ಶುಕ್ರವಾರ, ಜೂನ್ 25, 2021
21 °C

ಜೀವನೋತ್ಸಾಹ ನೀಡುವ ಜನಪದ ರಂಗ ಚಟುವಟಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ‘ಜನಪದ, ರಂಗ ಚಟುವಟಿಕೆಗಳು ಜನರಿಗೆ ಮನರಂಜನೆಯ ಜೊತೆಗೆ ಮಾನವೀಯ ಮೌಲ್ಯ, ಜೀವನೋತ್ಸಾಹ, ಶಾಂತಿ ನೆಮ್ಮದಿಯನ್ನು ನೀಡುತ್ತವೆ’ ಎಂದು ಪ್ರಾಧ್ಯಾಪಕ ಮತ್ತು ರಂಗ ವಿಮರ್ಶಕ ಡಾ. ವಿ.ಬಸವರಾಜು ತಿಳಿಸಿದರು.ಗುರವಾರ ಸಂಜೆ ನಗರದ ತರಾಸು ರಂಗಮಂದಿರದಲ್ಲಿ ಚಿತ್ರದುರ್ಗದ ರಂಗಸೌರಭ ಕಲಾಸಂಘ, ಕನ್ನಡ ಮತ್ತುಸಂಸ್ಕೃತಿ ನಿರ್ದೇಶನಾಲಯ ಮತ್ತು ಚಿತ್ರದುರ್ಗದ ಕನ್ನಡ ಸಂಸ್ಕೃತಿ ಇಲಾಖೆಯ ನಡೆದ ‘ರಂಗೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಆಧುನಿಕ ಜಗತ್ತಿನಲ್ಲಿ ಮಾನವ ಯಾಂತ್ರಿಕ ಜೀವನ ಕ್ರಮದಿಂದ ಒತ್ತಡಗಳಿಂದ ಹೊರಬರಲು ರಂಗಭೂಮಿ ಚಟುವಟಿಕೆಗಳು ಪರಿಣಾಮಕಾರಿಯಾಗಿ ನೆರವಾಗುತ್ತವೆ’ ಎಂದು ಹೇಳಿದರು.‘ಜಾನಪದ ಕಲೆಗಳು ಗ್ರಾಮೀಣ ಜೀವನದ ಚೈತನ್ಯದ ಚಿಲುಮೆಗಳಾಗಿವೆ. ಜನಪದ ಕಲೆ ಕಷ್ಟ , ಬದುಕಿನ ನೋವುಗಳನ್ನು ಮರೆಸುವ ದಿವ್ಯ ಔಷಧವಾಗಿದೆ. ಗ್ರಾಮೀಣ ಜನರನ್ನು ಸದಾ ಚೇತನ ಶೀಲರನ್ನಾಗಿಸುವ ಶಕ್ತಿ ಜಾನಪದ ರಂಗಭೂಮಿಗಿದೆ’ ಎಂದು ಅಭಿಪ್ರಾಯಪಟ್ಟರು.‘ದಕ್ಷಿಣ ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಜನಪದ ಕಲೆಗಳು ಹೆಚ್ಚು ವೈವಿಧ್ಯಮಯವಾಗಿವೆ. ರಾಜ್ಯದಲ್ಲಿ ಸಮೃದ್ಧ ಜಾನಪದ ಕಲೆಗಳಿವೆ. ನಾಟಕ ಪ್ರದರ್ಶನದಲ್ಲಿ ವಾದ್ಯಗಳು ಜಾನಪದ ಹಾಡುಗಳನ್ನು ಬಳಸಿಕೊಳ್ಳುವುದರ ಮೂಲಕ ನಾಟಕ ಪ್ರದರ್ಶನದ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ ಪ್ರೇಕ್ಷಕರಿಗೆ ರಂಜನೆಯನ್ನು ಒದಗಿಸಿಕೊಡುತ್ತವೆ. ರಂಗ ಪ್ರಯೋಗಗಳಲ್ಲಿ ಜಾನಪದ ಕಲೆಗಳಾದ ವೀರಗಾಸೆ, ಡೊಳ್ಳು, ಜೋಗೆರಾಟ, ಚೌಡಿಕೆ ಪದ ಮೊದಲಾದವುಗಳನ್ನು ಬಳಸಿಕೊಂಡು ನಾಟಕ ಪ್ರದರ್ಶಿಸಿದರೆ ಅದು ಹೆಚ್ಚು ಪ್ರೇಕಕರನ್ನು ತಲುಪುತ್ತದೆ ಎಂದರು.