ಗುರುವಾರ , ಮಾರ್ಚ್ 4, 2021
18 °C

ಜಾಲದಿಗ್ಗಜ ಫೋರ್‌ಸ್ಕ್ವೇರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಲದಿಗ್ಗಜ ಫೋರ್‌ಸ್ಕ್ವೇರ್

ಫೋರ್‌ಸ್ಕ್ವೇರ್ ಎಂದರೇನು?

ಬ್ಲ್ಯಾಕ್‌ಬೆರ‌್ರಿ, ಐಫೋನ್, ಆಂಡ್ರಾಯಿಡ್ ಮೊದಲಾದ ಮೊಬೈಲ್ ಪರಿಕರಗಳಲ್ಲಿ ಬಳಕೆಯಾಗುವ `ಲೊಕೇಷನ್ ಆಧಾರಿತ ಸೋಷಿಯಲ್ ನೆಟ್‌ವರ್ಕಿಂಗ್ ವೆಬ್‌ಸೈಟ್~ಗೆ ಫೋರ್‌ಸ್ಕ್ವೇರ್ ಎನ್ನುತ್ತಾರೆ. ಜಿಪಿಎಸ್ ಇರುವ ಮೊಬೈಲ್‌ಗಳಲ್ಲಿ ಸಾಫ್ಟ್‌ವೇರ್ ಮೂಲಕ ಇಂಟರ್ನೆಟ್ ಸೌಲಭ್ಯ ಸಾಧ್ಯ. 2009ರಲ್ಲಿ ಡೆನಿಸ್ ಕ್ರೌಲಿ ಹಾಗೂ ನವೀನ್ ಸೆಲ್ವದುರೈ ಫೋರ್‌ಸ್ಕ್ವೇರ್ ಪ್ರಾರಂಭಿಸಿದರು.

ಅದು ಏನು ಮಾಡುತ್ತದೆ?

ಮೊಬೈಲ್ ಮೂಲಕವೇ ಸ್ನೇಹಿತರನ್ನು ಹುಡುಕಲು,  ವಿಳಾಸಗಳನ್ನು ಪತ್ತೆಮಾಡಲು ಹಾಗೂ ಆಟವಾಡಲು ಇದು ಸಹಾಯಕ. ಈ ಜಾಲಕ್ಕೆ ಒಳಪಡುವ ಸ್ನೇಹಿತರು ತಮ್ಮ ಆಪ್ತರು ಎಲ್ಲಿದ್ದಾರೆ? ಕಚೇರಿಯಲ್ಲೇ ಇದ್ದಾರಾ ಅಥವಾ ಶಾಪಿಂಗ್ ಮಾಡುತ್ತಿದ್ದಾರಾ ಎಂಬ ವಿವರಗಳ ಹಂಚಿಕೆ ಇದರಿಂದ ಸಾಧ್ಯ.

ಆಟವಾಡುವುದು ಹೇಗೆ ಸಾಧ್ಯ?

ಫೋರ್‌ಸ್ಕ್ವೇರ್ ಜಾಲದ ಸ್ನೇಹಿತರಲ್ಲಿ ಯಾರು ನಿರ್ದಿಷ್ಟ ಸ್ಥಳಕ್ಕೆ ಹೆಚ್ಚು ಬಾರಿ ಭೇಟಿ ನೀಡುತ್ತಾರೋ ಅವರಿಗೆ ಹೆಚ್ಚು ಪಾಯಿಂಟ್‌ಗಳು ಲಭಿಸುತ್ತವೆ. ಹೊಸ ಹೊಸ ಆನ್‌ಲೈನ್ ಚಟುವಟಿಕೆಗಳಲ್ಲಿ ತೊಡಗಿದರಂತೂ ಬ್ಯಾಡ್ಜ್ ಕೊಡಲಾಗುತ್ತದೆ.ಇಂಥ ಬ್ಯಾಡ್ಜ್ ಪಡೆದವರನ್ನು ಆ ಜಾಲವ್ಯಾಪ್ತಿಯ `ಮೇಯರ್~ ಎನ್ನುತ್ತಾರೆ. ಮೊಬೈಲ್ ಸಾಮಾಜಿಕ ಒಡನಾಟ ಹೆಚ್ಚಲಿ ಎಂದು ಈ ಯಶಸ್ವಿ ತಂತ್ರ ಹೂಡಲಾಗಿದೆ.

