ಸೋಮವಾರ, ಜನವರಿ 27, 2020
26 °C

ಜಿಎಸ್‌ಬಿ ಸಮುದಾಯದ ಮೇಲೆ ಪಾಶ್ಚಾತ್ಯ ಪ್ರಭಾವ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ವ್ಯಾಪಾರವನ್ನೇ  ವೃತ್ತಿ ಬದುಕಾಗಿಸಿಕೊಂಡಿದ್ದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಜಾಗತೀಕರಣ ಹಾಗೂ ಉದಾರೀಕರಣದ ಪ್ರಭಾವದಿಂದ ವ್ಯಾಪಾರ ವೃತ್ತಿಯಿಂದ ವಿಮುಖವಾಗುವಂತ ಸ್ಥಿತಿ ನಿರ್ಮಾಣವಾಗುತ್ತಿದೆ. ಹೊರಗಿನ ಪಾಶ್ಚಾತ್ಯ ಸಂಸ್ಕೃತಿಯಿಂದಾಗಿ ಇತಿಹಾಸದ ಹಿನ್ನೆಲೆ ಇರುವ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಉದ್ಯಮಿ ಡಾ. ಪಿ. ದಯಾನಂದ ಪೈ ಆತಂಕ ವ್ಯಕ್ತಪಡಿಸಿದರು.ಕುಂದಾಪುರ ಸಮೀಪದ ಕೋಟೇಶ್ವರದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಉಡುಪಿ ಜಿಲ್ಲಾ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ `ಸ್ವಾಭಿಮಾನಿ ಜಾಗೃತಿ ಸಮಾವೇಶ 2012~ ಉದ್ಘಾಟಿಸಿ ಅವರು ಮಾತನಾಡಿದರು.`ಹಿಂದಿನ ದಿನಗಳಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಒಟ್ಟಾಗುತ್ತಿದ್ದ ಜಿಎಸ್‌ಬಿ ಸಮಾಜದಲ್ಲಿ ಇದೀಗ ಸಾಮಾಜಿಕ ಸ್ಪಂದನ ಕಾಣುತ್ತಿರುವುದು ಸ್ವಾಗತಾರ್ಹ. ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದೆ~ ಎಂದರು.`ಇತರರನ್ನು ಗೌರವಿಸುವ ಹಾಗೂ ಪ್ರೀತಿಸುವ ಮನೋಭಾವವನ್ನು ಬೆಳೆಸಿಕೊಂಡಾಗ ಇತರರು ನಮ್ಮನ್ನು ನಮ್ಮವರಂತೆ ಕಾಣುತ್ತಾರೆ. ಶಿಕ್ಷಣ ಬೇಕು, ಆದರೆ ಶಿಕ್ಷಣದಿಂದ ಅಂಹಕಾರ ಬರಕೂಡದು. ಅದು ವ್ಯಕ್ತಿಯ ವೈಯಕ್ತಿಕ ಗೌರವದ ಶೋಭೆಯಾಗಿರಬೇಕು~ ಎಂದು ದಯಾನಂದ ಪೈ ಅಭಿಪ್ರಾಯಪಟ್ಟರು.ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಎಂ.ವಿ ಕಾಮತ್ ಮಾತನಾಡಿ, ದೇಶ-ವಿದೇಶಗಳಲ್ಲಿ ನೆಲೆಸಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದವರು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತಿರುವುದರಿಂದ ಸಮಾಜದ ಕೊಂಡಿಗಳು ತಪ್ಪುತ್ತಿದೆ. ಇಂಗ್ಲೀಷ್ ಭಾಷೆ ಸೇರಿದಂತೆ ಇತರ ಭಾಷೆಯ ಪ್ರಭಾವ, ಗೌಡ ಸಾರಸ್ವತ ಬ್ರಾಹ್ಮಣ  ಸಮುದಾಯದ ಮಾತೃ ಭಾಷೆಯಾದ ಕೊಂಕಣಿ ಮೇಲೆ ಪ್ರಭಾವ ಬೀರುತ್ತಿದೆ. ನಮ್ಮ ಕಾರ್ಯ-ಧ್ಯೇಯಗಳ ಜೊತೆ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.ಸರ್ವ ಜಿಎಸ್‌ಬಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಕೆ.ರಾಧಾಕೃಷ್ಣ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಹಳಿಯಾಳ ಶಾಸಕ ಸುನೀಲ್ ಹೆಗ್ಡೆ, ರಾಜ್ಯ ಕೊಂಕಣಿ  ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಕಾಸರಗೋಡು ಚಿನ್ನಾ, ಮೋಹಿನಿ ದಯಾನಂದ ಪೈ, ಬಸ್ರೂರು ಪಾಂಡುರಂಗ ಆಚಾರ್ಯ, ಜಾಗೃತಿ ಸಮಾವೇಶದ ಗೌರವಾಧ್ಯಕ್ಷ ಕೋಟೇಶ್ವರ ವಿಠ್ಠಲ್ ಕಾಮತ್, ಅಧ್ಯಕ್ಷ ದಕ್ಕೇರ್‌ಬಾಳ್ ಗೋಪಾಲಕೃಷ್ಣ ಕಾಮತ್, ಸಂಚಾಲಕ ಆರ್,ವಿವೇಕಾನಂದ ಪೈ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಸತೀಶ್ ಎಂ ನಾಯಕ್ ನಾಡಾ, ಸಂಘಟನಾ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಉಡುಪಿ ಜಿಲ್ಲಾ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಾ.ಬಿ ದಾಮೋದರ ಪೈ ಉಡುಪಿ, ಸಂಯೋಜಕ ಚಿದಾನಂದ ಪೈ ಇದ್ದರು.

