗ ಬಳಕೆ ನೀರಿನ ಮೂಲವಾಗಿದೆ.`2006 ರಲ್ಲಿಯೇ ಪ್ರಾರಂಭವಾದ ಜಲ ನಿರ್ಮಲ ಯೋಜನೆ ಸಮರ್ಪಕ ಅನುಷ್ಠಾನವಾಗದಿರುವುದೇ ಇಲ್ಲಿನ ಸಮಸ್ಯೆಯ ಮೂಲ. ವಿನಾಯಕ ನಗರ, ವಿರೇಶ ನಗರ ಮೊದಲಾದ ಬಡಾವಣೆಗಳಲ್ಲಿ ವಾರಕಳೆದರೂ ನೀರು ಬರುತ್ತಿಲ್ಲ~ ಎಂದು ಜನ ದೂರುತ್ತಾರೆ.`ನೀರಿನ ಬವಣೆಗೆ ಮತ್ತೊಂದು ಸಮಸ್ಯೆ ಎಂದರೆ ಕೃಷ್ಣಾ ನದಿಯಿಂದ ನೀರು ಪೂರೈಕೆಯಾಗುವ ಜಾಕವೆಲ್ ಆಲಮಟ್ಟಿ ಅಣೆಕಟ್ಟಿನ ಮುಂಭಾಗದಲ್ಲಿರುವುದು. ಅವೈಜ್ಞಾನಿಕವಾಗಿ ಇದನ್ನು ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ಆಲಮಟ್ಟಿ ಜಲಾಶಯದಿಂದ ನೀರು ಬಿಡುವುದೇ ಇಲ್ಲ. ಹೀಗಾಗಿ ಆಲಮಟ್ಟಿ ಜಲಾಶಯದ ಮುಂಭಾಗದ ಜಾಕ್‌ವೆಲ್‌ಗಳಿಗೆ ನೀರೆ ದೊರೆಯುವುದಿಲ್ಲ. ಇದರಿಂದಾಗಿ ಬೇಸಿಗೆಯಲ್ಲಿ ಜಾಕ್‌ವೆಲ್‌ಗೆ ಸಮರ್ಪಕ ನೀರು ಬಾರದಿರುವುದರಿಂದ ಹಾಗೂ ಮೇಲಿಂದ ಮೇಲೆ ವಿದ್ಯುತ್ ಕಡಿತದಿಂದ ನೀರು ಪೂರೈಕೆಯಲ್ಲಿ ವ್ಯಥ್ಯಯವಾಗುತ್ತಿದೆ~ ಎನ್ನುತ್ತಾರೆ ನಿಡಗುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಮುಚ್ಚಂಡಿ.`ಅನೇಕ ಬಡಾವಣೆಯಲ್ಲಿ ಎದ್ದಿರುವ ನೀರಿನ ಸಮಸ್ಯೆ ಬಗೆಹರಿಸಲು ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು~ ಎಂಬುದು ಅವರ ಭರವಸೆ.ನಿಡಗುಂದಿಯ ಮಡಿಲಲ್ಲಿಯೇ ಇರುವ ಕಮದಾಳ ಮತ್ತು ಮಣಗೂರ ಪುನರ್ವಸತಿ ಕೇಂದ್ರದ ಕತೆಯಂತೂ ಇನ್ನೊಂದು ರೀತಿ. ಇವು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಚೇರಿಯ ಆಡಳಿತಕ್ಕೆ ಒಳಪಟ್ಟಿವೆ. ಸಮರ್ಪಕ ನೀರು ಪೂರೈಕೆಯಾಗದೆ ಅಲ್ಲಿನ ನಾಗರಿಕರೂ ಸಹ ನೀರಿಗಾಗಿ ಪರಿತಪಿಸುವಂತಾಗಿದೆ.`ನಿಡಗುಂದಿ ಪಟ್ಟಣದಲ್ಲಿ ಮೂರು ಸೇರಿದಂತೆ ನನ್ನ ಕ್ಷೇತ್ರದಲ್ಲಿ ಈ ತಿಂಗಳು 15 ಕ್ಕೂ ಅಧಿಕ ಕೊಳವೆಬಾವಿ ಕೊರೆಯಿಸಲಾಗಿದೆ. ಮತ್ತೆ 11 ಕೊಳವೆ ಬಾವಿಗಳನ್ನು ಶೀಘ್ರವೇ ಕೊರೆಯಿಸಲಾಗುವುದು. ಅವಶ್ಯವಿರುವೆಡೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ~ ಎಂಬುದು ಈ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಅವಟಿ ವಿವರಣೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.