ಗುರುವಾರ , ಮೇ 13, 2021
16 °C

ಜಿನಾ ಹಿಕಾಕಗೆ ಇಂದು ಬಿಡುಗಡೆಯ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ತಿಂಗಳ ಹಿಂದೆ ಅಪಹರಣಕ್ಕೊಳಗಾಗಿದ್ದ ಆಡಳಿತಾರೂಢ ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಮಾವೊವಾದಿಗಳು ಗುರುವಾರ ಬಿಡುಗಡೆ ಮಾಡಲಿದ್ದಾರೆ.

`ಪ್ರಜಾ~ ನ್ಯಾಯಾಲಯದಲ್ಲಿ  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಿಕಾಕ ಅವರು ವಾಗ್ದಾನ ನೀಡಿರುವ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲು ನ್ಯಾಯಾಲಯ ತೀರ್ಮಾನಿಸಿತು ಎಂದು ಮಾವೊವಾದಿಗಳು ಹೇಳಿದ್ದಾರೆ.

`ಒತ್ತೆ ಸೆರೆಯಿಂದ ಬಿಡುಗಡೆಗೊಂಡ ಬಳಿಕ ಹಿಕಾಕ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಈ ಸಂಬಂಧ ಅವರು `ಪ್ರಜಾ~ ನ್ಯಾಯಾಲಯದಲ್ಲಿ ಲಿಖಿತವಾಗಿ ಹೇಳಿಕೆ ನೀಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ~ ಎಂದು  ಸಿಪಿಎಂನ ಆಂಧ್ರ ಒಡಿಶಾ ಗಡಿಯ ವಿಶೇಷ ವಲಯ ಸಮಿತಿ (ಎಒಬಿಎಸ್‌ಜೆಡ್‌ಸಿ) ಮಾಧ್ಯಮಗಳಿಗೆ ಬುಧವಾರ ರವಾನಿಸಿರುವ ಧ್ವನಿಮುದ್ರಿತ ಸಂದೇಶದಲ್ಲಿ ತಿಳಿಸಿದೆ.

ಲಕ್ಷ್ಮೀಪುರ ಶಾಸಕರಾದ 37 ವರ್ಷದ ಜಿನಾ ಹಿಕಾಕ ಅವರನ್ನು ಕೊರಾಪುಟ್ ಜಿಲ್ಲೆಯ ನಾರಾಯಣ ಪಟ್ಟಣದ ಬಲಿಪೆಟಾ ಎಂಬಲ್ಲಿ ಗುರುವಾರ ಬೆಳಿಗ್ಗೆ  ಕೊರಾಟ್‌ಪುಟ್ ಮೂಲದ ವಕೀಲರು ಮತ್ತು ಹಿಕಾಕ ಪತ್ನಿ ಕೌಸಲ್ಯ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಎಒಬಿಎಸ್‌ಜೆಡ್‌ಸಿನ  ಹಿರಿಯ ಮುಖಂಡ ಸಂದೇಶದಲ್ಲಿ ತಿಳಿಸಿದ್ದಾನೆ.

ಬಿಡುಗಡೆಗೊಂಡ ಬಳಿಕ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮತ್ತು ಬಿಜೆಡಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡು ಸಾಮಾನ್ಯ ನಾಗರಿಕನಾಗಿ ಜನರ ಏಳಿಗೆಗಾಗಿ ದುಡಿಯುತ್ತೇನೆ ಎಂದು ಏಪ್ರಿಲ್ 23 ಮತ್ತು 24ರಂದು ನಡೆದ `ಪ್ರಜಾ~ ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಹಿಕಾಕ ಹೇಳಿರುವುದಾಗಿ ವರದಿಯಾಗಿದೆ.

ತಾವು ಬುಡಕಟ್ಟು ಜನಾಂಗಕ್ಕೆ ಸೇರಿದವನು ಎಂಬ ಕಾರಣಕ್ಕೆ ತಮ್ಮ ಬಿಡುಗಡೆಗಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಹಿಕಾಕ ಆರೋಪಿಸಿರುವುದಾಗಿಯೂ ಸಂದೇಶದಲ್ಲಿ ಹೇಳಲಾಗಿದೆ.

