ಮಂಗಳವಾರ, ಮೇ 24, 2022
28 °C

ಜಲ ಬತ್ತಿದೆ ಕೊಳದಲ್ಲಿ, ನದಿಯಲ್ಲಿ, ಭಾನು ಬೆಂಕಿ ಕಾರಿತಿಲ್ಲಿ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಮಾಗಡಿ:  ಕೆರೆ, ಬಾವಿ, ಗೋಕಟ್ಟೆಗಳು, ಕಲಮಡಗು, ಚಿಲುಮೆಗಳು ಈ ಧರೆಯ ಜೀವಧಾರಕ ಜಲಧಾರೆಗಳು ಎಂದು ಅರ್ಥೈಸುತ್ತಾರೆ ಹೊಂಬಾಳಮ್ಮನಪೇಟೆಯ ರಾಮಚಂದ್ರಯ್ಯ ಅವರು.ವಿಶ್ವ ಜಲದಿನಾಚರಣೆ ಅಂಗವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ನೀರಿನ ಮಹತ್ವ ಕುರಿತು ತಮ್ಮದೇ ವ್ಯಾಖ್ಯಾನವನ್ನು ತೆರೆದಿಟ್ಟರು.

 ಸಕಲ ಜೀವ ಜಂತುಗಳಿಗೆ ದಾಹ ನೀಗಿಸಿ ಸಂತೃಪ್ತಿ ದೊರಕಿಸಿಕೊಡುವುದು ನೀರು. ನೀರಿಲ್ಲದಿದ್ದರೆ ನೀರೆಯೂ ಸಹ ಹತ್ತಿರ ಸುಳಿಯುವುದಿಲ್ಲ ಎಂಬ ಹಿರಿಯರ ಮಾತು ಸತ್ಯವಾಗುವ ಕಾಲ ದೂರವಿಲ್ಲ. ತಾಯಿ ಹೇಗೆ ತನ್ನ ಮಕ್ಕಳನ್ನು ಸರ್ವಕಾಲಗಳಲ್ಲಿ ಸರ್ವ ಸಮಸ್ಯೆಗಳಿಂದ ಕಾಪಾಡುತ್ತಾಳೋ, ಹಾಗೆಯೇ ಜಲಮೂಲಗಳು ಮನುಕುಲವನ್ನು ಕಾಪಾಡಿಕೊಂಡು ಬಂದಿವೆ ಎನ್ನುತ್ತಾರೆ.ಗಂಗೆ, ತುಂಗೆ, ಭದ್ರಾ, ಕಾವೇರಿ, ಗೋದಾವರಿ, ಕಾಳಿ, ಕೃಷ್ಣೆ, ಯಮುನೆ, ನೇತ್ರಾವತಿ, ನರ್ಮದಾ ಬಹುತೇಕ ಎಲ್ಲಾ ನದಿಗಳಿಗೂ ಸ್ತ್ರೀಯರ ಹೆಸರನ್ನಿಟ್ಟಿರುವ ನಮ್ಮ ಪೂರ್ವಿಕರು ಗಂಗಾಮಾತೆಯನ್ನು ಸರ್ವದಾಯಿನಿಯನ್ನಾಗಿಸಿದ್ದಾರೆ. ಆಧುನಿಕ ಯುಗದಲ್ಲಿ ಜಲಮೂಲಗಳನ್ನೆಲ್ಲಾ ನಾವು ಕಲುಷಿತ ಗೊಳಿಸುತ್ತಿದ್ದೇವೆ. ಇದು ನಾಗರಿಕತೆಯ ಅಂತ್ಯಕ್ಕೆ ನಾವು ನೀಡುತ್ತಿರುವ ಬಳುವಳಿಯಾಗಿದೆ ಎಂದು ರಾಮಚಂದ್ರಯ್ಯ ಅವರು ವಿಷಾದಿಸಿದರು.

 

ಪರಿಸರವಾದಿ ಪಡುವಗೆರೆ ಚನ್ನೇಗೌಡ ಮಾತನಾಡಿ, ನಮ್ಮ ಜೀವನಾಧಾರವಾಗಿರುವ ನದಿಗಳು ಮಾನವನ ಕೃತ್ಯದಿಂದಾಗಿ ಮಾಲಿನ್ಯಗೊಂಡು ಮೃತ್ಯುಕೂಪಗಳಾಗಿ ಮಾರ್ಪಟ್ಟಿವೆ. ಜಲಮೂಲಗಳನ್ನು ಮಾನವ ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಕಲುಷಿತಗೊಳಿಸಿ ಮನುಕುಲದ ನಾಶಕ್ಕೆ ಮುಂದಾಗಿದ್ದಾನೆ.

