ಸೋಮವಾರ, ಜೂನ್ 14, 2021
22 °C

ಜೀವದ ಹಂಗು ತೊರೆದು ಮಿತ್ರನನ್ನು ರಕ್ಷಿಸಿದ ಅಕ್ಷಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ನಿಡಗುಂದಿ ಬಳಿ ಆಕಸ್ಮಿಕವಾಗಿ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕನೊಬ್ಬನನ್ನು ಆತನ ಮಿತ್ರನೇ  ಬದುಕಿಸಿದ ಘಟನೆ ನಿಡಗುಂದಿ ತಾಂಡಾದ ಬಳಿ ಬುಧವಾರ ಬೆಳಿಗ್ಗೆ ನಡೆಯಿತು.ನಿಡಗುಂದಿ ಬಳಿ ಇರುವ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ಈಜಲು ನಿಡಗುಂದಿ ತಾಂಡಾದ ನಾಲ್ಕೈದು ಬಾಲಕರು ತೆರಳಿದ್ದಾರೆ. ಅದರಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿ ಪ್ರವೀಣ ಅರ್ಜುನ ರಾಠೋಡ ಇತನಿಗೆ ಈಜು ಬಾರದ್ದರಿಂದ ಎಡದಂಡೆ ಕಾಲುವೆಯ ದಂಡೆಯ ಮೇಲೆ ಕುಳಿತಿದ್ದಾನೆ. ಇನ್ನೂ ಕೆಲ  ಮಿತ್ರರು ಕಾಲುವೆಯಲ್ಲಿ ಈಜುತ್ತಿದ್ದಾರೆ.

 

ಈ ಕಾಲುವೆ ಮುಖ್ಯ ಸ್ಥಾವರದ ಸಮೀಪ ಇರುವುದರಿಂದ ಕಾಲುವೆಗೆ ನೀರಿನ ರಭಸ ಹೆಚ್ಚು.  ದಂಡೆಯ ಮೇಲೆ ಕುಳಿತಿದ್ದ ಪ್ರವೀಣ ರಾಠೋಡ ಆಕಸ್ಮಿಕವಾಗಿ ಕಾಲು ಜಾರಿ ಕಾಲುವೆಯೊಳಗೆ ಬಿದ್ದಿದ್ದಾನೆ. ಬಿದ್ದ ಗಾಬರಿಗೆ ಹಾಗೂ ನೀರಿನ ರಭಸಕ್ಕೆ ಆ ವಿದ್ಯಾರ್ಥಿ ಕೊಚ್ಚಿಕೊಂಡು ಹೋಗುವ ದೃಶ್ಯ ನೋಡಿ, ಅಲ್ಲಿಯೇ ಈಜುತ್ತಿದ್ದ ಉಳಿದವರು ಆತನನ್ನು ಬದುಕಿಸಲು ಹೆದರಿದ್ದಾರೆ.ಕಾಲುವೆಯೊಳಗೆ ಈಜುತ್ತಿದ್ದ ಅಕ್ಷಯ ಲಕ್ಷ್ಮಣ ಚವ್ಹಾಣ ಎಂಬ ವಿದ್ಯಾರ್ಥಿ ಮಾತ್ರ ಅತ್ಯಂತ ಧೈರ್ಯದಿಂದ ತನ್ನ ಜೀವದ ಹಂಗು ತೊರೆದು, ಕೊಚ್ಚಿಕೊಂಡು ಹೋಗುತ್ತಿದ್ದ ಬಾಲಕನತ್ತ ಧಾವಿಸಿ ಬಂದು ಮುಳುಗುತ್ತಿದ್ದ ಆ ಬಾಲಕನ ತಲೆಯ ಕೂದಲನ್ನು ಹಿಡಿದು ಗಟ್ಟಿಯಾಗಿ ಎಳೆದುಕೊಂಡು ಕಾಲುವೆಯ ದಂಡೆಗೆ ಎಳೆದುಕೊಂಡು ಬಂದಿದ್ದಾನೆ. ಅಷ್ಟರಲ್ಲಿಯೇ ಉಳಿದ ಮಿತ್ರರು ಹಾಗೂ ಹಿರಿಯರು ಕೂಡಿ ಕಾಲುವೆಯಿಂದ ಎತ್ತಿದ್ಧಾರೆ.ತನ್ನ ಜೀವದ ಹಂಗು ತೊರೆದು ಮಿತ್ರನನ್ನು ಬದುಕಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ ಅಕ್ಷಯ ಲಕ್ಷ್ಮಣ ಚವ್ಹಾಣನ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.