ಬುಧವಾರ, ಜೂನ್ 23, 2021
21 °C

ಜೀಪ್ ಜಾಥಾ: ಬೆಲೆ ಏರಿಕೆಗೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ:  ದೇಶದ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಮಾ.14 ರಂದು ಎಸ್‌ಯುಸಿಐ ವತಿಯಿಂದ ಹಮ್ಮಿಕೊಂಡಿರುವ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಜೀಪ್ ಜಾಥಾ ಇತ್ತೀಚೆಗೆ ನಡೆಯಿತು.ಜಾಥಾ ಉದ್ಘಾಟಿಸಿ ಮಾತನಾಡಿದ ಎಸ್‌ಯುಸಿಐ(ಕಮ್ಯನಿಷ್ಟ್) ರಾಜ್ಯ ಸಮಿತಿ ಸದಸ್ಯ, ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ವಿ. ದಿವಾಕರ, ಬೆಲೆ ಏರಿಕೆ, ರೈತರ ಆತ್ಮಹತ್ಯೆ, ಶಿಕ್ಷಣದ ಖಾಸಗೀಕರಣದಂತಹ ಯೋಜನೆಗಳಿಂದಾಗಿ ಜನರು ಸಂಕಷ್ಟ ಎದುರಿಸುವಂತಾಗಿದೆ. ಇದನ್ನು ವಿರೋಧಿಸಿ, ಎಸ್‌ಯುಸಿಐ ಜೀಪ್ ಜಾಗೃತಿ ಜಾಥಾ ಹಮ್ಮಿಕೊಂಡಿದೆ ಎಂದು ತಿಳಿಸಿದರು.ದೇಶದಾದ್ಯಂತ ಕೋಟ್ಯಂತರ ಜನರಿಂದ ಸಹಿ ಸಂಗ್ರಹಿಸಲಾಗಿದೆ. ಈ ಐತಿಹಾಸಿಕ ಜನಾಂದೋಲನದಲ್ಲಿ ಗುಲ್ಬರ್ಗ-ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮಗಳು, ಪಟ್ಟಣಗಳು, ತಾಲ್ಲೂಕು ಕೇಂದ್ರ, ವಿವಿಧ ಕಾಲೇಜುಗಳಲ್ಲಿ ಸಹಸ್ರಾರು ರೈತರು, ಕಾರ್ಮಿಕರು, ನೌಕರರು, ವಿವಿಧ ದುಡಿಯುವ ವರ್ಗದ ಜನರೂ ಸೇರಿದಂತೆ  50,000 ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಜನರಿಂದ ಸಹಿಗಳನ್ನು ಸಂಗ್ರಹಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಈ ಹೋರಾಟವನ್ನು ತಮ್ಮದೇ ಹೋರಾಟವೆಂದು ಸ್ಪಂದಿಸಿ, ಅನೇಕ ಜನರು ಸಹಿ ಹಾಕುವ ಮೂಲಕ ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.ಮಾ.14 ರಂದು ದೆಹಲಿಯಲ್ಲಿ ಲಕ್ಷಾಂತರ ಜನ ಸೇರಲಿರುವ ಐತಿಹಾಸಿಕ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೆ ಜಿಲ್ಲೆಯ ನೂರಾರು ಕಾರ್ಯಕರ್ತರು, ಬೆಂಬಲಿಗರು, ಸಾರ್ವಜನಿಕರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಜನರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ಜಿಲ್ಲಾ ಸಮಿತಿ ಸದಸ್ಯೆ ಡಿ. ಉಮಾದೇವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಕೆ. ಸೋಮಶೇಖರ ಯಾದಗಿರಿ ಮಾತನಾಡಿದರು. ಶರಣಗೌಡ ಗೂಗಲ್, ಗೌರಮ್ಮ ಸಿ.ಎಲ್, ಸಿದ್ದಪ್ಪ, ವೆಂಕಟರೆಡ್ಡಿ, ಶಿವರಾಜ, ದೇವಕಿ, ಮತ್ತಿತರರು ಭಾಗವಹಿಸಿದ್ದರು.ಎರಡು ದಿನಗಳಿಂದ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲ್ಲೂಕುಗಳ ನೂರಾರು ಗ್ರಾಮಗಳು, ಹೊಬಳಿ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಜಾಥಾ ಸಂಚರಿಸಿ ಸಭೆಗಳನ್ನು ನಡೆಸಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಎಸ್‌ಯುಸಿಐ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.