ಜೂನ್ 3ರಿಂದ ಸೈನ್ಯ ಭರ್ತಿ ರ್ಯಾಲಿ: ನಿಟ್ಟಾಲಿ

ಬೀದರ್: ಬೀದರ್ ನಗರದಲ್ಲಿ ಜೂನ್ 3ರಿಂದ 10ರವರೆಗೆ ಸೇನೆಯ ವಿವಿಧ ಹುದ್ದೆಗಳಿಗೆ ನೇಮಕ ಮಾಡಲು ರ್ಯಾಲಿ ನಡೆಯಲಿದ್ದು, ಜಿಲ್ಲಾಡಳಿತದಿಂದ ರ್ಯಾಲಿ ಸುಗಮವಾಗಿ ನಡೆಯಲು ಅಗತ್ಯ ಸಹಕಾರ ನೀಡಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ನಿಟ್ಟಾಲಿ ತಿಳಿಸಿದರು.
ಸೇನಾ ಭರ್ತಿ ರ್ಯಾಲಿ ಆಯೋಜನೆ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನೆಹರು ಕ್ರೀಡಾಂಗಣದಲ್ಲಿ ರ್ಯಾಲಿ ನಡೆಯಲಿದ್ದು, ನಿತ್ಯ ಸರಾಸರಿ 5 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಸೂಕ್ತ ಬ್ಯಾರಿಕೇಡ್ ನಿರ್ಮಿಸುವುದು ಸೇರಿದಂತೆ ಅಭ್ಯರ್ಥಿಗಳಿಗೆ ಸೂಕ್ತ ಪೆಂಡಾಲ್ ವ್ಯವಸ್ಥೆ, ಧ್ವನಿವರ್ಧಕ, ಕುರ್ಚಿ ವ್ಯವಸ್ಥೆಯನ್ನು ಮಾಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತುರ್ತು ಅಗತ್ಯಗಳಿಗಾಗಿ ವೈದ್ಯರ ತಂಡ ಮತ್ತು ಅಂಬ್ಯುಲೆನ್ಸ್ ಸಜ್ಜಾಗಿರಿಸುವುದು, ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಶೌಚಾಲಯ ಮತ್ತು ಶುಚಿತ್ವದ ವ್ಯವಸ್ಥೆ ಕಲ್ಪಿಸುವುದು, ರ್ಯಾಲಿ ಸಂದರ್ಭದಲ್ಲಿ ಅಧಿಕಾರಿಗಳ ವಾಸ್ತವ್ಯ, ಊಟದ ಸಿದ್ಧತೆಗೆ ವ್ಯವಸ್ಥೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳದಲ್ಲಿ ಹಾಜರಿರಬೇಕು ಎಂದು ಸೂಚಿಸಲಾಯಿತು.
ಕರ್ನಲ್ ವಿಧಾನ್ ಸೇನ್ ಅವರು, ಜಿಲ್ಲೆಯ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಬೀದರಿನಲ್ಲಿ ಸೇನಾ ಭರ್ತಿ ರ್ಯಾಲಿಯನ್ನು ಆಯೋಜಿಸಲಾಗಿದೆ. ನೇಮಕಾತಿ ಸಂಪೂರ್ಣ ಪಾರದರ್ಶಕ ಮತ್ತು ಉಚಿತವಾಗಿ ನಡೆಯಲಿದೆ. ಸೇನೆಗೆ ಸೇರಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ ಎಂದರು.
ಮೇಜರ್ ಜಿ.ಕೆ.ಸಿಂಗ್ ಅವರು ಎಂಟು ದಿನ ಕಾಲ ರ್ಯಾಲಿ ನಡೆಯಲಿದ್ದು, ಬೀದರ, ಕೊಪ್ಪಳ, ಗುಲ್ಬರ್ಗಾ, ಯಾದಗಿರಿ, ರಾಯಚೂರು ಮತ್ತು ಬಳ್ಳಾರಿಯ ಅಭ್ಯರ್ಥಿಗಳು ಭಾಗವಹಿಸಬಹುದು. ಸೋಲ್ಜರ್ ಜನರಲ್, ಸೋಲ್ಜರ್ ಟ್ರೆಡ್ಸ್ಮನ್, ಸೋಲ್ಜರ್ ಕ್ಲರ್ಕ್, ಸೋಲ್ಜರ್ ಟೆಕ್ನಿಕಲ್ ಮತ್ತು ಸೋಲ್ಜರ್ ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗಳಿಗಾಗಿ ನೇಮಕಾತಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.