ಗುರುವಾರ , ಮೇ 26, 2022
28 °C

ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆಗಾಲ ಮುಗಿದ ಎರಡು ತಿಂಗಳುಗಳಲ್ಲಿ ರಾಜ್ಯದ ಪ್ರಮುಖ ರಸ್ತೆಗಳಲ್ಲಿ ಯಾವುದೇ ಹೊಂಡ-ಗುಂಡಿ ಇರಬಾರದು. ಬೆಂಗಳೂರಿನ ರಸ್ತೆಗಳನ್ನು `ನಮ್ಮ ಮೆಟ್ರೊ~ ಉದ್ಘಾಟನೆಗೂ ಮೊದಲೇ ಸರಿಪಡಿಸಬೇಕು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಆದೇಶ ನೀಡಿದರು.ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆಸಿದ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಮೊಟ್ಟಮೊದಲ ಸಭೆ ಇದು. ತಮ್ಮ ಅನಿಸಿಕೆ, ಸೂಚನೆಗಳನ್ನೆಲ್ಲ ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕವೇ ವಿವರಿಸಿದರು.ನಾಗರಿಕ ಸನ್ನದು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ನಾಗರಿಕ ಸನ್ನದು (ಸಿಟಿಜನ್ ಚಾರ್ಟರ್) ಜಾರಿಗೆ ತರಲು ಉದ್ದೇಶಿಸಲಾಗಿದೆ, ಅದರ ಕರಡು ಸಿದ್ಧಪಡಿಸುವ ಕಾರ್ಯ ನಡೆದಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಾಗರಿಕ ಸನ್ನದು ಕರಡನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.`ನಾಗರಿಕ ಸನ್ನದಿನ ಜೊತೆಗೇ, ಸಾರ್ವಜನಿಕರ ಕುಂದುಕೊರತೆ ಮತ್ತು ದೂರುಗಳನ್ನು ಆಲಿಸಲು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಪ್ರತ್ಯೇಕ ವಿಭಾಗವೊಂದನ್ನು ತೆರೆಯಲು ಸಿದ್ಧತೆ ನಡೆದಿದೆ. ಇದು ಪೂರ್ಣಗೊಂಡ ನಂತರ ಸಾರ್ವಜನಿಕರು ಇ-ಮೇಲ್ ಮೂಲಕವೂ ದೂರುಗಳನ್ನು ಹೇಳಿಕೊಳ್ಳಬಹುದು~ ಎಂದು ಹೇಳಿದರು.`ಕಟ್ಟುನಿಟ್ಟಾಗಿ ಜಾರಿ~: ರಾಜ್ಯದಲ್ಲಿ ಇ-ಆಡಳಿತವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಇದಕ್ಕೆ ಪೂರಕವಾಗಿ ಶೀಘ್ರದಲ್ಲೇ `ಸ್ವಾಗತ್~ ಹೆಸರಿನ ವೆಬ್‌ಸೈಟ್ ಆರಂಭಿಸಲಾಗುವುದು. ಮಾಹಿತಿ ಹಕ್ಕು ಕಾಯ್ದೆಯಡಿ ದೊರೆಯುವ ಸೌಲಭ್ಯಗಳನ್ನು ಮೊಬೈಲ್ ದೂರವಾಣಿ ಮೂಲಕ ಒದಗಿಸುವ ವ್ಯವಸ್ಥೆಯೂ ಶೀಘ್ರ ಜಾರಿಯಾಗಲಿದೆ. ಸರ್ಕಾರಿ ಕಚೇರಿಗಳಲ್ಲಿ ಕನ್ನಡ ತಂತ್ರಾಂಶ ಅಳವಡಿಕೆ ಕಡ್ಡಾಯ ಮಾಡಲಾಗುವುದು ಎಂದರು.`ಸಚಿವರೂ ಹೊಣೆ~: `ಜಿಲ್ಲಾ ಮಟ್ಟದಲ್ಲಿ ಆಡಳಿತ ಹೇಗೆ ನಡೆಯುತ್ತಿದೆ ಎಂಬುದು ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯೂ ಹೌದು~ ಎಂದ ಅವರು, `ಜಿಲ್ಲೆಗಳ ಅಭಿವೃದ್ಧಿಯಲ್ಲಿ ಆಗುವ ಲೋಪಗಳನ್ನು ಸರ್ಕಾರದ ಗಮನಕ್ಕೆ ತಾರದಿದ್ದರೆ ಅದಕ್ಕೆ ಆಯಾ ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಸಚಿವರೂ ಹೊಣೆಗಾರರು~ ಎಂದು ಎಚ್ಚರಿಸಿದರು.