ಶನಿವಾರ, ಫೆಬ್ರವರಿ 27, 2021
19 °C
ಹೊಸ ಬಗೆಯ ಸಪ್ತಾಹ

ಜಾಲತಾಣ ಸಾವಧಾನ

ಇ.ಎಸ್.ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಜಾಲತಾಣ ಸಾವಧಾನ

ಚುನಾವಣೆ ಬಿಸಿ ದಿನದಿನಕ್ಕೆ ಏರುತ್ತಿರುವ ಕಾಲವಿದು. ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ‘ಚಾಯ್‌ ಪೆ ಚರ್ಚಾ’, ರಾಹುಲ್‌ ಗಾಂಧಿ ಸುದ್ದಿ ಚಾನೆಲ್‌ಗೆ ನೀಡಿದ ಸಂದರ್ಶನದ ಮೇಲಿನ ಚರ್ಚೆ, ಆಮ್‌ ಆದ್ಮಿ ಪಾರ್ಟಿಯ ವರ್ತನೆ ಇತ್ಯಾದಿ ಸಾಮಾಜಿಕ ಜಾಲತಾಣಗಳ ಬಹು ಚರ್ಚಿತ ವಿಷಯಗಳು. ಮತ್ತೊಂದೆಡೆ ಫ್ಲಿಪ್‌ಕಾರ್ಟ್‌, ಜಿವಾಮೆ, ಅಮೆಜಾನ್‌ನಂಥ ಕಂಪೆನಿಗಳ ಮಾರುಕಟ್ಟೆ.ಮಗದೊಂದೆಡೆ ಯಾರಿಗೋ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸುವ ಪ್ರಯತ್ನಕ್ಕೆ ಹಲವರ ‘ಲೈಕ್‌’ಗಳು ಹಾಗೂ ಜನಪ್ರತಿನಿಧಿಗಳ ‘ಟ್ವೀಟ್‌’ಗಳು... ಹೀಗೆ ಮಹಾನಗರ ಮಾತ್ರವಲ್ಲದೆ ಪಟ್ಟಣ, ಹಳ್ಳಿಗಳಲ್ಲೂ ಸಾಮಾಜಿಕ ಜಾಲತಾಣಗಳು ತಮ್ಮ ನೆಲೆ ಕಂಡುಕೊಂಡಿವೆ. ಹೀಗಾಗಿ ಪ್ರತಿಯೊಬ್ಬರ ಮಾತಿನಲ್ಲೂ ಲೈಕ್‌ಗಳು ಹಾಗೂ ಟ್ವೀಟ್‌ಗಳು ಸಾಮಾನ್ಯ. ಇದನ್ನೇ ಆಧರಿಸಿ ಬೆಂಗಳೂರಿನಲ್ಲಿ ‘ಸೋಷಿಯಲ್‌ ಮೀಡಿಯಾ ಸಪ್ತಾಹ’ (ಫೆ. 17ರಿಂದ 21) ನಡೆಯುತ್ತಿದೆ.ಜಗತ್ತಿನ ಮೂಲೆಮೂಲೆಯಲ್ಲಿರುವವರನ್ನು ಸಂಪರ್ಕಿಸಲು ನೆರವಾದ ಅಂತರರ್ಜಾಲವನ್ನು, ಸಂವಹನದ ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದು ಸಾಮಾಜಿಕ ಜಾಲತಾಣಗಳು. ಅದರಲ್ಲೂ ಮೊಬೈಲ್‌ಗಳು ವ್ಯಾಪಕವಾಗಿರುವುದರಿಂದ ಪ್ರತಿಯೊಬ್ಬರ ವಿಚಾರ ಅಭಿವ್ಯಕ್ತಿಗೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ಹೀಗೆ ವ್ಯಾಪಕವಾಗಿ ಹರಡಿರುವ ಈ ಜಾಲದಲ್ಲಿ ಪ್ರತಿಯೊಬ್ಬರ ಕರ್ತವ್ಯ ಹಾಗೂ ಅದರ ಸಮರ್ಪಕ ಬಳಕೆ ಕುರಿತು ಈ ಸಪ್ತಾಹದಲ್ಲಿ ಚರ್ಚೆಯಾಗಲಿದೆ. ಸಾಮಾಜಿಕ ಜಾಲತಾಣಗಳನ್ನು ಯುವ ಉದ್ಯಮಿಗಳು, ವಿದ್ಯಾರ್ಥಿಗಳು, ಜನ ಸಾಮಾನ್ಯರು, ರಾಜಕೀಯ ಪಕ್ಷಗಳು ಹೇಗೆ ಸಮರ್ಪಕವಾಗಿ ಬಳಸಬಹುದು ಎಂಬುದರ ಕುರಿತ ಚರ್ಚೆ, ಉಪನ್ಯಾಸ, ಮಾತು, ವಿಚಾರ ವಿನಿಯಮ, ಲೋಕಾಭಿರಾಮ ಚರ್ಚೆ ಎಲ್ಲವೂ ಈ ಸಪ್ತಾಹದಲ್ಲಿ ನಡೆಯಲಿವೆ.ಐದು ದಿನಗಳ ಕಾಲ ನಡೆಯುವ ಸೋಷಿಯಲ್‌ ಮೀಡಿಯಾ ಸಪ್ತಾಹವು ಮಹಾನಗರಗಳಿಗಷ್ಟೇ ಸೀಮಿತ. ಪ್ರತಿವರ್ಷ ಫೆಬ್ರುವರಿ ಹಾಗೂ ಸೆಪ್ಟೆಂಬರ್‌ನಲ್ಲಿ ಸಮಾವೇಶವು ಜಾಗತಿಕ ಮಟ್ಟದ ಎಂಟು ಕೇಂದ್ರಗಳಲ್ಲಿ ಏಕಕಾಲಕ್ಕೆ ನಡೆಯುತ್ತದೆ. ಈ ಸಮಾವೇಶ ಭಾರತದಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡಿದ್ದು ಮುಂಬೈನಲ್ಲಿ. ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಸಪ್ತಾಹಕ್ಕೆ 6800 ಮಂದಿ ಈಗಾಗಲೇ ನೋಂದಣಿಯಾಗಿದ್ದಾರೆ.ಕೆಫೆ, ಬಾರ್‌ಗಳಲ್ಲೇ ವಿಚಾರ ಸಂಕಿರಣ

