ಬುಧವಾರ, ಮೇ 25, 2022
30 °C

ಜಿಲ್ಲೆಯಲ್ಲಿ ಶೇ 9.8 ಬಿತ್ತನೆ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮುಂಗಾರು ಹಂಗಾಮು ಇನ್ನೂ ಮುಗಿದಿಲ್ಲ. ಜುಲೈ ಮೊದಲ ಮತ್ತು 2ನೇ ವಾರದವರೆಗೆ ಬಿತ್ತನೆಗೆ ಅವಕಾಶವಿದೆ. ಇನ್ನೂ 20-25 ದಿನಗಳು ದೊರೆಯುತ್ತವೆ. ಸತತವಾಗಿ ಎರಡನೇ ಬಾರಿ ಬರ ಎದುರಾದ ಪರಿಸ್ಥಿತಿ ಇದುವರೆಗೆ ಜಿಲ್ಲೆಯಲ್ಲಿ ಬಂದಿಲ್ಲ. ಆದ್ದರಿಂದ ಸದ್ಯಕ್ಕೆ ಆಶಾವಾದಿಯಾಗಿರೋಣ...- ವಾರ್ತಾ ಇಲಾಖೆ ಹಾಗೂ ಮಾಧ್ಯಮ ಬಳಗದಿಂದ ವಾರ್ತಾ ಇಲಾಖೆ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಮಾಧ್ಯಮ ಸಂವಾದ~ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್. ಕೃಷ್ಣಮೂರ್ತಿ ಅವರು ಜಿಲ್ಲೆಯ ರೈತರಿಗೆ ಹೇಳಿದ ಮಾತುಗಳಿವು.ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 3.58 ಲಕ್ಷ ಹೆಕ್ಟೇರ್, ಹಿಂಗಾರಿನಲ್ಲಿ 60 ಸಾವಿರ ಹೆಕ್ಟೇರ್, ಬೇಸಿಗೆಯಲ್ಲಿ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಈ ಬಾರಿ ಮುಂಗಾರಿನಲ್ಲಿ ಇದುವರೆಗೆ ಕೇವಲ 36,950 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಮೂಲಕ ಶೇ 9.8ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ.

 

ಕಳೆದ ವರ್ಷ ಇದೇ ಅವಧಿಯಲ್ಲಿ ಇನ್ನೂ ಕಡಿಮೆ ಬಿತ್ತನೆಯಾಗಿತ್ತು. 28,950 ಹೆಕ್ಟೇರ್ ಕಳೆದ ವರ್ಷ ಇದೇ ಅವಧಿಗೆ ಬಿತ್ತನೆಯಾಗಿ ಶೇ 8.1ರಷ್ಟು ಪ್ರಗತಿಯಾಗಿತ್ತು. ಜೂನ್ ತಿಂಗಳಲ್ಲಿ ಮಳೆಯಾಗದ ಪರಿಣಾಮ ಮುಂಗಾರಿನ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ವಿವರಿಸಿದರು.ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಜಿಲ್ಲೆಯ ವಾರ್ಷಿಕ ಸರಾಸರಿ ಮಳೆ 486.6 ಮಿ.ಮಿ ಮತ್ತು ಇದುವರೆಗಿನ ವಾಡಿಕೆ ಮಳೆ 140.4 ಮಿ.ಮೀ. ಆದರೆ, ವಾಡಿಕೆಗಿಂತ ಹೆಚ್ಚಾಗಿ 176.2 ಮಿ.ಮೀ. ಮಳೆಯಾಗಿದ್ದರೂ ಸಕಾಲಿಕವಾಗಿ ಆಗಿಲ್ಲ. ಮೇ 16ರಿಂದ ಮಳೆ ಸುರಿದಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚು ಮಳೆಯಾಗಿದೆ. ಜೂನ್‌ನಲ್ಲಿ 38.5 ಮಿ.ಮೀ. ಮಳೆ ಆಗಬೇಕಾಗಿತ್ತು. ಆದರೆ, ಕೇವಲ 7.3 ಮಿ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದರು.ಮಳೆ ಕೊರತೆಯಿಂದ ಬಾಡುತ್ತಿವೆ

