ಶನಿವಾರ, ಜನವರಿ 18, 2020
20 °C

ಟಿ.ಟಿ: ಭರವಸೆಯ ಕಿರಣ

ಆರ್.ಜಿತೇಂದ್ರ / ಚಿತ್ರಗಳು: ತಾಜುದ್ದೀನ್‌ ಆಜಾದ್‌ Updated:

ಅಕ್ಷರ ಗಾತ್ರ : | |

ಟಿ.ಟಿ: ಭರವಸೆಯ ಕಿರಣ

ವೇದಾಂತ ಅರಸ್‌, ಸುಚೇತ್‌, ನೀರಜ್‌ ರಾಜ್‌, ಎಂ.ವಿ. ಸ್ಫೂರ್ತಿ, ವಿ. ಖುಷಿ, ಗಾಯತ್ರಿ ಟಂಕಸಾಲಿ.... ಇದು ಕರ್ನಾಟಕದ ಟೇಬಲ್ ಟೆನಿಸ್‌ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಯುವ ಆಟಗಾರ–ಆಟಗಾರ್ತಿಯರ ಹೆಸರು... ಈ ಪಟ್ಟಿಯಲ್ಲಿ ಇನ್ನೂ ಅನೇಕರು ಇದ್ದಾರೆ.13–16ರ ವಯಸ್ಸಿನ ಆಸುಪಾಸಿನಲ್ಲಿರುವ ಈ ಸ್ಪರ್ಧಿಗಳು ಈಗಾಗಲೇ ಸಬ್ ಜೂನಿಯರ್‌, ಜೂನಿಯರ್‌, ಯೂತ್ ವಿಭಾಗದಲ್ಲಿ ಚಾಂಪಿಯನ್ನರೂ ಆಗಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ‘ಹಿರಿಯ’ ಆಟಗಾರರಿಗೆ ಸಡ್ಡು ಹೊಡೆಯುತ್ತಾ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ.ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದ 14ನೇ ರಾಜ್ಯಮಟ್ಟದ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ ಸಹ ಈ ಯುವ ಆಟಗಾರರ ಸಾಮರ್ಥ್ಯದ ಪ್ರದರ್ಶನಕ್ಕೆ ವೇದಿಕೆಯಾಯಿತು. ವೇದಾಂತ ಅರಸ್ ಪ್ರಶಸ್ತಿಯ ಡಬಲ್‌ ಸವಿ ಅನುಭವಿಸಿದರೆ, ಸ್ಫೂರ್ತಿ, ಖುಷಿ ಎರಡನೇ ಪ್ರಶಸ್ತಿಯ ಹೊಸ್ತಿಲಲ್ಲಿ ಎಡವಿದರು. ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದು ಗಾಯತ್ರಿ ಟಂಕಸಾಲಿ. ಹುಬ್ಬಳ್ಳಿಯ ಕಾನ್ವೆಂಟ್‌ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಗಾಯತ್ರಿ ಸಬ್‌ ಜೂನಿಯರ್‌, ಜೂನಿಯರ್‌ ವಿಭಾಗದಲ್ಲಿ ಈಗಾಗಲೇ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕೊರಳಿಗೆ ಹಾಕಿಕೊಂಡವರು. ಕಳೆದ ಆಗಸ್ಟ್‌ನಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ 43ನೇ ಅಂತರ ಸಂಸ್ಥೆಗಳ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಡಬಲ್ಸ್‌ನಲ್ಲೂ ಅವರು ಕಣಕ್ಕೆ ಇಳಿದು ಉತ್ತಮ ಪ್ರದರ್ಶನ ತೋರಿದ್ದರು.