ಜೈಲಿನಲ್ಲಿ ಕುಮಾರಸ್ವಾಮಿ- ಕೃಷ್ಣ ಮಾತುಕತೆ

7

ಜೈಲಿನಲ್ಲಿ ಕುಮಾರಸ್ವಾಮಿ- ಕೃಷ್ಣ ಮಾತುಕತೆ

Published:
Updated:

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶನಿವಾರ ಬೆಳಿಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ತೆರಳಿ ನ್ಯಾಯಾಂಗ ಬಂಧನದಲ್ಲಿರುವ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ಕೃಷ್ಣ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಬೆಳಿಗ್ಗೆ ಕಾರಾಗೃಹಕ್ಕೆ ಧಾವಿಸಿದ ಕುಮಾರಸ್ವಾಮಿ, ಅಧಿಕಾರಿಗಳ ಅನುಮತಿಯೊಂದಿಗೆ ಕೃಷ್ಣ ಅವರನ್ನು ಭೇಟಿ ಮಾಡಿದರು. 45 ನಿಮಿಷಗಳಿಗೂ ಹೆಚ್ಚು ಕಾಲ ಅವರೊಂದಿಗೆ ಚರ್ಚೆ ನಡೆಸಿದರು.

ಕಳೆದ ಶನಿವಾರವೂ ಕಾರಾಗೃಹದಲ್ಲೇ ಕೃಷ್ಣ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದರು.

`ಧೈರ್ಯ ತುಂಬಲು ಹೋಗಿದ್ದೆ~: ಜೈಲಿನಲ್ಲಿ ಕೃಷ್ಣ ಅವರನ್ನು ಭೇಟಿ ಮಾಡಿರುವ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಅವರು, `ನಾನು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಡಾ.ಕೃಷ್ಣ ಅವರನ್ನು ಭೇಟಿ ಮಾಡಿರುವುದು ನಿಜ. ಹಲವು ದಿನಗಳಿಂದ ಜೈಲಿನಲ್ಲಿರುವ ಅವರಿಗೆ ಧೈರ್ಯ ತುಂಬಲು ತೆರಳಿದ್ದೆ. ಜಾಮೀನು ದೊರೆಯದಿರುವುದರಿಂದ ಅವರು ಎದೆಗುಂದಬಾರದು ಎಂಬ ಕಾರಣದಿಂದ ಹೋಗಿದ್ದೆ~ ಎಂದರು.

ಕಾರಾಗೃಹದ ಅಧೀಕ್ಷಕರ ಕಚೇರಿಯಲ್ಲಿದ್ದ ವೇಳೆ ಕುಮಾರಸ್ವಾಮಿ ಅವರನ್ನು ಭೇಟಿಯಾದ ಜೀವಾವಧಿ ಶಿಕ್ಷೆಗೆ ಒಳಗಾಗಿರುವ 150ಕ್ಕೂ ಹೆಚ್ಚು ಕೈದಿಗಳು, ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದ್ದಾರೆ. ಗಣರಾಜ್ಯೋತ್ಸವದ ವೇಳೆಗೆ ಈ ಬೇಡಿಕೆಯನ್ನು ಬೆಂಬಲಿಸುವುದಾಗಿ ಭರವಸೆ ನೀಡಿ ಅವರನ್ನು ಸಮಾಧಾನಪಡಿಸಿದ್ದಾರೆ.

`ಬಿಎಸ್‌ವೈ ಭೇಟಿಗೆ ಯತ್ನಿಸಿಲ್ಲ~: ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೂ ಭೇಟಿ ಮಾಡಲು ಕುಮಾರಸ್ವಾಮಿ ಶನಿವಾರ ಪ್ರಯತ್ನಿಸಿದ್ದರು ಎಂಬ ವದಂತಿ ಹಬ್ಬಿತ್ತು. ಈ ಕುರಿತು ಪ್ರಶ್ನಿಸಿದಾಗ, `ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಯಾವುದೇ ಪ್ರಯತ್ನವನ್ನೂ ನಾನು ನಡೆಸಿಲ್ಲ. ಅದು ಸತ್ಯಕ್ಕೆ ದೂರವಾದ ಸಂಗತಿ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry