ಗುರುವಾರ , ಫೆಬ್ರವರಿ 25, 2021
30 °C
ಏಪ್ರಿಲ್‌ನಿಂದಲೇ ಜಾರಿಗೆ ಸಿದ್ಧತೆ: ಜಿಎಸ್‌ಟಿ ಮಂಡಳಿಯಿಂದ ದರ ನಿರ್ಧಾರ

ಜಿಎಸ್‌ಟಿ ನೀಲನಕ್ಷೆ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಎಸ್‌ಟಿ ನೀಲನಕ್ಷೆ ಪ್ರಕಟ

ನವದೆಹಲಿ (ಪಿಟಿಐ): ಮುಂದಿನ ವರ್ಷ ಏಪ್ರಿಲ್‌ ಒಂದರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಸಾಧ್ಯವಾಗದು ಎಂಬ ಊಹಾಪೋಹಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ತೆರೆ ಎಳೆದಿದ್ದಾರೆ. ಮುಂದಿನ ವರ್ಷದಿಂದಲೇ ಜಿಎಸ್‌ಟಿ ಜಾರಿಗೆ ನೀಲನಕ್ಷೆಯನ್ನು ಅವರು ಪ್ರಕಟಿಸಿದ್ದಾರೆ.ಆದರೆ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಆಗ್ರಹಿಸಿದ ಹಾಗೆ ಜಿಎಸ್‌ಟಿ ದರ ಶೇ 18ರೊಳಗೆಯೇ ಇರುತ್ತದೆ ಎಂಬ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಜಿಎಸ್‌ಟಿ ದರ ಎಷ್ಟು ಎಂಬುದನ್ನು ಜಿಎಸ್‌ಟಿ ಮಂಡಳಿಯೇ ನಿರ್ಧರಿಸಲಿದೆ. ಆದರೆ ‘ಅತ್ಯುತ್ತಮ’ ತೆರಿಗೆ ದರವನ್ನು ನಿಗದಿ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.ಜಿಎಸ್‌ಟಿ ಮಂಡಳಿ ಬಗ್ಗೆ ಮಾತನಾಡಿದ ಜೇಟ್ಲಿ ಅವರು, ಈ ಮಂಡಳಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ಪ್ರತಿನಿಧಿಗಳು ಇರುತ್ತಾರೆ. ಈ ಮಂಡಳಿಯು ವರಮಾನದ ಅಗತ್ಯ ಮತ್ತು ತೆರಿಗೆ ದರವನ್ನು ಕಡಿಮೆ ಇರಿಸುವುದರ ನಡುವೆ ಸಮತೋಲನ ಕಾಪಾಡಿಕೊಂಡು ದರ ನಿಗದಿ ಮಾಡಲಿದೆ ಎಂದು ತಿಳಿಸಿದ್ದಾರೆ.ಜಿಎಸ್‌ಟಿ ದರ ಶೇ 20ರಷ್ಟಿದ್ದರೂ ಹಣದುಬ್ಬರ ಏರಿಕೆಯಾಗದು ಎಂದು ಹಣಕಾಸು ಇಲಾಖೆಯ ಕಾರ್ಯದರ್ಶಿ ಅಶೋಕ್‌ ಲವಾಸಾ ಅವರು ಹೇಳಿದ್ದಾರೆ. ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಹಾಗಾಗಿ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಆಗ್ರಹಿಸಿದ ಹಾಗೆ ತೆರಿಗೆ ದರವನ್ನು ಶೇ 18ರೊಳಗೆ ಇರಿಸುವ ಸಾಧ್ಯತೆ ಕಡಿಮೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ರಾಜ್ಯಸಭೆ ಅಂಗೀಕರಿಸಿದ ಮಸೂದೆಗೆ ಲೋಕಸಭೆ ಮುಂದಿನ ವಾರವೇ ಒಪ್ಪಿಗೆ ನೀಡುವ ಸಾಧ್ಯತೆ ಇದೆ.ಶೇ 18 ಮೀರದಂತೆ ಕಾಂಗ್ರೆಸ್‌ ಒತ್ತಡ: ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರು ಜಿಎಸ್‌ಟಿ ವ್ಯವಸ್ಥೆಯಲ್ಲಿ ತೆರಿಗೆ ಪ್ರಮಾಣವು ಶೇ 18 ಮೀರಬಾರದು ಎಂಬ ಒತ್ತಡ ತರಲಿದ್ದಾರೆ.ತೆರಿಗೆ ಪ್ರಮಾಣವು ಶೇಕಡ 18 ರಷ್ಟನ್ನು ಮೀರುವಂತಿಲ್ಲ ಎಂಬ ಪದ ಸಂವಿಧಾನ ತಿದ್ದುಪಡಿ ಮಸೂದೆಯಲ್ಲೇ ಇರಬೇಕು ಎಂದು ಪಕ್ಷ ಮೊದಲು ಮುಂದಿಟ್ಟಿದ್ದ ಬೇಡಿಕೆಯನ್ನು ಸರ್ಕಾರದಿಂದ ಖಚಿತ ಭರವಸೆ ಸಿಗದಿದ್ದರೂ ಕೈಬಿಡಲಾಯಿತು ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ತಿಳಿಸಿದರು.ಪೂರಕ ಕಾನೂನು ರೂಪಿಸುವಾಗ, ತೆರಿಗೆ ಪ್ರಮಾಣ ಶೇಕಡ 18 ಮೀರದಂತೆ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಹಣಕಾಸು ಸಚಿವರು ಒತ್ತಡ ತರಲಿದ್ದಾರೆ ಎಂದು ಜೈರಾಂ ತಿಳಿಸಿದರು.

