ಬುಧವಾರ, ಮೇ 25, 2022
29 °C

ಜ್ಞಾನದೇಗುಲವಲ್ಲ ಇದು; ಒಳಗೆ ಬರಬೇಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಳೆಗೆ ಕುಸಿದು ಬಿದ್ದ ಕಾಂಪೌಂಡ್, ಜೌಗುಗಟ್ಟಿದ ನೆಲ, ಹಾದಿಗೆ ಅಡ್ಡವಾದ ಕಲ್ಲು, ಮಣ್ಣು, ಗಿಡಗಳು, ಬಳ್ಳಿಯಂತೆ ಕೆಳಗಿಳಿದ ಅಪಾಯಕಾರಿ ವಿದ್ಯುತ್ ತಂತಿಗಳು, ಅಲ್ಲಲ್ಲಿ ಹರಡಿರುವ ಖಾಲಿ ನೀರಿನ ಬಾಟಲಿಗಳು, ಜೇಡಗಟ್ಟಿದ ಬಲೆಯ ಬಾಗಿಲುಗಳು...ಇವೆಲ್ಲ ಇದೆ ಎಂದಾದಲ್ಲಿ ಸಂದೇಹವೇ ಬೇಡ. ಅದು ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ).`ಯುವಿಸಿಇ ಕಾಲೇಜನ್ನು ರಾಜ್ಯದಲ್ಲೇ ವಿಶಿಷ್ಟ ಎಂಜಿನಿಯರಿಂಗ್ ಶಿಕ್ಷಣ ಕೇಂದ್ರವನ್ನಾಗಿ ರೂಪಿಸಲು 100 ಕೋಟಿ ರೂಪಾಯಿಗಳನ್ನು ನೀಡಲಾಗುವುದು. ಈಗಾಗಲೇ ಈ ಬಗ್ಗೆ ಪ್ರಧಾನಮಂತ್ರಿ ಮನಮೋಹನ್‌ಸಿಂಗ್ ಅವರಿಗೆ ಪತ್ರ ಬರೆಯಲಾಗಿದೆ~ ಎಂದು ಪ್ರಸ್ತುತ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿರುವ, ಈ ಘೋಷಣೆ ಹೊರಡಿಸುವಾಗ ಕಾನೂನು ಸಚಿವರಾಗಿದ್ದ ಎಂ. ವೀರಪ್ಪ ಮೊಯಿಲಿ ಅವರು ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿ, ಅಲ್ಲಿ ಸೇರಿದ್ದ ಸಹಸ್ರಾರು ವಿದ್ಯಾರ್ಥಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.ಆದರೆ ಈ ಘೋಷಣೆ ಹೊರಡಿಸಿ ವರ್ಷ ಕಳೆಯುತ್ತಾ ಬಂದರೂ ಇನ್ನೂ ಯಾವುದೇ ಅಭಿವೃದ್ಧಿ ಕೆಲಸಗಳು ಇಲ್ಲಿ ನಡೆದಿಲ್ಲ. ಬದಲಾಗಿ ಕಾಲೇಜಿನ ಕಟ್ಟಡಗಳು ಇನ್ನಷ್ಟು ಶಿಥಿಲಾವಸ್ಥೆ ತಲುಪಿವೆ.`ತಾಂತ್ರಿಕವಾಗಿ ಈ ವಿಭಾಗ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದೆ. ಅಲ್ಲದೇ ಈ ಕಟ್ಟಡದ ಸ್ವಚ್ಛತಾ ಕಾರ್ಯವನ್ನು ಸೆಂಟ್ರಲ್ ಕಾಲೇಜಿನ ಸಿಬ್ಬಂದಿ ಮಾಡಬೇಕು. ನಾವೇನಿದ್ದರೂ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡುತ್ತೇವೆ. ಆದರೂ ಈ ವಿಭಾಗಗಳನ್ನು ದುರಸ್ತಿ ಮಾಡುವಂತೆ ಹಲವು ಬಾರಿ ವಿ.ವಿ.ಗೆ ಪತ್ರ ಬರೆಯಲಾಗಿದೆ. ಇನ್ನೂ ಎಷ್ಟು ಬಾರಿ ಪತ್ರ ಬರೆಯಬೇಕು?~ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಯುವಿಸಿಇ ಪ್ರಾಂಶುಪಾಲ ಡಾ.