ಬುಧವಾರ, ಸೆಪ್ಟೆಂಬರ್ 22, 2021
25 °C
ಚರ್ಚೆ

ಜೀವಪರ ನಿಲುವು: ವೈಧಾನಿಕತೆಯ ಕಣ್ಕಟ್ಟು

ಎಂ.ಎಸ್. ಆಶಾದೇವಿ Updated:

ಅಕ್ಷರ ಗಾತ್ರ : | |

ಕನ್ನಡ ಸಂಸ್ಕೃತಿಗೆ ಒಳ್ಳೆಯ ಹೆಸರು ಬರಲೆಂದೇ ವಚನಗಳು ಜಾತಿವಿರೋಧಿ  ಎನ್ನುವ ಪ್ರತಿಪಾದನೆಯನ್ನು ಪ್ರೊ ಎಂ. ಎಂ. ಕಲ್ಬುರ್ಗಿಯವರು ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಇದನ್ನು ವಿರೋಧಿಸುವ ಮತ್ತು  ನಿರಾಕರಿಸುವ ಡಾ. ರಾಜಾರಾಮ ಹೆಗಡೆಯವರ ಚರ್ಚೆಯಲ್ಲಿ  ಕೆಲವು ಸಂಗತಿಗಳಿವೆ.1. `ಒಳ್ಳೆಯ ಸಂಶೋಧನೆ' ಮಾಡಬೇಕೆನ್ನುವುದು.

2. ಜಾಗತಿಕವಾಗಿ ಕನ್ನಡದ ಸ್ಥಾನಮಾನ ಹೆಚ್ಚಿಸುವುದು.

3 ಯಾವುದೇ  ಐಡಿಯಾಲಜಿಯನ್ನು ಸಮರ್ಥಿಸದೇ ಇರುವುದು.ಈ ಎಲ್ಲದಕ್ಕೂ ಮೂಲವಾಗಿ ಅವರು ಇತಿಹಾಸವನ್ನೂ, ಇತಿಹಾಸ ರಚನೆಗೆ ಆಧಾರವಾಗಿರುವ ಸಾಹಿತ್ಯವನ್ನೂ ಬಳಸಿಕೊಳ್ಳುತ್ತಿರುವುದಾಗಿ ತಿಳಿಸುತ್ತಾರೆ. ಇವರು ನಂಬಿರುವಂತೆ ಪ್ರೊಟೆಸ್ಟಂಟ್ ಪೂರ್ವಗ್ರಹಗಳಿಂದ ರಚಿಸಲ್ಪಟ್ಟ ವಚನಸಾಹಿತ್ಯವನ್ನು ಈಗ ಮರುಓದಿಗೆ ಒಳಪಡಿಸಿ ಸರಿಯಾದ ಇತಿಹಾಸ ರಚನೆಗೆ ಬುನಾದಿ ಹಾಕಬೇಕೆನ್ನುವುದು ಇವರ ಒತ್ತಾಸೆ.ಈ ಕಾರ್ಯಕ್ಕೆ ಇವರು ಆಶ್ರಯಿಸಿರುವ ವೈಧಾನಿಕತೆ ಯಾವುದು? ಪ್ರೊಟೆಸ್ಟಂಟ್ ಪೂರ್ವಗ್ರಹಗಳಿಂದ ವಚನಸಾಹಿತ್ಯವನ್ನು ಹೊರತಂದು  ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಖಂಡತೆಯಲ್ಲಿ ಇಡುವುದು ಮತ್ತು ಹೀಗೆ ಮಾಡಿದಾಗ ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನೂ, ವಚನ ಚಳವಳಿಯನ್ನೂ  ಜಾತಿ ಆಧರಿತ ವಿಭಜನೆಯಿಂದ ಪಾರುಮಾಡುವುದು ಸಾಧ್ಯವಾಗುತ್ತದೆ ಎನ್ನುವ ನಂಬಿಕೆ ಮತ್ತು ಗುರಿ.