8 ಸಾವಿರ ಮಂದಿ; ಪಾರಂಪರಿಕ ಅಡುಗೆ

ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 8,000 ಕ್ಕೂ ಅಧಿಕ ಮಂದಿ ಜಿಎಸ್‌ಬಿ ಸಮಾಜದವರು ಸಮಾವೇಶದಲ್ಲಿ ಇದ್ದರು.ಸಮಾವೇಶದಲ್ಲಿ ಊಟೋಪಚಾರ ವ್ಯವಸ್ಥೆ ನಿರ್ವಹಣೆಗಾಗಿ ಕೋಟೇಶ್ವರ ಶಂಕರ ಕಾಮತ್ ಅವರ ನೇತೃತ್ವದಲ್ಲಿ ಸುಮಾರು 600 ಮಂದಿ ಸ್ವಯಂಸೇವಕರಾಗಿ ತೊಡಗಿಸಿಕೊಂಡಿದ್ದಾರೆ.ಸಮಾವೇಶದಲ್ಲಿ ಪಾಲ್ಗೊಳ್ಳುವ ಅಂದಾಜು 10,000 ಮಂದಿಗೆ ಬಾಣಸಿಗರಾದ ಕಾರ್ಕಳ ತಾಲ್ಲೂಕಿನ ಹರಿಖಂಡಿಗೆ ವಿಷ್ಣು ನಾಯಕ್ ಹಾಗೂ ಕೋಟೇಶ್ವರದ ಕಮಲಾಕ್ಷ ಪೈ ಮಾರ್ಗದರ್ಶನದಲ್ಲಿ ಜಿಎಸ್‌ಬಿ ಸಮಾಜದವರ ಪಾರಂಪರಿಕ ಅಡುಗೆಗಳನ್ನು ತಯಾರಿಸಲಾಗಿದೆ. ಬೆಳಿಗ್ಗೆ ಫಲಹಾರಕ್ಕಾಗಿ 12,000 `ಹಲಸಿನ ಎಲೆಯ ಕೊಟ್ಟೆ~ (ಕಡಬು) ವಿತರಿಸಲಾಗಿತ್ತು. ಹೀಗೆ ಸಮಾವೇಶ ಹಲವು ಕಾರಣಗಳಿಗೆ ಗಮನಸೆಳೆಯಿತು.

ಪ್ರತಿಕ್ರಿಯಿಸಿ (+)