ಬುಧವಾರ, ಆಗಸ್ಟ್ 4, 2021
28 °C

ಜ್ಞಾನ ಸಮಾಜ-ಶಿಕ್ಷಣಕ್ಕೆ ಮಹತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಜ್ಞಾನ ಆಧಾರಿತ ಸಮಾಜದಲ್ಲಿ ಸ್ಥಿರತೆ ಮತ್ತು ನಿರಂತರತೆ ಕಾಯ್ದುಕೊಳ್ಳುವಲ್ಲಿ ಶಿಕ್ಷಣ ಮತ್ತು ಅಧ್ಯಯನ ಮಹತ್ವದ್ದಾಗಿವೆ. ಗುಣಮಟ್ಟದ ಉನ್ನತ ಶಿಕ್ಷಣದಿಂದ ಮಾತ್ರ ಆರ್ಥಿಕ ಪ್ರಗತಿ ಮತ್ತು ಮಾನವ ಕಲ್ಯಾಣ ಸಾಧಿಸಬಹುದು~ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.ಮಂಗಳಗಂಗೋತ್ರಿಯ ವಿಶ್ವವಿದ್ಯಾಲಯ ಕ್ಯಾಂಪಸ್‌ನ ನೂತನ `ಮಂಗಳ~ ಸಭಾಂಗಣದಲ್ಲಿ ಶನಿವಾರ ಮಂಗಳೂರು ವಿಶ್ವವಿದ್ಯಾಲಯದ 29ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು `ಘಟಿಕೋತ್ಸವ ಭಾಷಣ~ ಮಾಡಿದರು.ಮಾನವ ಕಲ್ಯಾಣ ಮತ್ತು ಆರ್ಥಿಕ ಪ್ರಗತಿ ನಡುವೆ ಸಮತೋಲನ ಸಾಧಿಸುವ ಅಗತ್ಯ ಮನಗಾಣಬೇಕಿದೆ. ಆ ಅಗತ್ಯ ಕಾಣುವುದರಲ್ಲೇ ನಮ್ಮ ಸದೃಢ ಭವಿಷ್ಯ ಅಡಗಿದೆ. ಯುವ ಪೀಳಿಗೆಯೇ ಇದರ ಪೋಷಕತ್ವ ವಹಿಸುವವರು ಎಂದು ನ್ಯಾ. ವೆಂಕಟಾಚಲಯ್ಯ ವಿಶ್ಲೇಷಿಸಿದರು.`ನಮ್ಮ ದೇಶದ್ದು, ಮಧ್ಯಮ ಆದಾಯ ವಲಯದಿಂದ ಪ್ರಗತಿ ಕಾಣುತ್ತಿರುವ ಆರ್ಥವ್ಯವಸ್ಥೆ. ರಫ್ತು ಆಧಾರಿತ ಅಧಿಕ ಆದಾಯ ವರ್ಗಕ್ಕೆ ಏರುವ ಮೊದಲೇ ನಾವು ಮೂರು ಅಗತ್ಯ ವಿಷಯಗಳತ್ತ ಗಮನಹರಿಸಬೇಕು.18ರಿಂದ 24 ವರ್ಷ ವಯೋಮಿತಿಯ ಶೇ. 15ರಷ್ಟು ಮಂದಿಯಾದರೂ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುವಂತಾಗಬೇಕು. ಸರ್ಕಾರ ಒಟ್ಟು ಆಂತರಿಕ ಉತ್ಪನ್ನದ(ಜಿಡಿಪಿ) ಶೇ. 1ರಷ್ಟನ್ನಾದರೂ ವಿಜ್ಞಾನ ಕ್ಷೇತ್ರದ ಉತ್ತೇಜನಕ್ಕೆ ಬಳಸಬೇಕು. ಸೇವಾ ಕ್ಷೇತ್ರದ ಉನ್ನತಿಗಾಗಿ ಖಾಸಗಿ ಉದ್ಯಮ ನೇತೃತ್ವದ ಸಂಶೋಧನೆ ಮತ್ತು ಅಭಿವೃದ್ಧಿ ವಲಯ ಜಿಡಿಪಿಯ ಶೇ. 1ರಷ್ಟು ಮೊತ್ತ ವೆಚ್ಚ ಮಾಡಬೇಕು. ಸದ್ಯಕ್ಕೆ ಇವ್ಯಾವುದೂ ಆದಂತೆ ಕಾಣುತ್ತಿಲ್ಲ. ವಿಶ್ವವಿದ್ಯಾಲಯಗಳಲ್ಲಿ ಶ್ರೇಷ್ಠತೆ ಮತ್ತು ಗುಣಮಟ್ಟದ ವಿಷಯದಲ್ಲೂ ನಾವು ಹೆಚ್ಚು ಹೆಮ್ಮೆಪಟ್ಟುಕೊಳ್ಳಲಾಗದ ಸ್ಥಿತಿಯಿದೆ~ ಎಂದರು.ಕುಲಾಧಿಪತಿಯೂ ಆದ ರಾಜ್ಯಪಾಲ ಹಂಸರಾಜ್‌ ಭಾರದ್ವಾಜ್‌ ಅವರು ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. ಉಪ ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಸ್ವಾಗತ ಭಾಷಣ ಮಾಡಿ, ಗೌರವ ಡಾಕ್ಟರೇಟ್‌ ಪುರಸ್ಕೃತರನ್ನು ಪರಿಚಯಿಸಿದರು. ಸಹ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ವಿ.ಎಸ್‌.ಆಚಾರ್ಯ, ಕುಲಸಚಿವ ಪ್ರೊ. ಕೂಡೂರು ಚಿನ್ನಪ್ಪ ಗೌಡ, ಸಿಂಡಿಕೇಟ್‌, ಶೈಕ್ಷಣಿಕ ಮಂಡಳಿ ಸದಸ್ಯರು ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.