ಇವರ ಅಧ್ಯಯನವು ಮೂಲತಃ ಇತಿಹಾಸ ಮತ್ತು ಸಾಹಿತ್ಯಗಳ ಅಂತರ್‌ಶಿಸ್ತೀಯ ಮತ್ತು ಅಂತರ್ ಪಠ್ಯೀಯ ಓದಿನ ಪ್ರಯತ್ನ. ಆದರೆ ಈ ತಾತ್ವಿಕ  ಪರಿವೇಷದಲ್ಲಿಯೂ ಈ ವೈಧಾನಿಕತೆಯು ಇನ್ನೊಂದು ಆಯಾಮವನ್ನು ತನ್ನೊಳಗೆ ಸೇರಿಸಿಕೊಂಡಿದೆ. ಅದೆಂದರೆ ಆಧ್ಯಾತ್ಮಿಕ ಪರಿಭಾಷೆ. ಆಧ್ಯಾತ್ಮಿಕ ಪರಿಭಾಷೆಯನ್ನು ಅದರೆಲ್ಲ ಅಮೂರ್ತ ವಿವರಗಳಲ್ಲಿ ಬಳಸಿಕೊಳ್ಳುವುದರ ಮೂಲಕವೇ ಇದೊಂದು ಅಕಾಡೆಮಿಕ್ ಅಧ್ಯಯನವೆನ್ನುವ ಕಣ್ಕಟ್ಟನ್ನು ಅಥವಾ ಮಾಯೆಯನ್ನು ಈ ಸ್ವಘೋಷಿತ `ಒಳ್ಳೆಯ ಸಂಶೋಧನೆ' ಸೃಷ್ಟಿಸುತ್ತಿದೆ.ಯಾವ ಭಾರತೀಯ ಆಧ್ಯಾತ್ಮಿಕತೆಯ ಭಿತ್ತಿಯ್ಲ್ಲಲಿ ಇಡುವ ಮೂಲಕವೇ ತಮ್ಮ ತಾತ್ವಿಕತೆಯನ್ನು ಬೆಳೆಸಲು ಇವರು ಪ್ರಯತ್ನಿಸುತ್ತಿದ್ದಾರೋ ಆ ಆಧ್ಯಾತ್ಮಿಕ ಪರಂಪರೆಯ ಸ್ವರೂಪ ಮತ್ತು ವ್ಯಾಖ್ಯಾನ ಯಾವುದು? ಭಾರತೀಯ ಇತಿಹಾಸ ಮತ್ತು ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಚರ್ಚಿಸುವಾಗ ಆಧ್ಯಾತ್ಮಿಕ ಪರಂಪರೆಯನ್ನು ಹಲವು ಪಾತಳಿಗಳಲ್ಲಿಟ್ಟು ನೋಡಬೇಕಾದ್ದು ಅನಿವಾರ್ಯ. ಶಂಕರರನ್ನೂ ಬಸವನನ್ನೂ ಒಂದೇ ಪರಂಪರೆಯಲ್ಲಿಡಲು ಸಾಧ್ಯವೆ? ಈ ಪರಿಕಲ್ಪನೆಯೇ ಹಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.ವಿರಕ್ತಮಠಗಳಲ್ಲಿರುವ ಮುಕ್ತತೆ ಶಂಕರಮಠಗಳಲ್ಲಿದೆಯೆ? ವಿರಕ್ತ ಮಠಗಳ ಮುಕ್ತತೆಯ ಹಿಂದೆ ಕೆಲಸ ಮಾಡಿರುವುದು ಜಾತಿವಿನಾಶದ ಗುರಿಯೇ ಎನ್ನುವುದನ್ನು ವಚನಗಳ ಸಂಖ್ಯೆಯ ಆಧಾರದ ಮೇಲೆ ಅಲ್ಲಗಳೆಯುವುದನ್ನು ಸಂಶೋಧನೆ ಎಂದು ಒಪ್ಪಿಕೊಳ್ಳುವುದು ಹೇಗೆ? ಮಂಟೆಸ್ವಾಮಿಯಂತಹವರು ರೂಪುಗೊಳ್ಳುವ ಪರಂಪರೆಯನ್ನೂ ಅಂಥ ಸಾಧ್ಯತೆಯನ್ನೇ ಹತ್ತಿಕ್ಕುವ ವೈದಿಕ ಪರಂಪರೆಯನ್ನೂ ಸಮಾನ ಪಾತಳಿಯಲ್ಲಿಡಲು ಸಾಧ್ಯವಿಲ್ಲ. ಇಂಥ ಸಾಧ್ಯತೆಯ ಪ್ರತಿಪಾದನೆಯೇ ಈ ತಥಾಕಥಿತ `ಒಳ್ಳೆಯ ಸಂಶೋಧನೆಯ' ಬಗ್ಗೆ ಅನುಮಾನಗಳನ್ನು ವಿದ್ವಾಂಸರಲ್ಲಿ ಮಾತ್ರವಲ್ಲ ಹುಲುಮಾನವರಲ್ಲೂ ಹುಟ್ಟಿಸುತ್ತದೆ.ಆತ್ಮಜ್ಞಾನಕ್ಕೆ ಅಡ್ಡಿ ಎಂದು ಇವರು ಗುರುತಿಸುವ ಯಾವೆಲ್ಲ ಅಂಶಗಳಿವೆಯೋ ಅವೆಲ್ಲವೂ ...ಜಾತಿ, ಅಂತಸ್ತು, ಐಶ್ವರ್ಯ ಇತ್ಯಾದಿಗಳು ....ಇವೆಲ್ಲದರ ವಿರುದ್ಧ ನಡೆಸುವ ಹೋರಾಟಗಳು. ಬಸವನೂ ಸೇರಿದಂತೆ ಇಡೀ ವಚನ ಚಳವಳಿ ವ್ಯಕ್ತಿ ಮತ್ತು ಸಮುದಾಯದ ಡಂಭಾಚಾರದ ವಿರುದ್ಧ ಮತ್ತು ಮುಕ್ತಿಯ ಹಾದಿಯಲ್ಲಿನ ಉಪಾಧಿಗಳ ವಿರುದ್ಧ ನಡೆಸುವ ಹೋರಾಟವೆಂದೇ ತಿಳಿಯೋಣ. ಹೀಗಿದ್ದೂ ವಚನಗಳು ವ್ಯಕ್ತಿಯ ಅಥವಾ ಭಕ್ತನ ಅಂತರಂಗದ ಮಾತ್ರವಲ್ಲ ಬಹಿರಂಗದ  ಮತ್ತು ವ್ಯಕ್ತಿಯ ಮಾತ್ರವಲ್ಲ ಸಮುದಾಯದ ತಲ್ಲಣಗಳಾಗಿ ವಿಸ್ತಾರವನ್ನು ಪಡೆದದ್ದು ಹೇಗೆ ಮತ್ತು ಏಕೆ? ಇದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು.ಒಂದು, ಯಾವ ತರತಮಗಳು ಭಕ್ತನ ದಾರಿಯಲ್ಲಿನ ಅಡ್ಡಿಗಳಾಗಿದ್ದವೋ ಅವು ಆ ಕಾಲದ ಸಾಮಾಜಿಕ ಮತ್ತು ರಾಜಕೀಯ ತರತಮಗಳೂ ಆಗಿದ್ದವು. ಎಂತಲೇ ಅವು ಏಕಕಾಲಕ್ಕೆ ಭಕ್ತನು ಎದುರಿಸಬೇಕಾದ ಉಪಾಧಿಗಳೂ ಭವಿಯು ಎದುರಿಸಬೇಕಾದ ಉಪಾಧಿಗಳೂ ಆಗಿದ್ದವು. ಇವುಗಳ ಅಖಂಡತೆಯನ್ನು ಸಂಶೋಧನೆಗಳಾಗಲೀ, ಇತಿಹಾಸವನ್ನು ಸರಿಪಡಿಸುವ ದೃಷ್ಟಿಕೋನಗಳಾಗಲೀ ಬದಲಿಸುವುದು ಶಕ್ಯವಿಲ್ಲ.ಏಕೆಂದರೆ ಸಂಶೋಧನೆಯೆನ್ನುವುದು ವಿವರಗಳನ್ನು ಕುರಿತ ನಮ್ಮ ದೃಷ್ಟಿಕೋನದ ಪಲ್ಲಟಕ್ಕೆ ಅವಕಾಶ ಮಾಡಿಕೊಡುತ್ತದೆಯೇ ಹೊರತು ವಿವರಗಳನ್ನೇ ಇಲ್ಲವಾಗಿಸುವುದಕ್ಕಲ್ಲ. ಎರಡನೆಯದು ಕಲಾಮೀಮಾಂಸೆಯ ಪ್ರಶ್ನೆ. ಅನುಭವದ ಪ್ರಾಮಾಣಿಕತೆಯು ಅಭಿವ್ಯಕ್ತಿಯ ತೀವ್ರತೆಯಲ್ಲಿ ಬೆರೆತಾಗ ಹುಟ್ಟುವ ಅಪ್ಪಟ ಕಾವ್ಯವು ಮನುಷ್ಯ ನಾಗರಿಕತೆಯಲ್ಲಿ ಅದರ ಸೌಂದರ್ಯಕ್ಕಾಗಿ ಮಾತ್ರವಲ್ಲ ಆತ್ಯಂತಿಕ ಸತ್ಯಕ್ಕಾಗಿಯೂ ಸ್ಥಾಪಿತವಾಗಿದೆ.  ವ್ಯಕ್ತಿಯ ನೆಲೆಯನ್ನು ಮೀರಿ ಸಾಧಾರಣೀಕರಣದ ನೆಲೆಯನ್ನು ತಲುಪುವುದೇ  ಕಲೆಯ ಮಾಂತ್ರಿಕ ಶಕ್ತಿ. ಕಲೆಯ ಮತ್ತು ಸಾಹಿತ್ಯ ರಚನೆಯ  ಘೋಷಿತ ಉದ್ದೇಶವಿಲ್ಲದೆಯೂ ಸೃಷ್ಟಿಯಾದ ಈ ವಚನಗಳು ಕನ್ನಡ ಸಮುದಾಯದ ಸಂವೇದನೆಯ ಅಭಿನ್ನ ಭಾಗವೇ ಆಗಿಬಿಟ್ಟಿವೆ. ಇದಕ್ಕೆ ವಚನಗಳ ಕಾವ್ಯಗುಣವೆಷ್ಟೋ ಅಷ್ಟೇ ಇವುಗಳ ಕಾಲಸ್ಪರ್ಶದ ಅಥವಾ ತನ್ನ ಕಾಲಕ್ಕೆ ಮಿಡಿಯುವ ಗುಣವೂ ಕಾರಣ.