ಈ ಸಪ್ತಾಹದ ವಿಚಾರ ಸಂಕಿರಣಗಳು ದೊಡ್ಡ ಹೋಟೆಲ್‌ನ ವಿಶಾಲ ಸಭಾಂಗಣದಲ್ಲಿ ನಡೆಯುವುದು ಸಾಮಾನ್ಯ. ಆದರೆ ಈಗ ಬಾರ್ಲೆಜ್‌, ಸಿಟಿ ಬಾರ್‌, ಫೆವಾ, ಹಾರ್ಡ್‌ರಾಕ್‌ ಕೆಫೆಗಳಲ್ಲಿ ನಡೆಯುತ್ತಿದೆ. ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳು ಲೀಲಾ ಪ್ಯಾಲೇಸ್‌ನಲ್ಲಿ ನಿಗದಿಗೊಂಡವು.‘ಕಂಪೆನಿ ಪ್ರಾರಂಭಿಸುವವರು, ಮಾರ್ಕೆಟಿಂಗ್‌ ಮಾಡುವವರು, ವಿದ್ಯಾರ್ಥಿಗಳು, ಸಾರ್ವಜನಿಕರು ಹೀಗೆ ಸಾಮಾಜಿಕ ಜಾಲತಾಣ ಬಳಸುವ ಪ್ರತಿಯೊಬ್ಬರನ್ನೂ ಗಮನದಲ್ಲಿಟ್ಟುಕೊಂಡು ಈ ಸಪ್ತಾಹವನ್ನು ಆಯೋಜಿಸಲಾಗಿದೆ. ಹೀಗಾಗಿ ಇಲ್ಲಿ ಶಿಕ್ಷಣದಿಂದ ಸಂಸ್ಕೃತಿಯವರೆಗೆ, ಉತ್ಪನ್ನಗಳಿಂದ ರಾಜಕೀಯದವರೆಗೆ ಎಲ್ಲಾ ರೀತಿಯ ವಿಷಯಗಳೂ ಚರ್ಚೆಗೆ ಬರಲಿವೆ. ಚರ್ಚೆಗಳು ಹೆಚ್ಚು ಆಪ್ತವಾಗಿರಬೇಕೆಂಬ ದೃಷ್ಟಿಯಿಂದ ಕೆಫೆ, ಬಾರ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದೆನ್ನುತ್ತಾರೆ ಸೋಷಿಯಲ್‌ ಮೀಡಿಯಾ ಸಪ್ತಾಹವನ್ನು ಭಾರತದಲ್ಲಿ ಮಾರುಕಟ್ಟೆ ಮಾಡುತ್ತಿರುವ ಆರ್‌ ಸ್ಕ್ವೇರ್‌ ಕನ್ಸಲ್ಟಿಂಗ್‌ ಸಂಸ್ಥೆಯ ರೋಹಿತ್‌ ವರ್ಮಾ.ಹೊಸತಾಗಿ ಕಂಪೆನಿ ತೆರೆಯುವವರ ಸಂಖ್ಯೆ ಬೆಂಗಳೂರಿನಲ್ಲಿ ದೊಡ್ಡದಾಗಿರುವುದರಿಂದ ಈ ಬಾರಿ ಇಲ್ಲಿ ಈ ಸಪ್ತಾಹ ಆಯೋಜಿಸಲಾಗಿದೆಯಂತೆ. ‘ಸಾಮಾಜಿಕ ಜಾಲತಾಣದ ಜಾಗೃತಿ ಹಾಗೂ ಅದರ ಕುರಿತ ಸಮಗ್ರ ಮಾಹಿತಿ ನೀಡುವುದು ಈ ಸಪ್ತಾಹದ ಮತ್ತೊಂದು ದೊಡ್ಡ ಉದ್ದೇಶ. ಇಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವವರನ್ನು ಸಂಘಟನೆ ನಿರ್ಧರಿಸುವುದಿಲ್ಲ.ಬದಲಿಗೆ ತಮ್ಮ ಬದುಕಿನಲ್ಲಿ ಸಾಮಾಜಿಕ ತಾಣಗಳು ತಂದ ಬದಲಾವಣೆ ಹಾಗೂ ಅದರಿಂದ ಮತ್ತೊಬ್ಬರಿಗೆ ಆಗಬಹುದಾದ ಉಪಯೋಗಗಳೊಂದಿಗೆ ಉಪನ್ಯಾಸಕರೇ ನೇರವಾಗಿ ಸಂಘಟನೆಯನ್ನು ಸಂಪರ್ಕಿಸುವ ಅವಕಾಶ ನೀಡಲಾಗಿತ್ತು. ಹೀಗಾಗಿ ಈ ಐದು ದಿನಗಳಲ್ಲಿ 95 ಉಪನ್ಯಾಸಗಳಲ್ಲಿ 145 ಭಾಷಣಕಾರರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ’ ಎಂಬ ವಿವರಣೆ ನೀಡುತ್ತಾರೆ ರೋಹಿತ್‌.ಈ ಬಾರಿಯ ಸಪ್ತಾಹಕ್ಕೆ ಎರಡು ಮೂಲ ಉದ್ದೇಶಗಳಿವೆ. ಮೊಬೈಲ್‌ ಹಾಗೂ ಟ್ಯಾಬ್ಲೆಟ್‌ಗಳ ವ್ಯಾಪಕ ಬಳಕೆಯಿಂದ ಹೆಚ್ಚು ಜನಪ್ರಿಯಾಗುತ್ತಿರುವ ಸಾಮಾಜಿಕ ಜಾಲತಾಣಗಳಲ್ಲಿ ವಿಷಯವನ್ನು ಹಂಚಿಕೊಳ್ಳುವ ಬಗೆ ಹೇಗೆ ಎಂಬ ಕುರಿತ ವಿಷಯವನ್ನು ಜಾಗತಿಕ ಮಟ್ಟದ ಚರ್ಚಾವಸ್ತುವಾಗಿ ಪರಿಗಣಿಸಲಾಗಿದೆ. ಜತೆಗೆ ಸಮಾಜದ ಬದಲಾವಣೆಗೆ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತಂತೆ ಮತ್ತೊಂದು ವಿಷಯವೂ ಈ ಬಾರಿಗೆ ಚರ್ಚೆಗೆ ಒಳಪಡಲಿದೆ.‘ಈ ಮೊದಲು ಜನರಲ್ಲಿ ವಿಷಯಗಳಿದ್ದವು. ಆದರೆ ಚರ್ಚಿಸಲು ವೇದಿಕೆ ಇರಲಿಲ್ಲ. ಈಗಲೂ ಚರ್ಚಿಸಲು ಸಾಕಷ್ಟು ವಿಷಯಗಳಿವೆ. ವೇದಿಕೆಗಳೂ ಇವೆ. ಆದರೆ ಜನರಲ್ಲಿ ಸಮಯವಿಲ್ಲ. ತಮ್ಮಲ್ಲಿರುವ ವಿಷಯವನ್ನು ಕುಳತಲ್ಲಿಂದಲೇ ಸಾಮಾಜಿಕ ತಾಣಗಳ ಮೂಲಕ ಹಂಚಿಕೊಳ್ಳಬಹುದು. ಜಾಗತಿಕ ಮಟ್ಟದ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು. ಹೀಗೆ ಕಾಲ ಬದಲಾದಂತೆ ಜನರ ಸ್ವಭಾವದಲ್ಲೂ ಬದಲಾವಣೆಗಳಾಗಿವೆ. ಹೀಗಾಗಿ ಬದಲಾದ ಪರಿಸ್ಥಿತಿಯಲ್ಲಿ ಇಂಥ ತಾಣಗಳ ಬಳಕೆ ಕುರಿತ ವಿಸ್ತೃತ ಚರ್ಚೆ ಇಲ್ಲಿ ನಡೆಯಲಿದೆ.ತಮ್ಮ ಸ್ವಂತದ ವಿಷಯ ಹಾಗೂ ಚಿತ್ರಗಳನ್ನು ಹಂಚಿಕೊಳ್ಳಲು ಈಗ ಯಾರೂ ಹಿಂಜರಿಯುವುದಿಲ್ಲ. ಅದರಿಂದ ತಮಗೆ ಸಿಗಬಹುದಾದ ಲಾಭದ ಕುರಿತು ಬಹುತೇಕ ಮಂದಿ ಆಲೋಚಿಸುತ್ತಾರೆ. ಇಂಥವರಿಗೆ ಈ ಸಪ್ತಾಹ ವೈಯಕ್ತಿಕವಾಗಿ ಸಹಕಾರಿ’ ಎಂದು ಅವರು ಹೇಳುತ್ತಾರೆ.ಬದಲಾಗುತ್ತಿರುವ ಸಾಮಾಜಿಕ ತಾಣಗಳು

