ಶನಿವಾರ, ಮೇ 15, 2021
24 °C
ಕೇಂದ್ರ ಸರ್ಕಾರದ ಯೋಜನೆಗಳ ವಿಲೀನಕ್ಕೆ ಸಚಿವ ಸಂಪುಟ ಒಪ್ಪಿಗೆ

ಜಾರಿಯಲ್ಲಿ ರಾಜ್ಯಗಳಿಗೆ ಶೇ 10 ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್/ಪಿಟಿಐ): ಕೇಂದ್ರ ಸಚಿವ ಸಂಪುಟ ಗುರುವಾರ ಕೇಂದ್ರೀಯ ಪ್ರಾಯೋಜಿತ ಯೋಜನೆಗಳನ್ನು ಜಾರಿಗೊಳಿಸಲು ಅನುಕೂಲವಾಗುವಂತೆ ಹಲವನ್ನು ವಿಲೀನಗೊಳಿಸುವ ಮೂಲಕ ಸಂಖ್ಯೆಯನ್ನು ಸೀಮಿತಗೊಳಿಸಿ, ರಾಜ್ಯಗಳಿಗೆ ಶೇ 10ರಷ್ಟು ಪಾಲು ನೀಡಿದೆ.ಈ ಯೋಜನೆಗಳ ಜಾರಿಗೆ ಇರುವ ಮಾರ್ಗಸೂಚಿಗಳು ಬಹಳ ಕಠಿಣವಾಗಿರುವುದಾಗಿ ರಾಜ್ಯಗಳು ದೂರು ಸಲ್ಲಿಸಿದ ಮೇರೆಗೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಅವುಗಳನ್ನು ಸರಳಗೊಳಿಸಿ, ಸಂಖ್ಯೆಯನ್ನು 170ರಿಂದ 66ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಮನೀಷ್ ತಿವಾರಿ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಸುದ್ದಿಗಾರರಿಗೆ ತಿಳಿಸಿದರು.ಕಳೆದ ತಿಂಗಳು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ನೇತೃತ್ವದ ಹಿರಿಯ ಸಚಿವರ ತಂಡವು ಈ ಯೋಜನೆಗಳನ್ನು ವಿಲೀನಗೊಳಿಸಿ, ಸಂಖ್ಯೆ ಇಳಿಸಲು ಒಪ್ಪಿಗೆ ನೀಡಿದ ಮೇರೆಗೆ ಸಂಪುಟ ಈ ನಿರ್ಧಾರ ಕೈಗೊಂಡಿದೆ. ಸಚಿವರ ಸಮಿತಿಯು ಪ್ರತಿ ಯೋಜನೆಯಲ್ಲಿ `ಸರಳ ನಿಧಿ ವ್ಯವಸ್ಥೆ' ಸ್ಥಾಪಿಸಲು ಒಪ್ಪಿದ್ದು, ಇದರನ್ವಯ ರಾಜ್ಯ ಸರ್ಕಾರಗಳು ಈ ಯೋಜನೆಗಳ ಶೇ 10ರಷ್ಟು ಬಜೆಟ್ ಹಂಚಿಕೆಯನ್ನು ಬಳಸಬಹುದು.

ಹಣ ಸದ್ಬಳಕೆಯ ದೃಷ್ಟಿಯಿಂದ ಸಮಿತಿಯು, ನೇರವಾಗಿ ಕೇಂದ್ರ ಸರ್ಕಾರದಿಂದ ಜಾರಿ ಸಂಸ್ಥೆಗಳಿಗೆ ಹಣ ವರ್ಗಾಯಿಸುವ ಬದಲಿಗೆ ರಾಜ್ಯ ಸಂಚಯಿತ ನಿಧಿಗೆ ವರ್ಗಾಯಿಸಲು ಒಪ್ಪಿದೆ. ವಿಲೀನ ಪ್ರಸ್ತಾವವನ್ನು ಚತುರ್ವೇದಿ ಸಮಿತಿಯ ಶಿಫಾರಸ್ಸಿನಂತೆ ತಯಾರಿಸಲಾಗಿದೆ ಎಂದು ಅವರು ಹೇಳಿದರು.ಇದರ ಪ್ರಕಾರ, ಈ ಯೋಜನೆಗಳಿಗೆ ಕೇಂದ್ರ ಸರ್ಕಾರ ವೆಚ್ಚ ಮಾಡುವ 1.86 ಲಕ್ಷ ಕೋಟಿ ರೂಪಾಯಿಗಳಲ್ಲಿ ಸುಮಾರು ರೂ18,700 ಕೋಟಿಗಳನ್ನು ರಾಜ್ಯಗಳು ತಮ್ಮ ಇಚ್ಛೆಯಂತೆ ಖರ್ಚು ಮಾಡಬಹುದಾಗಿದೆ. ರಾಜ್ಯಗಳ ಅವಶ್ಯಕತೆಗೆ ತಕ್ಕಂತೆ ಮಾರ್ಗಸೂಚಿಗಳನ್ನು ಬದಲಿಸಿದ್ದು, ಈಗ ಜಿಲ್ಲಾಧಿಕಾರಿಗಳೇ ಕೆಲವು ಯೋಜನೆಗಳನ್ನು ನಿರ್ವಹಣೆ ಮಾಡಿ, ಜಾರಿ ಮಾಡಬಹುದು.

ಇದೊಂದು ಪ್ರಾಯೋಗಿಕ ಕ್ರಮವಾಗಿದ್ದು, ಯಶಸ್ವಿಯಾದರೆ, ಸರಳತೆಯ ಮಿತಿಯನ್ನು ಇನ್ನೂ ಹೆಚ್ಚಿಸಬಹುದು. ಮುಂದಿನ ಹಣಕಾಸು ವರ್ಷದಿಂದ ಇದನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗುತ್ತದೆ. ಆರೋಗ್ಯ, ಶಿಕ್ಷಣ, ನೀರಾವರಿ, ನಗರಾಭಿವೃದ್ಧಿ, ಮೂಲ ಸೌಲಭ್ಯ  ಮುಂತಾದ ಕ್ಷೇತ್ರಗಳಿಗೆ ಬಹಳ ಅವಶ್ಯಕವಾಗಿರುವಂತೆ 17 ಪ್ರಾಯೋಗಿಕ ಯೋಜನೆಗಳು ಸೇರಿದಂತೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ನು 170ರಿಂದ 66ಕ್ಕೆ ಸೀಮಿತಗೊಳಿಸಲಾಗುತ್ತಿದೆ. ಅಂತರ್‌ಸಚಿವಾಲಯ ಸಮಿತಿಯ ಶಿಫಾರಸ್ಸಿನಂತೆ ರಾಜ್ಯಗಳು ತಮ್ಮದೇ ಮಾರ್ಗಸೂಚಿಗಳನ್ನು ತಯಾರಿಸಿ, ತಮ್ಮ ಯೋಜನೆಗಳನ್ನು ಜಾರಿಗೊಳಿಸಬಹುದು ಎಂದು ಅವರು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.