ಭಾನುವಾರ, ಜೂನ್ 13, 2021
21 °C

ಟಿಬೆಟನ್ನರ ಲೋಸಾರ ಹಬ್ಬ ಸಂಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಉದ್ದನೆಯ ಕೊಳಾಯಿಗಳ ಮೂಲಕ ಶಬ್ಧ ಮಾಡುತ್ತಿರುವ ಬೌದ್ಧ ಬಿಕ್ಕುಗಳು ಒಂದೆಡೆಯಾದರೆ ಗಜಗಾತ್ರದ ತಮಟೆ, ಹಲಗೆಯನ್ನು ಬಾರಿಸುತ್ತ ಸಾಲಾಗಿ ನಿಂತ ಬೌದ್ಧ ಬಿಕ್ಕುಗಳು ಇನ್ನೊಂದೆಡೆ. ಹಿರಿಯ ಬೌದ್ಧ ಗುರುವಿನ ನಿರ್ದೇಶನದಂತೆ ಸಹಸ್ರಾರು ಬೌದ್ಧ ಬಿಕ್ಕುಗಳು ಹಾಗೂ ಟಿಬೆಟನ್ನರ ಸಮ್ಮುಖದಲ್ಲಿ ಪೂಜಾ ವಿಧಿ ವಿಧಾನಗಳನ್ನು ಮಾಡಲಾಯಿತು.ಇಲ್ಲಿಯ ಟಿಬೆಟನ್ನರ ಕ್ಯಾಂಪ್‌ ನಂ.1ರ ಗಾಡೆನ್‌ ಲಾಚಿ ಬೌದ್ಧ ಮಂದಿರದ ಆವರಣದಲ್ಲಿ ಲೋಸಾರ ಹಬ್ಬದ ಕೊನೆಯ ದಿನದ ಪೂಜಾ ಕಾರ್ಯಕ್ರಮ ಸೋಮವಾರ ಜರುಗಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆಯನ್ನು ಬೌದ್ಧ ಮಂದಿರದಲ್ಲಿ ನಡೆಸಿದ ಬೌದ್ಧ ಬಿಕ್ಕುಗಳು ನಂತರ ಬೌದ್ಧ ಮಂದಿರದ ಆವರಣದಲ್ಲಿ ಬೃಹತ್‌ ಆಕಾರದ ಮೂರ್ತಿಯನ್ನು ತಂದು ಅರ್ಧ ಗಂಟೆಗೂ ಹೆಚ್ಚು ಕಾಲ ಪೂಜಿಸಿದರು. ಹಳದಿ ಬಣ್ಣದ ಉದ್ದನೆಯ ಟೋಪಿಗಳನ್ನು ಧರಿಸಿದ್ದ ಬೌದ್ಧ ಬಿಕ್ಕುಗಳು ವಿವಿಧ ವಾದ್ಯಗಳನ್ನು ನುಡಿಸುತ್ತಾ ಹಿರಿಯ ಬೌದ್ಧ ಗುರುವಿನ ಮಾರ್ಗದರ್ಶನದಂತೆ ಪೂಜಾ ವಿಧಿ, ವಿಧಾನಗಳನ್ನು ಕೈಗೊಂಡರು. ಟಿಬೆಟನ್ನರ ಕ್ಯಾಂಪ್‌ನ ವಿವಿಧ ಬೌದ್ಧ ಮಂದಿರಗಳ ಬಿಕ್ಕುಗಳು ಹಾಗೂ ಇತರೇ ಟಿಬೆಟನ್‌ರು ಲೋಸಾರ ಹಬ್ಬದ ಕೊನೆಯ ದಿನದ ಪೂಜೆಯಲ್ಲಿ ಪಾಲ್ಗೊಂಡರು.ಸಾಂಪ್ರದಾಯಿಕ ಉಡುಗೆ: ಟಿಬೆಟನ್ನರ ಹೊಸ ವರ್ಷವಾದ ಲೋಸಾರ ಹಬ್ಬದಲ್ಲಿ ಟಿಬೆಟನ್‌ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು. ವೃದ್ಧ ಟಿಬೆಟನ್ನರು ಇತರರ ಸಹಾಯದೊಂದಿಗೆ ಬೌದ್ಧ ಮಂದಿರಕ್ಕೆ ಬಂದು ಹಬ್ಬದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ಭೂತ ದಹನ: ಸುಮಾರು ಹದಿನೈದು ದಿನಗಳವರೆಗೆ ಲೋಸಾರ ಹಬ್ಬವನ್ನು ಆಚರಿಸಿ ಕೊನೆಯ ದಿನ ಭೂತ, ಪಿಶಾಚಿಯ ಹೆಸರಿನಲ್ಲಿ ಬೃಹತ್‌ ಆಕಾರದ ಮೂರ್ತಿಯನ್ನು ಮಾಡಿ ಮೆರವಣಿಗೆಯಲ್ಲಿ ತಂದು ಸುಡುವುದು ವಾಡಿಕೆ.