ಶುಕ್ರವಾರ, ಜೂಲೈ 3, 2020
22 °C

ಜಿಲ್ಲೆಯ ವಿವಿಧೆಡೆ ಶಿವರಾತ್ರಿ ಸಡಗರ: ಎಲ್ಲ ಶಿವಮಯವು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆಯ ವಿವಿಧೆಡೆ ಶಿವರಾತ್ರಿ ಸಡಗರ: ಎಲ್ಲ ಶಿವಮಯವು...

ಹಾಸನ: ನಗರದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ವಿವಿಧ ಬಡಾವಣೆಗಳ ದೇವಸ್ಥಾನಗಳಲ್ಲಿ ಮುಂಜಾನೆಯಿಂದಲೇ ನಾಗರಿಕರು ವಿಶೇಷ ಪೂಜೆ ಸಲ್ಲಿಸಿ ಹಬ್ಬ ಆಚರಿಸಿಕೊಂಡರು. ದೊಡ್ಡಬಸದಿ ರಸ್ತೆಯಲ್ಲಿರುವ ವಿರೂಪಾಕ್ಷಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ನಗರದ ವಿವಿಧ ಭಾಗಗಳಿಂದ ಬಂದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದುಕೊಂಡರು. ದೇವಾಲಯಗಳಿಗೆ ಆಗಮಿಸಿದ ಭಕ್ತರಿಗೆ ಲಾಡು ವಿತರಣೆ ಮಾಡಲಾಯಿತು.ಶಂಕರಿಪುರಂ ಬಡಾವಣೆಯ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಹಬ್ಬದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇನ್ನೊಂದೆಡೆ ನಗರದ ಹೊಳೆಮಲ್ಲೇಶ್ವರಸ್ವಾಮಿ ದೇವಾಲಯದಲ್ಲೂ ಬೆಳಗ್ಗಿಯಿಂದಲೇ ಪೂಜಾ ಕೈಂಕರ್ಯಗಳು ನಡೆದವು. ಮುಂಜಾನೆಯಿಂದ ಸಂಜೆಯವರೆಗೆ ಧಾರ್ಮಿಕ ಕಾರ್ಯಕ್ರಮ, ಪೂಜೆ, ಪ್ರಸಾದ ವಿತರಣೆ ನಡೆದರೆ ಸಂಜೆಯಾಗುತ್ತಿದ್ದಂತೆ ದೇವಾಲಯದ ಆವರಣಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳಾಗಿ ಮಾರ್ಪಟ್ಟವು. ಮಹಾಶಿವರಾತ್ರಿ ಪ್ರಯುಕ್ತ ವಿವಿಧ ದೇವಾಲಯಗಳಲ್ಲಿ ನಗರದ ಸಂಘ-ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.ಕೆಲವು ಸಂಘ ಸಂಸ್ಥೆಗಳು ಹಾಡು, ನೃತ್ಯ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಇನ್ನೂ ಕೆಲವು ವಿವಿಧ ಕ್ರೀಡಾ ಚಟುವಟಿಕೆಗಳನ್ನು ನಡೆಸಿ ಬಹುಮಾನ ನೀಡಿದವು. ನಗರದ ಬಹುತೇಕ ಎಲ್ಲ ದೇವಾಲಯಗಳಲ್ಲೂ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ಅರಸೀಕೆರೆ ವರದಿ: ಶಿವರಾತ್ರಿ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲ ಶಿವಾಲಯಗಳಲ್ಲಿ ವಿಶೇಷ ಪೂಜೆ ರುದ್ರಾಭಿಷೇಕಗಳು ಬುಧವಾರ ಸಂಭ್ರಮದಿಂದ ನಡೆದವು. ಭಕ್ತರು ಉಪವಾಸ ಕೈಗೊಂಡು, ಶಿವನಾಮ ಭಜಿಸಿದರು. ಬೆಳಗ್ಗಿನಿಂದಲೇ ದೇಗುಲಗಳಿಗೆ ತೆರಳಿ ಭಕ್ತಿ ಸಮರ್ಪಿಸಿದರು.ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಮೃತ್ಯುಂಜಯ ಜಪ ವಿವಿಧ ಪೂಜೆಗಳು ಜರುಗಿದವು. ಉರಿಬಿಸಿಲಿನಲ್ಲಿಯೂ ಗುಡಿಗಳಲ್ಲಿ ಶಿವಾರಾಧಕರು ಸಾಲಿನಲ್ಲಿ ಕಾದು ದೇವರ ದರ್ಶನ ಪಡೆದರು.ಅರಸೀಕೆರೆ-ಹುಳಿಯಾರು ರಸ್ತೆ ಬದಿಯಲ್ಲಿನ ಪ್ರಸಿದ್ಧ ಶಿವಾಲಯದಲ್ಲಿ ಮುಂಜಾನೆಯೇ ಚಿತ್ರನಟ ದೊಡ್ಡಣ್ಣ ದಂಪತಿ ಚಂದ್ರಮೌಳೇಶ್ವರ ಸ್ವಾಮಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ನೆರವೇರಿಸಿದರು.