ಇದನ್ನು ಅರಿಯುವುದಕ್ಕೆ ಬೌದ್ಧಿಕ ನಿಲುವು ಮಾತ್ರವಲ್ಲ ಸಾಹಿತ್ಯಕ ಸಂವೇದನೆಯೂ ಅವಶ್ಯವಾಗಿ ಬೇಕಾಗುತ್ತದೆ. ರಾಜಾರಾಮ ಹೆಗಡೆಯವರು ಅನಿವಾರ್ಯವೆಂದು ಗುರುತಿಸುವ, ವಚನಗಳ ಧ್ವನಿಯನ್ನು ಗುರುತಿಸಬೇಕೆನ್ನುವ ವಾಕ್ಯವು ವಾಸ್ತವವಾಗಿ ಕಾವ್ಯದ ಮೂಲಗುಣಗಳಲ್ಲೊಂದಾಗಿದೆ. ಧ್ವನಿಯೇ ಕಾವ್ಯದ ಆತ್ಮ ಎನ್ನುವುದು ಸಾರ್ವತ್ರಿಕವಾದ ಮತ್ತು ಸಾರ್ವಕಾಲಿಕವಾದ ಸತ್ಯ. ಸಾಹಿತ್ಯವನ್ನು ತಮ್ಮ ಸಂಶೋಧನೆಯ ಆಕರವಾಗಿ ಬಳಸಿಕೊಳ್ಳಬೇಕೆನ್ನುವವರು ಅದರ ಮೂಲಗುಣವನ್ನು ಒಪ್ಪಿಕೊಳ್ಳಬೇಕಾದ್ದು ಆಯ್ಕೆಯಲ್ಲ ಅನಿವಾರ್ಯ. ಯಾವ ಕ್ರಾಂತಿಯೂ ಘಟಿಸುವುದು ಜನಮಾನಸ ಅದಕ್ಕೆ ಸಿದ್ಧವಾದಾಗಲೇ. ಕನ್ನಡದ ಜನಮಾನಸ ಅಂಥದ್ದೊಂದಕ್ಕೆ ಸಜ್ಜಾಗಿತ್ತೆಂದೇ ಅದೊಂದು ಚಳವಳಿಯಾಗಿ ರೂಪುಗೊಂಡಿತು. ಅದೊಂದು ಸುಸಜ್ಜಿತವಾದ ಚಳವಳಿಯಲ್ಲ ಎನ್ನುವುದು ಚಳವಳಿ ಮತ್ತು ಜನಪರ ಹೋರಾಟಗಳೆರಡಕ್ಕೂ ಬಗೆಯುವ ಅನ್ಯಾಯವೇ. ಜಾತಿಯೂ ಸೇರಿದಂತೆ ಇತರ ಹಲವು ಶ್ರೇಣೀಕರಣಗಳ ವಿರೋಧಿ ನಿಲುವಿನ ಫಲಿತವಾಗಿ ಮೂಡಿ ಬಂದ ಇತರ ಕೆಳಜಾತಿಗಳ ವಚನಕಾರರೇ ಇದಕ್ಕಿರುವ ಬಹು ಮುಖ್ಯ ಪುರಾವೆ.ದೀಪದಿಂದ ದೀಪ ಹತ್ತುವಂತೆ, ಎಲ್ಲ ಕಟ್ಟುಗಳನ್ನು ಹರಿದಂತೆ ಆ ತನಕ ಅಭಿವ್ಯಕ್ತಿಯ ಅವಕಾಶವೇ ಇಲ್ಲದವರ  ಮತ್ತು ಈ ಅವಕಾಶ ಅಲಭ್ಯವಾಗಿದ್ದು ಅವರ ಜಾತಿಯ ಕಾರಣಕ್ಕೇ ಎನ್ನುವುದಕ್ಕೆ ಪ್ರೊಟೆಸ್ಟಂಟ್‌ರ ಪೂರ್ವಗ್ರಹಗಳನ್ನು ಮೀರಿದ ಪುರಾವೆಗಳು ಒಳ್ಳೆಯ ಸಂಶೋಧಕರಿಗೆ ಖಂಡಿತವಾಗಿಯೂ ಸಿಗುತ್ತವೆ. ಅಭಿವ್ಯಕ್ತಿಯು ಇಂದಿಗೂ ಅಪ್ಪಟ ಕಾವ್ಯವಾಗಿರುವುದಕ್ಕೆ ಒಂದು ಮುಖ್ಯ ಕಾರಣ ಶ್ರೇಣೀಕರಣದ ಕಾರಣಕ್ಕಾಗಿ ಅವಕಾಶ ವಂಚಿತರಾದವರಿಗೆ ಸಿಕ್ಕ `ಬದುಕಿನ' ಅವಕಾಶವೇ ಆಗಿದೆ.