ಮಂಗಳವಾರ, ಮೇ 18, 2021
22 °C

ಟಿಕೆಟ್ ದರ ಹೆಚ್ಚಳ: ಪ್ರಯಾಣಿಕ ತತ್ತರ

ಪ್ರಜಾವಾಣಿ ವಾರ್ತೆ/ಆರ್. ರಂಗಸ್ವಾಮಿ Updated:

ಅಕ್ಷರ ಗಾತ್ರ : | |

ನಂಜನಗೂಡು: ತೈಲ ಬೆಲೆ ಏರಿಕೆ ನೆಪದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮವು ಜೂನ್ 15 ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಎಲ್ಲ ವರ್ಗದ ಬಸ್ ಪ್ರಯಾಣ ದರವನ್ನು ಶೇ 10.5 ಹೆಚ್ಚಳ ಮಾಡಲಾಗಿದೆ ಎಂದು ಪ್ರಕಟಿಸಿದೆ. ಆದರೆ, ವಾಸ್ತವದಲ್ಲಿ ಏರಿಕೆಯ ಪ್ರಮಾಣ ಶೇ 20ರಿಂದ 40 ರಷ್ಟು ಹೆಚ್ಚಳವಾಗಿದೆ.ಸೇವಾ ಸಂಸ್ಥೆಯಾಗಿ ಕಾರ್ಯನಿರ್ವಹಿಸಿಬೇಕಾದ ಸಾರಿಗೆ ಸಂಸ್ಥೆ ವ್ಯಾಪಾರಿಯಂತೆ ಹೆಚ್ಚು ಪ್ರಮಾಣದಲ್ಲಿ ದರ ಏರಿಸುವ ಮೂಲಕ ಸಾಮಾನ್ಯ ಜನರನ್ನು ಸುಲಿಗೆ ಮಾಡಲು ಹೊರಟಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.ನಂಜನಗೂಡಿನಿಂದ ಮೈಸೂರಿಗೆ ಸಾಧಾರಣ ಬಸ್ ಸೇವೆಯಲ್ಲಿ ಈವರೆಗೆ ಇದ್ದ ರೂ 21  ದರವನ್ನು ಈಗ 25 ರೂಪಾಯಿಗೆ ಏರಿಸಲಾಗಿದೆ.ಸಂಸ್ಥೆ ಪ್ರಕಾರ, ಶೇ 10.5 ದರ ಹೆಚ್ಚಳ ಮಾಡುವುದಾದರೆ ರೂ 23 ನಿಗದಿಯಾಗಬೇಕಿತ್ತು. ಅದೇ ರೀತಿ ಈ ಮಾರ್ಗದಲ್ಲಿ   ವೊಲ್ವೊ ಬಸ್ ಸೇವೆ ದರ ರೂ 25 ಇದ್ದದ್ದನ್ನು ಈಗ 35 ರೂಪಾಯಿಗೆ ಹೆಚ್ಚಿಸಲಾಗಿದೆ. ಇಲ್ಲಿ ಏರಿಕೆಯ ಪ್ರಮಾಣ ಶೇ 40ರಷ್ಟು ಆಗಿದೆ.ರೈಲು ದರ ಕೇವಲ ರೂ  5

ಮೈಸೂರು- ನಂಜನಗೂಡು ನಡುವಣ ರೈಲು ಪ್ರಯಾಣ ದರ ಕೇವಲ 5 ರೂಪಾಯಿ ಮಾತ್ರ. ಆದರೆ, ಈ ಮಾರ್ಗದಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಸಂಚಾರ ಸಂಖ್ಯೆ ಹೆಚ್ಚಳವಾಗಿಲ್ಲ. ಹೀಗಿರುವ ರೈಲು ಸಂಚಾರ ವ್ಯವಸ್ಥೆಯಲ್ಲೇ ನಿತ್ಯ ಈ ಮಾರ್ಗದಲ್ಲಿ 5 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಸಂಚಾರಿಸುತ್ತಿದ್ದಾರೆ. ಇದಕ್ಕೆ 5 ಪಟ್ಟು ಮೀರಿದ ಜನರು   ಅನಿವಾರ್ಯವಾಗಿ ದುಬಾರಿ ದರ ತೆತ್ತು ಬಸ್ ಪ್ರಯಾಣವನ್ನು ಅವಲಂಬಿಸುವಂತಾಗಿದೆ. ಒಟ್ಟಿನಲ್ಲಿ ನಂಜನಗೂಡು- ಮೈಸೂರು ನಡುವಿನ ರೈಲು ಸೌಲಭ್ಯ ಇದ್ದೂ ಇಲ್ಲದಂತಾಗಿದೆ.ವೊಲ್ವೊ ಖಾಲಿ, ಖಾಲಿ