ವಾಚನಾಲಯ ರಸ್ತೆಯ ಭವಾನಿ ಶಂಕರ, ಸುಭಾಷ್ ನಗರದ ಕೆಂಗಲ್ ಸಿದ್ದೇಶ್ವರ, ಅಂಚೆಕೊಪ್ಪಲಿನ ಮಳೆಮಲ್ಲೇಶ್ವರ ಸ್ವಾಮಿ, ರುದ್ರಗುಡಿಬೀದಿ ವೀರಭದ್ರಸ್ವಾಮಿ ತಾಲ್ಲೂಕಿನ ಚಲ್ಲಾಪುರ ಮಲ್ಲಿಕಾರ್ಜುನ ಸ್ವಾಮಿ, ಹಾರನಹಳ್ಳಿ ಕೋಡಿಮಠ ಶಿವಲಿಂಗೇಶ್ವರ ಗದ್ದುಗೆ, ದೇಗುಲಗಳಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಶಿವರಾತ್ರಿಗಾಗಿಯೇ ರಾಜ್ಯ ಸರ್ಕಾರ ವಿತರಿಸಿದ್ದ ಗಂಗಾಜಲದಿಂದ ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಮುಜಿರಾಯಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಭಕ್ತರಿಗೆ ತೀರ್ಥ-ಪ್ರಸಾದವನ್ನು ವಿತರಿಸಲಾಯಿತು. 101 ಶಿವಲಿಂಗ ದರ್ಶನ (ಮಾಡಾಳು): ಸಮೀಪದ ಶಶಿವಾಳ ಗ್ರಾಮದ ಹೊರಭಾಗದಲ್ಲಿರುವ ಕಸುವನಕಟ್ಟೆ ಸಿದ್ದೇಶ್ವರ ಸ್ವಾಮಿ ಕ್ಷೇತ್ರದಲ್ಲಿ  ಮೊದಲ ಬಾರಿಗೆ ಶಿವರಾತ್ರಿ ಪ್ರಯುಕ್ತ 101 ಶಿವಲಿಂಗ ದರ್ಶನ, ಗುರು ಸಪ್ತಾಹ, ಅಖಂಡ ಭಜನೆ, ಮಹಾ ಗಂಗಾಪೂಜೆ ಸಂಭ್ರಮದಲ್ಲಿ ಬುಧವಾರ ನೂರಾರು ಭಕ್ತರು ಪಾಲ್ಗೊಂಡಿದ್ದರು.ತಿಪಟೂರು ತಾಲ್ಲೂಕು ಕೆರಗೋಡಿ-ರಂಗಾಪುರ ಮಠದ ಗುರುಪರದೇಶೀಕೇಂದ್ರ ಸ್ವಾಮೀಜಿ ಕೃಪಾಶೀರ್ವಾದದಿಂದ ಮಾ.2ರಿಂದ 6ರವರೆಗೆ ಗ್ರಾಮ ದೇವರುಗಳಾದ ಬಸವೇಶ್ವರ ಸ್ವಾಮಿ, ಮರುಳಸಿದ್ದೇಶ್ವರ ಸ್ವಾಮಿ ಸಮ್ಮುಖದಲ್ಲಿ ಗುರು ಸಪ್ತಾಹ ನಡೆಯಲಿದೆ. ಹಬ್ಬದ ಅಂಗವಾಗಿ ಬುಧವಾರ ಮುಂಜಾನೆ ಸಿದ್ದೇಶ್ವರ ಕ್ಷೇತ್ರದಲ್ಲಿ ಗಣಪತಿ ಪೂಜೆ, ಪಂಚಕಲಶ ಸ್ಥಾಪನೆ, ಉಮಾಮಹೇಶ್ವರ ಗಣಹೋಮ, ರುದ್ರಹೋಮ ನಡೆಯಿತು. ಡಿ.ಎಂಕುರ್ಕೆ ಬೂದಿಹಾಲ್ ವಿರಕ್ತ ಮಠದ ರಾಜಶೇಖರ ಸ್ವಾಮೀಜಿ ಸಾನಿಧ್ಯದಲ್ಲಿ ಪೂರ್ಣಹುತಿ ಕಾರ್ಯಕ್ರಮ ಮತ್ತು ಕೆರಗೋಡಿ- ರಂಗಾಪುರ ಮಠದ ಗುರುಪರದೇಶೀಕೇಂದ್ರ ಸ್ವಾಮೀಜಿ ಅವರ ಪಾದಪೂಜೆ ನಡೆಯಿತು.ಶಿವರಾತ್ರಿ ಪ್ರಯುಕ್ತ ತಾಲ್ಲೂಕಿನ ಹೊಳಲ್ಕೆರೆ ಪ್ರಸನ್ನ ರಾಮೇಶ್ವರಸ್ವಾಮಿ, ಮಾಡಾಳು ಬಸವೇಶ್ವರ, ಚನ್ನಬಸವೇಶ್ವರ, ತಿರುಮಲಸ್ವಾಮಿ, ಪಂಚಲಿಂಗೇಶ್ವರಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.  