ಮಂಗಳವಾರ, ಮೇ 18, 2021
28 °C
ಧರೆಗುರುಳಿದ ಮರಗಳು* ಹಾರಿಹೋದ ಹೆಂಚು* ಕುಸಿದ ಮನೆ

ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಉತ್ತಮ ಮಳೆಯಾಗಿದೆ. ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾದಲ್ಲಿ ದಿನವಿಡೀ ಮಳೆಯಾಗಿದೆ.ನಿರಂತರ ಮಳೆಯಿಂದಾಗಿ ಕರಾವಳಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆಯೊಂದಿಗೆ ಆಗಾಗ ಗಾಳಿ ಬೀಸಿದ್ದು ಮರ, ಗಿಡಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ. ಬೆಳಿಗ್ಗೆ 11ರ ಸುಮಾರಿಗೆ ಆರಂಭವಾದ ಮಹಿಳೆಯಿಂದಾಗಿ ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಅಂಕೋಲಾ ತಾಲ್ಲೂಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.ಮಳೆಯಿಂದಾಗಿ ಜಿಲ್ಲೆಯ ಕಾಳಿ, ಗಂಗಾವಳಿ, ಅಘನಾಶಿನಿ ಮತ್ತು ಶರಾವತಿ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಮಳೆಯೊಂದಿಗೆ ಆಗಾಗ ಗಾಳಿಯೂ ಬೀಸುತ್ತಿದ್ದು, ಅಲ್ಲಲ್ಲಿ ಮರಗಳು ಧರೆಗುರುಳಿದ ಬಗ್ಗೆ ವರದಿಯಾಗಿದೆ.

ಸೂಪಾ, ಕೊಡಸಳ್ಳಿ ಮತ್ತು ಕದ್ರಾ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಸಣ್ಣ ಪ್ರಮಾಣದ ಹೆಚ್ಚಳ ಕಂಡುಬಂದಿದೆ.ಸೋಮವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡು ಜಿಲ್ಲೆಯಲ್ಲಿ 25.7 ಸೆಂ. ಮೀ ಮಳೆಯಾಗಿದೆ. ಅಂಕೋಲಾ- 24.4, ಭಟ್ಕಳ- 43.6, ಹಳಿಯಾಳ 6.8, ಹೊನ್ನಾವರ 28.5, ಕಾರವಾರ 14.8, ಕುಮಟಾ 26, ಮುಂಡಗೋಡ 13, ಸಿದ್ದಾಪುರ 44.8, ಶಿರಸಿ 38.5, ಜೋಯಿಡಾ 19, ಹಾಗೂ ಯಲ್ಲಾಪುರದಲ್ಲಿ 22.8ಮಿ.ಮೀ ಮಳೆಯಾಗಿದೆ. ಜೂನ್ 1 ರಿಂದ 17 ರವರೆಗೆ ಸರಾಸರಿ 415.2 ಮಿ.ಮೀ ಮಳೆಯಾಗಿದೆ.ಕೃಷಿ ಜಮೀನು ಜಲಾವೃತ

ಭಟ್ಕಳ: ತಾಲ್ಲೂಕಿನಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ಸಂಜೆವರೆಗೆ ನಿರಂತರವಾಗಿ ಸುರಿದ ಗಾಳಿ ಮಳೆಯಿಂದಾಗಿ ನೂರಾರು ಮರಗಳು ಧರೆಗುರುಳಿ ಮನೆಗಳ ಹಂಚು ಹಾರಿಹೋಗಿದ್ದಲ್ಲದೇ ಮನೆಯೊಂದು ಕುಸಿದು ಬಿದ್ದು ಹಾನಿಯಾಗಿದೆ.ಮಳೆಯ ರಭಸದ ಜತೆಗೆ ಗಾಳಿಯೂ ಸೇರಿಕೊಂಡಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿನ ಅಡಿಕೆ ತೆಂಗಿನ ತೋಟಗಳಲ್ಲಿ ನೂರಾರು ಮರಗಳು ಧರೆಗುರುಳಿವೆ. ಪಟ್ಟಣದ ಉಮ್ಮರ್ ಸ್ಟ್ರೀಟ್, ಡಾರಂಟ, ಡೊಂಗರಪಳ್ಳಿ, ಬೆಳ್ನಿ ಸೇರಿದಂತೆ ಹಲವೆಡೆ  ಮರಗಳು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಯಿತು. ಜಾಲಿಯಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದಿದ್ದರಿಂದ ತಂತಿಗಳೆಲ್ಲಾ ತುಂಡಾದವು.ಇಲ್ಲಿನ ಮೂಸಾನಗರದಲ್ಲಿ ಇಕ್ಬಾಲ್ ಪಠಾಣ್ ಎಂಬುವರಿಗೆ ಸೇರಿದ ಮನೆಯೊಂದರ ನೂರಾರು ಹಂಚುಗಳು ಗಾಳಿಮಳೆಗೆ ಹಾರಿಹೋಗಿ ಹಾನಿಯಾಗಿದೆ. ಅದೇ ರೀತಿ ಪಟ್ಟಣದ ಕೊರಗರಕೇರಿಯಲ್ಲಿ ರಮೇಶ ಮುತ್ತು ಗೋಪಾಲ ಎಂಬವರ ಮನೆ ಮೇಲೆ ಮರ ಬಿದ್ದಿದ್ದರಿಂದ ಮನೆ ಕುಸಿದು ಹಾನಿಯಾಗಿದೆ.  ಪಟ್ಟಣದ ರಸ್ತೆಗಳಲ್ಲೆಲ್ಲಾ ಮಳೆಯ ನೀರು ತುಂಬಿಕೊಂಡು ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿತು. ಮಳೆಯ ನೀರು ಪುರಸಭೆಯ ನೆಲಮಾಳಿಗೆಗೆ ನೀರು ನುಗ್ಗಿದೆ.