ವ್ಯಾಪಾರಿಗಳಿಗೆ ಇದು ಹೇಗೆ ಲಾಭದಾಯಕ?

ಅಂಗಡಿಗಳು, ಕೆಫೆಗಳು ಗ್ರಾಹಕರನ್ನು ಆಕರ್ಷಿಸಲು ಫೋರ್‌ಸ್ಕ್ವೇರ್ ಬಳಸುತ್ತಿವೆ. ಮೇಯರ್ ಆಗುವವರಿಗೆ ಅಂಥ ಅಂಗಡಿಗಳು ಆಫರ್‌ಗಳನ್ನು ಮುಂದಿಡುತ್ತವೆ. ಗ್ರಾಹಕರಿಂದ ತಮ್ಮ ಮಳಿಗೆ, ಕೆಫೆಯ ಸೇವೆ ಹೇಗಿದೆ ಎಂದು ಪ್ರತಿಕ್ರಿಯೆ ಪಡೆದುಕೊಳ್ಳುತ್ತವೆ.

 

ಇದರಿಂದ ಗ್ರಾಹಕರಿಗೂ ಮಳಿಗೆ ಅಥವಾ ಕೆಫೆಯ ಜೊತೆಗೆ ವಿಶ್ವಸನೀಯ ಸಂಬಂಧ ಬೆಳೆಯುತ್ತದೆ. ಕೆಲವು ಜಾಗತಿಕ ಬ್ರಾಂಡ್‌ಗಳು ಹೆಚ್ಚು ಗ್ರಾಹಕರನ್ನು ಒಳಗೊಳ್ಳಲು ಹಾಗೂ ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಫೋರ್‌ಸ್ಕ್ವೇರ್ ಬಳಸುವುದುಂಟು.

ಈಗ ಅದೆಷ್ಟು ಜನಪ್ರಿಯ?

ಏಪ್ರಿಲ್ 2011ಕ್ಕೆ ಎಂಬತ್ತು ಲಕ್ಷ ಜನ ಫೋರ್‌ಸ್ಕ್ವೇರ್‌ಗೆ ನೋಂದಾಯಿಸಿಕೊಂಡಿದ್ದರು. ವಿಶ್ವ ಆರ್ಥಿಕ ಒಕ್ಕೂಟ (ದಿ ವರ್ಲ್ಡ್ ಎಕನಾಮಿಕ್ ಫೋರಂ) 2011ರ ಉದ್ದಿಮೆಯ ದಿಗ್ಗಜ ಎಂದು ಫೋರ್‌ಸ್ಕ್ವೇರನ್ನು ಗುರುತಿಸಿದೆ. ಏಪ್ರಿಲ್ 16, 2010ರಂದು ಉತ್ತರ ಅಮೆರಿಕದ `ಸೋಷಿಯಲ್ ನೆಟ್‌ವರ್ಕಿಂಗ್~ ಅಭಿಮಾನಿಗಳು `ಫೋರ್‌ಸ್ಕ್ವೇರ್ ದಿನ~ ಆಚರಿಸಿದರು.ವಿಶ್ವದ ಹೆಚ್ಚು ಸ್ನೇಹಿತರನ್ನು ಈ ಜಾಲದಡಿ ತರಬೇಕೆನ್ನುವುದು ದಿನಾಚರಣೆಯ ಉದ್ದೇಶ. ವರ್ಷದ 4ನೇ ತಿಂಗಳು ಏಪ್ರಿಲ್. ಹಾಗಾಗಿ ಇದು `ಫೋರ್~ ಎಂಬುದರ ಸಂಕೇತ. ಸ್ಕ್ವೇರ್ ಅಂದರೆ `ನಾಲ್ಕು ನಾಲ್ಕಲಿ ಹದಿನಾರು~ ಎನ್ನುತ್ತೇವಲ್ಲ ಹಾಗೆ. ಆದ್ದರಿಂದ 16ನೇ ತಾರೀಖು ಅದಕ್ಕೆ ಸೂಕ್ತ ಎಂದು ಅದೇ ದಿನ ನಿರ್ಧರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.