ಕೆ.ಆರ್.ವೇಣುಗೋಪಾಲ್.ಸಮಸ್ಯೆ ಇಷ್ಟಕ್ಕೇ ಬಗೆ ಹರಿಯುವುದಿಲ್ಲ. ವಿಭಾಗಕ್ಕೆ ಈ ದುಃಸ್ಥಿತಿ ಒದಗಿ ಬಂದಿರುವುದರಿಂದ ಇಲ್ಲಿರುವ ಪ್ರಾಧ್ಯಾಪಕರ ಕೋಣೆಗಳಲ್ಲಿ ಯಾವ ಪ್ರಾಧ್ಯಾಪಕರೂ ಇರಲು ಬಯಸುವುದಿಲ್ಲ. ಈ ವಿಭಾಗದ ಪ್ರಾಧ್ಯಾಪಕರೊಬ್ಬರು ನಮಗೆ ಬೇಕೆಂದಾಗ ಲಭ್ಯವಾಗುವುದೇ ಇಲ್ಲ.ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳಿಗೇ ಪಾಠ ಮಾಡುತ್ತಾ ಇರುತ್ತಾರೆ. ಅದಕ್ಕೆ ಈ ಸಮಸ್ಯೆಯೂ ಒಂದು ಕಾರಣ ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದರು.ಇಂಥ ಪರಿಸ್ಥಿತಿಯಲ್ಲಿ ನಾವು ರಸಾಯನಶಾಸ್ತ್ರದ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಹೇಗೆ ಸಾಧ್ಯವಾಗುತ್ತದೆ? ಈ ವಾತಾವರಣ ನಮಗೆ ಸರಿ ಹೊಂದುತ್ತಿಲ್ಲ ಎಂದೂ ದೂರಿದರು.  `ಇಂಥ ಪರಿಸ್ಥಿತಿ ಇರುವುದರಿಂದಲೇ ಈ ಬಾರಿ ನಮ್ಮ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕುಸಿತವಾಗಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ ವಿದ್ಯಾರ್ಥಿಗಳು ಏಕೆ ಬರುತ್ತಾರೆ? ಒಂದು ಕಾಲದಲ್ಲಿ ಹಲವಾರು ಖ್ಯಾತ ಎಂಜಿನಿಯರ್‌ಗಳು, ಬಾಹ್ಯಾಕಾಶ ತಜ್ಞರು, ರಕ್ಷಣಾ ತಜ್ಞರನ್ನು ಸೃಷ್ಟಿಸಿದ ಕಾಲೇಜು ಇಂದು ಈ ಸ್ಥಿತಿಗೆ ಬಂದು ನಿಂತಿದೆ~ ಎಂದು ಪ್ರಾಧ್ಯಾಪಕರೊಬ್ಬರು ಆತಂಕ ವ್ಯಕ್ತಪಡಿಸಿದರು.ಒಡೆದ ಕಾಂಪೌಂಡ್: ರಸಾಯನಶಾಸ್ತ್ರ ಪ್ರಯೋಗಾಲಯದ ಪರಿಸ್ಥಿತಿ ಹೀಗಾದರೆ, ಇದಕ್ಕಿಂತಲೂ ಭಿನ್ನವಾದುದು ಈ ಕಾಲೇಜಿನ ಕಾಂಪೌಂಡ್ ಕತೆ. ನೃಪತುಂಗ ರಸ್ತೆಯ (ಸಾರ್ವಜನಿಕ ಶಿಕ್ಷಣ ಇಲಾಖೆಯ ಕಟ್ಟಡದ ಎದುರಿನ ಭಾಗ) ಬಳಿ ಕಟ್ಟಿದ್ದ ಕಾಂಪೌಂಡ್ ಕುಸಿದು ಹೋಗಿ ಹಲವು ತಿಂಗಳುಗಳೇ ಗತಿಸಿವೆ.ಇದನ್ನೂ ವಿ.ವಿ.ಯ ಕಟ್ಟಡ ವಿಭಾಗ ರಿಪೇರಿ ಮಾಡುವ ಗೋಜಿಗೆ ಹೋಗಿಲ್ಲ. ಸುಮಾರು 30 ಅಡಿಗಳಷ್ಟು ಉದ್ದದವರೆಗೆ ಕಾಂಪೌಂಡ್ ಕುಸಿದಿದ್ದರಿಂದ ಯಾರು ಬೇಕಾದರೂ ಇಲ್ಲಿ ಪ್ರವೇಶಿಸಬಹುದಾಗಿದೆ. ಈ ಬಗ್ಗೆಯೂ ವಿ.ವಿ.ಯ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ.