ಸಿನಿಮಾ ನಟ ಮೈಸೂರು ರಮಾನಂದ ಮಾತನಾಡಿ, ‘ಚಿತ್ರದುರ್ಗ ಜಿಲ್ಲೆ ರಂಗಕಲಾವಿದರಿಗೆ ಮನೆಯಿದ್ದಂತೆ. ಕಲಾವಿದರಿಗೆ ಆಶ್ರಯಕೊಟ್ಟು ಅವರನ್ನು ಬೆಳೆಸುವ ಕಲಾಶ್ರೀಮಂತಿಕೆಯ ಜನರು ಇಲ್ಲಿ ಹೆಚ್ಚಿದ್ದಾರೆ’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಆರ್.ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಾಹಿತ್ಯ ಕ್ಷೇತ್ರವನ್ನು ಪರಿಣಾಮಕಾರಿಯಾಗಿ ನಾಟಕಾಭಿನಯಗಳ ಮೂಲಕ ಅಭಿವ್ಯಕ್ತಿ ಗೊಳಿಸುತ್ತಿರುವುದು ಶ್ಲಾಘನೀಯ.ರಂಗಭೂಮಿಯ ಚಟುವಟಿಕೆಗಳಿಗೆ ಸರ್ಕಾರ ಮತ್ತು ಸಾರ್ವಜನಿಕರು ಹೆಚ್ಚು ಪ್ರೋತ್ಸಾಹ ನೀಡಿ ಕಲಾವಿದರನ್ನು ಸಮಾಜಮುಖಿಯಾಗಿ ಬೆಳೆಸಬೇಕೆಂದು ಮನವಿ ಮಾಡಿದರು.ನಗರದ ನಾಟ್ಯ ರಂಜನಿ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ಜಿ.ಕಿರಣ್ ನಿರ್ದೇಶನದಲ್ಲಿ ಸಿದ್ದಿ ಗಣಪ ನೃತ್ಯ ನಾಟಕವನ್ನು, ಬೆಂಗಳೂರಿನ ಗೆಜ್ಜೆ-ಹೆಜ್ಜೆ ರಂಗತಂಡದ ಕಲಾವಿದರಿಂದ ಮೈಸೂರು ರಮಾನಂದ ನಿರ್ದೇಶನದ ‘ಕುರ್ಚಿ ಖಾಲಿ ಇಲ್ಲ’ ಎಂಬ ನಾಟಕವನ್ನು ಪ್ರದರ್ಶಿಸಲಾಯಿತು.ರಂಗಸೌರಭ ಕಲಾಸಂಘದ ಅಧ್ಯಕ್ಷ ಕೆ.ಪಿ.ಎಂ. ಸದ್ಯೋಜಾತಯ್ಯ ಉಪಸ್ಥಿತರಿದ್ದರು. ಗಾಯಕರಾದ ಬಿ.ಪಿ.ಶೋಭಾ, ಟಿ.ಚಂದ್ರಪ್ಪ ಪಿ.ಭಾಗಣ್ಣ ಶಾಸ್ತ್ರಿ, ಜಿ.ವಿ.ಮಾರುತೇಶ್, ಆಯಿತೋಳು ವಿರೂಪಾಕ್ಷಪ್ಪ, ಜಿ.ಚಂದ್ರಪ್ಪ ಬಿ.ಎಂ.ಜಗದೀಶ್ ಬೆನಕನಹಳ್ಳಿ, ಕಲಾವಿದ ಎಸ್.ಚನ್ನಬಸಪ್ಪ, ಕೆ.ಪಿ.ಎಂ. ಗಣೇಶಯ್ಯ, ಎಂ.ಕೆ.ಹರೀಶ್, ಎಸ್. ವಿಜಯಕುಮಾರ್, ಮಲ್ಲಿಕಾರ್ಜುನ ಟಿ.ತುರುವನೂರು ಹಾಗೂ ಜಿ.ಸಿ.ಯಶವಂತಕುಮಾರ್ ಅವರು ರಂಗಗೀತೆ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.ಇದೇ ತಂಡ ಪೌರಾಣಿಕ, ಐತಿಹಾಸಿಕ ರಂಗಗೀತೆ ಗಳನ್ನು ಹಾಡಿ ಪ್ರೇಕ್ಷಕ ಸಮುದಾಯ ವನ್ನು ರಂಜಿಸಿದರು. ರಂಗಸೌರಭ ಕಲಾಸಂಘದ ಕಾರ್ಯದರ್ಶಿ ಕೆ.ಪಿ.ಎಂ.ಗಣೇಶಯ್ಯ ಸ್ವಾಗತಿಸಿ, ಕಾರ್ಯಕ್ರಮ  ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.