ಕಡತ ವಿಲೇವಾರಿ: `ನನ್ನ ಕಚೇರಿಯ ಕಡತಗಳು 10 ದಿನಗಳಲ್ಲಿ ವಿಲೇವಾರಿ ಆಗುತ್ತಿವೆ. ಸಚಿವ ಸಂಪುಟದ ಸಹೋದ್ಯೋಗಿಗಳೂ ಈ ಪದ್ಧತಿ ಜಾರಿಗೆ ತರುತ್ತಾರೆ. ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಕಡತ ವಿಲೇವಾರಿ ಪ್ರಗತಿ ಯಾವ ಹಂತಕ್ಕೆ ಬಂದಿದೆ ಎಂಬುದನ್ನು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ವರದಿ ನೀಡಬೇಕು. ಈ ವರದಿಯನ್ನು ನಾನು, ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪರಿಶೀಲಿಸುತ್ತೇವೆ~ ಎಂದರು.ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗೆ ಭೇಟಿ ನೀಡಬೇಕು. ಯಾವುದೇ ಸಮಸ್ಯೆ ಇದ್ದರೂ ಸರ್ಕಾರದ ಮುಖ್ಯಸ್ಥರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಬೇಕು. ಕಡತ ವಿಲೇವಾರಿ ವಿಚಾರದಲ್ಲಿ ಗುಜರಾತ್ ಮತ್ತು ಬಿಹಾರ ರಾಜ್ಯಗಳ ಮಾದರಿಯನ್ನು ಅನುಸರಿಸಬಹುದು. ವಾರದಲ್ಲಿ ಒಂದು ದಿನ ಕಡತ ವಿಲೇವಾರಿಗೆ ಮೀಸಲಿಡಿ. ಇದರಲ್ಲಿ ಯಾವುದೇ ದೂರುಗಳು ಕೇಳಿಬಂದರೆ ಗಂಭೀರ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು.ಜನಸ್ಪಂದನ: ರಾಜ್ಯದ ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮವಾಗಿದ್ದ ಜನಸ್ಪಂದನ ಇತ್ತೀಚೆಗೆ ಸರಿಯಾಗಿ ನಡೆಯುತ್ತಿಲ್ಲ. ಇದು ಪುನರಾರಂಭಗೊಳ್ಳಬೇಕು. ಜನಸ್ಪಂದನದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚನೆ ನೀಡಿದರು.ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ಸಚಿವರಾದ ಆರ್. ಅಶೋಕ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಬಿ.ಎನ್. ಬಚ್ಚೇಗೌಡ, ಎಸ್.ಸುರೇಶ್‌ಕುಮಾರ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.ಭೂದಾಖಲೆ ದೋಷ: 6 ತಿಂಗಳಲ್ಲಿ ನಿವಾರಣೆ

ಬೆಂಗಳೂರು:
ಭೂದಾಖಲೆಗಳ ನಿರ್ವಹಣೆಯಲ್ಲಿ ಇರುವ ಲೋಪದೋಷಗಳನ್ನು ಆರು ತಿಂಗಳುಗಳಲ್ಲಿ ನಿವಾರಿಸಬೇಕು ಎಂದು ಡಿ.ವಿ. ಸದಾನಂದ ಗೌಡ ಸೂಚನೆ ನೀಡಿದರು. ಇಲ್ಲಿನ ಲೋಪದೋಷಗಳನ್ನು ಸರಿಪಡಿಸಿದಾಗ ಜನರಿಗೆ ಆಗುತ್ತಿರುವ ತೊಂದರೆ ಮತ್ತು ಸರ್ಕಾರಕ್ಕೆ ಆಗುತ್ತಿರುವ ನಷ್ಟಗಳೆರಡಕ್ಕೂ ಕಡಿವಾಣ ಬೀಳುತ್ತದೆ ಎಂದರು.`ಈಗ ಇರುವ ಲೋಪದೋಷಗಳನ್ನು ತಿದ್ದಿಕೊಂಡು ಭೂವ್ಯವಹಾರಗಳಲ್ಲಿ ಹೆಚ್ಚಿನ ಶಿಸ್ತು ತರಬೇಕು. ಭೂವ್ಯವಹಾರದಿಂದ ರಾಜ್ಯದಲ್ಲಿ ಆಗಿರುವ ಸಮಸ್ಯೆಗಳು ನಿಮಗೇ ಗೊತ್ತಿವೆ~ ಎಂದು ಚಟಾಕಿ ಹಾರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.