ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಜಾಮೀನು ಅರ್ಜಿ ಇಂದು ವಿಚಾರಣೆ

Published:
Updated:

ಬೆಂಗಳೂರು: ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ.ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಮೂರನೇ ಖಾಸಗಿ ದೂರಿನ ವಿಚಾರಣೆ ನಡೆಸುತ್ತಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಪ್ರಕರಣದ ಪ್ರಮುಖ ಆರೋಪಿ ಯಡಿಯೂರಪ್ಪ ಮತ್ತು ಇತರ 14 ಆರೋಪಿಗಳು ಸೋಮವಾರ ವಿಚಾರಣೆಗೆ ಹಾಜರಾದರು.ಬೆಂಗಳೂರಿನ ಅರಕೆರೆ, ದೇವರಚಿಕ್ಕನಹಳ್ಳಿ ಮತ್ತು ಗೆದ್ದಲಹಳ್ಳಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ `ಡಿನೋಟಿಫಿಕೇಷನ್~ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇದರಲ್ಲಿ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದು, ಅವರೂ ಸೇರಿದಂತೆ ಉಳಿದ ಎಲ್ಲ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಸೋಮವಾರ ದಿನವಿಡೀ ನಡೆಯಿತು.ಯಡಿಯೂರಪ್ಪ ಪರ ವಾದ ಮಂಡಿಸಿದ ವಕೀಲ ರವಿ ಬಿ.ನಾಯಕ್, ಅರ್ಜಿದಾರರಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ದಾಖಲೆಗಳನ್ನು ಪಡೆಯಲು, ದೂರು ದಾಖಲಿಸಲು ಆರೋಪಿ ಸ್ಥಾನದಲ್ಲಿರುವವರು ಅಡ್ಡಿಪಡಿಸಿಲ್ಲ. ಅಲ್ಲದೆ ವಿಚಾರಣೆಗೂ ಸಹಕರಿಸುತ್ತಿದ್ದಾರೆ. ಇನ್ನು ಮುಂದೆಯೂ ನ್ಯಾಯಾಲಯದ ಆದೇಶವನ್ನು ಪಾಲಿಸಲಿದ್ದಾರೆ. ಇದು ಗಂಭೀರ ಪ್ರಕರಣ ಅಲ್ಲ ಎಂದು ಪರಿಗಣಿಸಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.ಅರ್ಕಾವತಿ ಬಡಾವಣೆಯಲ್ಲಿ ನಡೆದಿರುವ ಡಿನೋಟಿಫಿಕೇಷನ್‌ನಲ್ಲಿ ಶೇ 99ರಷ್ಟು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಮತ್ತು ರಾಷ್ಟ್ರಪತಿ ಆಡಳಿತ ಅವಧಿಯಲ್ಲಿ ಆಗಿದ್ದು, ಯಡಿಯೂರಪ್ಪ ಕಾಲದಲ್ಲಿ ಶೇ 1ರಷ್ಟು ಮಾತ್ರ ಆಗಿದೆ. ತಮ್ಮ ಕಕ್ಷಿದಾರರಾದ ಯಡಿಯೂರಪ್ಪ 1.24 ಎಕರೆ ಜಾಗವನ್ನು ಮಾತ್ರ ಡಿನೋಟಿಫಿಕೇಷನ್ ಮಾಡಿದ್ದು, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವಾದಿಸಿದರು.ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ಮೊದಲ ಆರೋಪಿ ಸ್ಥಾನದಲ್ಲಿರುವ ಯಡಿಯೂರಪ್ಪ ಪ್ರಭಾವಿಯಾಗಿದ್ದು, ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅರ್ಜಿದಾರರು ಹಲವು ಬಾರಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರೂ ದಾಖಲಿಸಿಕೊಂಡಿರಲಿಲ್ಲ. ಆದ್ದರಿಂದ ಅಂತಿಮವಾಗಿ ರಾಜ್ಯಪಾಲರ ಮೊರೆ ಹೋದರು.ರಾಜ್ಯಪಾಲರು ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಮೊಕದ್ದಮೆ ಹೂಡಲು ಅನುಮತಿ ನೀಡಿದ್ದಾರೆ. ಕಾನೂನುಬಾಹಿರವಾಗಿ ಡಿನೋಟಿಫಿಕೇಷನ್ ಮಾಡಿದ್ದು, ಇದರಿಂದ ನೇರವಾಗಿ ಯಡಿಯೂರಪ್ಪ ಅವರೇ ಲಾಭ ಪಡೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಹಾಗೂ ವಿವಿಧ ಸಂದರ್ಭಗಳಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿಯೇ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು.ಹನುಮಂತರಾಯ ಅವರ ವಾದ ಸೋಮವಾರ ಅಪೂರ್ಣವಾದ ಕಾರಣ ಮಂಗಳವಾರಕ್ಕೆ ವಿಚಾರಣೆಯನ್ನು ಮುಂದೂಡಲಾಯಿತು. ಸೋಮವಾರ ಬೆಳಿಗ್ಗೆ ಕೋರ್ಟ್‌ಗೆ ಹಾಜರಾಗಿದ್ದ ಯಡಿಯೂರಪ್ಪ ಮಧ್ಯಾಹ್ನ ಗೈರು ಹಾಜರಾಗಿದ್ದರು. ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ಪೂರ್ಣಗೊಳ್ಳಲಿದ್ದು, ಅಂದು ಸಂಜೆ ಅಥವಾ ಬುಧವಾರ ನ್ಯಾಯಾಧೀಶರು ತೀರ್ಪು ನೀಡುವ ಸಂಭವವಿದೆ.ಆದರೆ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದ ನಾಲ್ಕನೇ ಖಾಸಗಿ ದೂರಿಗೆ ಸಂಬಂಧಿಸಿದ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಇಲ್ಲವೆ ಬುಧವಾರ ಆರಂಭವಾಗಲಿದೆ. ಈ ಎರಡೂ ಪ್ರಕರಣಗಳ ಇತ್ಯರ್ಥವಾಗುವವರೆಗೂ ನಿತ್ಯ ವಿಚಾರಣೆ ನಡೆಯಲಿದೆ.

Post Comments (+)