ಗುರುವಾರ , ಮಾರ್ಚ್ 4, 2021
18 °C
ಅಮೆರಿಕ ರಾಯಭಾರಿ ರಿಚರ್ಡ್‌ ರಾಹುಲ್‌ ವರ್ಮ ಅಭಿಮತ

ಜಾಗತಿಕವಾಗಿ ಭಾರತ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಗತಿಕವಾಗಿ ಭಾರತ ಮುಖ್ಯ

ವಾಷಿಂಗ್ಟನ್‌ (ಪಿಟಿಐ): ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ಪ್ರಯತ್ನಗಳನ್ನು ಶ್ಲಾಘಿಸಿರುವ ಅಮೆರಿಕ, ಮುಂಬರುವ ವರ್ಷಗಳಲ್ಲಿ ಭಾರತ ಜಾಗತಿಕ ವೇದಿಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಂಕೇತವಿದೆ ಎಂದು ಹೇಳಿದೆ.‘ವಿದೇಶಾಂಗ ನೀತಿ ಬಲಪಡಿಸುವಲ್ಲಿ ಭಾರತ ಮುಂಚೂಣಿಯಲ್ಲಿ ಸಾಗಿದ್ದು, ಕಳೆದ ವರ್ಷ ಪ್ರಧಾನಿ ಮೋದಿ ಅವರು ಕೇವಲ ಅಮೆರಿಕ ಮಾತ್ರವಲ್ಲದೇ, 18 ರಾಷ್ಟ್ರಗಳ 33 ನಗರಗಳಿಗೆ ಭೇಟಿ ನೀಡಿದ್ದಾರೆ’ ಎಂದು ಭಾರತಕ್ಕೆ  ಅಮೆರಿಕ ರಾಯಭಾರಿ ಆಗಿರುವ ರಿಚರ್ಡ್ ರಾಹುಲ್ ವರ್ಮ ಹೇಳಿದ್ದಾರೆ .‘ಮುಂಬರುವ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಮಹತ್ವದ ಪಾತ್ರ ವಹಿಸಲಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಜಾಗತಿಕ ಸಂಸ್ಥೆಗಳಲ್ಲಿ  ವಿಶ್ವ ನಾಯಕತ್ವದ ಪಾತ್ರವನ್ನು ನಾವು ಬೆಂಬಲಿಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.ಅಮೆರಿಕದ ಯುದ್ಧತಂತ್ರ ಮತ್ತು ಅಂತರರಾಷ್ಟ್ರೀಯ ಅಧ್ಯಯನಗಳ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮರ್ಮ ಮಾತನಾಡಿದ್ದಾರೆ. ‘ಮೋದಿ ಅವರು ನೇಪಾಳ, ಭೂತಾನ್‌, ಶ್ರೀಲಂಕಾ ದೇಶಗಳಿಗೆ ಭೇಟಿ ನೀಡುವುದರ ಜೊತೆಗೆ ಬಾಂಗ್ಲಾದೇಶದೊಂದಿಗೆ ಐತಿಹಾಸಿಕ ಗಡಿ ಪ್ರದೇಶದ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಹೇಳಿದ್ದಾರೆ.‘ವಿವಿಧ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಯಶಸ್ವಿಯಾಗಿರುವ ಭಾರತದ ನಾಯಕತ್ವವು, ನೇಪಾಳದಲ್ಲಿ ಸಂಭವಿಸಿದ ಭೂಕಂಪ ಸೇರಿದಂತೆ ಇತ್ತೀಚಿನ ಸಮಸ್ಯೆಗಳಿಗೆ ಸ್ಪಂದಿಸಿದ ರೀತಿಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.ಪ್ರಧಾನಿ ಮೋದಿ ಅವರ ಚೀನಾ ಭೇಟಿ ಯಶಸ್ವಿಯಾಗಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಸಹಕಾರದ ಜೊತೆಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವತ್ತ ಗಮನ ನೀಡಿವೆ ಎಂದು ವರ್ಮ ತಿಳಿಸಿದ್ದಾರೆ. ‘ವಿವಾದಗಳನ್ನು ಶಾಂತಿಪೂರ್ವಕವಾಗಿ ಹೇಗೆ ಬಗೆಹರಿಸಿಕೊಳ್ಳಬಹುದು ಎಂಬುದನ್ನು ಭಾರತ ಮತ್ತು ಅಮೆರಿಕ ತೋರಿಸಿಕೊಟ್ಟಿವೆ’ ಎಂದು ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.ಸಂಬಂಧ ಬಲಪಡಿಸಲು ಅಮೆರಿಕ ಬದ್ಧ:  ಭಾರತದೊಂದಿಗಿನ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಬದ್ಧರಾಗಿದ್ದಾರೆ ಎಂದು ಶ್ವೇತಭವನ ಹೇಳಿದೆ.‘ಅಮೆರಿಕದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಆಷ್ಟನ್ ಕಾರ್ಟರ್ ಅವರು  ಇತ್ತೀಚೆಗೆ ಭಾರತಕ್ಕೆ ಭೇಟಿ  ನೀಡಿರುವುದು ಉಭಯ ರಾಷ್ಟ್ರಗಳ ಬಾಂಧವ್ಯ  ವೃದ್ಧಿಸುವಲ್ಲಿರುವ ಬದ್ಧತೆಯನ್ನು ಬಿಂಬಿಸುತ್ತದೆ’ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೋಷ್ ಅರ್ನೆಸ್ಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಒಬಾಮ ವಿರುದ್ಧ ಆರೋಪ: ‘ಭಾರತದೊಂದಿಗೆ ಸಂಬಂಧಗಳನ್ನು ಬಲಪಡಿಸುವಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಆಡಳಿತವು  ಹೆಚ್ಚಿನ ಸಮಯ ಹಾಗೂ ಸಾಕಷ್ಟು ಪ್ರಯತ್ನ ಪಟ್ಟಿಲ್ಲ’ ಎಂದು ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ರಿಕ್‌ ಪೆರ್ರಿ ಆರೋಪಿಸಿದ್ದಾರೆ.‘ಸರಿಯಾದ ಅವಕಾಶವಿದ್ದರೂ ಭಾರತದೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಳ್ಳಲು ಅಮೆರಿಕ ಸರಿಯಾಗಿ ಪ್ರಯತ್ನ ನಡೆಸಿಲ್ಲ. ಭಾರತ ನಮ್ಮಿಂದ ಯುದ್ಧ ವಿಮಾನಗಳನ್ನು ಖರೀದಿಸಲು ಬಯಸಿತ್ತು. ಇದಕ್ಕೆ ಸೂಕ್ತವಾಗಿ ಸ್ಪಂದಿಸದ ಕಾರಣ ಭಾರತ ಫ್ರಾನ್ಸ್‌ದಿಂದ ಖರೀದಿಸಿತು’ ಎಂದು ‘ಫಾಕ್ಸ್‌ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಅವರು ಟೀಕಿಸಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ 2016ರಲ್ಲಿ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸುವುದಾಗಿ ಪೆರ್ರಿ ಈಗಾಗಲೇ ಘೋಷಿಸಿದ್ದು, ಅವರು ಎರಡನೇ ಬಾರಿ ಅತ್ಯುನ್ನತ ಸ್ಥಾನಕ್ಕೆ  ಸ್ಪರ್ಧಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.