ಶನಿವಾರ, ಮೇ 21, 2022
28 °C
ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಭರವಸೆ

`ಜಿಲ್ಲೆಯಲ್ಲಿ 20 ಸಾವಿರ ಶೌಚಾಲಯ ನಿರ್ಮಾಣ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸರ್ಕಾರದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 20 ಸಾವಿರ ಶೌಚಾಲಯಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ' ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು.ನಗರದ ರೆಡ್ಡಿ ಸಮುದಾಯ ಭವನದಲ್ಲಿ ಶುಕ್ರವಾರ ಶಿವಮೊಗ್ಗ ಹಾಲು ಒಕ್ಕೂಟ, ಕೆನರಾ ಬ್ಯಾಂಕ್, ನಬಾರ್ಡ್ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (ಎಸ್‌ಕೆಆರ್‌ಡಿಪಿ) ಸಹಯೋಗದಲ್ಲಿ ಜಿಲ್ಲೆಯಲ್ಲಿ ನೂತನವಾಗಿ ಸ್ಥಾಪಿಸಲಾದ 90 ಹಾಲು ಉತ್ಪಾದಕರ ಸಹಕಾರ ಸಂಘಗಳ ಉದ್ಘಾಟನೆ ಹಾಗೂ 6 ಸಾವಿರ ಮಹಿಳಾ ಸ್ವ ಸಹಾಯ ಸಂಘಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ 600 ಗೋಬರ್ ಗ್ಯಾಸ್ ಸಂಪರ್ಕ ಒದಗಿಸುವುದು, ಫ್ಲೋರೈಡ್ ಸಮಸ್ಯೆಯಿಂದ ಬಳಲುತ್ತಿರುವ ಜಿಲ್ಲೆಯ 10 ಕಡೆಗಳಲ್ಲಿ ಶುದ್ಧಗಂಗಾ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ' ಎಂದು ಭರವಸೆ ನೀಡಿದರು.`ಎಸ್‌ಕೆಆರ್‌ಡಿಪಿ ಸಂಸ್ಥೆಯಿಂದ ಈಗ ಮಹಿಳಾ ಸಂಘ ರಚಿಸಿದ್ದು, ಮುಂದಿನ ವರ್ಷ 8,500 ಪುರುಷ ಪ್ರಗತಿ ಬಂಧು ಸ್ವ ಸಹಾಯ ಸಂಘಗಳನ್ನು ರಚಿಸಿ, ಕೃಷಿ ಮತ್ತು ಹೈನುಗಾರಿಕೆ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ' ಎಂದು ಅವರು ತಿಳಿಸಿದರು. ಮುಂದಿನ ವರ್ಷದಲ್ಲಿ ನಬಾರ್ಡ್ ಮತ್ತು ಕೆನರಾ ಬ್ಯಾಂಕ್ ಸಹಕಾರದೊಂದಿಗೆ 4,450 ಸ್ವ ಸಹಾಯ ಸಂಘಗಳನ್ನು ರಚಿಸಿ, ಸುಮಾರು ರೂ 175 ಕೋಟಿಗಳಷ್ಟು ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಲಾಗಿದೆ ಎಂದರು.ಕ್ಷೀರ ಕ್ರಾಂತಿಯಾಗಲಿ...

ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆ ಕೊರತೆ. ನೀರಿನ ಸಮಸ್ಯೆ ಅಧಿಕವಾಗಿದೆ. ರಾಜಸ್ತಾನ ಕೂಡ ಮರಳುಗಾಡು ಪ್ರದೇಶವಾಗಿದ್ದು, ಅಲ್ಲೂ ನೀರಿನ ಸಮಸ್ಯೆಯಿದೆ. ಆದರೆ,ಅಲ್ಲಿ `ಕ್ಷೀರ ಕ್ರಾಂತಿ'ಯಾಗಿದೆ. ಈ ಜಿಲ್ಲೆಯಲ್ಲೂ ಕ್ಷೀರಕ್ರಾಂತಿಯಾಗಬೇಕು. ಇದಕ್ಕಾಗಿ ಸಂಸ್ಥೆಯಿಂದ 90 ಕಡೆ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಜಿಲ್ಲೆಯ 20 ಸಾವಿರ ಕುಂಟುಂಬಗಳಿಗೆ ಉಪಯೋಗವಾಗಲಿದೆ ಎಂದರು.`ಎಸ್‌ಕೆಆರ್‌ಡಿಪಿ ಸಂಸ್ಥೆಯು ತನ್ನ ಸದಸ್ಯರ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸಲಿದೆ. ಇದಕ್ಕಾಗಿ ಸೇವಾ ಪ್ರತಿನಿಧಿಗಳನ್ನು ನೇಮಿಸಲಾಗಿದೆ. ಇವರು ನಿಮ್ಮ ಗ್ರಾಮಗಳಿಗೆ ಭೇಟಿ ನೀಡಿ, ಮನೆ ಬಾಗಿಲ್ಲಲೇ ಬ್ಯಾಂಕ್ ಖಾತೆ ಮಾಡಿಸುತ್ತಾರೆ. ಉಳಿತಾಯದ ಹಣವನ್ನು ಸಂಗ್ರಹಿಸಿ ನಿಮ್ಮ ವ್ಯವಹಾರ ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಡುತ್ತಾರೆ' ಎಂದು ಭರವಸೆ ನೀಡಿದರು.ವರ್ಷದಲ್ಲಿ ರೂ 10 ಕೋಟಿ...

`ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‌ಕೆಆರ್‌ಡಿಪಿ ಸಂಸ್ಥೆ ಆರಂಭವಾಗಿ ಒಂದು ವರ್ಷವಾಗಿದೆ. ಸಂಸ್ಥೆಯ ಮಾಗದರ್ಶನದಲ್ಲಿ ರಚನೆಯಾದ ಸ್ವಸಹಾಯ ಸಂಘಗಳ ಸದಸ್ಯರು ವಾರಕ್ಕೆ ರೂ 10 ರೂಪಾಯಿಯಂತೆ ಉಳಿತಾಯ ಮಾಡಿದ್ದಾರೆ. ಒಂದು ವರ್ಷದಲ್ಲಿ ಹಣ ರೂ 10 ಕೋಟಿ ತಲುಪಿದೆ. ಇದೇ ರೀತಿ ರಾಜ್ಯದ 22 ಜಿಲ್ಲೆಯಲ್ಲಿ 3 ಲಕ್ಷದ 30 ಸಾವಿರ ಸ್ವ ಸಹಾಯ ಸಂಘಗಳು ಉಳಿತಾಯ ಮಾಡಿದ ಹಣ ರೂ 720 ಕೋಟಿಗೆ ತಲುಪಿದೆ' ಎಂದು ಹೆಗ್ಗಡೆ ಅವರು ಅಂಕಿ ಅಂಶ ನೀಡಿದರು.`ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ನಬಾರ್ಡ್ ಮತ್ತು ಬ್ಯಾಂಕ್‌ಗಳು ನಮ್ಮ ಸಂಸ್ಥೆಯ ಮೂಲಕ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು ಮಹಿಳೆಯರ ಏಳಿಗೆ ಹಾಗೂ ಭವಿಷ್ಯಕ್ಕಾಗಿ ಸೇವೆ ನೀಡಲಾಗುತ್ತಿದೆ. ನಮ್ಮ ಯೋಜನೆಗಳ ಯಶಸ್ಸಿನಲ್ಲಿ ಜನರ ಪಾಲಿದೆ.ಭಗವಂತನ ಕೃಪೆ ಇದೆ. ಇವೆಲ್ಲವನ್ನೂ ಪಡೆಯಲು ನಮ್ಮ ಕರ್ತವ್ಯವನ್ನು ಮಾಡಬೇಕಾಗುತ್ತದೆ. ಆಚಾರ, ವಿಚಾರಗಳು ಮನೆಯಲ್ಲಿರಲಿ. ಆದರೆ ಒಂದು ಕಡೆ ಸೇರುವ ಸಂಘದಲ್ಲಿ ಎಲ್ಲರೂ ಸಮಾನರು' ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಥೆಯ ಯಶೋಗಾಥೆ

`ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ರೈತರೊಬ್ಬರು ಎರಡು ಎಕರೆ ಜಮೀನಿನಲ್ಲಿ ದಾಳಿಂಬೆ, ತೆಂಗು, ಹೂವು ಇನ್ನಿತರ ತೋಟಗಾರಿಕಾ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಇದೇ ವ್ಯಕ್ತಿ ಈ ಹಿಂದೆ ಮದ್ಯ ವ್ಯಸನಿಯಾಗಿದ್ದರು. ಪ್ರತಿ ನಿತ್ಯ ರೂ 200 ಹಣವನ್ನು ಮದ್ಯಕ್ಕಾಗಿ ಖರ್ಚು ಮಾಡುತ್ತಿದ್ದರು.

ಮದ್ಯ ಬಿಟ್ಟು ಕೃಷಿಗೆ ಚಟುವಟಿಕೆಗೆ ತೊಡಗಿಸಿ ಕೊಂಡಿದ್ದರಿಂದ ಅವರ ಬದುಕು ಬಂಗಾರವಾಗಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ಅನೇಕರು ಸ್ವಾವಲಂಬಿ ಬದುಕಿಗಾಗಿ ಸ್ವ ಸಹಾಯ ಸಂಘಗಳನ್ನು ರಚಿಸಿಕೊಂಡು ರೂ 10 ರಿಂದ ಉಳಿತಾಯ ಆರಂಭಿಸಿ, ಈಗ ವಾರಕ್ಕೆ ರೂ 1 ಸಾವಿರ ಉಳಿತಾಯ ಮಾಡುವ ಸ್ಥಿತಿ ತಲುಪಿದ್ದಾರೆ. ಆ ಹಣದಿಂದ ಆಸ್ತಿ ಖರೀದಿಸುತ್ತಿದ್ದಾರೆ' ಎಂದು ವೀರೇಂದ್ರ ಹೆಗ್ಗಡೆ ಅವರು ಸ್ವಸಹಾಯ ಸಂಘದ ಯಶಸ್ಸಿನ ಕಥೆ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.