ಶುಕ್ರವಾರ, ಮೇ 27, 2022
22 °C

ಜಿಲ್ಲೆಯ ವಿವಿಧೆಡೆ ಕನ್ನಡ ರಥಕ್ಕೆ ಅದ್ದೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಶ್ರೀನಿವಾಸಪುರ: ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಸೋಮವಾರ ರಾತ್ರಿ ಕೋಲಾರದಿಂದ ಶ್ರೀನಿವಾಸಪುರಕ್ಕೆ ಆಗಮಿಸಿದ ಕನ್ನಡ ತೇರನ್ನು ಪಟ್ಟಣದ ಹೊರವಲಯದಲ್ಲಿ ತಾಲ್ಲೂಕು ಆಡಳಿತ ಮತ್ತು ವಿವಿಧ ಕನ್ನಡ ಪರ ಸಂಘ ಸಂಸ್ಥೆಗಳಿಂದ ಸ್ವಾಗತಿಸಲಾಯಿತು.ಪಟ್ಟಣದ ರೈಲು ನಿಲ್ದಾಣದ ಸಮೀಪ ರಥ ಆಗಮಿಸುವ ಮೊದಲು ಕಲಾವಿದರು ನೃತ್ಯ ಪ್ರದರ್ಶನ ನೀಡಿ ರಥಕ್ಕಾಗಿ ಕಾದಿದ್ದ ಜನರಿಗೆ ಮನರಂಜನೆ ಒದಗಿಸಿದರು. ರಥ ಆಗಮಿಸಿದಾಗ ತಹಶೀಲ್ದಾರ್ ಡಾ.ಎಸ್.ರೂಪಶ್ರೀ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ನಾ.ವೆಂಕೋಬರಾವ್, ವೇಣು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಎನ್.ಬಿ.ಗೋಪಾಲಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮಹ್ಮದ್ ಖಲೀಲ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ.ಕೃಷ್ಣಾರೆಡ್ಡಿ ಮತ್ತಿತರರು ರಥಕ್ಕೆ ಪೂಜೆ ಸಲ್ಲಿಸಿ ಗೌರವಯುತವಾಗಿ ಬರಮಾಡಿಕೊಂಡರು.ರಥದ ಎದುರು ಹಲವು ತಂಡಗಳಲ್ಲಿ ಭಾಗವಹಿಸಿದ್ದ ಕಲಾವಿದರು ಮತ್ತು ಶಾಲಾ ವಿದ್ಯಾರ್ಥಿಗಳು ನೋಡುಗರಿಗೆ ಮನರಂಜನೆ ಒದಗಿಸಿದರು. ಕೋಲಾಟ, ಕೀಲು ಕುದುರೆ ನೃತ್ಯ, ಗಾರಡಿ ಗೊಂಬೆ, ಶಾಲಾ ಮಕ್ಕಳು ಸಂಯೋಜಿಸಿದ್ದ ಯುದ್ಧ ದೃಶ್ಯ ಪ್ರದರ್ಶನ, ಕಲಾವಿದ ಮುನಿರೆಡ್ಡಿ ಅವರ ರಾಕ್ಷಸ ಕುಣಿತ ಜನರ ಗಮನ ಸೆಳೆದವು.ಆದರೆ ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮ ಪ್ರೇಕ್ಷಕರಿಗೆ ರಸಭಂಗ ಉಂಟಾಯಿತು. ಗಡಿ ಪ್ರದೇಶದಲ್ಲಿ ಅಪರೂಪಕ್ಕೆ ಒಂದು ಒಳ್ಳೆಯ ಕನ್ನಡದ ಕೆಲಸ ನಡೆಯುತ್ತಿದ್ದಾಗ ವಿದ್ಯುತ್ ಪೂರೈಸಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲವೆ ಎಂದು ಜನ ಬೆಸ್ಕಾಂ ಬಗ್ಗೆ ಕಿಡಿಕಾರುತ್ತಿದ್ದುದು ಸಾಮಾನ್ಯವಾಗಿತ್ತು. ಟೆಂಪೊ ಒಂದರ ಹಿಂಬದಿಯಲ್ಲಿ ತಾತ್ಕಾಲಿಕವಾಗಿ ಅಳವಡಿಸಿದ್ದ ದೀಪಗಳ ಬೆಳಕಲ್ಲಿಯೇ ಮೆರವಣಿಗೆ ಮುಂದುವರಿಸಲಾಯಿತು.ಮನವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶ್ವ ಕನ್ನಡ ಸಮ್ಮೇಳನ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದ್ದು, ಗಡಿ ಭಾಗದಿಂದ ಹೆಚ್ಚು ಸಂಖ್ಯೆಯ ಜನ ಸಮ್ಮೇಳನದಲ್ಲಿ ಭಾಗವಹಿಸಬೇಕು. ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯರು ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಜನ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ.ಕೆಜಿಎಫ್ ವರದಿ: ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ಆಗಮಿಸಿದ ಕನ್ನಡ ನುಡಿ ತೇರಿಗೆ ನಗರದಲ್ಲಿ ಮಂಗಳವಾರ ಅಭೂತಪೂರ್ವ ಸ್ವಾಗತ ಕೋರಲಾಯಿತು.