 

ಮಲಮೂತ್ರ, ಬಚ್ಚಲು ಹೊಲಸು, ರಾಸಾಯನಿಕಗಳು, ಕೈಗಾರಿಕಾ ಕಲ್ಮಶಗಳು, ಅಪಾಯಕಾರಿ ರಾಸಾಯನಿಕ ಗೊಬ್ಬರಗಳು. ಕೀಟನಾಶಕಗಳು ನದಿ ಮೂಲಗಳಲ್ಲಿ ಸೇರಿ ಜಲಚರಗಳಿಗೆ ಗಂಡಾಂತರಕಾರಿಯಾಗಿ ಪರಿಣಮಿಸಿವೆ. ನಮ್ಮ ನದಿಗಳ ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ ಅವು ಚರಂಡಿಗಳಂತೆ ದುರ್ನಾತ ಬೀರತೊಡಗಿವೆ. ಕೆರೆಕಟ್ಟೆ ಬಾವಿಗಳನ್ನು ಕಲ್ಯಾಣಿಗಳನ್ನು ಮುಚ್ಚಿ ನಿವೇಶನ ಮಾಡಿಕೊಂಡು ಭೂಮಿಯನ್ನು ಜಲವನ್ನು ಕಲುಷಿತ ಗೊಳಿಸುತ್ತಿರುವುದು ತಪ್ಪ ಬೇಕಿದೆ ಎಂದು ತಿಳಿಸಿದರು.ಪರಿಸರವಾದಿ ಹಾಗೂ ಗಾಯಕ ಕನ್ನಡ ಕುಮಾರ ಮಾತನಾಡಿ, ತಾಲ್ಲೂಕಿನಲ್ಲಿರುವ ಬಹುತೇಕ ಕೆರೆಗಳನ್ನು ಒತ್ತುವರಿ ಮಾಡಲಾಗಿದೆ. ಪಟ್ಟಣದಲ್ಲಿ ಕೋತಿ ಕಟ್ಟೆ ಮುಚ್ಚಿದ್ದರಿಂದ ತೋಟಗಳಲ್ಲಿದ್ದ ನೂರಾರು ಬಾವಿಗಳು ಬತ್ತಿವೆ. ಗೌರಮ್ಮನಕೆರೆ, ಹೊಂಬಾಳಮ್ಮನಕೆರೆಗಳನ್ನು ದುರಸ್ತಿಯ ನೆಪದಲ್ಲಿ ಮುಚ್ಚಲಾಗುತ್ತಿದೆ. ಕಲ್ಯಾಣಿಗಳನ್ನು ಮುಚ್ಚಿ ನಿವೇಶನ ಮಾಡಿಕೊಂಡಿದ್ದಾರೆ. ಮಂಚನಬೆಲೆ ಜಲಾಶಯದ ಕಲುಷಿತ ನೀರನ್ನು ಕುಡಿದು ಇನ್ನಿಲ್ಲದ ರೋಗಗಳಿಗೆ ಬಲಿಯಾಗಬೇಕಿದೆ. ಇನ್ನಾದರೂ ಎಚ್ಚೆತ್ತು ಕೊಂಡು ಜಲಮೂಲಗಳನ್ನು ಸಂರಕ್ಷಿಸಬೇಕಿದೆ ಎಂದರು.

 

ಜಲವೇ ಜೀವನ ಲೆಕ್ಕಾಚಾರ!

ಕನಕಪುರ:  ಜಲವೇ ಜೀವನ ಲೆಕ್ಕಾಚಾರ, ಜಲವೇ ಬದುಕಿನ ಆಧಾರ...

ಇಂದು ಮನುಷ್ಯನ ಜೀವನದಲ್ಲಿ ಒಲವು ಎಷ್ಟು ಮುಖ್ಯವೋ ಜಲವು ಅಷ್ಟೇ ಮುಖ್ಯವಾಗಿದೆ. ನೀರಿಲ್ಲದಿದ್ದರೆ ಮನುಷ್ಯನ ಬಾಳು ಬರ್ಭರವಾಗುತ್ತದೆ. ಎಲ್ಲ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರಕ್ಕೆ ವಿರುದ್ಧವಾಗಿ  ಹೆಜ್ಜೆಯಿಡುತ್ತಿದ್ದಾನೆ. ಪ್ರಕೃತಿಯನ್ನೇ ಹಣಿಯುವ ವ್ಯರ್ಥ ಪ್ರಯತ್ನದಲ್ಲಿ ತೊಡಗಿದ್ದಾನೆ.

