ಗುರುವಾರ , ಮೇ 13, 2021
24 °C

ಜಿಲ್ಲಾಧಿಕಾರಿ ಎದುರೇ ದಲಿತ ಸಂಘರ್ಷ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ದಲಿತರ ಅಹವಾಲು ಆಲಿಸಿ ಬಗೆ ಹರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಬೆಳಿಗ್ಗೆ ಕರೆಯಲಾಗ್ದ್ದಿದ ಪರಿಶಿಷ್ಟ ಜಾತಿ ಮತ್ತು ಪ.ಪಂಗಡಗಳ ಕುಂದುಕೊರತೆ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಗಳ ಬಣಗಳು ಪರಸ್ಪರ ಕಚ್ಚಾಟಕ್ಕಿಳಿದವು. ಇದರಿಂದಾಗಿ ಸಭೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಯಿತು.ಜಿಲ್ಲಾಧಿಕಾರಿ ಎಂ.ಟಿ.ರೇಜು, ಜಿಲ್ಲಾ ಪೊಲೀಸ್ ವರಿಷ್ಠ ವೈ.ಎಸ್.ರವಿಕುಮಾರ್, ಕುಂದಾಪುರ ಸಹಾಯಕ ಆಯುಕ್ತ ಸದಾಶಿವ ಪ್ರಭು ಹಾಗೂ ಇತರ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿಯೇ ಗದ್ದಲ, ಮಾತಿನ ಚಕಮಕಿ ನಡೆದು, ಒಂದು ಹಂತದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು.`ದಲಿತ ಸರ್ಕಾರಿ ನೌಕರರನ್ನು ಸಭೆಯಿಂದ ಹೊರಕ್ಕೆ ಹಾಕಿ~ ಎನ್ನುವ ವಿಚಾರದಲ್ಲಿ ನಡೆದ ಗದ್ದಲ ತಾರಕ್ಕೇರಿತು. ಕೊನೆಗೂ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ `ನಿಮ್ಮಲ್ಲಿಯೇ ಸಹಮತವಿಲ್ಲದಿದ್ದರೆ ಈ ಸಭೆಯನ್ನು ಮುಂದೂಡಲಾಗುವುದು~ ಎಂದು ಪ್ರಕಟಿಸುವ ಮೂಲಕ ಗಲಾಟೆಗೆ ತೆರೆ ಎಳೆದರು.ಮಾಧ್ಯಮದವರನ್ನು ಸಭೆಗೆ ಬಿಡಲ್ಲ: ಸಭೆ ಪ್ರಾರಂಭವಾಗುತ್ತಿದ್ದಂತೆ ಉಪಸ್ಥಿತರಿದ್ದ ಮಾಧ್ಯಮದವರನ್ನು ಕಂಡ ಜಿಲ್ಲಾಧಿಕಾರಿಗಳು `ಇದು ಅಧಿಕಾರಿಗಳ ಸಭೆ. ಮಾಧ್ಯಮದವರು ಹೊರಗೆಹೋಗಬೇಕು~ ಎಂದು ತಿಳಿಸಿದರು. ಆಗ ಸಭೆಯಲ್ಲಿ ಹಾಜರಿದ್ದ ದಲಿತ ಸಂಘರ್ಷ ಸಮಿತಿಯವರು `ಇದು ಅಧಿಕಾರಿಗಳ ಸಭೆಯಲ್ಲ, ಇದು ದಲಿತರ ಸಭೆ.ಮಾಧ್ಯಮದವರಿಗೆ ಇಲ್ಲಿನ ದಲಿತರ ಸ್ಥಿತಿಗತಿ ತಿಳಿಯಬೇಕು. ಹೀಗಾಗಿ ಮಾಧ್ಯಮದವರ ಎದುರೇ ಸಭೆ ನಡೆಯಬೇಕು. ನೆರೆಯ ಮಂಗಳೂರಿನಲ್ಲಿ ಕೂಡ ಇಂಥ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನೀಡುತ್ತಾರೆ~ ಎಂದು ಆಗ್ರಹಿಸಿದರು.ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ `ಬೇರೆ ಜಿಲ್ಲೆಯವರು ಏನು ಮಾಡುತ್ತಾರೆ ಎನ್ನುವುದು ನನಗೆ ಮುಖ್ಯವಲ್ಲ. ಆದರೆ ಅಧಿಕಾರಿಗಳ ಸಭೆಗೆ ನಾವು ಮಾಧ್ಯಮದವರನ್ನು ಬಿಡುವುದಿಲ್ಲ. ನಂತರ ಸಂಬಂಧಪಟ್ಟ ಅಧಿಕಾರಿಗಳು ಬೇಕಿದ್ದರೆ ಮಾಧ್ಯಮದವರಿಗೆ ಸಭೆಯ ವಿವರ ನೀಡಲಿ~ ಎಂದರು.ಅದನ್ನು ಪ್ರತಿಭಟಿಸಿದ ಕೆಲವರು, `ಇದೇನು ಸರ್ಕಾರಿ ದಲಿತ ನೌಕರರ ಸಭೆಯಾ ಅಥವಾ ನಿಜವಾದ ದಲಿತರ ಕುಂದು ಕೊರತೆ ಆಲಿಸುವ ಸಭೆಯಾ?~ ಎಂದು ಪ್ರಶ್ನಿಸಿ ಗದ್ದಲ ಎಬ್ಬಿಸಿದರು.ಆ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ಅಧ್ಯಕ್ಷ ಜಯನ್ ಮಲ್ಪೆ ಗದ್ದಲ ಮಾಡುವವರನ್ನು ಸುಮ್ಮನಿರಿಸಲು ಹೋದರು. ಆಗ ಗದ್ದಲ ಹೆಚ್ಚಿತು. `ದಲಿತ ಸರ್ಕಾರಿ ನೌಕರರೇ ದಲಿತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಕೂಡಲೇ ಅವರನ್ನು ಸಭೆಯಿಂದ ಹೊರಹಾಕಿ~ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಮುಖಂಡ ಉದಯ ತಲ್ಲೂರು ಆಗ್ರಹಿಸಿದರು.

