ಗುರುವಾರ , ಮೇ 6, 2021
23 °C

ಜಾರಿಗೆ ಬಾರದ ಅರಣ್ಯ ಯೋಜನೆ

ಪ್ರಜಾವಾಣಿ ವಾರ್ತೆ/ ಎಸ್. ಸಂಪತ್ Updated:

ಅಕ್ಷರ ಗಾತ್ರ : | |

ಜಾರಿಗೆ ಬಾರದ ಅರಣ್ಯ ಯೋಜನೆ

ರಾಮನಗರ: ದೇಶದ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರಿಗೆ ಸಮೀಪದಲ್ಲಿಯೇ ಇರುವ ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳತ್ತ ಪ್ರವಾಸಿಗರನ್ನು ಕರೆತರುವ ಉದ್ದೇಶದಿಂದ ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ರೂಪಿಸಿದ್ದ ಹಲವು ಯೋಜನೆಗಳ ಕಡತಗಳು ದೂಳು ತಿನ್ನುತ್ತಿವೆ.ಇದರಿಂದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಕೊಂಚ ಹಿನ್ನಡೆಯಾಗಿದೆ ಎಂಬ ಕೊರಗು ಜಿಲ್ಲೆಯ ನಾಗರಿಕರಲ್ಲಿ ಮನೆ ಮಾಡಿದೆ.ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ವರ್ಷದ ಹಿಂದೆ ಹೋದ `ಜಿಲ್ಲಾ ಪ್ಯಾಕೇಜ್ ಟೂರ್~ ಪ್ರಸ್ತಾವದ ಕಡತಗಳು, ಅರಣ್ಯ ಇಲಾಖೆ ಕಳುಹಿಸಿದ್ದ ಕರಡಿ ವನ್ಯಧಾಮ ಹಾಗೂ ರಣಕಾಟಿ ಹದ್ದುಗಳ ಸಂರಕ್ಷಣಾ ತಾಣದ ಪ್ರಸ್ತಾವಗಳನ್ನು ಹೊಂದಿದ್ದ ಕಡತಗಳು ದೂಳು ತಿನ್ನುತ್ತ ಬಿದ್ದಿವೆ ಎಂದು ತಿಳಿದು ಬಂದಿದೆ.ಏನಿದು ಪ್ಯಾಕೇಜ್ ಟೂರ್ ?: ರಾಮನಗರ ಜಿಲ್ಲೆಯಲ್ಲಿ ಇರುವ ಪ್ರಸಿದ್ಧ ಪ್ರವಾಸಿ ತಾಣ, ಐತಿಹಾಸಿಕ ಮತ್ತು ಪಾರಂಪರಿಕ ಕೇಂದ್ರ, ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಂತೆ `ಪ್ಯಾಕೇಜ್ ಟೂರ್~ ಯೋಜನೆ ರೂಪಿಸಿ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕರು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಿದ್ದರು. ಅದರಂತೆ ಬೆಂಗಳೂರಿನಿಂದ ಈ ಪ್ಯಾಕೇಜ್ ಟೂರ್ ಆರಂಭವಾಗಬೇಕಿತ್ತು.ಬೆಂಗಳೂರಿನಿಂದ ಕನಕಪುರ ಮಾರ್ಗವಾಗಿ ಚಿಕ್ಕ ತಿರುಪತಿ, ಸಂಗಮ, ಮೇಕೆದಾಟು, ಕಬ್ಬಾಳ್ ದೇವಾಲಯ, ರಾಮನಗರದ ಶ್ರೀ ರೇವಣ ಸಿದ್ದೇಶ್ವರ ಬೆಟ್ಟ, ಚನ್ನಪಟ್ಟಣದ ಅಪ್ರಮೇಯ ದೇವಾಲಯ, ಕೆಂಗಲ್ ಆಂಜನೇಯ ದೇವಾಲಯಕ, ಕಣ್ವ ಜಲಾಷಯ, ರಾಮದೇವರ ಬೆಟ್ಟ, ವಂಡರ್‌ಲಾ ಮತ್ತು ಇನ್ನೊವೆಟಿವ್ ಫಿಲ್ಮ್ ಸಿಟಿ ಪ್ರವಾಸಿ ತಾಣಗಳೊಡನೆ ಸಂಪರ್ಕ ಕಲ್ಪಿಸಿ ಒಂದು ದಿನ ಮತ್ತು ಎರಡು ದಿನ ಟೂರ್ ಪ್ಯಾಕೇಜ್ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು.ಇದನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ನಡೆಸುವಂತೆ ಪ್ರಸ್ತಾವನೆಯಲ್ಲಿ ಸೂಚಿಸಲಾಗಿತ್ತು ಎಂದು ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಡಾ. ಗುರುಪ್ರಸಾದ್ `ಪ್ರಜಾವಾಣಿ~ಗೆ ತಿಳಿಸಿದರು.ರಾಮನಗರದ ಪ್ರವಾಸಿ ತಾಣಗಳಲ್ಲಿ ಅಗತ್ಯ ಮೂಲ ಸೌಕರ್ಯ ಇಲ್ಲದ ಕಾರಣ ಕೆಎಸ್‌ಟಿಡಿಸಿ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ತಿಳಿದು ಬಂದಿದೆ. ಪ್ರಸಕ್ತ ವರ್ಷ ಈ ತಾಣಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದ್ದು, ಆನಂತರ ಈ ಪ್ಯಾಕೇಜ್ ಟೂರ್ ಆಯೋಜನೆಯಾಗಲಿದೆ ಎಂದು ಕೆಎಸ್‌ಟಿಡಿಸಿ ಮೂಲಗಳು ತಿಳಿಸಿವೆ ಎಂದು ಅವರು ಪ್ರತಿಕ್ರಿಯಿಸಿದರು.ಕರಡಿ ವನ್ಯ ಧಾಮ ಪ್ರಸ್ತಾವ: ರಾಮನಗರದಲ್ಲಿ ಇರುವ ಪ್ರಸಿದ್ಧ ಹಂದಿ ಗುಂದಿ ಬೆಟ್ಟದಲ್ಲಿ ಕರಡಿ ವನ್ಯ ಧಾಮ ನಿರ್ಮಿಸುವ ಸಂಬಂಧ ಜಿಲ್ಲಾ ಅರಣ್ಯ ಇಲಾಖೆ ಸಲ್ಲಿಸಿದ್ದ ಪ್ರಸ್ತಾವ ಕೂಡ ನೆನೆಗುದಿಗೆ ಬಿದ್ದಿದೆ. ಹಂದಿ ಗುಂದಿ ಬೆಟ್ಟದ ಸುತ್ತಮುತ್ತ 10,040 ಎಕರೆ ಮೀಸಲು ಅರಣ್ಯ ಪ್ರದೇಶ ಇದ್ದು, ಕರಡಿ, ಹಂದಿ, ಚಿರತೆ, ಉಡಾ, ಕಾಡು ಬೆಕ್ಕು, ವಿವಿಧ ಬಗೆಯ ಓತಿ ಕೆತ್ತಗಳು ನೆಲೆಸಿವೆ. ಕರಡಿ ವನ್ಯಧಾನ ರಚನೆಯಾದರೆ ಈ ಭಾಗದ ಜೀವ ಸಂಕುಲ ಮತ್ತು ಸಸ್ಯ ಸಂಕುಲದ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಪರಿಸರವಾದಿಯೂ ಆದ ನಿವೃತ್ತ ಪ್ರಾಚಾರ್ಯ ಪ್ರೊ. ಶಿವನಂಜಯ್ಯ ತಿಳಿಸುತ್ತಾರೆ.ಏನಾಯಿತು ಹದ್ದುಗಳ ಸಂರಕ್ಷಣಾ ತಾಣ: ವಿಶ್ವದಲ್ಲಿಯೇ ಅತಿ ಅಪರೂಪವಾದ ರಣಕಾಟಿ ಹದ್ದುಗಳು ನೆಲೆಸಿರುವ ಪ್ರದೇಶ ರಾಮನಗರ. ಇಲ್ಲಿನ ರಾಮದೇವರ ಬೆಟ್ಟದಲ್ಲಿ ಹಲವಾರು ವರ್ಷಗಳಿಂದ ಈ ಹದ್ದುಗಳು ಜೀವನ ಕಂಡುಕೊಂಡಿವೆ. ಇವುಗಳ ಸಂತತಿ ದಿನೇ ದಿನೇ ಕಡಿಮೆಯಾಗುತ್ತಾ ಸಾಗುತ್ತಿದೆ. ಈ ಹದ್ದುಗಳ ಸಂರಕ್ಷಣೆಯ ಸಲುವಾಗಿಯೇ ರಾಮದೇವರ ಬೆಟ್ಟದ ಸುತ್ತಮುತ್ತಲ ಪ್ರದೇಶವನ್ನು ರಣಕಾಟಿ ಹದ್ದುಗಳ ಸಂರಕ್ಷಣ ತಾಣವನ್ನಾಗಿ ರೂಪಿಸುವ ಸಂಬಂಧ ಅರಣ್ಯ ಇಲಾಖೆ ಯೋಜನೆ ಸಿದ್ಧಪಡಿಸಿತ್ತು. ಆದರೆ ಆ ಯೋಜನೆ ಕೂಡ ಇಲ್ಲಿವರೆಗೆ ಅನುಷ್ಠಾನವಾಗದೆ, ಹದ್ದುಗಳ ಸಂತತಿ ನಶಿಸುವಂತೆ ಮಾಡುತ್ತಿದೆ ಎಂದು ಶಿವನಂಜಯ್ಯ ಬೇಸರ ವ್ಯಕ್ತಪಡಿಸುತ್ತಾರೆ.