ವಚನ ಚಳವಳಿಯ ನಿರ್ಣಾಯಕ ಸಾಧನೆಗಳಲ್ಲೊಂದು ಎಂದು ನಾವು ತಿಳಿಯುವ `ಕಾಯಕ ತತ್ವವು' ತಂದುಕೊಟ್ಟ ಬಿಡುಗಡೆಯ ಮತ್ತು ಆತ್ಮಘನತೆಯ ಮೂಲ ಯಾವುದೆನ್ನುವುದನ್ನು ಕುರಿತು ಸಂಶೋಧನೆ ನಡೆಸಿದರೆ ಸಿಗುವ ಉತ್ತರ ಜಾತಿಶ್ರೇಣೀಕರಣದ ವಿರುದ್ಧ ನಡೆಸಿದ ಹೋರಾಟದಿಂದ ಎಂದೇ. ಅಂಬಿಗರ ಚೌಡಯ್ಯನೂ, ಆಯ್ದಕ್ಕಿ ಲಕ್ಕಮ್ಮನೂ, ಸೂಳೆ ಸಂಕವ್ವೆಯೂ, ಸತ್ಯಕ್ಕನೂ, ಭಿಕಾರಿ ಭೀಮಯ್ಯನೂ, ಬಾಚಿಕಾಯಕದ ಬಸವಣ್ಣನೂ, ಮಡಿವಾಳ ಮಾಚಿದೇವನೂ ಸೃಷ್ಟಿಯಾದ ಪರಿಸರದ ಹಿಂದೆ ಜಾತಿವಿರೋಧಿ ನಿಲುವು ಇರಲಿಲ್ಲ.ಏಕೆಂದರೆ 0.03 ವಚನಗಳಲ್ಲಿ ಮಾತ್ರ ಜಾತಿವಿರೋಧಿ ಮಾತುಗಳಿವೆ  ಎನ್ನುವುದು ತರ್ಕದ ಮಾತೂ ಅಲ್ಲ, ತಾತ್ವಿಕತೆಯ ನಿಲುವೂ ಆಗಲಾರದು. ಅಂಕಿ ಅಂಶಗಳ ಪುರಾವೆಗಳನ್ನೂ ಸಮರ್ಥನೆಯನ್ನೂ ಮೀರಿದ ಸಾವಯವ ಪುರಾವೆಗಳಿರುವಾಗ ಅವುಗಳಿಗೇ ಜೋತುಬೀಳುವುದು ಅವರ ವೈಧಾನಿಕತೆಯ ಮಿತಿಯನ್ನು ಮಾತ್ರ ಹೇಳುತ್ತದೆ.ಇದಕ್ಕಿಂತ ಮಹತ್ವದ ಮಾತೆಂದರೆ, 12ನೆಯ ಶತಮಾನದಿಂದಲೂ ಕನ್ನಡ ಸಮುದಾಯವು ವಚನ ಚಳವಳಿಯ ಜೊತೆ ಜೀವಕೊರಳ ಸಂಬಂಧವೊಂದನ್ನು ಕಟ್ಟಿಕೊಂಡೇ ಬಂದಿದೆ. ವಚನ ಚಳವಳಿಯ ನಂತರದ ಮುಖ್ಯ ಕವಿಗಳು ಇವರಿಂದ ಪ್ರಭಾವಿತರಾಗಿದ್ದಾರೆ. ಸಾಹಿತ್ಯವು ಆ ಯುಗದ ಅವಶ್ಯಕತೆಯ ಧ್ವನಿಯಾಗಿರುತ್ತದೆ ಎನ್ನುವ ಮಾತಿಗೆ ಪರಿಪೂರ್ಣ ಉದಾಹರಣೆಯಂತಿರುವ ವಚನ ಸಾಹಿತ್ಯವನ್ನು ಅದರ ಆತ್ಮದಂತಿರುವ  ವ್ಯಕ್ತಿ ಮತ್ತು ಸಮುದಾಯದ ಸಮಾನ ಪಾತಳಿಯ ನಿರ್ಮಾಣದ ಆಶಯದಿಂದ ಬಿಡಿಸಿ ಅಮೂರ್ತ ಆವರಣದೊಳಗೆ ಸ್ಥಾಪಿಸಬೇಕೆನ್ನುವುದು ಒಳ್ಳೆಯ ಸಂಶೋಧನೆಗಿಂತ ಹೆಚ್ಚಾಗಿ   ಅಜೆಂಡಾವೊಂದರ ಪ್ರಣಾಳಿಕೆಯಂತೆ ಕಾಣಿಸುತ್ತದೆ.