ಕೃಷಿಭೂಮಿಗಳೆಲ್ಲಾ ಜಲಾವೃತಗೊಂಡಿದ್ದರಿಂದ ಕೃಷಿ ಚಟುವಟಿಕೆಗಳಿಗೆ ಸ್ವಲ್ಪ ಹಿನ್ನೆಡೆಯಾಗಿದೆ.ಮೂರು ದಿನಗಳಿಂದ ಬಿಸಿಲಿನ ವಾತಾವರಣವಿತ್ತು. ಆದರೆ ಭಾನುವಾರ ತಡರಾತ್ರಿಯಿಂದ ಪುನಃ ಮಳೆರಾಯನ ಆಗಮನವಾಗಿದ್ದು, ಸೋಮವಾರ ಸಂಜೆವರೆಗೂ ಕಪ್ಪು ಮೋಡಗಳನ್ನು ಆವರಿಸಿಕೊಂಡಿದ್ದ ಆಕಾಶದಿಂದ ಮಳೆ ಧೋ ಎಂದು ಸುರಿಯುತ್ತಲೇ ಇತ್ತು. ಮುಂದುವರಿದ ಕಡಲ್ಕೊರೆತ

ಅಂಕೋಲಾ: ತಾಲ್ಲೂಕಿನಲ್ಲಿ ಸೋಮವಾರವು ಕೂಡ ಮಳೆ ಸುರಿಯುತ್ತಿದ್ದು, ಸಮುದ್ರ ತೀರ ಪ್ರದೇಶಗಳಲ್ಲಿ ಕಡಲ್ಕೊರೆತ ಮುಂದುವರೆದಿದೆ. ಗಾಬಿತಕೇಣಿಯಲ್ಲಿ ಬೃಹದಾಕಾರದ ಅಲೆಗಳು ಏಳುತ್ತಿದ್ದು, ತೀರ ಪ್ರದೇಶ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದೆ.ಶಾಸಕ ಸತೀಶ ಸೈಲ್ ಕಡಲ್ಕೊರೆತ ಉಂಟಾದ ಹಾರವಾಡ, ಗಾಬಿತಕೇಣಿ, ಭಾವಿಕೇರಿ, ಮಂಜಗುಣಿ ಪ್ರದೇಶಗಳಿಗೆ  ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಗತ್ಯವಿದ್ದಲ್ಲಿ ತುರ್ತು ಕ್ರಮ ಕೈಗೊಳ್ಳಲು ಬಂದರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಶಾಸಕರ ಸೂಚನೆಯ ಮೇರೆಗೆ ಬಂದರು ಅಧಿಕಾರಿಗಳು ಉಸುಕಿನ ಚೀಲವನ್ನು ಹಾಕುವ ಮೂಲಕ ಅಲ್ಲಲ್ಲಿ ತುರ್ತುಕ್ರಮ ಕೈಗೊಳ್ಳುತ್ತಿದ್ದಾರೆ.ಬಿರುಸುಗೊಂಡ ಮಳೆ