ಸ್ಥಳೀಯ ಶಾಸಕನಾಗಿ ಹಿಕಾಕ ಜನ ವಿರೋಧಿ ಕ್ರಮಗಳನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಜನರು ಹೇಳಿಕೊಂಡಿದ್ದರು. `ಪ್ರಜಾ~ ನ್ಯಾಯಾಲಯದಲ್ಲಿ ಹಿಕಾಕ ಇದನ್ನು ಒಪ್ಪಿಕೊಂಡಿದ್ದಾರೆ ಎಂದು ಒಡಿಯಾ ಭಾಷೆಯಲ್ಲಿದ್ದ ಧ್ವನಿ ಮುದ್ರಿತ ಸಂದೇಶದಲ್ಲಿ ಮಾವೊವಾದಿಗಳು ಹೇಳಿದ್ದಾರೆ.

`ಗ್ರೀನ್ ಹಂಟ್~ ಕಾರ್ಯಾಚರಣೆ,  ಮುಗ್ಧ ಜನರ ಮೇಲೆ ನಡೆಯುತ್ತಿರುವ  ದೌರ್ಜನ್ಯ ಸೇರಿದಂತೆ ಹಲವು ವಿಚಾರಗಳನ್ನು `ಪ್ರಜಾ~ ನ್ಯಾಯಾಲಯದಲ್ಲಿ ಚರ್ಚಿಸಲಾಯಿತು ಎಂದು ಸಂದೇಶ ತಿಳಿಸಿದೆ. ಮಾರ್ಚ್ 24ರ ಬೆಳಗಿನ ಜಾವ ಹಿಕಾಕ ಅವರನ್ನು ಕೊರಾಪುಟ್‌ನಲ್ಲಿ ಅಪಹರಿಸಲಾಗಿತ್ತು.

ಸಂಧಾನಕಾರ ಶರ್ಮಾ ಇಂದು ಬಸ್ತಾರ್‌ಗೆ

ನವದೆಹಲಿ (ಪಿಟಿಐ): ಛತ್ತೀಸ್‌ಗಡದ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಬಿಡುಗಡೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ನಕ್ಸಲರ ಮಧ್ಯೆ ಮಾತುಕತೆ ನಡೆಸಲು ಒಪ್ಪಿಕೊಂಡಿರುವ ಬಿ. ಡಿ. ಶರ್ಮಾ ಅವರು ಗುರುವಾರ ಬಸ್ತಾರ್‌ಗೆ ತೆರಳಲಿದ್ದಾರೆ.

ಮಾವೊವಾದಿಗಳು ಈ ಮೊದಲು ನೀಡಿದ್ದ ಗಡುವು ಬುಧವಾರಕ್ಕೆ ಅಂತ್ಯವಾಗಿದ್ದು ಇದನ್ನು ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಬಸ್ತಾರ್ ವಲಯದ ಜನರ ಜತೆ ದೀರ್ಘ ಕಾಲದ ಒಡನಾಟವಿರುವುದರಿಂದ  ಪರಿಸ್ಥಿತಿಯನ್ನು ತಿಳಿಗೊಳಿಸಲು ಸಂಧಾನಕಾರರಾಗಿ ಹೋಗಲು ಒಪ್ಪಿಕೊಂಡಿರುವುದಾಗಿ ಪರಿಶಿಷ್ಟ ಜಾತಿ  ಮತ್ತು ಪಂಗಡಗಳ ರಾಷ್ಟ್ರೀಯ ಆಯೋಗದ ಮಾಜಿ ಅಧ್ಯಕರೂ ಆಗಿರುವ ಶರ್ಮಾ ತಿಳಿಸಿದ್ದಾರೆ.

ಈ ಮಧ್ಯೆ ಸಂಧಾನಕಾರರಾಗಿ ಮಾವೊವಾದಿಗಳು ಹೆಸರಿಸಿದ್ದ ಅಖಿಲ ಭಾರತ ಆದಿವಾಸಿ ಮಹಾಸಭಾದ ಅಧ್ಯಕ್ಷ ಮನಿಷ್ ಕುಂಜಮ್ ಅವರು ಮಂಗಳವಾರ ಮೆನನ್‌ಗಾಗಿ ಔಷಧಿಗಳು ಕೊಂಡೊಯ್ದಿದ್ದರು. ಇವು ಮೆನನ್ ಅವರಿಗೆ ತಲುಪಿದ್ದು ಅವರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.