 

ಇದರಿಂದ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ಹೆಚ್ಚಿತು. ಕೆಲಕಾಲ ಏನೂ ಕೇಳಿಸಿದ ಸ್ಥಿತಿ ನಿರ್ಮಾಣವಾಯಿತು. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠರು ಎಲ್ಲರೂ ಅವಾಕ್ಕಾಗಿದ್ದರು. ಕೊನೆಗೂ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಗದ್ದಲ ತಿಳಿಗೊಳಿಸಿದರು.`ನಿಮ್ಮಲ್ಲಿ ಸಹಕಾರ ಮನೋಭಾವ ಕಾಣುತ್ತಿಲ್ಲ. ನಿಮ್ಮಳಗೆ ಕಚ್ಚಾಟ  ಸರಿಯಲ್ಲ. ಮುಂದಿನ ಸಭೆಗೆ ನಿಮ್ಮ ಬಣಗಳಲ್ಲಿ ಪ್ರತಿಯೊಂದು ಬಣದ ಕೇವಲ 5 ಸದಸ್ಯರಿಗೆ ಮಾತ್ರವೇ ಅವಕಾಶ ನೀಡಲಾಗುತ್ತದೆ. ಅವರ ಹೆಸರನ್ನು ಕೂಡ ನೀವು ಮೊದಲೇ ನೀಡಬೇಕು. ನಿಮ್ಮಲ್ಲಿ ಸಹಮತ ಮೂಡುವವರೆಗೆ ನಾವು ಸಭೆ ನಡೆಸುವುದಿಲ್ಲ~ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ಬಣ, ಭೀಮವಾದ ಬಣ, ಕೃಷ್ಣಪ್ಪ ಬಣ, ಡಿಎಸ್‌ಎಸ್ ಹಾಗೂ ಸಮತಾದಳದವರು ಈ ಸಂದರ್ಭದಲ್ಲಿ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.