*

ಅನುಷ್ಠಾನಕ್ಕೆ ಸಿದ್ಧತೆ

* ಮುಂದಿನ 30 ದಿನಗಳಲ್ಲಿ ಕನಿಷ್ಠ 16 ರಾಜ್ಯಗಳಿಂದ ಜಿಎಸ್‌ಟಿಗೆ ಅನುಮೋದನೆ

* ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ ನಂತರ ಜಿಎಸ್‌ಟಿ ಮಂಡಳಿ ರಚನೆಗೆ ಸಂಪುಟ ಸಮ್ಮತಿ

* ಜಿಎಸ್‌ಟಿ ಮಂಡಳಿಯಿಂದ ಮಾದರಿ  ಕಾನೂನು ಶಿಫಾರಸು

* ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ಸಮಗ್ರ ಜಿಎಸ್‌ಟಿ (ಐಜಿಎಸ್‌ಟಿ) ಕಾನೂನುಗಳಿಗೆ ಸಂಪುಟದ ಒಪ್ಪಿಗೆ

* ಎಲ್ಲ ರಾಜ್ಯಗಳಿಂದ ಎಸ್‌ಜಿಎಸ್‌ಟಿ ಕಾನೂನು ಅಂಗೀಕಾರ* 2017ರ ಜನವರಿ–ಮಾರ್ಚ್‌ ನಡುವೆ ಸಾಫ್ಟ್‌ವೇರ್‌ ಪರೀಕ್ಷೆ ಮತ್ತು ಅಳವಡಿಕೆ

* ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಿಜಿಎಸ್‌ಟಿ ಮತ್ತು ಐಜಿಎಸ್‌ಟಿ ಮಸೂದೆ ಅಂಗೀಕಾರ

* 2017ರ ಮಾರ್ಚ್‌ 31ರೊಳಗೆ ಜಿಎಸ್‌ಟಿ ನಿಯಮಗಳ ಅಧಿಸೂಚನೆ

* 2016 ಡಿಸೆಂಬರ್‌ ಒಳಗೆ ಜಿಎಸ್‌ಟಿ ಸಾಫ್ಟ್‌ವೇರ್‌ ಸಿದ್ಧ* ಈ ಡಿಸೆಂಬರ್‌ನೊಳಗೆ ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳಿಗೆ ತರಬೇತಿ

* 2017ರ ಮಾರ್ಚ್‌ನೊಳಗೆ ಸಂಬಂಧಪಟ್ಟವರ ಜತೆ ಸಮಾಲೋಚನೆ

* 2017 ಏಪ್ರಿಲ್‌ 1ರಿಂದ ಜಿಎಸ್‌ಟಿ ಅನುಷ್ಠಾನ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.