ಮಂಗಳವಾರ, ಮೇ 17, 2022
23 °C

ಜಿಲ್ಲೆಯಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಅರಿಶಿಣಕ್ಕೆ ಕನಿಷ್ಠ 12 ಸಾವಿರ ರೂ ಬೆಂಬಲ ಬೆಲೆ ನಿಗದಿಪಡಿಸುವುದರೊಂದಿಗೆ ಜಿಲ್ಲೆಯಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಘಟಕ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.ಈಚೆಗೆ ಬಿಳಿಗಿರಿರಂಗನ ಬೆಟ್ಟಕ್ಕೆ ಭೇಟಿ ನೀಡಿದ ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ.   ರವೀಂದ್ರನಾಥ್‌ಗೆ ರೈತ ಸಂಘದ ಮುಖಂಡರು ನಿಯೋಗದ ಮೂಲದ ತೆರಳಿ ಈ ಸಂಬಂಧ ಮನವಿ ಸಲ್ಲಿಸಿದರು.ಬೆಲೆ ಕುಸಿತದಿಂದ ಅರಿಶಿಣ ಬೆಳೆಗಾರರು ದಿಕ್ಕೆಟ್ಟಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ನಿಗದಿಪಡಿಸಬೇಕು. ನೀರಾ ಪೈಲಟ್ ಯೋಜನೆ ಘಟಕ ಸ್ಥಾಪಿಸಬೇಕು. ಜಿಲ್ಲೆ ಬರಗಾಲಪೀಡಿತ ಪ್ರದೇಶ. ಈ ಹಿನ್ನೆಲೆಯಲ್ಲಿ ಹನಿ ಮತ್ತು ತುಂತುರು ನೀರಾವರಿಗೆ ಶೇ. 100ರಷ್ಟು ಸಹಾಯಧನದ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ತೋಟಗಾರಿಕೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಹೀಗಾಗಿ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಟೊಮೆಟೊ ಸಂಸ್ಕರಣಾ ಘಟಕ ಸ್ಥಾಪಿಸಬೇಕು. ತೆಂಗಿನ ಮರಗಳಿಗೆ ನುಸಿಪೀಡೆ ಮತ್ತು ಕಪ್ಪುತಲೆ ಹುಳುಬಾಧೆ ಕಾಣಿಸಿಕೊಂಡಿದೆ. ಇದರ ನಿಯಂತ್ರಣಕ್ಕೆ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಜೈವಿಕ ನಿಯಂತ್ರಣ ಕಾರ್ಯಕ್ರಮದಡಿ ಪ್ಯಾರಾಸೈಟ್ ಉತ್ಪಾದಿಸುವ ಕೇಂದ್ರ ತೆರೆಯಬೇಕು ಎಂದು ಮನವಿ ಮಾಡಿದರು.ತೋಟಗಾರಿಕೆ ಬೆಳೆಗಳಿಗೆ ಕಳೆ ನಿಯಂತ್ರಿಸಲು ಪ್ಲಾಸ್ಟಿಕ್ ಹೊದಿಕೆ ಬಳಸಲಾಗುತ್ತಿದೆ. ಇದನ್ನು ರದ್ದುಪಡಿಸಬೇಕು. ಮಣ್ಣಿನ ಫಲವತ್ತತೆಯ ಸಂರಕ್ಷಣೆಗ ಪೂರಕವಾದ ಜೈವಿಕ ಹೊದಿಕೆ ಅಳವಡಿಕೆಗೆ ಕ್ರಮಕೈಗೊಳ್ಳುವುದು ಒಳಿತು. ಇದಕ್ಕಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನಡಿ ಪ್ರೋತ್ಸಾಹಧನ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.ತೋಟಗಾರಿಕೆ ವಿಷಯವನ್ನು 1ರಿಂದ 10ನೇ ತರಗತಿವರೆಗೆ ಪಠ್ಯದಲ್ಲಿ ಅಳವಡಿಸಬೇಕು. ಬಿಸಿಯೂಟಕ್ಕೆ ಬಾಳೆ ಹಣ್ಣು ವಿತರಣೆ ಮಾಡಬೇಕು. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ದರ ನಿಗದಿ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿವೆ. ಕಾರ್ಖಾನೆ ಮಾಲೀಕರ ಸಭೆ ಕರೆದು ಬೆಲೆ ನಿಗದಿಪಡಿಸ ಲಾಗುವುದು ಎಂದು ಮುಖ್ಯಮಂತ್ರಿ ನೀಡಿದ್ದ ಭರವಸೆ ಅನುಷ್ಠಾನಗೊಂಡಿಲ್ಲ. ಇಂದಿಗೂ ಸಭೆ ನಡೆಸಿಲ್ಲ. ಶೀಘ್ರವೇ, ಸರ್ಕಾರ ಕ್ರಮಕೈಗೊಳ್ಳದಿದ್ದರೆ ರೈತರೊಟ್ಟಿಗೆ ಅನಿರ್ದಿಷ್ಟಕಾಲ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಂ. ಮಹೇಶ್‌ಪ್ರಭು, ಹೊನ್ನೂರು ಪ್ರಕಾಶ್, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಸಿ. ಮಹೇಶ್‌ಕುಮಾರ್, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಸಿದ್ದರಾಜು, ತಂಗವೇಲು, ಹೊನ್ನೇಗೌಡನಹುಂಡಿ ಸಿದ್ದರಾಜು, ಚಾಮಲಾಪುರದ ಸಿದ್ದಲಿಂಗಸ್ವಾಮಿ ಇತರರು ಹಾಜರಿದ್ದರು.ಡಿ.ಇಡಿ ಫಲಿತಾಂಶ


ಚಾಮರಾಜನಗರ: ಕಳೆದ ಜುಲೈನಲ್ಲಿ ನಡೆದ ಡಿ.ಇಡಿ ಪರೀಕ್ಷೆಯಲ್ಲಿ ನಗರದ ಶ್ರೀರಾಮಚಂದ್ರ ಉಪಾಧ್ಯಾಯರ ಪ್ರಶಿಕ್ಷಣ ಸಂಸ್ಥೆಗೆ ಉತ್ತಮ ಫಲಿತಾಂಶ ಬಂದಿದೆ.ದ್ವಿತೀಯ ವರ್ಷದ ಡಿ.ಇಡಿ ಪರೀಕ್ಷೆ ಬರೆದಿದ್ದ 85 ಪ್ರಶಿಕ್ಷಣಾರ್ಥಿಗಳಲ್ಲಿ ಅತ್ಯುತ್ತಮ- 25, ಪ್ರಥಮದರ್ಜೆ- 41, ದ್ವಿತೀಯ ದರ್ಜೆ- 2 ಹಾಗೂ ತೃತೀಯ ದರ್ಜೆಯಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 90ರಷ್ಟು ಫಲಿತಾಂಶ ಬಂದಿದೆ.ಪ್ರಥಮ ಡಿ.ಇಡಿ ಪರೀಕ್ಷೆ ಬರೆದಿದ್ದ 55 ಪ್ರಶಿಕ್ಷಣಾರ್ಥಿಗಳಲ್ಲಿ 46 ಮಂದಿ ತೇರ್ಗಡೆಯಾಗಿದ್ದು, ಶೇ. 85ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.