ಜಾಮೀನಿಗಾಗಿ ಲಂಚ ಹಗರಣ: ಸೋಮಶೇಖರ್ ರೆಡ್ಡಿ ಬಂಧನ
ಹೈದರಾಬಾದ್: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಕೊಡಿಸಲು ಲಂಚ ನೀಡಿದ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರನ್ನು ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು (ಎಸಿಬಿ) ಸೋಮವಾರ ಬಂಧಿಸಿದ್ದಾರೆ.
ಸತತ ನಾಲ್ಕು ದಿನಗಳ ವಿಚಾರಣೆಯ ನಂತರ ಸೋಮಶೇಖರ್ ರೆಡ್ಡಿ ಅವರನ್ನು ಬಂಧಿಸಲಾಗಿದೆ ಎಂದು `ಎಸಿಬಿ~ ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿ ನಗರ ಕ್ಷೇತ್ರ ಪ್ರತಿನಿಧಿಸುತ್ತಿರುವ ಶಾಸಕ ಸೋಮಶೇಖರ್ ಅವರು ಪ್ರಕರಣದ 11ನೇ ಆರೋಪಿಯಾಗಿದ್ದು, ಈ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಕರ್ನಾಟಕದ ಎರಡನೇ ಶಾಸಕರು.
ಜುಲೈ 31ರಂದು ಎಸಿಬಿ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಬಾಬು ಅವರನ್ನು ಬಂಧಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ಮಂಜೂರು ಮಾಡಿಸಲು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ. ಪಟ್ಟಾಭಿರಾಮ್ ರಾವ್ ಅವರಿಗೆ ಸೋಮಶೇಖರ್ ರೆಡ್ಡಿ, ಸುರೇಶ್ ಬಾಬು ಮತ್ತು ದಶರಥರಾಮಿ ರೆಡ್ಡಿ ಸೇರಿಕೊಂಡು ಲಂಚ ನೀಡಿದ್ದಾರೆ ಎಂದು ಆಪಾದಿಸಲಾಗಿದೆ.
ಪಟ್ಟಾಭಿರಾಮ್ ರಾವ್, ಅವರ ಪುತ್ರ ರವಿಚಂದ್ರ, ನಿವೃತ್ತ ನ್ಯಾಯಾಧೀಶ ಚಲಪತಿ ರಾವ್, ಅಪರಾಧ ಹಿನ್ನೆಲೆಯುಳ್ಳ ಯಾದಗಿರಿ ರಾವ್ ಮತ್ತು ವಕೀಲ ಆದಿತ್ಯ ಈಗಾಗಲೇ ಜೈಲಿನಲ್ಲಿದ್ದಾರೆ.
ಮೇ ತಿಂಗಳಲ್ಲಿ ಪಟ್ಟಾಭಿರಾಮ್ ಅವರು 10 ಕೋಟಿ ರೂಪಾಯಿ ಲಂಚ ಪಡೆದು ಜನಾರ್ದನ ರೆಡ್ಡಿಗೆ ಜಾಮೀನು ನೀಡಿದ್ದರು. ಆಂಧ್ರಪ್ರದೇಶ ಹೈಕೋರ್ಟ್ ಈ ಜಾಮೀನನ್ನು ರದ್ದುಪಡಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.