ಆಫ್ರಿಕಾ ದೇಶಗಳನ್ನು ಬಿಟ್ಟರೆ ಈ ಬಗೆಯ ಹದ್ದುಗಳು ಕಂಡು ಬರುವುದು ರಾಮನಗರದಲ್ಲಿ. ಇವುಗಳ ರಕ್ಷಣೆ ಮತ್ತು ಪೋಷಣೆ ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸಂರಕ್ಷಣಾ ತಾಣ ರಚನೆಯಾದರೆ ಅಳಿವಿನ ಅಂಚಿನಲ್ಲಿರುವ ಈ ರಣಕಾಟಿ ಹದ್ದುಗಳ ಸಂತತಿ ವೃದ್ಧಿಗೆ ನೆರವಾಗುತ್ತದೆ. ಅದರ ಜತೆಗೆ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಅವರು ಮನವಿ ಮಾಡುತ್ತಾರೆ.ಸೊರಗಿರುವ ಪವಿತ್ರ ವನ: ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಅವರ ಕನಸಿನ ಕೂಸಾದ ಪವಿತ್ರ ವನ ನಿರ್ವಹಣೆ ಕೊರತೆಯಿಂದ ಸೊರಗಿದೆ. ಸುಮಾರು 12 ಎಕರೆ ಪ್ರದೇಶದಲ್ಲಿ 3,500 ಜಾತಿಯ ಔಷಧೀಯ ಸಸ್ಯವರ್ಗವನ್ನು ಹೊಂದಿರುವ ಈ ಪವಿತ್ರವನವನ್ನು ಸರಿಯಾಗಿ ನಿರ್ವಹಿಸುವಲ್ಲಿ ಅರಣ್ಯ ಇಲಾಖೆ ಸೋತಿದೆ ಎಂಬ ಆರೋಪ ಇದೆ. ಇದನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕಾದ ಅಗತ್ಯ ಇದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಬರಲಿದೆ ದೇವ ವನ ಮತ್ತು ವೃಕ್ಷ ವನ: ರಾಜ್ಯದ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ರಾಮದೇವರ ಬೆಟ್ಟವನ್ನು ದೇವ ವನ ಹಾಗೂ ಕೆಂಗಲ್ ಸುತ್ತ ಮುತ್ತ ವೃಕ್ಷ ವನ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಿ ಅರಣ್ಯ ಇಲಾಖೆಗೆ ಸೂಚಿಸಿದೆ. ಆದರೆ ಈ ಕಾರ್ಯಗಳಿಗೆ ಇನ್ನೂ ಚಾಲನೆ ದೊರೆತಿಲ್ಲ.ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಅವರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕಿದೆ. ಅಲ್ಲದೆ ಈ ಭಾಗದಲ್ಲಿ ಆರಂಭವಾಗಬೇಕಿದ್ದ ಕರಡಿ ವನ್ಯ ಧಾಮ ಮತ್ತು ರಣಕಾಟಿ ಹದ್ದಗಳ ಸಂರಕ್ಷಣ ತಾಣ ನಿರ್ಮಾಣಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ ಎಂದು ಪರಿಸರವಾದಿಗಳು ಆಗ್ರಹಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.