ಈಗಾಗಲೇ ಪೂರ್ವ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಬೆಳೆಗಳಾದ ಹೆಸರು, ಎಳ್ಳು ಮುಂತಾದ ಬೆಳೆಗಳು ಹೂವು ಮತ್ತು ಕಾಯಿ ಬಿಡುವ ಹಂತದಲ್ಲಿದ್ದು ಮಳೆ ಕೊರತೆಯಿಂದ ಬಾಡುತ್ತಿವೆ. ಅರೆ ನೀರಾವರಿಯಲ್ಲಿ ಬಿತ್ತನೆಯಾದ ಬೆಳೆಗಳು ಉತ್ತಮ ಸ್ಥಿತಿಯಲ್ಲಿವೆ.ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹತ್ತಿ ಬೆಳೆಯಲು ಒಲವು ತೋರಿದ್ದು, 13,999 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪ್ರಸ್ತುತ ಖುಷ್ಕಿ ಜಮೀನಿನಲ್ಲಿರುವ ಹತ್ತಿ ಬಾಡುವ ಸ್ಥಿತಿ ತಲುಪಿದೆ ಎಂದು ಬೆಳೆಗಳ ಪರಿಸ್ಥಿತಿ ಕುರಿತು ತಿಳಿಸಿದರು.ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ಕೊರತೆಯಾಗದಂತೆ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಿತ್ತನೆ ಮಾಡಲು ಬೇಕಾಗುವ ಬಿತ್ತನೆ ಬೀಜವನ್ನು ರೈತರು ಸಂಪರ್ಕ ಕೆಂದ್ರಗಳಿಂದ ಖರೀದಿ ಮಾಡಬಹುದಾಗಿದೆ ಎಂದು ಹೇಳಿದರು.ರೈತರಿಗೆ ಬೇಕಾದ ಮಾಹಿತಿ ಇಲಾಖೆಯ ಕ್ಷೇತ್ರ ಸಿಬ್ಬಂದಿ ಮೂಲಕ ಸಾಧ್ಯವಾದಷ್ಟು ಪ್ರಮಾಣದಲ್ಲಿ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬೆಳೆಗಳಿಗೆ ರೋಗಗಳ ಬಾಧೆ ಹೆಚ್ಚಿನ ಪ್ರಮಾಣದಲ್ಲಿ ತಗಲುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ತಜ್ಞರು ತಿಳಿಸುವ ಪ್ರಮಾಣದಲ್ಲಿ ಬೆಳೆಗಳಿಗೆ ಔಷಧಿ ಸಿಂಪಡಿಸಿದರೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ. ಆದರೆ, ರೈತರು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಔಷಧಿ ಸಿಂಪಡಿಸುವುದರಿಂದ ರಾಸಾಯನಿಕ ಅಂಶ ಹೆಚ್ಚುತ್ತದೆ ಎಂದರು.ಸಾವಯವ ಗೊಬ್ಬರ ಬಳಸಲು ಸಲಹೆ

ಮಳೆ ನೀರು ಹರಿದು ಹೋಗುವುದರಿಂದ ಭೂಮಿಯಲ್ಲಿರುವ ಫಲವತ್ತತೆ ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮಳೆಯ ನೀರನ್ನು ಹರಿದು ಹೋಗಲು ಬಿಡದೆ ತಡೆದು ನಿಲ್ಲಿಸಿ ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ತೇವಾಂಶದ ಪ್ರಮಾಣ ಹೆಚ್ಚಿಸಬಹುದು.ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರ ನೀಡುವುದರಿಂದ ಉತ್ತಮ ಬೆಳೆ ಬೆಳೆಯುವುದೊಂದಿಗೆ ಆಹಾರವು ಸಹಾ ಸದೃಢವಾಗಿರುತ್ತದೆ.