ಹಾಗೆಯೇ ನಾವು ಗಮನಿಸಲೇ ಬೇಕಾದ ಇನ್ನೊಂದು ಸಂಗತಿಯೆಂದರೆ ವಚನ ಸಾಹಿತ್ಯವನ್ನು ಓದುವ ಹಲವು ದಾರಿಗಳನ್ನು ಕಟ್ಟಿಕೊಳ್ಳಲಾಗಿದೆ ಎನ್ನುವುದು. ಫ.ಗು.ಹಳಕಟ್ಟಿಯವರೂ ಸೇರಿದಂತೆ ಎಲ್. ಬಸವರಾಜು, ಎಂ. ಎಂ. ಕಲ್ಬುರ್ಗಿ ಅವರ ತನಕ ಹಲವು ಓದಿನ ದಾರಿಗಳನ್ನು ಯಶಸ್ವಿಯಾಗಿ ಬಳಸಲಾಗಿದೆ.ಉದಾಹರಣೆಗೆ ಷಟ್‌ಸ್ಥಲಗಳ ಆಧಾರದ ಮೇಲೆ ವಚನಗಳನ್ನು ಅರ್ಥೈಸುವುದು  ಉಪಯುಕ್ತವಾದ ಓದಿನ ಮಾರ್ಗವೆಂದೇ ಈಗಲೂ ತಿಳಿಯಲಾಗಿದೆ. ವಚನ ಚಳವಳಿಯ ಭಕ್ತಿ ಮತ್ತು ಸಾಮಾಜಿಕ ನಿಲುವುಗಳನ್ನು ಸ್ವಾಯತ್ತ ಎನ್ನಬಹುದಾದ ನೆಲೆಯಲ್ಲಿ ಆದರೆ ಖಂಡಿತವಾಗಿಯೂ ಖಚಿತವಾದ ಐಡಿಯಾಲಜಿಯ ನೆಲೆಯಲ್ಲಿ ನಾವು ಚರ್ಚಿಸಬಹುದು. ಪ್ರೊಟೆಸ್ಟಂಟ್  ಪೂರ್ವಗ್ರಹವಿಲ್ಲದೆಯೂ !ಇನ್ನು ಜಾಗತಿಕವಾಗಿ ಕನ್ನಡದ ಸ್ಥಾನಮಾನದ ಪ್ರಶ್ನೆ. ಇವರು ಇದರ ಬಗ್ಗೆ ಯೋಚಿಸಬೇಕಾದ್ದು ತೀರಾ ಅನಿವಾರ್ಯ. ಏಕೆಂದರೆ ಇವರ `ಐಡಿಯಾಲಜಿ'ಯನ್ನು ಆಧರಿಸಿಲ್ಲದ, ಕಣ್ಣೆದುರಿಗಿನ ಮತ್ತು ಶತಮಾನಗಳ ಕಟುವಾಸ್ತವಕ್ಕೆ ಕುರುಡಾದ ಅಧ್ಯಯನಕ್ಕಾಗಲೀ, ಇತಿಹಾಸದ ಸರಿಯಾದ ಓದಿನ ಹೆಸರಿನಲ್ಲಿ ಇವರು ನಡೆಸುತ್ತಿರುವ ಜಾಗತಿಕ ಹುನ್ನಾರಗಳಿಗಾಗಲೀ ಚದುರರೂ ವಿವೇಕಿಗಳೂ ಆದ ಕನ್ನಡಿಗರು ಬಲಿಯಾಗಲಾರರು. ಅದೇನಿದ್ದರೂ ಇವರ ಮೂಲ ಗುರಿಯಾದ ಜಾಗತಿಕ ಓದುಗರ ಸವಲತ್ತು ! ಆದರೆ ಇದನ್ನು ಪ್ರಶ್ನಿಸಬೇಕಾದ್ದು ಮತ್ತು ನಿರಾಕರಿಸಬೇಕಾದ್ದು ಕನ್ನಡಿಗರ ಮೂಲಭೂತ ಹಕ್ಕೆಂದೇ ಈ ಚರ್ಚೆ ಆರಂಭಗೊಂಡಿದೆ.