ಜೋಗ: ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ಮಾಹಿತಿ ಕೇಂದ್ರ

ಕಾರ್ಗಲ್: ಜೋಗ ಜಲಪಾತದಲ್ಲಿ ಅಂತರ ರಾಷ್ಟ್ರೀಯ ಮಟ್ಟದ ಪ್ರವಾಸಿ ಮಾಹಿತಿ ಕೇಂದ್ರವನ್ನು ₨4ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಜೂನ್ ಅಂತ್ಯದೊಳಗೆ ಶಿಲಾನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.
ಇಲ್ಲಿಗೆ ಸಮೀಪದ ಜೋಗ ಜಲಪಾತ ಪ್ರದೇಶದಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಸ್ಥಳ ವೀಕ್ಷಣೆ ಮಾಡಿ ಅವರು ಮಾತನಾಡಿದರು.
ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಜೋಗ ಜಲಪಾತಕ್ಕೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯುವುದು ಪಾರಂಪರಿಕವಾಗಿ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಆದರೆ, ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಸುತ್ತ ಮುತ್ತಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಕೊರತೆ ಕಂಡುಬರುತ್ತಿದೆ. ಜಲಪಾತ ಕೇಂದ್ರದಿಂದ ದೂರದ ಸ್ಥಳಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ, ಊಟ ಮತ್ತು ವಸತಿಯ ಬಗ್ಗೆ ಅರಿವು ಮೂಡಿಸಬೇಕಾದ್ದು ಜೋಗ ನಿರ್ವಹಣಾ ಪ್ರಾಧಿಕಾರದ ಕರ್ತವ್ಯವಾಗಿದೆ. ಈ ಕೊರತೆಯನ್ನು ಪ್ರವಾಸಿಗರಿಗೆ ನೀಗಿಸು ವುದರ ಜೊತೆಗೆ ರಸ್ತೆ ಸಾರಿಗೆ, ರೈಲ್ವೆ, ವಿಮಾನಗಳ ಟಿಕೇಟ್ ಮುಂಗಡ ಬುಕ್ಕಿಂಗ್ ಮತ್ತು ಕಾಯ್ದಿರಿಸುವಿಕೆಯ ಸೌಲಭ್ಯ ಇಲ್ಲಿ ಕಲ್ಪಿಸಲಾಗುವುದು ಎಂದರು.
ಇದರ ಜೊತೆಗೆ ಜೋಗದಿಂದ ಅತಿ ಸುಲಭವಾಗಿ ಕರ್ನಾಟಕ ರಾಜ್ಯದ ಎಲ್ಲಾ ಪ್ರವಾಸಿ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ದೊರಕುವಂತೆ ಮಾಹಿತಿ ತಂತ್ರಜ್ಞಾನದ ಸಹಾಯ ದೊಂದಿಗೆ ಯೋಜನೆ ರೂಪಿಸಲಾಗಿದೆ. ಬೆಂಗಳೂರು ಮೂಲದ ಇಡಿಸಿ ಕಂಪೆನಿ ಮಾಹಿತಿ ಕೇಂದ್ರದ ನಿರ್ಮಾಣ ಮತ್ತು ನಿರ್ವಹಣೆ ಹೊಣೆಗಾರಿಕೆ ಹೊತ್ತು ಕೊಂಡಿದೆ ಎಂದು ಮಾಹಿತಿ ನೀಡಿದರು.
ಜೋಗ ಜಲಪಾತದ ಶಿರೂರು ಕೆರೆಯ ದಂಡೆಯ ಮೇಲಿನ ತೋಟಗಾರಿಕಾ ಇಲಾಖೆಯ 15ಎಕರೆ ಜಾಗವನ್ನು ಒಳಗೊಂಡಂತೆ ಸುಮಾರು 25ಎಕರೆ ಪ್ರದೇಶದಲ್ಲಿ ಎಕೋ ಪಾರ್ಕ್ ಯೋಜನೆ ನಿರ್ಮಾಣಕ್ಕೆ ಕಂಪೆನಿ ಯೊಂದು ಮುಂದೆ ಬಂದಿದ್ದು, ಈಗಾ ಗಲೇ ಸ್ಥಳ ವೀಕ್ಷಣೆ ಮಾಡಲಾಗಿದೆ. ದೇಶದ ಪ್ರಮುಖವಾದ ಎಲ್ಲಾ ವನ್ಯ ಜೀವಿಗಳ ಆಕೃತಿಗಳನ್ನು ನೈಜ ಕಲಾಕೃತಿ ಯಲ್ಲಿ ರಚನೆ ಮಾಡಿ ಉದ್ಯಾನದಲ್ಲಿ ಅಳವಡಿಸುವ ಉದ್ದೇಶವಿದೆ ಎಂದರು.
ಕಾರ್ಗಲ್ ಕೇಂದ್ರ ಪ್ರದೇಶದಲ್ಲಿ ರಾಜ್ಯ ಸರ್ಕಾರದಿಂದ ಮಂಜೂರಾ ಗಿರುವ ಐಟಿಐ ತರಬೇತಿ ಕೇಂದ್ರಕ್ಕೆ ಈಗಾಗಲೇ 3ಎಕರೆ ಭೂಮಿ ಮಂಜೂರು ಆಗಿದ್ದು,₨ 2ಕೋಟಿ ವೆಚ್ಚದಲ್ಲಿ ಐಟಿಐ ತರಬೇತಿ ಕೇಂದ್ರಕ್ಕೆ ಎಲ್ಲಾ ರೀತಿಯ ಸೌಕರ್ಯವುಳ್ಳ ಕಟ್ಟಡವನ್ನು ಕಟ್ಟಿಸಲು ಕಾರ್ಯಾರಂಭ ಮಾಡಲು ಪ್ರಾಂಶುಪಾಲ ಸುದರ್ಶನ್ ಅವರಿಗೆ ಸೂಚಿಸಿದರು. ಪಟ್ಟಣ ಪಂಚಾಯ್ತಿ ಪ್ರದೇಶದ ವಸತಿ ರಹಿತರಿಗೆ ಅತಿ ಶೀಘ್ರದಲ್ಲಿ ಆಶ್ರಯ ಮನೆಗಳನ್ನು ವಿತರಣೆ ಮಾಡಲು ಮುಖ್ಯಾಧಿಕಾರಿಗೆ ಸೂಚಿಸಿದರು. ಸರ್ಕಾರಿ ಪ್ರೌಢಶಾಲೆಯಲ್ಲಿ ಅಗತ್ಯವಾದ ಬೋಧಕ ಸಿಬ್ಬಂದಿ ನೇಮಕಗೊಳಿಸಲು ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಆದೇಶಿಸಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಮತ್ತು ಸದಸ್ಯರು ಜೊತೆಯಲ್ಲಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.