ಬೇಲೂರು ವರದಿ: ಪಟ್ಟಣದಲ್ಲಿ ಶಿವರಾತ್ರಿ ಹಬ್ಬವನ್ನು ಬುಧವಾರ ಜನರು ಭಕ್ತಿ, ಭಾವದ ನಡುವೆ ಆಚರಿಸಿದರು. ಬೆಳಿಗ್ಗೆಯಿಂದಲೇ ಶಿವಮಂದಿರಗಳಲ್ಲಿ ವಿಶೇಷ ಪೂಜೆ, ಅಭಿಷೇಕಗಳು ನಡೆದವು. ಪಟ್ಟಣದ ಕೆಂಪೇಗೌಡ ರಸ್ತೆಯಲ್ಲಿನ ಪಾತಾಳೇಶ್ವರ ಸ್ವಾಮಿ ಗುಡಿಯನ್ನು ವಿದ್ಯುತ್ ದೀಪ ಮತ್ತು ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಸಂಜೆ ಭಕ್ತರು ಸರದಿ ಸಾಲಿನಲ್ಲಿ ನಿಂತು  ಪಾತಾಳೇಶ್ವರ ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.ನಂಜುಂಡೇಶ್ವರ ದೇವಾಲಯ, ಯಗಚಿ ಸೇತುವೆ ಸಮೀಪದ ಶಿವ ಮಂದಿರ, ವಿಷ್ಣುಸಮುದ್ರ ಕೆರೆ ಸಮೀಪದ ಅಮೃತೇಶ್ವರ ದೇವಾಲಯಗಳಿಗೂ ಭಕ್ತರು ಭೇಟಿ ನೀಡಿ ಶಿವನ ದರ್ಶನ ಪಡೆದರು.

ಕಳಸಿನ ಕೆರೆ ಸಮೀಪದ ಶಂಕರಲಿಂಗೇಶ್ವರ ದೇವಸ್ಥಾನವನ್ನು ಶಿವರಾತ್ರಿ ಹಿನ್ನೆಲೆಯಲ್ಲಿ ಜೀರ್ಣೋದ್ಧಾರ ಮಾಡಲಾಗಿತ್ತು. ಹೊಸದಾಗಿ ಅರಳಿಕಟ್ಟೆ ನಿರ್ಮಾಣ ಮಾಡಲಾಗಿತ್ತು. ಬುಧವಾರ ಸಂಜೆ ದೇವಾಲಯದಲ್ಲಿ ನವಗ್ರಹ ಪ್ರತಿಷ್ಠಾಪನೆ, ಇತರ ಪೂಜೆ ನಡೆದವು.ಆಲೂರು ವರದಿ: ಮಹಾ ಶಿವರಾತ್ರಿಯು ಎಲ್ಲಾ ಹಬ್ಬಗಳಿಗಿಂತಲೂ ವಿಶೇಷ ಹಬ್ಬ. ಅಂದರೆ ಸಾಕ್ಷಾತ್ ಪರಮಾತ್ಮನ ಅವತಾರದ ದಿವ್ಯ ದಿನವಾಗಿದೆ ಎಂದು ಜಿ.ಪಂ.ಮಾಜಿ ಸದಸ್ಯ ಕೆ.ಸುಬ್ಬಶೆಟ್ಟಿ ಹೇಳಿದರು. ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿ ವಿಶ್ವದ್ಯಾಲಯ ಕೇಂದ್ರದಲ್ಲಿ ಬುಧವಾರ ಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ದೀಪದಾನ ಸಮಾರಂಭದ ಭಾಗವಹಿಸಿ ಮಾತನಾಡಿದರು. ತಾಲ್ಲೂಕು ಶರಣಸಾತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಇ.ಜಯರಾಜ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಈ ವೇದಿಕೆಯಲ್ಲಿ ಪ.ಪಂ.ಸದಸ್ಯ ಎಚ್.ಬೆ.ಧರ್ಮರಾಜ್, ಸಮಸ್ಥೆಯ ನಿಕಟವರ್ತಿಗಳಾದ ಕೆ.ರಂಗಪ್ಪ ಉಪಸ್ಥಿತರಿದ್ದರು.ಅರಕಲಗೂಡು ವರದಿ:
