ಸೋಮವಾರ, ಏಪ್ರಿಲ್ 19, 2021
25 °C

ಟೆನಿಸ್: ಕ್ವಾರ್ಟರ್ ಫೈನಲ್‌ಗೆ ಫೆಡರರ್, ಸೆರೆನಾ ವಿಲಿಯಮ್ಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಲಂಡನ್ (ಪಿಟಿಐ): ವಿಶ್ವ ಅಗ್ರರ‌್ಯಾಂಕ್‌ನ ಆಟಗಾರ್ತಿ ಮರಿಯಾ ಶರ್ಪೋವಾ ಅವರಿಗೆ ನಾಲ್ಕನೇ ಸುತ್ತಿನಲ್ಲಿಯೇ ಆಘಾತ ಎದುರಾಗಿದೆ. ಎರಡು ವಾರಗಳ ಹಿಂದೆಯಷ್ಟೇ ಫ್ರೆಂಚ್ ಓಪನ್ ಜಯಿಸಿದ್ದ ರಷ್ಯಾದ ಈ ಆಟಗಾರ್ತಿ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದಿದ್ದಾರೆ.ಆಲ್ ಇಂಗ್ಲೆಂಡ್ ಕ್ಲಬ್‌ನ ಒಂದನೇ      ಕೋರ್ಟ್‌ನಲ್ಲಿ ಸೋಮವಾರ ನಡೆದ ಮಹಿಳೆಯರ   ಸಿಂಗಲ್ಸ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಶರ್ಪೋವಾ 4-6, 3-6ರಲ್ಲಿ ಜರ್ಮನಿಯ ಸಬಿನ್ ಲಿಸಿಕಿ ಎದುರು ಪರಾಭವಗೊಂಡರು. ಎರಡನೇ ಬಾರಿ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಗೆಲ್ಲುವ ಕನಸಿನೊಂದಿಗೆ ಇಲ್ಲಿಗೆ ಬಂದಿದ್ದ ಅವರ ಆಸೆ ಭಗ್ನಗೊಂಡಿತು.

ವಿಶ್ವದ 15ನೇ ರ‌್ಯಾಂಕ್‌ನ ಲಿಸಿಕಿ ಈ ಮೂಲಕ ಕ್ವಾರ್ಟರ್ ಫೈನಲ್‌ನಲ್ಲಿ ಆಡಲು ಪ್ರವೇಶ ಪಡೆದುಕೊಂಡರು. 2011ರ ವಿಂಬಲ್ಡನ್‌ನ ಸೆಮಿಫೈನಲ್‌ನಲ್ಲಿ ಶರ್ಪೋವಾ ವಿರುದ್ಧ ಸೋಲು ಕಂಡಿದ್ದ ಅವರು ಇಲ್ಲಿ ಸೇಡು ತೀರಿಸಿಕೊಂಡರು.ನಾಲ್ಕು ಬಾರಿಯ ವಿಂಬಲ್ಡನ್ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ ಹಾಗೂ ಹಾಲಿ ಚಾಂಪಿಯನ್ ಪೆಟ್ರೊ ಕ್ವಿಟೋವಾ ಅವರು ಎಂಟರ ಘಟ್ಟ ಪ್ರವೇಶಿಸುವ ಮುನ್ನ ಭಾರಿ ಸವಾಲು ಎದುರಿಸಬೇಕಾಯಿತು. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಸೆರೆನಾ 6-1, 2-6, 7-5ರಲ್ಲಿ ಕಜಕಸ್ತಾನದ ಯಾರೊಸ್ಲೇವಾ ಶ್ವೆಡೋವಾ ಎದುರು ಗೆದ್ದರು. ಶ್ವೆಡೋವಾ ಎರಡನೇ ಸೆಟ್ ಗೆದ್ದು ವಿಲಿಯಮ್ಸಗೆ ಆಘಾತ ನೀಡಲು ಪ್ರಯತ್ನಿಸಿದರು. ಈ ಸೆಟ್‌ನಲ್ಲಿ ಸೆರೆನಾ ತುಂಬಾ ಪರದಾಡಿದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಅಮೆರಿಕದ ಆಟಗಾರ್ತಿ ತಿರುಗೇಟು ನೀಡಿದರು.ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಜೆಕ್ ಗಣರಾಜ್ಯದ ಕ್ವಿಟೋವಾ 4-6, 7-5, 6-1ರಲ್ಲಿ ಇಟಲಿಯ ಫ್ರಾನ್ಸೆಸ್ಕಾ ಶಿಯಾವೋನ್ ಎದುರು ಜಯ ಗಳಿಸಿದರು. ಆದರೆ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ ಆಘಾತ ಅನುಭವಿಸಿದರು. ಅವರು 1-6, 1-6ರಲ್ಲಿ ಜರ್ಮನಿಯ ಆ್ಯಂಜಲಿಕ್ ಕರ್ಬರ್ ಎದುರು ಸೋತರು. ಇನ್ನುಳಿದ ಪಂದ್ಯಗಳಲ್ಲಿ ತಮಿರಾ ಪಜೆಕ್ 6-2, 6-2ರಲ್ಲಿ ಇಟಲಿಯ ರಾಬೆರ್ಟಾ ವಿನ್ಸಿ ಎದುರೂ, ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ವಿರುದ್ಧವೂ ಜಯ ಸಾಧಿಸಿದರು.ಫೆಡರರ್‌ಗೆ ಜಯ: ಮೂರನೇ ಶ್ರೇಯಾಂಕದ ಆಟಗಾರ ರೋಜರ್ ಫೆಡರರ್ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರು. ಬೆನ್ನು ನೋವಿಗೆ ಒಳಗಾಗಿರುವ ಅವರು ನಾಲ್ಕನೇ ಸುತ್ತಿನ ಪಂದ್ಯದಲ್ಲಿ 7-6, 6-1, 4-6, 6-3ರಲ್ಲಿ ಬೆಲ್ಜಿಯಂನ ಕ್ಸೇವಿಯರ್ ಮಲಿಸ್ ಎದುರು ಗೆದ್ದರು. ಮತ್ತೊಂದು ಪಂದ್ಯದಲ್ಲಿ ಮಿಖಾಯಿಲ್ ಯೋಜ್ನಿ 6-3, 5-7, 6-4, 7-6, 5-7ರಲ್ಲಿ ಉಜ್ಬೆಕಿಸ್ತಾನದ ಡೆನಿಸ್ ಇಸ್ತೊಮಿನ್ ಅವರನ್ನು ಮಣಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.