ಮೈಸೂರು- ನಂಜನಗೂಡು ನಡುವೆ ಸಂಚರಿಸುವ ವೊಲ್ವೊ ಬಸ್ ದರ ರೂ 25 ರಿಂದ 35ಕ್ಕೆ ಏರಿಕೆ ಕಂಡ ಪರಿಣಾಮ ಮಂಗಳವಾರ ಪ್ರಯಾಣಿಕರ ಕೊರತೆ ಎದುರಿಸಬೇಕಾಯಿತು. ಹಲವು ವೊಲ್ವೊ ಬಸ್‌ಗಳು ಖಾಲಿ ಸ್ಥಿತಿಯಲ್ಲಿ ನಂಜನಗೂಡು ಬಸ್ ನಿಲ್ದಾಣ ಬಿಡಬೇಕಾಯಿತು.

`ವೊಲ್ವೊ'ಗೆ  ಫ್ಲೆಕ್ಸಿ ದರ ನೀಡಿಲ್ಲ

ಮೈಸೂರು- ನಂಜನಗೂಡು ಮಾರ್ಗದಲ್ಲಿ ಸಂಚರಿಸುವ `ವೊಲ್ವೊ' ಬಸ್‌ಗಳಿಗೆ ಈ ಮೊದಲು ಫ್ಲೆಕ್ಸಿ ದರ (ಉತ್ತೇಜನ ದರ) ನೀಡಲಾಗಿತ್ತು. ದರ ಪರಿಷ್ಕರಣೆ ವೇಳೆ ಬೆಂಗಳೂರಿನ ಕೇಂದ್ರ ಕಚೇರಿ ನಿಗದಿ ಪಡಿಸಿರುವಂತೆ ರೆಗ್ಯೂಲರ್ ದರ ನಿಗದಿಯಾಗಿದೆ. ಹೀಗಾಗಿ, 25ರಿಂದ 35 ರೂಪಾಯಿಗೆ ದರ ಏರಿಕೆಯಾಗಿದೆ. ಈ ಮಾರ್ಗದಲ್ಲಿ ವೊಲ್ವೊ ಬಸ್‌ಗಳಿಗೆ ಪ್ರಯಾಣಿಕರ ಸ್ಪಂದನೆ ನೋಡಿಕೊಂಡು, ಅಗತ್ಯ ಬಿದ್ದರೆ ಸ್ವಲ್ಪ ಕಡಿಮೆ ದರ ವಿಧಿಸಲು ಕೇಂದ್ರ ಕಚೇರಿಗೆ ಕೋರಲಾಗುವುದು.

-ಗಂಗನಗೌಡ, ವಿಭಾಗೀಯ ನಿಯಂತ್ರಣಾಧಿಕಾರಿ,

ಮೈಸೂರು ನಗರ ವಿಭಾಗ, ಕೆಎಸ್‌ಆರ್‌ಟಿಸಿ.

ನಂಜನಗೂಡು- ಮೈಸೂರು ಮಾರ್ಗದಲ್ಲಿ ಸಂಚರಿಸುವ ಸಾಧಾರಣ ಸೇವೆ ಬಸ್‌ಗಳಿಗೆ ಬೆಂಗಳೂರಿನ ಕೇಂದ್ರ ಕಚೇರಿ ನಿಗದಿ ಪಡಿಸಿರುವ ದರಪಟ್ಟಿಯಂತೆ ದರ ನಿಗದಿಯಾಗಿದೆ. ಹೀಗಾಗಿ, 21ರಿಂದ 25 ರೂಪಾಯಿಗೆ ದರ ಏರಿಕೆ ಕಂಡಿದೆ.

-ಬಿ.ವಿ. ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ,

ಚಾಮರಾಜನಗರ ವಿಭಾಗ, ಕೆಎಸ್‌ಆರ್‌ಟಿಸಿ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.