ಸುಮಾರು ಎರಡೂವರೆ ಗಂಟೆಗಳ ಕಾಲ ತಡವಾಗಿ ಆಗಮಿಸಿದರೂ; ಸಾರ್ವಜನಿಕರ ಉತ್ಸಾಹಕ್ಕೇನೂ ಕೊರತೆ ಇರಲಿಲ್ಲ. ಕೋರಮಂಡಲದ ಬಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮತ್ತು ಅವರ ಸಿಬ್ಬಂದಿ ಔಪಚಾರಿಕವಾಗಿ ತೇರನ್ನು ನಗರಕ್ಕೆ ಬರಮಾಡಿಕೊಂಡರು. ನಂತರ ರಾಬರ್ಟಸನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಪೂರ್ಣಕುಂಭ ಹೊತ್ತ ಶಾಲಾ ಬಾಲಕಿಯರು, ವಿವಿಧ ವೇಷಧಾರಿಗಳಾಗಿದ್ದ ಶಾಲಾ ಮಕ್ಕಳು ತೇರಿಗೆ ಹೂಚೆಲ್ಲಿ ಸ್ವಾಗತ ಕೋರಿದರು.ನುಡಿ ತೇರು ಆಗಮಿಸಿದ ಕಾರಣಕ್ಕಾಗಿ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ವಿವಿಧ ರಾಜಕೀಯ ನಾಯಕರ ಅನ್ಯ ಭಾಷಾ ಫ್ಲೆಕ್ಸನ್ನು ತೆಗೆದು ಹಾಕಲಾಗಿತ್ತು. ತೇರಿನ ಜತೆ ಆಗಮಿಸಿದ್ದ ವಿವಿಧ ಜಾನಪದ ಕಲಾವಿದರು ಆಕರ್ಷಕ ಪ್ರದರ್ಶನ ನೀಡಿದರು.ನಗರಸಭೆ ಅಧ್ಯಕ್ಷ ಪಿ.ದಯಾನಂದ್, ಉಪಾಧ್ಯಕ್ಷ ಎಂ.ಭಕ್ತವತ್ಸಲಂ, ತಹಶೀಲ್ದಾರ್ ನಾಗರಾಜ್, ಕನ್ನಡ ಸಂಘದ ಅಧ್ಯಕ್ಷ ಬಾ.ಹಾ.ಶೇಖರಪ್ಪ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ರಾಜಗೋಪಾಲಗೌಡ, ಕನ್ನಡ ಸೇನೆಯ ಮುರಳೀಧರ್‌ರಾವ್, ಗ್ರಾಮಾಂತರ ಕನ್ನಡ ಒಕ್ಕೂಟದ ವಿ.ಎಸ್.ಪ್ರಕಾಶ್. ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಹಲವು ನಗರಸಭಾ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪೌರಕಾರ್ಮಿಕರು ಮೆರವಣಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.ಮುಳಬಾಗಲಿನಿಂದ ತಾಲ್ಲೂಕಿಗೆ ಆಗಮಿಸಿದ ನುಡಿ ತೇರಿಗೆ ಬೇತಮಂಗಲದಲ್ಲಿ ಸ್ವಾಗತ ಕೋರಲಾಯಿತು. ನಂತರ ಕಮ್ಮಸಂದ್ರ ಹಾಗೂ ಘಟ್ಟಕಾಮಧೇನಹಳ್ಳಿ ಮಾರ್ಗವಾಗಿ ನಗರಕ್ಕೆ ಆಗಮಿಸಿತು.

ಮುಳಬಾಗಲು ವರದಿ: ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರೂಪಿಸಲಾಗಿರುವ ವಿಶ್ವ ಕನ್ನಡ ತೇರಿಗೆ ಪಟ್ಟಣದಲ್ಲಿ ಅಭೂತ ಪೂರ್ವ ಸ್ವಾಗತ ದೊರೆಯಿತು.

ಶ್ರೀನಿವಾಸಪುರದಿಂದ ಮೂಡಿಯನೂರು ಗ್ರಾಮಕ್ಕೆ ಸೋಮವಾರ ರಾತ್ರಿ 9ಗಂಟೆಗೆ ಬಂದ ತೇರನ್ನು ತಾಲ್ಲೂಕು ಆಡಳಿತ ಆದರದಿಂದ ಬರಮಾಡಿಕೊಂಡು ಪಟ್ಟಣದ ಶ್ರೀರಾಮಮಂದಿರದಲ್ಲಿ ತಂಡಕ್ಕೆ ವಸತಿ ಸೌಲಭ್ಯ ಒದಗಿಸಲಾಯಿತು.ಮಂಗಳವಾರ ವಿಶ್ವ ಕನ್ನಡ ತೇರಿಗೆ ತಹಶೀಲ್ದಾರ್ ಪಿ.ಜಯಮಾಧವ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ನಾಗರಾಜ್. ಕನ್ನಡ ಸಂಘಟನೆ, ಕರ್ನಾಟಕ ರಕ್ಷಣಾ ಯುವ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಜೆಮಿನಿ ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ನಯಾಜ್ ಅಹಮದ್, ಕನ್ನಡ ಸೇನೆಯ ಕನ್ನಡ ವೆಂಕಟಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡಭಟ ವೆಂಕಟಪ್ಪ, ಕಲಾವಿದ ವೆಂಕಟಮುನಿಯಪ್ಪ, ಚಾಂದ್‌ಪಾಷ, ಚಲುವಸ್ವಾಮಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.