ಬುಧವಾರ, ಏಪ್ರಿಲ್ 21, 2021
23 °C

ಜೆಡಿಎಸ್ ಜತೆ ಸೇರಿದರೆ ರಾಜ್ಯ ಸರ್ವನಾಶ:ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಪ್ಪ-ಮಕ್ಕಳ ಪಕ್ಷ (ಜೆಡಿಎಸ್) ರಾಜ್ಯವನ್ನು ಸರ್ವನಾಶ ಮಾಡಲು ಹೊರಟಿದೆ. ನೀವೂ ಅವರ ಜೊತೆ ಕೈಜೋಡಿಸಿದರೆ ರಾಜ್ಯ ಸರ್ವನಾಶ ಆಗುತ್ತದೆ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾಂಗ್ರೆಸ್ ಸದಸ್ಯರ ಮೇಲೆ ವಿಧಾನ ಪರಿಷತ್‌ನಲ್ಲಿ ಟೀಕಾಪ್ರಹಾರ ನಡೆಸಿದರು.ಗುರುವಾರ ಬೆಳಿಗ್ಗೆ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಗಳ ಪೀಠದ ಮುಂದಿನ ಅಂಗಳಕ್ಕೆ ನುಗ್ಗಿದ ಪ್ರತಿಪಕ್ಷಗಳ ಸದಸ್ಯರು ‘ಪ್ರೇರಣಾ’ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಘೋಷಣೆ ಕೂಗಿದರು. ವಿರೋಧ ಪಕ್ಷದ ನಾಯಕಿ ಮೋಟಮ್ಮ ಮಾತನಾಡಿ, ‘ಮುಖ್ಯಮಂತ್ರಿಗಳು ಅಧಿಕಾರ ದುರುಪಯೋಗ ಮಾಡಿರುವ ಬಗ್ಗೆ ಸಮಗ್ರ ಚರ್ಚೆ ಆಗಕು’ ಎಂದು ಆಗ್ರಹಿಸಿದರು.ಆಗ ಮಾತನಾಡಿದ ಯಡಿಯೂರಪ್ಪ ಅವರು ಪ್ರತಿಪಕ್ಷಗಳ ಮೇಲೆ ವಾಕ್‌ಪ್ರಹಾರ ನಡೆಸಿದರು. ‘ಪ್ರೇರಣಾ ಟ್ರಸ್ಟ್‌ನಲ್ಲಿ ನನ್ನ ಮಕ್ಕಳಲ್ಲದೆ ಇನ್ನೂ ಅನೇಕ ಟ್ರಸ್ಟಿಗಳಿದ್ದಾರೆ, ಆದರೆ ಪ್ರತಿಪಕ್ಷಗಳು ಸಿಎಂ ಮಕ್ಕಳು ಎಂದು ಟೀಕೆ ಮಾಡುವುದು ಶೋಭೆ ತರುವುದಿಲ್ಲ’ ಎಂದು ಹರಿಹಾಯ್ದರು.‘ಟ್ರಸ್ಟ್ ವತಿಯಿಂದ ಆಂಧ್ರಪ್ರದೇಶದ ಕುಪ್ಪಂನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಕಾಲೇಜು ಸ್ಥಾಪನೆಯಾಗಿದೆ. ಇಲ್ಲಿ ನಿರ್ಮಿಸಲಿರುವ ಸಭಾಂಗಣಕ್ಕೆ ತಮ್ಮ ಹೆಸರಿಡಬೇಕು ಎಂಬ ಕಾರಣಕ್ಕೆ ಜಿಂದಾಲ್ ಸಂಸ್ಥೆಯವರು ದೇಣಿಗೆ ನೀಡಿದ್ದಾರೆ, ಇದರಲ್ಲಿ ಋಣ ತೀರಿಸುವ ವಿಚಾರ ಇಲ್ಲ’ ಎಂದರು.