ಅದರಂತೆ ಗಾಡೆನ್‌ ಲಾಚಿ ಬೌದ್ಧ ಮಂದಿರದ ಆವರಣದಲ್ಲಿ ಬೃಹತ್‌ ಆಕಾರದ ಮೂರ್ತಿಯನ್ನು ಪೂಜಿಸಿ ನಂತರ ಕ್ಯಾಂಪ್‌ ನಂ.1ರ ಗಾಡೆನ್‌ ಜಾಂಗತ್ಸೆ ಬೌದ್ಧ ಮಂದಿರದ ಆವರಣದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ನಂತರ ಟಿಬೆಟನ್ನರು ಲೋಸಾರ ಹಬ್ಬದ ಖಾದ್ಯ ಹಾಗೂ ಧವಸ ಧಾನ್ಯಗಳನ್ನು ಮೂರ್ತಿಯನ್ನು ಸುಡುವ ಗುಡಿಸಿಲಿನ ಆಕಾರದ ಸ್ಥಳದಲ್ಲಿ ಹಾಕಿದರು. ಕೆಲ ಸಮಯದವರೆಗೆ ಉದ್ದನೆಯ ಕೊಳಾಯಿ ಹಾಗೂ ವಿವಿಧ ವಾದ್ಯಗಳ ಮೂಲಕ ನಾದ ಹೊಮ್ಮಿಸಿದ ಬೌದ್ಧ ಬಿಕ್ಕುಗಳು ನಂತರ ಮೂರ್ತಿಯನ್ನು ಗುಡಿಸಿಲಿನ ಆಕಾರದ ಸ್ಥಳದಲ್ಲಿ ಇಡುತ್ತಿದ್ದಂತೆ ಬೌದ್ಧ ಬಿಕ್ಕು ಬೆಂಕಿ ಹಚ್ಚುವ ಮೂಲಕ ಭೂತ ದಹನ ಕಾರ್ಯಕ್ರಮ ಮುಕ್ತಾಯವಾಯಿತು.ಪೊಲೀಸರ ನಿಗಾ: ಟಿಬೆಟನ್ನರು ಭೂತ ದಹನದ ವೇಳೆ ಭಾರತೀಯ ನೋಟುಗಳನ್ನು ಮೂರ್ತಿಯೊಂದಿಗೆ ಸುಡುತ್ತಾರೆ ಎಂಬ ಆರೋಪ ಕಳೆದ ಕೆಲ ವರ್ಷಗಳ ಹಿಂದೆ ಕೇಳಿಬಂದಿದ್ದರಿಂದ ಅಂದಿನಿಂದ ಭೂತದಹನದ ವೇಳೆ ಪೊಲೀಸರು ತೀವ್ರ ನಿಗಾ ವಹಿಸುತ್ತಿದ್ದಾರೆ. ಪೊಲೀಸರೊಂದಿಗೆ ಸ್ಥಳೀಯ ಟಿಬೆಟನ್‌ ಮುಖಂಡರು ಕೈಜೋಡಿಸಿದ್ದು ಭೂತದಹನದ ವೇಳೆ ದವಸ, ಧಾನ್ಯಗಳನ್ನು ಹೊರತುಪಡಿಸಿ ಯಾವುದೇ ವಸ್ತುಗಳನ್ನು ಸುಡ ದಂತೆ ಟಿಬೆಟನ್ನರಿಗೆ ಸೂಚನೆ ನೀಡುವುದರೊಂದಿಗೆ ಎಲ್ಲವನ್ನೂ ಪರಿಶೀಲಿಸಿ ಸುಡಲು ಅನುಮತಿ ನೀಡುತ್ತಿರುವುದು ಕಂಡುಬಂತು.ಮೂರ್ತಿ ಸುಡುವ ಸ್ಥಳದಲ್ಲಿ ಟಿಬೆಟನ್ನರು ತಂದಂತ ವಸ್ತುಗಳನ್ನು ಪೊಲೀಸರು ಪರಿಶೀಲಿಸಿದ ನಂತರವಷ್ಟೇ  ಸ್ಥಳದಲ್ಲಿ ಸುರಿಯಲು ಅವಕಾಶ ಮಾಡಿಕೊಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.