ಪಟ್ಟಣದಲ್ಲಿ ಜನರು ಬುಧವಾರ ಶಿವರಾತ್ರಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಶಿವನ ದೇವಾಲಯಗಳಲ್ಲಿ ರುದ್ರಾಭಿಷೇಕ, ಬಿಲ್ವಾರ್ಚನೆ, ವಿಶೇಷ ಪೂಜೆ ನಡೆದವು. ಜನರು ದೇಗುಲಗಳಿಗೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು. ಕೋಟೆ ಅಮೃತೇಶ್ವರಸ್ವಾಮಿ, ಶಂಭುನಾಥೇಶ್ವರ, ನಂಜುಂಡೇಶ್ವರ ಗುಡಿಗಳಲ್ಲಿ ವಿಶೇಷ ಪೂಜೆ ಅಭಿಷೇಕ ಜರುಗಿದವು. ಭಕ್ತರು ಜಾಗರಣೆ ಆಚರಿಸಿದರು.ರಥೋತ್ಸವ: ಶಿವರಾತ್ರಿ ಅಂಗವಾಗಿ ಇಲ್ಲಿನ ಅಮೃತೇಶ್ವರಸ್ವಾಮಿ ರಥೋತ್ಸವ ಗುರುವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗುಡಿಯಲ್ಲಿ 3 ದಿನಗಳಿಂದ ವಿವಿಧ ವಿಧಿಗಳನ್ನು ನಡೆಸಲಾಗುತ್ತಿದೆ.

ಸಕಲೇಶಪುರ ವರದಿ: ಹೊಳೆಮಲ್ಲೇಶ್ವರಸ್ವಾಮಿ, ಕನ್ನಿಕಾಪರಮೇಶ್ವರಿ, ಗಣಪತಿ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಬುಧವಾರ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ, ಹೋಮ ಹವನ ನಡೆದವು.ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ5 ಗಂಟೆಯಿಂದಲೇ ನಾಲ್ಕು ಯಾಮಗಳ ಪೂಜೆ ಜರುಗಿದವು. ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, 1108 ಲೀ. ಹಾಲಿನ ಅಭಿಷೇಕ ಮಹಾಪೂಜೆ ಬೆಳಿಗ್ಗೆ 11ರ ವರೆಗೂ ನಡೆದವು. ರಾತ್ರಿ 10ಕ್ಕೆ ಎರಡನೇ ಯಾಮದ ಪೂಜೆ, ಮಧ್ಯರಾತ್ರಿ 1ಕ್ಕೆ 3ನೇ ಯಾಮದ ಪೂಜೆಗಳು ನಡೆದವು. ಪ್ರತಿಯೊಂದು ಯಾಮಕ್ಕೂ ದೇವಸ್ಥಾನದ ಪ್ರಧಾನ ಅರ್ಚಕ ಮಹೇಶ್‌ಭಟ್ ದೇವರಿಗೆ ವಿಶೇಷ ಅಲಂಕಾರ ಮಾಡಿದ್ದರು. ದೇವಸ್ಥಾನದ ಟ್ರಸ್ಟ್ ಸದಸ್ಯರು ಇಲ್ಲಿಯ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಹಣ್ಣು, ಸಿಹಿ ಹಂಚಿದರು. ಬಡವಿದ್ಯಾರ್ಥಿಗ ಳಿಗೆ ಪುಸ್ತಕ, ವೃದ್ಧರಿಗೆ ಊರುಗೋಲು ವಿತರಿಸಿದರು. ಜಾವಗಲ್ ವರದಿ: ಮಹಾಶಿವರಾತ್ರಿ ಅಂಗವಾಗಿ ಬುಧವಾರ ಪಟ್ಟಣದ ವಿವಿಧ ದೇಗುಲಗಳಲ್ಲಿ ಮಹಾಮಂಗಳಾರತಿ, ವಿಶೇಷ ಪೂಜೆ, ಅಭಿಷೇಕ  ಜರುಗಿದವು. ಶಿವರಾತ್ರಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಿದರು. ಗಂಗಾಧರೇಶ್ವರ, ಗುರುಸಿದ್ದರಾಮೇಶ್ವರ, ಬೀರಲಿಂಗೇಶ್ವರಸ್ವಾಮಿ, ಬಸವೇಶ್ವರಸ್ವಾಮಿ, ಗುಡಿಗಳಲ್ಲಿ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ನಡೆಯಿತು. ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡಿ ಶಿವನ ದರ್ಶನ ಪಡೆದರು. ದೇಗುಲಗಳಲ್ಲಿ ಸಂಗೀತ, ಭಜನೆ ಏರ್ಪಡಿಸಲಾಗಿತ್ತು.ಹೊಳೆನರಸೀಪುರ ವರದಿ: ಶಿವರಾತ್ರಿ ಹಬ್ಬದ ದಿನವಾದ ಬುಧವಾರ ಕೋಟೆ ಈಶ್ವರ ದೇವಸ್ಥಾನ, ಸೀತಾವಿಲಾಸ ರಸ್ತೆಯ ಮೈಲಾರಲಿಂಗೇಶ್ವರ ದೇವಸ್ಥಾನ, ರಿವರ್ ಬ್ಯಾಂಕ್ ರಸ್ತೆಯ ಲಕ್ಷ್ಮಣೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಿದ್ದು ಭಕ್ತರು ಭಾಗವಹಿಸಿದ್ದರು. ಬೆಳಿಗ್ಗೆ 5 ರಿಂದಲೇ ದೇವಾಲಯಗಳಲ್ಲಿ ಈಶ್ವರನಿಗೆ ಅಭಿಷೇಖ ನಡೆಸಿ, ಬಿಲ್ವಪತ್ರೆ ಸೇರಿದಂತೆ ಬಗೆ ಬಗೆಯ ಹೂವುಗಳಿಂದ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಿ ಪ್ರಸಾದ ವಿತರಿಸಿದರು.ಯೋಗಾನಂದೇಶ್ವರ ಶಾಖಾ ಮಠದ ಈಶ್ವರ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಹೋಮ ಹವನ ನಡೆಸುತ್ತಿದ್ದು ಇದು ಬೆಳಗಿನ ಜಾವದ ವರೆಗೂ ನಡೆಸಲು ವ್ಯವಸ್ಥೆ ಮಾಡಲಾಗಿತ್ತು.

ರಾಮನಾಥಪುರ ವರದಿ: ಪಟ್ಟಣದಲ್ಲಿ ಬುಧವಾರ ಅಪಾರ ಭಕ್ತಿ-ಶ್ರದ್ಧೆಯಿಂದ ಶಿವರಾತ್ರಿ ಆಚರಿಸಲಾಯಿತು. ಹಬ್ಬದ ಅಂಗವಾಗಿ ಇಲ್ಲಿನ ಚಾತುರ್ಯುಗಮೂರ್ತಿ ರಾಮೇಶ್ವರ ಗುಡಿಯಲ್ಲಿನ ಬೃಹತ್ ಶಿವಲಿಂಗ, ಒಳ ಪ್ರಾಂಗಣದ ಸುತ್ತಲಿನ ಗುಡಿಗಳಲ್ಲಿನ 35 ಶಿವಲಿಂಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಪೂಜೆ ಸಲ್ಲಿಸಲಾಯಿತು. ಅಗಸ್ತ್ಯೇಶ್ವರ, ಪಟ್ಟಾಭಿರಾಮ,ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇಗುಲದಲ್ಲಿ ಪೂಜೆ ನಡೆದವು. ಕೇರಳಾಪುರದ ವೀರಭದ್ರೇಶ್ವರಸ್ವಾಮಿ, ಬಸವಾಪಟ್ಟಣದ ಷಡ್ಭಾವರಹಿತೇಶ್ವರ, ಕೆಂಡಗಣ್ಣೇಶ್ವರ, ಮಹಾದೇಶ್ವರ-ಬಸವೇಶ್ವರ ಗುಡಿಗಳಲ್ಲಿಯೂ ಪೂಜೆ ಪ್ರಾರ್ಥನೆ ನಡೆದವು. ಭಕ್ತರು ಉಪವಾಸ ಕೈಗೊಂಡು  ಶಿವನಾಮ ಸ್ಮರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.