 

ಕೆಲಸ ಮಾಡಲಿ

ನಾಗರಿಕ ಪ್ರಜ್ಞೆಯ ಬಗ್ಗೆ ಭಾಷಣ ಬಿಗಿಯುವ ಕುಲಪತಿ ಡಾ.ಎನ್.ಪ್ರಭುದೇವ್ ತಮ್ಮ ಅಧೀನದಲ್ಲಿ ಬರುವ ಯುವಿಸಿಇ ಕಾಲೇಜಿನತ್ತ ಮೊದಲು ಗಮನಹರಿಸಲಿ. ಕಾಲೇಜಿನ ಒಂದು ಭಾಗದ ಕಾಂಪೌಂಡ್ ಕುಸಿದಿದ್ದರಿಂದ ಕಾಲೇಜು ದಾರಿಹೋಕರ ಮೂತ್ರಾಲಯವಾಗಿ ಪರಿವರ್ತನೆ ಹೊಂದಿದೆ. ಈ ಬಗ್ಗೆ ನಾವು ಗಮನಕ್ಕೆ ತಂದರೂ, ಸ್ವಯಂಘೋಷಿತ `ನಾಗರಿಕ ಪ್ರಜ್ಞೆ ಮೂಡಿಸುವ~ ಕುಲಪತಿ ಇತ್ತ ಗಮನ ಹರಿಸಿಲ್ಲ. ಪ್ರಯೋಗಾಲಯ ಸೇರಿದಂತೆ ಇನ್ನಿತರ ಹಲವು ಸಮಸ್ಯೆಗಳ ಬಗ್ಗೆ ಗಮನ ಸೆಳೆದರೂ ಅವುಗಳನ್ನು ಸರಿಪಡಿಸುವ ಕಾರ್ಯ ಮಾಡಿಲ್ಲ.

-ಡಾ.ಕೆ.ವಿ.ಆಚಾರ್ಯ, ಸಿಂಡಿಕೇಟ್ ಸದಸ್ಯ, ಬೆಂಗಳೂರು ವಿ.ವಿ.

ವಿಶಿಷ್ಟ ಶಿಕ್ಷಣ ಕೇಂದ್ರವಾಗಿ ಅಭಿವೃದ್ಧಿ

`ಕಾಲೇಜನ್ನು ಆದಷ್ಟು ಬೇಗ ವಿಶಿಷ್ಟ ಶೈಕ್ಷಣಿಕ ಕೇಂದ್ರವನ್ನಾಗಿ (ಸೆಂಟರ್) ಮೇಲ್ದರ್ಜೆಗೇರಿಸಲು ಸಚಿವ ವೀರಪ್ಪ ಮೊಯಿಲಿ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆದರೆ ಪ್ರಧಾನಮಂತ್ರಿಗಳ ನಿರ್ಧಾರದ ಬಗ್ಗೆ ನಮಗಿನ್ನೂ ಮಾಹಿತಿ ಬಂದಿಲ್ಲ. ಇದು ಮೇಲ್ದರ್ಜೆಗೆ ಏರಿದ ಮೇಲೆ ಇಲ್ಲಿ ಉತ್ತಮ ಸೌಕರ್ಯಗಳು ಬರಲಿವೆ. ಈ ಕಾಲೇಜಿಗೆ ತನ್ನದೇ ಆದ ಇತಿಹಾಸ ಇದ್ದುದರಿಂದಲೇ ವಿಟಿಯುಗೆ ಸೇರಿಸುವ ಬದಲು ನಾವೇ ಇಟ್ಟುಕೊಂಡಿದ್ದೇವೆ.~

-ಡಾ.ಎನ್.ಪ್ರಭುದೇವ್, ಬೆಂಗಳೂರು ವಿ.ವಿ. ಕುಲಪತಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.