ಇಂದು ಹತ್ತಾರು ಸಾಮಾಜಿಕ ಜಾಲತಾಣಗಳು ಹುಟ್ಟಿಕೊಂಡಿವೆ. ಪ್ರತಿಯೊಂದು ಅದರದ್ದೇ ಆದ ರೀತಿಯಲ್ಲಿ ಸಂವಹನ ಮಾಧ್ಯಮವನ್ನು ಹೊಂದಿದೆ. ಇವುಗಳ ಪ್ರಖ್ಯಾತಿಯೂ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಒಂದೆರೆಡು ಸಾಮಾಜಿಕ ತಾಣಗಳ ಕುರಿತು ಚರ್ಚಿಸುವುದು ಅಸಾಧ್ಯ.ಹೀಗಾಗಿ ಸಾಮಾನ್ಯ ವಿಷಯವಾಗಿ ಎಲ್ಲವನ್ನೂ ಇಲ್ಲಿ ಚರ್ಚಿಸಿ, ಸಮಾಜದ ವಿವಿಧ ಸ್ತರಗಳಲ್ಲಿ ಹೆಸರು ಮಾಡಿರುವ ಹಲವರನ್ನು ಇಲ್ಲಿಗೆ ಕರೆಸಲಾಗಿದೆ. ಉದಾಹರಣೆಗೆ, ರಾಜಕೀಯದಿಂದ ರಾಜೀವ್‌ ಗೌಡ, ಸಿನಿಮಾ ಕ್ಷೇತ್ರದಿಂದ ಪವನ್‌ ಕುಮಾರ್‌, ಪೊಲೀಸ್‌ ಇಲಾಖೆಯಿಂದ ದಯಾನಂದ್‌, ಕಾರ್ಪೊರೇಟ್‌ ಕ್ಷೇತ್ರದಿಂದ ಮೋಹನ್‌ ದಾಸ್‌ ಪೈ ಮುಂತಾದವರು ಈ ವೇದಿಕೆಯಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.

