ಭಾನುವಾರ, ಮೇ 9, 2021
19 °C

ಜೀವಹನಿಗೆ ಜೀವ ತೆತ್ತವರು...

ಪ್ರಜಾವಾಣಿ ವಾರ್ತೆ ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬರ, ಬಡತನ, ಭೀಕರ ತಾಪ, ಕುಡಿವ ನೀರಿಗೆ ತತ್ವಾರ, ಮನವಿಗೂ ಸ್ಪಂದಿಸದ `ಅಧಿಕಾರ~, ಗೊಡವೆ ಇಲ್ಲದ ಜನಪ್ರತಿನಿಧಿಗಳು, ಹತ್ತಿರಕ್ಕೆ ಬಂದಿದ್ದರೂ ಹಳ್ಳಿಗೆ ಸುಳಿಯದ ಉಸ್ತುವಾರಿ ಸಚಿವರು... ಹೀಗೆ ಹಲವು ನೋವುಗಳ ನಡುವೆ ಬಾವಿಯಲ್ಲೇ ಶವವಾದ ಗ್ರಾಮದ ಯುವಕರು.-ಇದು ಬರಪೀಡಿತ ಗುಲ್ಬರ್ಗದ ಜಿಲ್ಲಾ ಕೇಂದ್ರದಿಂದ ಕೇವಲ 20 ಕಿ.ಮೀ. ದೂರದಲ್ಲಿ, ಭೀಮಾ ನದಿಯ ತೀರದ ಸಮೀಪದಲ್ಲಿರುವ ಅಳಿದುಳಿದ ಕೋಟೆಗಳ ಗ್ರಾಮ ಫಿರೋಜಾಬಾದ್‌ನ ಅ~ಮಂಗಳ~ ಮಧ್ಯಾಹ್ನದ ವ್ಯಥೆ. ಸ್ವತಃ ಸ್ವಚ್ಛಗೊಳಿಸಲು ಬಾವಿಗಿಳಿದ ಗ್ರಾಮದ ಯುವಕರು ಶವವಾಗಿ ಹೋದ ಕರಾಳ ಕತೆ.

 

