ಸೋಮವಾರ, ಮೇ 16, 2022
28 °C

ಜೆಡಿಎಸ್ ಮುಖಂಡರೊಂದಿಗೆ ಬಂಗಾರಪ್ಪ ಬೈಠಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ‘ತಾಲ್ಲೂಕಿನಲ್ಲಿ ಕಾಂಗ್ರೆಸ್ ಬೆಂಬಲಿಸಿದರೆ ಬಿಜೆಪಿ ಗೆಲ್ಲುತ್ತದೆ. ಇದರ ಅರಿವು ಇಟ್ಟುಕೊಂಡು ಕಾಂಗ್ರೆಸ್ಸನ್ನು ಮಣಿಸುವ ಮೂಲಕ ಜೆಡಿಎಸ್ ಗೆಲುವಿಗೆ ನಾಂದಿ ಹಾಡಿ’ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕರೆ ನೀಡಿದರು.ಬುಧವಾರ ಸಮೀಪದ ಕಡಸೂರಿನ ಮುಖಂಡ ಸತ್ಯನಾರಾಯಣ ಅವರ ಮನೆಯಲ್ಲಿ ತಮ್ಮ ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ಬೈಠಕ್ ನಡೆಸಿ ಅವರು ಮಾತನಾಡಿದರು.ತಾಲ್ಲೂಕಿನ ತಂದೆ-ತಾಯಿ-ಸಮಗ್ರ ಜನತೆಯ ಹಿತದೃಷ್ಟಿಯಿಂದ ಕಾಂಗ್ರೆಸ್ಸಿಗೆ ಓಟು ಹಾಕಬೇಡಿ ಎಂದ ಅವರು, ಮಹಾಭಾರತದ ನೀತಿ ಅನಿವಾರ್ಯ ಆಗಿದೆ. ಮುಂಬರುವ ಚುನಾವಣೆಯನ್ನು ಸವಾಲು ಎಂಬಂತೆ ಸ್ವೀಕರಿಸಿದ್ದು, ಯೋಜನಾಬದ್ಧವಾಗಿ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಭೂ ಹಗರಣವನ್ನು ದಾಖಲೆ ಸಮೇತ ಬಯಲಿಗೆ ಎಳೆದಿರುವ ಮಾಜಿ ಸಿಎಂ ಎಚ್‌ಡಿಕೆ ರಾಜ್ಯದ ನಾಯಕ ಆಗಬೇಕು ಎಂದ ಅವರು, ತಾಲ್ಲೂಕಿನಲ್ಲಿ ತಮ್ಮ ಚಿಂತನೆ ಮುಂದುವರಿಸಿಕೊಂಡು ಹೋಗುವುದು ಮಧುವಿನಿಂದ ಮಾತ್ರ ಸಾಧ್ಯ. ಆತನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.ಮುಂಬರುವ ಚುನಾವಣೆಯಲ್ಲಿ ಮಧು ಸ್ಪರ್ಧಿಸಲೇಬೇಕು ಎಂಬ ಒತ್ತಡವಿಲ್ಲ. ತಾಲ್ಲೂಕಿನ ಇನ್ನಾವುದೇ ಸಮರ್ಥರನ್ನು ಸೂಚಿಸಿದರೆ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ತಮ್ಮದಾಗಲೀ, ಮಧು ಅವರದಾಗಲೀ ಅಭ್ಯಂತರ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಜೆಪಿಯ ಆಪರೇಷನ್ ಕಮಲ ನಾಚಿಕೆಗೆಟ್ಟ ರಾಜಕಾರಣಕ್ಕೆ ಉದಾಹರಣೆ. ಅದಕ್ಕೆ ತಕ್ಕ ದಂಡವನ್ನು ಆ ಪಕ್ಷ ಸಧ್ಯದಲ್ಲಿಯೇ ತೆರಲಿದೆ. ಹೆಂಡ, ಹಣ ಹಂಚಿ, ನೀತಿಗೆಟ್ಟ ರಾಜಕಾರಣ ಮಾಡುವ ಬದಲು ಮನೆಯಲ್ಲಿ ಇರುವುದೇ ಮೇಲು ಎಂದು ಟೀಕಿಸಿದರು.ಭೂ ಸುಧಾರಣೆ ಕಾನೂನು ಹಾಗೂ ಬಗರ್‌ಹುಕುಂ ಸಾಗುವಳಿ ಬಗ್ಗೆ ಪ್ರಸ್ತಾಪಿಸಿದ ಅವರು, ಕಾನೂನಿನ ಉದ್ದೇಶ ಬಡವರಿಗೆ ಸಹಾಯ ಮಾಡುವುದು ಆಗಿರಬೇಕೇ ಹೊರತು, ಮತ್ತೊಬ್ಬ ಬಡವನಿಗೆ ಅನ್ಯಾಯ ಮಾಡುವುದಲ್ಲ.  ಅರಣ್ಯಭೂಮಿ ಕಳೆದು ಕೊಳ್ಳುವುದು ಒಳ್ಳೆಯದಲ್ಲ ಎಂದು ಇದೇ ವೇಳೆ ಸಲಹೆ ನೀಡಿದ ಅವರು, ಬಗರ್‌ಹುಕುಂ ಸಾಗುವಳಿ ಮಾಡಿದವರಿಗೆ ಗರಿಷ್ಠ 2 ಎಕರೆ ನಿಗದಿಪಡಿಸಿ, ಅದರಲ್ಲಿ ಅರ್ಧ ಎಕರೆ ಅರಣ್ಯ ಬೆಳೆಸುವ ಕರಾರಿನ ಮೇಲೆ ಹಕ್ಕುಪತ್ರ ನೀಡಬಹುದು ಎಂಬ ಸಲಹೆಯನ್ನು ತಾವು ಬಿಜೆಪಿ ಸಂಸದ ಆಗಿದ್ದಾಗ ನೀಡಿದ್ದಾಗಿ ಸ್ಮರಿಸಿಕೊಂಡರು. ತಾಲ್ಲೂಕಿನ ಜನತೆ ನೀಡಿದ ಮತವನ್ನು ಸದ್ಬಳಕೆ ಮಾಡಿಕೊಂಡಿದ್ದೇನೆ. ಇಲ್ಲಿ ಹೊಂದಿರುವ ಗೌರವವನ್ನೇ ರಾಷ್ಟ್ರಮಟ್ಟದಲ್ಲಿಯೂ ಹೊಂದಿದ್ದು, ಇದಕ್ಕಾಗಿ ತಾಲ್ಲೂಕಿನ ಜನತೆಗೆ ಎಂದಿಗೂ ಋಣಿ ಆಗಿರುವುದಾಗಿ ತಿಳಿಸಿದರು.ಎಂ.ಡಿ. ಶೇಖರ್, ಶಿವಪ್ಪ ಹುಲ್ತಿಕೊಪ್ಪ, ಶ್ರೀಪಾದರಾವ್, ಗುರುಮೂರ್ತಿ, ಪ.ಪಂ. ಸದಸ್ಯ ಮಂಚಿ ಸೋಮಪ್ಪ, ತಾ.ಪಂ. ಸದಸ್ಯ ವೀರಭದ್ರಗೌಡ,  ಜಯಶೀಲಗೌಡ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.