ಪ್ರಚಾರ, ಮಾರುಕಟ್ಟೆ ಇತ್ಯಾದಿಗೆ ಟೀವಿ, ರೇಡಿಯೊ ಹಾಗೂ ಪತ್ರಿಕೆಗಳ ಜತೆಯಲ್ಲಿ ಸಾಮಾಜಿಕ ಜಾಲತಾಣಗಳೂ ಅಷ್ಟೇ ಮುಖ್ಯವಾಗಿವೆ. ಹೊಸತಾಗಿ ಕಂಪೆನಿ ಆರಂಭಿಸುವವರು, ಸಿನಿಮಾ ತೆಗೆಯುವವರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸಲು ಇದಕ್ಕಿಂತ ಉತ್ತಮ ಹಾಗೂ ಪರಿಣಾಮಕಾರಿ ವೇದಿಕೆ ಮತ್ತೊಂದಿಲ್ಲ. ಹೀಗಾಗಿ ‘ಲೂಸಿಯಾ’ ಸಿನಿಮಾಕ್ಕಾಗಿ ನಾವು ಸಾಮಾಜಿಕ ಜಾಲತಾಣವನ್ನು ಹೇಗೆ ಬಳಸಿಕೊಂಡೆವು ಹಾಗೂ ಅದರಿಂದ ಆದ ಲಾಭದ ಕುರಿತು ನಾನು ಮಾತನಾಡಿದೆ. ಇದೊಂದು ಹೊಸ ರೀತಿಯ ಸಪ್ತಾಹ. ಸಭಿಕರೂ ದೊಡ್ಡ ಸಂಖ್ಯೆಯಲ್ಲಿದ್ದರು.