ಗ್ರಾಮದ ಬಾವಿಯೊಂದನ್ನು ಸ್ವಚ್ಛಗೊಳಿಸಲು ಇಳಿದ ಕೂಲಿ ಕಾರ್ಮಿಕರಾದ ಇದೇ ಗ್ರಾಮದ ಚಿದಾನಂದ ನಾಟಿಕಾರ್ (23), ಬಸವರಾಜ ಕೆರಟನಳ್ಳಿ (23), ಶರಣಯ್ಯ ಮಠಪತಿ (18), ಆಯತುಲ್ಲಾ ಮುಲ್ಲಾ (25) ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಹಮೀದ್ ಪಟೇಲ (45) ಅಸುನೀಗಿದರು.ಮೃತ ಪಟ್ಟವರ ಪೈಕಿ ಹಮೀದ್ ಪಟೇಲ್ ಹೊರತು ಪಡಿಸಿ ಉಳಿದ ನಾಲ್ಕು ಮಂದಿಗೆ ಹೊಲ, ಆಸ್ತಿ ಏನು ಇಲ್ಲ. ಕೂಲಿ ಕಾಯಕವೇ ತುತ್ತಿನ ಚೀಲ. ಚಪ್ಪಡಿ ಹಾಸಿದ-ಚಪ್ಪರದ ಮನೆಯೇ ಆಲಯ. ಬಸವರಾಜ, ಚಿದಾನಂದ ಹಾಗೂ ಆಯತುಲ್ಲಾ ಅವರ ತಂದೆಯವರು ಈ ಹಿಂದೆಯೇ ಮೃತಪಟ್ಟಿದ್ದರು. ಹೀಗಾಗಿ ಕುಟುಂಬದ ಭಾರ ಹೊರುವ ನೊಗ ಹೆಗಲ ಮೇಲಿತ್ತು. ಆದರೆ ಬಾವಿಯಲ್ಲಿ ಇಳಿಸಿದ್ದ ಹಗ್ಗದ ಕೈ ಹಿಡಿಯಲಾಗಲಿಲ್ಲ. ಕುಡಿವ ನೀರಿಗೆ ಬಾವಿಗಿಳಿದವರು ಉಸಿರಿಗೆ ಗಾಳಿ ಸಿಗದೇ ಇಹಲೋಕ ಬಿಟ್ಟು ಹೋದರು.ಈ ಪೈಕಿ ಶರಣಯ್ಯ ಮಠಪತಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿ ಬಂದಿದ್ದನು. ಕೆಲವೇ ದಿನಗಳ ಹಿಂದೆ ನಡೆದಿದ್ದ ಸಹೋದರಿ ಮಹಾನಂದಳ ಮದುವೆ ವೆಚ್ಚವು  ತಂದೆಗೆ ಹೊರೆಯಾಗಬಾರದು ಎಂಬ ಜಿದ್ದಿನಿಂದ ಕೂಲಿಗಾಗಿ ಬಾವಿಗಿಳಿದಿದ್ದನು. ಉಸಿರುಗಟ್ಟುತ್ತಿದ್ದ ಮಗನನ್ನು ಬದುಕಿಸಲು ಬಾವಿಗಿಳಿದ ತಂದೆಯೇ ಕಣ್ಣೆದುರೇ ಮುಳುಗಿ ಮೃತಪಟ್ಟನು. ಕಲಿಕೆಯ ಜೊತೆಯೇ ಕುಟುಂಬದ ಆರ್ಥಿಕ ಹೊರಗೆ ಹೆಗಲು ಕೊಡಲು ಹೋಗಿದ್ದನು. ಆದರೆ  ವಿಧಿಯಾಟ ಬೇರೆಯಾಗಿತ್ತು. `ಮಗಳ ಮದುವೆ, ಕಾಲೇಜಿಗೆ ಹೋಗಲಿದ್ದ ಮಗ...~ ಎಂಬ ಕನಸು ಕಾಣುತ್ತಿದ್ದ ತಂದೆ ಶಾಂತಯ್ಯ ಸ್ವಾಮಿ ಮಠಪತಿ ಕಣ್ಣು ತುಂಬಿ ಕೊಂಡಿತ್ತು. ಆದರೂ ದಿಟ್ಟೆದೆಯಿಂದ ಉಳಿದವರಿಗೆ ಸಾಂತ್ವನ ಹೇಳುತ್ತಿದ್ದರು. ಮಗ ಬಾರದ ಬಾವಿಯಲ್ಲಿ ಲೀನವಾಗಿದ್ದಾನೆ.ಬಸವರಾಜ್‌ನ ತಾಯಿ ಹಾಗೂ ತಂಗಿಯ ರೋದನ ಕೇಳಲಾಗದು. ಕುಟುಂಬದ ಆಸರೆಯಾಗಿದ್ದ ಮಗ ಶವವಾಗಿ ಮಲಗಿದ್ದನು. ತಂದೆಯ ಬಳಿಕ ಬದುಕಿನ ಭಾರ ಹೊತ್ತವನೇ ಅವನು. ಎರಡು ದಿನಗಳ ಹಿಂದೆಯಷ್ಟೇ ಯಾದಗಿರಿಯ ಹಳ್ಳಿಯೊಂದರಿಂದ ಆತನಿಗೆ ಹುಡುಗಿ ನೋಡಲಾಗಿತ್ತು. ಬಸವರಾಜನೂ ಮೆಚ್ಚಿದ್ದನು. ಮದುವೆ ನಿಶ್ಚಯ ನಡೆಯಬೇಕಿತ್ತಷ್ಟೇ! ಆದರೆ ಹಸಮಣೆಗೂ ಮೊದಲೇ ಶವಾಗಾರಕ್ಕೆ ಸೇರಿದ್ದ ಮಗನನ್ನು ಕಂಡ ತಾಯಿ ಒಮ್ಮೆ ಅಳು, ಕೆಲವೊಮ್ಮೆ ಮೂಕಳಾಗಿ ನಿಂತಿದ್ದಳು. ಮದುವೆಗೂ ಮೊದಲೇ ಮರಣ ಮನೆಗೆ ಬಂದಿತ್ತು.ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದ ಹಮೀದ್ ಅವರಿಗೆ ಎಂಟು ಕಂದಮ್ಮಗಳು. ಬಾವಿಯಲ್ಲಿ ಜೀವಕ್ಕಾಗಿ ಪರದಾಡುತ್ತಿದ್ದ ಗ್ರಾಮದ ಯುವಕರನ್ನು ರಕ್ಷಿಸಲು ಹೋದ ಹಮೀದ್ ಅವರೂ ಬಾರದ ಲೋಕಕ್ಕೆ ಹೋಗಿದ್ದಾರೆ. ಜೀವ ಕೊಡಲು ಹೋದ ಹಮೀದ್ ಪತ್ನಿ-ಮಕ್ಕಳು ಈಗ ಅನಾಥ. ಸಂಬಂಧಿಕರ ರಕ್ಷಣೆಯೇ ಆಧಾರ. ಆಯತುಲ್ಲಾ ಅವರ ಬದುಕಿನ ಕಷ್ಟವೂ ಹೇಳುವಂತಿಲ್ಲ. ದಿನದ ಕೂಲಿಗೆಯ ಮನೆಯ ಜೀವನಾಧಾರ. ಈಗ ಕೂಲಿಯೂ ಇಲ್ಲ ಕಾಯಕ ಜೀವಿಯೂ ಇಲ್ಲ.ಈ ಘಟನೆಯಲ್ಲಿ ಮೊಬಿನ್, ರಜಾಕ್ ಮತ್ತಿತರರು ಪರಾಗಿದ್ದಾರೆ. ಆದರೆ ಒಂದೇ ಗ್ರಾಮದ ಐದು ಮಂದಿ ಮೃತಪಟ್ಟಿದ್ದಾರೆ. ಬರದ ಊರಿನ ಜನತೆಗೆ ಕುಡಿವ ನೀರು ದೊರಕಿಸಲು ಬಾವಿಗಿಳಿದವರು ಬಾರದ ಲೋಕಕ್ಕೆ ಹೋಗಿದ್ದಾರೆ.`ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಇನ್ನು ಬರುತ್ತಾರೆ. ಆದರೆ ನಮ್ಮ ಯುವಕರು ಮತ್ತೆ ಬರುತ್ತಾರೆಯೇ? ಬರ ಬಂದರೂ, ಮನವಿ ನೀಡಿದರೂ, ಬೇಡಿದರೂ, ಕಾಡಿದರೂ ಕನಿಷ್ಠ ಕುಡಿವ ನೀರಿಗೆ ವ್ಯವಸ್ಥೆ ಮಾಡಲಾಗದವರು ಇನ್ನು ಜೀವ ಎಲ್ಲಿಂದ ತರುತ್ತಾರೆ?~ ಎಂದು ಆನಂದ, ಸಾಯಿಬಣ್ಣ ಮತ್ತಿತರರು ಶವದ ಮುಂದೆ ನಿಂತುಕೊಂಡು ಕಣ್ಣೀರು ಸುರಿಸುತ್ತಾ ಪ್ರಶ್ನಿಸುತ್ತಿದ್ದರು. ಈ ಕುಟುಂಬಗಳಿಗೆ ಕನಿಷ್ಠ ಪರಿಹಾರವಾದರೂ ಸಿಗಬಹುದೇ? ಎಂದು ಕೇಳುತ್ತಿದ್ದರು.ರೋದನದ ನಡುವೆ ಎಲ್ಲವೂ ನಿರುತ್ತರ. ಅಳಿದುಳಿದ ಕೋಟೆಗಳ ಫಿರೋಜಾಬಾದ್‌ನಲ್ಲಿ `ಬರ~ವೂ ಬರ್ಬರವಾಗಿದೆ. ಭೀಮಾ ತೀರದ ಊರಿನಲ್ಲಿ ನೀರವ ಮೌನ ಮನೆ ಮಾಡಿದೆ. ಜೀವ-ಹನಿಗೂ ತತ್ವಾರ.