ಈ ಬಾರಿಯ ಟೂರ್ನಿಯಲ್ಲಿ ಮಹಿಳೆಯರ ವಿಭಾಗದ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ  ಹಿರಿಯರ ವಿಭಾಗಕ್ಕೂ ತಾವು ಸೈ ಎನ್ನುವ ಸಂದೇಶವನ್ನು ಅವರು ನೀಡಿದರು. ‘ಈ ಗೆಲುವು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ಮುಂದೆ ಇನ್ನಷ್ಟು ಉತ್ತಮ ಪ್ರದರ್ಶನ ತೋರುತ್ತೇನೆ’ ಎಂದು ವಿಶ್ವಾಸದಿಂದ ಹೇಳಿದರು.ಮೈಸೂರಿನ ವಿದ್ಯಾಶ್ರಮ ಪದವಿಪೂರ್ವ ಕಾಲೇಜಿನ ಪ್ರಥಮ ಪಿ.ಯು. ವಿದ್ಯಾರ್ಥಿ ವೇದಾಂತ ಎಂ. ಅರಸ್‌ ಕಳೆದ ಎರಡು–ಮೂರು ವರ್ಷಗಳಿಂದಲೂ ಉತ್ತಮ ಪ್ರದರ್ಶನ ತೋರುತ್ತಾ ಪ್ರಶಸ್ತಿಗಳನ್ನು ಗೆಲ್ಲುತ್ತಲೇ ಬಂದಿದ್ದಾರೆ. ಜೂನಿಯರ್‌ ದ್ವಿತೀಯ ಹಾಗೂ ಯೂತ್‌ ವಿಭಾಗದಲ್ಲಿ ಅವರು ಅಗ್ರ ಶ್ರೇಯಾಂಕದ ಆಟಗಾರ ಕೂಡ. ಹಿರಿಯರ ವಿಭಾಗದಲ್ಲಿ ಆರನೇ ರ್‍ಯಾಂಕ್‌ ಹೊಂದಿರುವ ವೇದಾಂತ್ ಶ್ರೇಯಾಂಕದಲ್ಲಿ ಮೇಲೇರುವ ಕನಸು ಅವರದ್ದು.‘ಅದಕ್ಕಾಗಿ ತಕ್ಕ ಸಿದ್ಧತೆ ನಡೆಸಿದ್ದೇನೆ. ನಿರಂತರವಾಗಿ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆದರೆ ಆ ಹಾದಿ ಸದ್ಯ ಅಷ್ಟು ಸುಲಭವಾಗಿಲ್ಲ. ಸಗಾಯ್‌ರಾಜ್‌, ಅನಿರ್ಬನ್‌ ಚೌಧರಿ, ಅನಿರ್ಬನ್‌ ತರಫ್‌ದಾರ್ ಮೊದಲಾದ ಹಿರಿಯ ಆಟಗಾರರು ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ, ಆದರೆ ಮುಂದೆ ಖಂಡಿತ ಯಶಸ್ಸು ಕಾಣಲಿದ್ದೇನೆ’ ಎಂದು ವೇದಾಂತ್‌ ವಿಶ್ವಾಸ ವ್ಯಕ್ತಪಡಿಸಿದರು.ಮೈಸೂರಿನ ಪಿಟಿಟಿಎ ಕ್ಲಬ್‌ ಆಟಗಾರ್ತಿ ಎಂ.ವಿ. ಸ್ಫೂರ್ತಿ ಹಾಗೂ ಮಲ್ಲೇಶ್ವರಂ ಕ್ಲಬ್‌ನ ಖುಷಿ ಸಹ ಕಿರಿಯರ ವಿಭಾಗದಲ್ಲಿ ರ್‍ಯಾಂಕಿಂಗ್‌ನ ಮೊದಲ ಪಂಕ್ತಿಯಲ್ಲಿ ಇದ್ದಾರೆ, ಈ ಆಟಗಾರ್ತಿಯರೂ ಹಿರಿಯರ ವಿಭಾಗದ ರ್‍ಯಾಂಕಿಂಗ್‌ನಲ್ಲಿ ಬಡ್ತಿ ಹೊಂದುವ ಕನಸು ಕಟ್ಟಿಕೊಂಡಿದ್ದಾರೆ. ಪ್ರಶಸ್ತಿ ಗೆಲ್ಲುವಲ್ಲಿ ಇಬ್ಬರೂ ಪೈಪೋಟಿಗೆ ಬಿದ್ದಂತೆ ಪ್ರದರ್ಶನ ನೀಡುತ್ತಿದ್ದಾರೆ. ಇದೇ ಪೈಪೋಟಿ ಹುಬ್ಬಳ್ಳಿಯ ಟೂರ್ನಿಯಲ್ಲೂ ಮುಂದುವರೆದು ಟೂರ್ನಿಯ ರೋಚಕತೆ ಹೆಚ್ಚಿಸಿತು.

ಪ್ರತಿಕ್ರಿಯಿಸಿ (+)