ಸೋಮವಾರ, ಮಾರ್ಚ್ 8, 2021
31 °C

ಜಿಎಸ್‌ಟಿ: ಕಾಂಗ್ರೆಸ್‌ ವಿರುದ್ಧ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಎಸ್‌ಟಿ: ಕಾಂಗ್ರೆಸ್‌ ವಿರುದ್ಧ ಕಿಡಿ

ಮಂಗಳೂರು: ‘ಸಂಸತ್‌ ಕಲಾಪವನ್ನು ಅಡ್ಡಿಪಡಿಸುವ ಮೂಲಕ ಕಾಂಗ್ರೆಸ್‌ ಜಿಎಸ್‌ಟಿ ಮತ್ತು ರಿಯಲ್‌ ಎಸ್ಟೇಟ್‌ ಮಸೂದೆಗಳ ಅಂಗೀಕಾರ ಪ್ರಕ್ರಿಯೆಯ ಹಾದಿ ತಪ್ಪಿಸಿದೆ’ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಆರೋಪಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಎಸ್‌ಟಿ ಮಸೂದೆ ಪರಿಚಯಿಸಿದ್ದೇ ಕಾಂಗ್ರೆಸ್‌ ಪಕ್ಷ. ಆದರೆ, ಅವರ ಕಾಲದಲ್ಲಿ ಸೇರಿಸದೇ ಇದ್ದ ತೆರಿಗೆಗೆ ಮಿತಿ ಹಾಕಬೇಕು ಎಂಬ ಷರತ್ತು ಮುಂದಿಟ್ಟು ಮಸೂದೆ ಅಂಗೀಕಾರಕ್ಕೆ ಅಡ್ಡಿಪಡಿಸುತ್ತಿದೆ’ ಎಂದು ದೂರಿದರು.‘ಜಿಎಸ್‌ಟಿ ಮಸೂದೆ ಪರಿಚಯಿಸುತ್ತಿರುವಾಗ ತೆರಿಗೆ ಮಿತಿ ನಿಗದಿಪಡಿಸಬೇಕು ಎಂದು ಹೇಳಿರಲಿಲ್ಲ. ಆದರೆ, ಈಗ ಒತ್ತಡ ಹಾಕುತ್ತಿದೆ. ತೆರಿಗೆ ಮಿತಿ ಅಷ್ಟೊಂದು ಮುಖ್ಯವಾಗಿದ್ದರೆ, ಕಾಂಗ್ರೆಸ್‌ನವರು ತಮ್ಮ ಮಸೂದೆಯಲ್ಲಿ ಯಾಕೆ ಸೇರಿಸಲಿಲ್ಲ. ಪ್ರಣವ್‌ ಮುಖರ್ಜಿ, ಚಿದಂಬರಂ ಹಣಕಾಸು ಸಚಿವರಾಗಿದ್ದಾಗಲೂ ಇದರ ಬಗ್ಗೆ ಮಾತನಾಡಿಲ್ಲ. ಆದರೆ, ಈಗ ಏಕಾಏಕಿ ಏಕೆ ಒತ್ತಡ ಹೇರುತ್ತಿದೆ’ ಎಂದು ಪ್ರಶ್ನಿಸಿದರು.‘ಸಚಿವರ ಮತ್ತು ಅಧಿಕಾರಿಗಳ ಸಮಿತಿ 16 ದೇಶ ಸುತ್ತಿ ಅಲ್ಲಿನ ತೆರಿಗೆ ವ್ಯವಸ್ಥೆ ಅಧ್ಯಯನ ನಡೆಸಿ ಜಿಎಸ್‌ಟಿ ಮಸೂದೆ ತಯಾರಿಸಿದೆ. ಜಿಎಸ್‌ಟಿ ಕಾಯ್ದೆಯು 116 ದೇಶಗಳಲ್ಲಿ ಜಾರಿಯಲ್ಲಿದ್ದು ತೆರಿಗೆ ಕಡಿತಕ್ಕೆ ಉಪಯೋಗಕರವಾಗಿದೆ’ ಎಂದರು.

ಮುದ್ರಾ ಯೋಜನೆಯಡಿ ₹ 92 ಸಾವಿರ ಕೋಟಿ ಸಾಲ ನೀಡಲಾಗಿದೆ.ಏಪ್ರಿಲ್‌ ಅಂತ್ಯದ ವೇಳೆಗೆ ₹ 1.25 ಲಕ್ಷ ಕೋಟಿ ಸಾಲ ನೀಡಲಾಗುತ್ತದೆ. ಬಜೆಟ್ ಅಧಿವೇಶನದಲ್ಲಿ ರಿಯಲ್‌ ಎಸ್ಟೇಟ್‌ ಬಿಲ್‌  ಅಂಗೀಕರಿಸಲಾಗುವುದು ಎಂದರು.ಮಾಸಾಂತ್ಯಕ್ಕೆ ಪಟ್ಟಿ ಪ್ರಕಟ: ಕೇಂದ್ರದ ಬಹುನಿರೀಕ್ಷಿತ ಸ್ಮಾರ್ಟ್‌ ಸಿಟಿ ಯೋಜನೆಯ ಕುರಿತಂತೆ ಪ್ರತಿಕ್ರಿಯಿಸಿದ ವೆಂಕಯ್ಯ ನಾಯ್ಡು. ‘ಸ್ಮಾರ್ಟ್‌ ಸಿಟಿ ತಜ್ಞರ ಸಮಿತಿಯು 100 ನಗರಗಳು ಮಂಡಿಸಿರುವ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿದೆ. ಮಾಸಾಂತ್ಯದ ವೇಳೆಗೆ ಸಮಿತಿ 20 ನಗರಗಳನ್ನು ಸ್ಮಾರ್ಟ್‌ ಸಿಟಿಗೆ ಆಯ್ಕೆ ಮಾಡಲಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.