ನೀರು ಕುಡಿದು ಸಾವು

ಆಮ್ಲಜನಕದ ಕೊರತೆಯಿಂದ ದೇಹ ಸ್ವಾಧೀನ ಕಳೆದುಕೊಂಡು ನೀರಿಗೆ ಬಿದ್ದಿದ್ದಾರೆ. ಶ್ವಾಸಕೋಶಕ್ಕೆ ನೀರು ಸೇರಿದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಎಸ್ಪಿ ಕಾಶೀನಾಥ ತಳಕೇರಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. `ಐದು ಮಂದಿಯೂ ನೀರು ಕುಡಿದು ಸಾವನ್ನಪ್ಪಿದ್ದಾರೆ~ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪ್ರಜಾವಾಣಿಗೆ ತಿಳಿಸಿದ್ದಾರೆ.ಐದು ಮಂದಿಯ ಶವವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದಾಗ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು. ಬಹುತೇಕ ಗ್ರಾಮಸ್ಥರು ಜಮಾಯಿಸಿದ್ದರು. ಮೃತ ಕುಟುಂಬಗಳಿಗೆ ಕನಿಷ್ಠ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ವಿಠ್ಠಲ ಹೇರೂರು, ಸ್ಥಳೀಯ ಜಿ.ಪಂ. ಸದಸ್ಯರು, ಗ್ರಾಪಂ ಅಧ್ಯಕ್ಷರು ಮತ್ತಿತರ ಮುಖಂಡರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಕ್‌ನಾಗ್ ಪುಣ್ಯಶೆಟ್ಟಿ, ಉಪಾಧ್ಯಕ್ಷ ನಿತಿನ್ ಗುತ್ತೇದಾರ್ ಮತ್ತಿತರರು ಭೇಟಿ ನೀಡಿದರು. ಎಸ್ಪಿ ಪ್ರವೀಣ್ ಮಧುಕರ್ ಪವಾರ್, ಡಿವೈಎಸ್ಪಿ ಎ.ಡಿ.ಬಸಣ್ಣನವರ್, ತಿಮ್ಮಪ್ಪ, ಸಿಪಿಐ ವಿಜಯಲಕ್ಷ್ಮಿ, ಪಿಐ ಇನಾಂದಾರ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.