‘ವಿಧಾನಸಭೆ ಅಧಿವೇಶನದಲ್ಲಿ ಎಲ್ಲ ಹಗರಣಗಳ ಬಗ್ಗೆ ಚರ್ಚೆ ನಡೆಸೋಣ ಎಂದೆ. ದೇವೇಗೌಡರ ಕುಟುಂಬದವರು ಮೈಸೂರಿನಲ್ಲಿ 48 ನಿವೇಶನ ಪಡೆದುಕೊಂಡಿದ್ದರ ಬಗ್ಗೆ, ಜಂತಕಲ್ ಎಂಟರ್‌ಪ್ರೈಸಸ್ ಸಂಸ್ಥೆಗೆ 40 ವರ್ಷಗಳಿಗೆ ಗಣಿ ನವೀಕರಣ ಮಾಡಿಕೊಟ್ಟು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರ ಬಗ್ಗೆ ಚರ್ಚೆ ಮಾಡಲು ನಿಮಗೆ ಆಗುವುದಿಲ್ಲ’ ಎಂದು ಪ್ರತಿಪಕ್ಷಗಳ ಮೇಲೆ ಕಿಡಿಕಾರಿದರು.‘ಅಧಿಕಾರ ಯಾರು ಕೊಟ್ಟರು?’: ‘ದೇವೇಗೌಡರು ಲೋಕಸಭೆಯಲ್ಲಿ ಪ್ರೇರಣಾ ಟ್ರಸ್ಟ್ ಬಗ್ಗೆ ಚರ್ಚೆ ಮಾಡುತ್ತಾರೆ, ಇಲ್ಲಿ ನೀವು ಅದನ್ನೇ ಮಾಡುತ್ತೀರಿ. ತನಿಖೆಯ ಕುರಿತು ಸರ್ಕಾರ ತನ್ನ ನಿಲುವು ಪ್ರಕಟಿಸಿದ ಮೇಲೂ ಹೀಗೇ ಆಗಬೇಕು ಎನ್ನಲು ನಿಮಗೆ ಅಧಿಕಾರ ಕೊಟ್ಟವರು ಯಾರು’ ಎಂದು ಆವೇಶದಿಂದ ಕೇಳಿದರು.‘ಅಪ್ಪ-ಮಕ್ಕಳ ಪಕ್ಷದ ನಾಯಕ ಸಂಸತ್ತಿನಲ್ಲಿ ಪ್ರೇರಣಾ ಟ್ರಸ್ಟ್ ಬಗ್ಗೆ ಮಾತನಾಡುತ್ತಾರೆ, ಆದರೆ ಅವರು ಮಾಡಿದ್ದು ಮೂರು ದಿನ ಚರ್ಚೆ ಮಾಡುವಷ್ಟಿದೆ’ ಎಂದು ಹರಿಹಾಯ್ದರು.ಈ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರ ಧರಣಿ ಮುಂದುವರಿದಿತ್ತು. ಈ ನಡುವೆ ಜೆಡಿಎಸ್‌ನ ಸಂದೇಶ್ ನಾಗರಾಜ್ ಮತ್ತು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ನಡುವೆ ಮಾತಿಗೆ ಮಾತು ಬೆಳೆಯಿತು. ಪರಸ್ಪರ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಸದಸ್ಯರನ್ನು ನಿಯಂತ್ರಿಸಲಾಗದೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.ವಿಧಾನಸಭೆಯಲ್ಲಿ ಅಂಗೀಕಾರವಾದ ಏಳು ಮಸೂದೆಗಳನ್ನು ಪ್ರತಿಪಕ್ಷಗಳ ಗದ್ದಲದ ನಡುವೆಯೇ ಪರಿಷತ್ತಿನಲ್ಲಿ ಯಾವುದೇ ಚರ್ಚೆ ನಡೆಸದೆ ಅಂಗೀಕರಿಸಲಾಯಿತು. ನಂತರ ಶಂಕರಮೂರ್ತಿ ಅವರು ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.