ಜಿಲ್ಲೆಯ ಮಣ್ಣಿನಲ್ಲಿ ಸಾರಜನಕ, ರಂಜಕ, ಪೊಟ್ಯಾಷಿಯಂ, ಜಿಂಕ್, ಗಂಧಕ ಪ್ರಮಾಣ ಕಡಿಮೆ ಇದ್ದು, ಭೂಚೇತನ ಕಾರ್ಯಕ್ರಮದ ಮೂಲಕ ಫಲವತ್ತತೆ ಹೆಚ್ಚಿಸಿ ಇಳುವರಿ ವೃದ್ಧಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.ಗಾಳಿ ವೇಗ ಹೆಚ್ಚಿರುವುದರಿಂದ ಫಲವತ್ತಾದ ಮಣ್ಣು ಸಹ ಕೊಚ್ಚಿಹೋಗುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮಳೆ ಬಾರದಿದ್ದರೂ ಪರ್ಯಾಯ ಬೆಳೆಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು, ಕೃಷಿ ವಿಶ್ವವಿದ್ಯಾಲಯದ ತಜ್ಞರನ್ನು ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿದರು.ರೈತರು ಸಮಗ್ರ ಸಾವಯವ ಕೃಷಿ ಪದ್ಧತಿ ಅನುಸರಿಸಿದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ಮಳೆಯಿಂದ ಬಿದ್ದ ನೀರನ್ನು ಹರಿದು ಹೋಗಲು ಬಿಡದೇ ಅದನ್ನು ಭೂಮಿಯಲ್ಲಿ ಇಂಗಿಸುವ ಕಾರ್ಯ ಪ್ರತಿಯೊಂದು ಜಮೀನುಗಳಲ್ಲಿ ಆದಾಗ ಮಾತ್ರ ಭೂಮಿಯತಲ್ಲಿ ತೇವಾಂಶದ ಪ್ರಮಾಣ ಹೆಚ್ಚುತ್ತದೆ ಎಂದರು.

ಕಳೆದ ವರ್ಷ ಜಿಲ್ಲೆಯಲ್ಲಿ ಕೇವಲ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಅಡಿಯಲ್ಲಿ 5,894 ಮಂದಿ ನೋಂದಾಯಿಸಿ ರೂ 52 ಲಕ್ಷ ಪ್ರೀಮಿಯಂ ಪಾವತಿಸಿದ್ದರು. ಈ ಪೈಕಿ 5,656 ರೈತರಿಗೆ ರೂ. 1.91 ಕೋಟಿ ವಿಮಾ ಮೊತ್ತ ಪಾವತಿಸಲಾಗಿದೆ ಎಂದು ವಿವರಿಸಿದರು.ಬಬ್ಬೂರಿನ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಚಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಪಟ್ಟಂತೆ ಬೇಕಾದ ತಾಂತ್ರಿಕತೆ ರೈತರಿಗೆ ನೀಡಲಾಗುತ್ತಿದೆ. ಬೆಳೆಗೆ ರೋಗ ಬಂದಾಗಲೂ ಸಹ ಅವುಗಳನ್ನು ಹೋಗಲಾಡಿಸಲು ಬೇಕಾದ ಔಷಧಿಗಳನ್ನು ಕಂಡುಹಿಡಿಯುವ ಮೂಲಕ ರೈತರಿಗೆ ನೆರವಾಗುತ್ತಿದೆ ಎಂದರು.ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಆರ್.ಡಿ. ಪಾಟೀಲ್ ಉಪಸ್ಥಿತರಿದ್ದರು. ವಾರ್ತಾಧಿಕಾರಿ ಮಹೇಶ್ವರಯ್ಯ ಸ್ವಾಗತಿಸಿದರು. ಸಹಾಯಕ ವಾರ್ತಾಧಿಕಾರಿ ಧನಂಜಯ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.