 

ಪರಿಣಾಮ ಅಮೂಲ್ಯ ನೈಸರ್ಗಿಕ ಸಂಪತ್ತನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾನೆ. ಪ್ರಸ್ತುತ ಸಂದರ್ಭದಲ್ಲಿ ಕನಕಪುರ ತಾಲ್ಲೂಕಿನಾದ್ಯಂತ ಕುಡಿಯುವ ನೀರು ಸೇರಿದಂತೆ ದಿನಬಳಕೆಯ ನೀರಿನ ಅಭಾವ ತೀವ್ರಗೊಂಡಿದೆ. ಇದರಿಂದಾಗಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಹತ್ತಾರು ಕೊಳವೆಬಾವಿಗಳನ್ನು ಕೊರೆಸಿದರೂ ಒಂದು ಹನಿಯೂ ಸಿಕ್ಕಿಲ್ಲ.

 

 ಆದರೂ ಪಂಚಾಯಿತಿಯವರು ಛಲ ಬಿಡದ ತ್ರಿವಿಕ್ರಮನಂತೆ ಭಗೀರಥ ಪ್ರಯತ್ನ ನಡೆಸಿ ಗ್ರಾಮದಿಂದ ಕಿಲೋಮೀಟರ್‌ಗಳ ಆಚೆಗೆ ಕೊಳವೆ ಬಾವಿಗಳನ್ನು ತೋಡಿ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ತಕ್ಕ ಮಟ್ಟಿಗೆ ನೀರಿನ ಬವಣೆ ನೀಗಿಸಿದ್ದರು. ಆದರೆ ಈ ಕೊಳವೆ ಬಾವಿ ಸಹ ಬೇಸಿಗೆ ಸಮೀಪಿಸುತ್ತಿದ್ದಂತೆ ಅಂತರ್ಜಲ ಕುಸಿತದಿಂದಾಗಿ ಸ್ಥಗಿತಗೊಂಡಿದೆ. 

 

ನೀರನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳದೆ, ಕಾಲ ಕಾಲಕ್ಕೆ ಬೀಳುವ ಮಳೆನೀರನ್ನು ಸರಿಯಾಗಿ ಸಂಗ್ರಹಿಸದೇ ಇರುವುದರಿಂದ ಅಂತರ್ಜಲ ದಿನೇದಿನೇ ಕುಸಿಯುತ್ತಿದೆ. ಜೊತೆಗೆ ತಾಲ್ಲೂಕಿನಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಮರಳು ದಂದೆಯಿಂದಾಗಿ ತೆರೆದ ಬಾವಿಗಳು ಸಹ ಬತ್ತಿಹೋಗಿವೆ. ಇದು ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಅಂತರ್ಜಲವೇ ಬತ್ತಿ ಹೋಗಿ ನೀರಿಗಾಗಿ ಹಾಹಾಕಾರ ಪಡಬೇಕಾದ ಪರಿಸ್ಥಿತಿ ದೂರವಿಲ್ಲ.

 

ಜಿಲ್ಲೆಯ ಬೇರೆ ಭಾಗಕ್ಕೆ ಹೋಲಿಸಿದರೆ ಕನಕಪುರ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಅಷ್ಟೊಂದು ಕುಸಿದಿಲ್ಲ. ಆದರೆ ಇಲ್ಲಿನ ಜನತೆಗೆ ನೀರಿನ ಬೆಲೆ ಗೊತ್ತಾಗದೆ ಮನಬಂದಂತೆ ಬಳಕೆ ಮಾಡುತ್ತಿದ್ದಾರೆ. ಇರುವ ನೀರನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಬೇಕು, ಕೃಷಿ ಚಟುವಟಿಕೆಗೆ ನೀರನ್ನು ಮಿತವಾಗಿ ಬಳಕೆ ಮಾಡುವ ಮನಸ್ಸು ಮಾಡುತ್ತಿಲ್ಲ.

 

ಜೊತೆಗೆ ನೀರನ್ನು ಇಂಗಿಸುವ ಮೂಲಕ ಅಂತರ್ಜಲವನ್ನು ವೃದ್ಧಿಸುವ ಪ್ರಯತ್ನಕ್ಕೆ ಎಲ್ಲರೂ ಮುನ್ನುಡಿ ಬರೆಯಬೇಕು ಎಂಬುದು ಕನಕಪುರದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಘು ಅವರ ಅಭಿಪ್ರಾಯ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.