ಸ್ಥಾವರಗೊಂಡಿದ್ದ, `ಸೀಮೆವಂತರ ಯುಕ್ತಿಯಾಗಿದ್ದ' ಸಾಮಾಜಿಕ ಸಂರಚನೆಯನ್ನೂ, ಆಧ್ಯಾತ್ಮಿಕ ಪರಂಪರೆಯನ್ನೂ ತನ್ನ ಜಂಗಮಶೀಲತೆಯ ಮೂಲಕವೇ ಅಂದು ಪ್ರಶ್ನಿಸಿದ, ಇಂದೂ ಪ್ರಶ್ನಿಸಲು ಅನುವು ಮಾಡಿಕೊಟ್ಟಿರುವ ವಚನಚಳವಳಿಯ ಜಾತಿವಿರೋಧಿ, ಜೀವಪರ ಮುಕ್ತ ನಿಲುವುಗಳನ್ನು ಯಾವ ವೈಧಾನಿಕತೆಯ ಕಣ್ಕಟ್ಟೂ ತಿರುಚಲಾರದು.ಕೊನೆಯದಾಗಿ ಐಡಿಯಾಲಜಿಯ ಪ್ರಶ್ನೆ. ನನ್ನ ಅಲ್ಪ ತಿಳಿವಳಿಕೆಯಲ್ಲಿ ಯಾವ ಒಳ್ಳೆಯ (ಕೆಟ್ಟ) ಸಂಶೋಧನೆಯೂ ಒಂದು ಐಡಿಯಾಲಜಿಯನ್ನಿಟ್ಟುಕೊಂಡು ಹೊರಡುವುದು ತೀರ ಪ್ರಾಥಮಿಕ ಸಂಗತಿ. ಸ್ಥಾಪಿತವಾಗಿರುವ ಐಡಿಯಾಲಜಿಯ ಜೊತೆಗಿನ ಮುಖಾಮುಖಿಯೋ, ಹೊಸ ಐಡಿಯಾಲಜಿಯ ರಚನೆಯ ಪ್ರಯತ್ನಗಳೋ ಎಲ್ಲಾ ಸಂಶೋಧನೆಗಳಲ್ಲೂ ಸಾಮಾನ್ಯ ಸಂಗತಿ.ಐಡಿಯಾಲಜಿಯನ್ನಿಟ್ಟುಕೊಂಡು ಚರ್ಚೆ ಮಾಡುವುದು ರಾಜಾರಾಮ ಹೆಗಡೆಯವರಿಗೆ ಬೇಡ ಎನಿಸುವುದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ. ಅದು ಒಳ್ಳೆಯ ಸಂಶೋಧನೆಯಾಗುವುದಿಲ್ಲವೆಂದು ಮತ್ತು ಜಾಗತಿಕವಾಗಿ ಕನ್ನಡದ ಸ್ಥಾನಮಾನವನ್ನು ಹೆಚ್ಚಿಸುವುದಿಲ್ಲವೆಂದು. ಹಾಗಿದ್ದರೆ ನಾನ್ ಐಡಿಯಾಲಜಿಕಲ್ ವಾದವನ್ನು ಮಂಡಿಸುವುದು ಇವರ ಸಂಶೋಧನೆಯ  ಉದ್ದೇಶವೆ?

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.