ಸಿದ್ದಾಪುರ: ತಾಲ್ಲೂಕಿನಾದ್ಯಂತ ಭಾನುವಾರ ಕೊಂಚ ಮಟ್ಟಿಗೆ ಬಿಡುವು ನೀಡಿದ್ದ ಮಳೆ, ಸೋಮವಾರ ಮತ್ತೊಮ್ಮೆ ಬಿರುಸುಗೊಂಡಿದೆ. ಬೆಳಿಗ್ಗೆ ಧಾರಾಕಾರವಾಗಿ ಸುರಿದ ಮಳೆ ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ  ಕಾಲ ಬಿಡುವು ನೀಡಿತು, ಸಂಜೆಯಾಗುತ್ತಿದ್ದಂತೆ ಮತ್ತೆ ಒಂದೇ ಸಮನೆ ಸುರಿಯತೊಡಗಿತು.ಸೋಮವಾರ ಬೆಳಗಿನವರೆಗಿನ 24ಗಂಟೆಗಳ ಅವಧಿಯಲ್ಲಿ ತಾಲ್ಲೂಕಿನ ಮಳೆ ಮಾಪನ ಕೇಂದ್ರದಲ್ಲಿ 44.8 ಮಿ.ಮೀ. ಮಳೆ  ದಾಖಲಾಗಿದೆ. ಇದುವರೆಗೆ ಒಟ್ಟು 434.6 ಮಿ.ಮೀ. ಮಳೆ ಸುರಿದಿದ್ದು,  ಕಳೆದ ವರ್ಷ ಇದೇ ಅವಧಿಯವರೆಗೆ ಒಟ್ಟು 183.6 ಮಿ.ಮೀ. ಮಳೆ ದಾಖಲಾಗಿತ್ತು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.ಶಾಸಕರ ಮಾದರಿ ಶಾಲೆ ರಸ್ತೆಗೆ ಹೆದ್ದಾರಿ ಚರಂಡಿ ನೀರು

ಕುಮಟಾ: ಪಟ್ಟಣದಲ್ಲಿ ಮಳೆಯಾದಾಗೆಲ್ಲ ರಾಷ್ಟ್ರೀಯ ಹೆದ್ದಾರಿ ಚರಂಡಿ ನೀರು ಪಕ್ಕದ ನೆಲ್ಲಿಕೇರಿ ಶಾಸಕರ ಮಾದರಿ ಶಾಲೆಯ ರಸ್ತೆಗೆ ಹರಿಯುವುದರಿಂದ ವಿದ್ಯಾರ್ಥಿಗಳು ಓಡಾಡಲು ಪರದಾಡುವಂತಾಯಿತು.ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಜೆಸಿಬಿ ಯಂತ್ರ ಬಳಸಿ ಹೆದ್ದಾರಿ ಚರಂಡಿಯಲ್ಲಿ ತುಂಬಿದ್ದ ಹೂಳನ್ನು ಎತ್ತಿ ಪಕ್ಕದಲ್ಲಿ ಹಾಕಿದ್ದರಿಂದ ಸರಾಗವಾಗಿ ಹರಿಯುವ ಮಳೆ ನೀರು ಇಲ್ಲಿಯ ಕಾಮತ್ ಹೋಟೆಲ್ ಪಕ್ಕದ ನೆಲ್ಲಿಕೇರಿ ಶಾಸಕರ ಮಾದರಿ ಶಾಲೆಯ ರಸ್ತೆಯ ಮೇಲೆ ತುಂಬಿ ಹರಿಯುತ್ತಿದೆ.  ಹೆದ್ದಾರಿಯಿಂದ ಒಳಗೆ ಶಾಲೆಗೆ ಹೋಗುವ ರಸ್ತೆಗೆ ಗಟಾರವೇ ಇಲ್ಲವಾಗಿದೆ. ಶಾಲೆ ಪ್ರವೇಶ ದ್ವಾರದಲ್ಲಿ ನೀರು ಹರಿಯುವ ವ್ಯವಸ್ಥೆಯಂತೂ ಸಂಪೂರ್ಣ ಹದಗೆಟ್ಟಿದ್ದು,  ಕೆಸರು ಮಡುಗಟ್ಟಿದೆ.ಶಾಲೆಯ ರಸ್ತೆಯುದ್ದಕ್ಕೂ ಚಾಚಿಕೊಂಡಿರುವ ಮರ-ಗಿಡಗಳ ಕಡಿದ ಟೊಂಗೆಗಳನ್ನು ರಸ್ತೆಯಲ್ಲಿಯೇ ಎಸೆಯಲಾಗಿದ್ದು, ರಸ್ತೆಯೇ ಗಟಾರವಾಗಿ ಮಾರ್ಪಟ್ಟಂತಿದೆ. ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ಓದುವ ಸಾವಿರಾರು ವಿದ್ಯಾರ್ಥಿಗಳು ಜೋರು ಮಳೆಯಲ್ಲಿ ಚರಂಡಿ ಕೆಸರು ನೀರನ್ನು ಹಾದುಕೊಂಡು ನಿತ್ಯ ಶಾಲೆಗೆ ಬರಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.