‘ಫ್ರೆಂಡ್‌ ರೆಕಮಂಡೇಷನ್‌ ಕಾನ್ಸೆಪ್ಟ್‌’ ಉಚಿತವಾಗಿ ಮಾರುಕಟ್ಟೆಯಾಗುವ ಮಾಧ್ಯಮ. ಸಿನಿಮಾ ಚೆನ್ನಾಗಿದೆ ಎಂದು ಒಬ್ಬರು ಹೇಳಿದರೆ ಅವರ ಸ್ನೇಹಿತರು ಹೋಗಿ ನೋಡುತ್ತಾರೆ. ಇದು ಸಾಮಾಜಿಕ ಜಾಲತಾಣದ ಮೂಲಕ ಸಾಧ್ಯವಾಗಿದೆ. ಇದು ಇನ್ನು ಮುಂದೆ ಇನ್ನಷ್ಟು ವ್ಯಾಪಕವಾಗಿ ಬಳಕೆಯಾಗಲಿದೆ.

ಪವನ್‌ ಕುಮಾರ್‌, ಚಿತ್ರ ನಿರ್ದೇಶಕಸಪ್ತಾಹದ ಇತಿಹಾಸ

ಐದು ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ಆರಂಭವಾದ ಈ ಸಂಸ್ಥೆಯು ಇಂದು ಯುರೋಪ್‌, ಉತ್ತರ ಹಾಗೂ ದಕ್ಷಿಣ ಅಮೆರಿಕ, ಆಫ್ರಿಕಾ ಹಾಗೂ ಏಷ್ಯಾ ಖಂಡದಲ್ಲಿ ಹೆಚ್ಚು ಪ್ರಚಲಿತ. ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿರುವ ಟಾಬಿ ಡೇನಿಯಲ್ಸ್‌ ಇದರ ಸಂಸ್ಥಾಪಕ. ಇವರೊಂದಿಗೆ ಒಂಬತ್ತು ಮಂದಿ ನಿರ್ದೇಶಕರು ಈ ಸಂಸ್ಥೆಯಲ್ಲಿದ್ದಾರೆ. ವರ್ಷದ ಫೆಬ್ರುವರಿ ಹಾಗೂ ಸೆಪ್ಟೆಂಬರ್‌ನಲ್ಲಿ ಎರಡು ಬಾರಿ ಸಾಮಾಜಿಕ ಜಾಲತಾಣ ಸಮಾವೇಶವು ನಡೆಯುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.