ಶುಕ್ರವಾರ, ಏಪ್ರಿಲ್ 16, 2021
22 °C

ಜಿಟಿಡಿಗೆ ಅಧಿಕಾರದ ದಾಹ: ಚಿಕ್ಕಮಾದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು: ಪುರಸಭೆ ಸದಸ್ಯತ್ವದಿಂದ ವಜಾಗೊಂಡ ಮೂವರು ಸದಸ್ಯರು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷೆ ಜಿ.ಟಿ.ದೇವೇಗೌಡರ ಅಧಿಕಾರ ದಾಹದ ಚಿತಾವಣೆಗೆ ಬಲಿಯಾಗಿರುವುದು ವಿಷಾದನೀಯ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಚಿಕ್ಕಮಾದು  ಹೇಳಿದರು. ಜಿ.ಟಿ.ದೇವೇಗೌಡರು ಪುರಸಭೆ ಅಧಿಕಾರ ಹಿಡಿಯುವ ಆತುರದಲ್ಲಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಮೂವರು ಸದಸ್ಯರನ್ನು ಪಕ್ಷ ವಿರೋಧ ಚಟುವಟಿಕೆಯಲ್ಲಿ ತೊಡಗಿಸಿ ನಾವು ಅಧಿಕಾರ ಹಿಡಿಯದಂತೆ  ರಾಜಕೀಯ ಚಾಣಾಕ್ಷತನ ತೋರಿಸಿದ್ದರು.ಈ ಹಿನ್ನೆಲೆಯಲ್ಲಿ ಜೆಡಿಎಸ್ ಮೂವರು ಸದಸ್ಯರ ವಿರುದ್ಧ ಪಕ್ಷ ವಿರೋಧಿ ಕಾಯ್ದೆ ಅಡಿಯಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿ ಮಂಗಳವಾರ  ಹೊರ ಬಂದ ತೀರ್ಪಿನಲ್ಲಿ ಅಧಿಕಾರ ಕಳೆದುಕೊಂ–ಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪುರಸಭಾಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ಸಮಯದಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ  ಹಿನ್ನೆಲೆಯಲ್ಲಿ ಐವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿತ್ತು. ನಂತರದಲ್ಲಿ ಇಬ್ಬರ ವಿರುದ್ಧ ಮೊಕದ್ದಮೆ ಹಿಂಪಡೆದಿದ್ದು, ಉಳಿದಂತೆ ಪ್ರೇಮಾ ರಮೇಶ್, ಕೃಷ್ಣಾಚಾರಿ ಮತ್ತು ಕಣ್ಣಯ್ಯ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಸೆಪ್ಟೆಂಬರ್ 2010ರಲ್ಲಿ ದಾಖಲಿಸಿದ ಮೊಕದ್ದಮೆ ಕುರಿತು ನಡೆಸಿದ ಪರ, ವಿರೋಧ ಚರ್ಚೆಯ ನಂತರದಲ್ಲಿ ಜಿಲ್ಲಾಧಿಕಾರಿಯು ಜೆಡಿಎಸ್ ಪಕ್ಷದ ಪರವಾಗಿ ತೀರ್ಪು ನೀಡಿ ಜನಪ್ರತಿನಿಧಿಗಳಿಗೆ ಪಾಠ ಕಲಿಸಿದ್ದಾರೆ ಎಂದರು. ಹುಣಸೂರು ಪುರಸಭೆಗೆ ಈ ಹಿಂದೆ ನಡೆದ ಎರಡೂ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರು ಮೂಗು ತೂರಿಸಿ ಸದಸ್ಯರನ್ನು ಅಡ್ಡದಾರಿಯಲ್ಲಿ ನಡೆಯುವಂತೆ ಮಾಡಿದ ಪ್ರತಿಫಲ ನ್ಯಾಯಾಲಯದಿಂದ ಹೊರ ಬಿದ್ದಿರುವ ತೀರ್ಪು ಸಂಪೂರ್ಣ ಜೆಡಿಎಸ್ ಪರವಾಗಿದ್ದು, ಮುಂದಿನ ದಿನಗಳಲ್ಲಿ ರಾಜಕಾರಣಿಗಳು ಪಕ್ಷ ವಿರೋಧಿ ಚಟುವಟಿಕೆ ನಡೆಸದಂತೆ ಪಾಠ ಕಲಿಸಿದೆ ಎಂದರು.ಆಶ್ರಯ ಮನೆ ಜಟಾಪಟಿ:ಸರ್ಕಾರದಿಂದ ವಿಶೇಷ ಯೋಜನೆಯಲ್ಲಿ ತಾಲ್ಲೂಕಿಗೆ ಹೆಚ್ಚುವರಿ 3 ಸಾವಿರ ಮನೆ ತರುವ ಸುಳ್ಳು ಆಶ್ವಾಸನೆ ನೀಡಿ ಜಿ.ಟಿ.ದೇವೇಗೌಡರು ರಾಜಕೀಯ ನಡೆಸುತ್ತಿದ್ದಾರೆ. ಸರ್ಕಾರದಿಂದಾಗಲಿ ಅಥವಾ ಕರ್ನಾಟಕ ಗೃಹ ಮಂಡಳಿಯಿಂದಾಗಲಿ ಹೆಚ್ಚುವರಿ ಒಂದು ಮನೆಯನ್ನು ತಂದಿಲ್ಲ ಎಂದು ಲೇವಡಿ ಮಾಡಿದರು. ರಾಜೀವ್‌ಗಾಂಧಿ ವಸತಿ ನಿಗಮ ಯೋಜನೆ ಅಡಿಯಲ್ಲಿ ನೀಡುತ್ತಿರುವ ಮನೆಗಳನ್ನು ಹೊರತುಪಡಿಸಿ ಜಿ.ಟಿ.ದೇವೇಗೌಡರಿಗೆ ವೈಯಕ್ತಿಕವಾಗಿ ಮನೆ ತರುವ ಅಧಿಕಾರವಿಲ್ಲ ಎಂದರು.ಚುನಾವಣಾ ಗಿಮಿಕ್:ರಾಜ್ಯ ಸರ್ಕಾರ ವಸತಿ ನಿರ್ಮಿಸಲು ಬಜೆಟ್‌ನಲ್ಲಿ ಮೀಸಲಿಟ್ಟಿರುವ ಒಟ್ಟು ಹಣ 120 ಕೋಟಿ, ಆದರೆ ರಾಜೀವ್‌ಗಾಂಧಿ ವಸತಿ ಯೋಜನೆಯಲ್ಲಿ ಸರ್ಕಾರ ನಿರ್ಮಿಸಲು ಹೊರಟಿರುವ ಪ್ರತಿ ಮನೆಗೆ ರೂ.63 ಸಾವಿರ. ಇದರಂತೆ ರಾಜ್ಯದಲ್ಲಿ ಎಲ್ಲಾ ಮನೆ ನಿರ್ಮಿಸಲು ತಗಲುವ ವೆಚ್ಚ 4800 ಕೋಟಿ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಬೂಟಾಟಿಕೆ ಸರ್ಕಾರದಿಂದ ಏನನ್ನು ಮತದಾರ ನಿರೀಕ್ಷಿಸಲು ಸಾಧ್ಯ ಎಂದರು. ಸುದ್ದಿಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಚಂದ್ರಶೇಖರ್, ಪಕ್ಷದ ಮುಖಂಡರಾದ ಸ್ವಾಮಿಗೌಡ, ನಂಜಪ್ಪ ಮತ್ತು ತಿಮ್ಮನಾಯಕ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.